ಬೆಂಗಳೂರು: ರನ್ಯಾರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಂಸ್ಥೆಯೂ ಮಧ್ಯ ಪ್ರವೇಶಿಸಿದ್ದು, ಬೆಂಗಳೂರಿನ ಎಂಟು ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಟಿ ರನ್ಯಾರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಗೋಲ್ಡ್ ಸ್ಮಗ್ಲಿಂಗ್ ಕೇಸ್ ವಿಚಾರವಾಗಿ ತನಿಖೆ ನಡೆಸುತ್ತಿದ್ದು, ಇದೀಗ ಇ.ಡಿ. ಸಂಸ್ಥೆಯೂ ಎಂಟ್ರಿ ಕೊಟ್ಟಿದೆ.
ಈ ಸಂಬಂಧ ಇ.ಡಿ. ಅಧಿಕಾರಿಗಳು ಬೆಂಗಳೂರಿನ ಕೋರಮಂಗಲ, ಇಂದಿರಾ ನಗರ, ಆರೋಪಿ ರನ್ಯಾರಾವ್ ಅಪಾರ್ಟ್‌ಮೆಂಟ್, ಪತಿ ಜತಿನ್ ಹಾಗೂ ಆಪ್ತ ತರುಣ್ ಅವರ ನಿವಾಸ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ರನ್ಯಾ ಅವರು ಒಂದು ವರ್ಷದಲ್ಲಿ 28 ಬಾರಿ ದುಬೈಗೆ ಪ್ರಯಾಣ ಮಾಡಿದ್ದು, ಬರೋಬ್ಬರಿ 300 ಕೆ.ಜಿ. ಚಿನ್ನವನ್ನು ಸಾಗಾಟ ಮಾಡಲಾಗಿದೆ ಎಂಬ ಸ್ಫೋಟಕ ಅಂಶ ಹೊರಬಂದಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.