Home ರಾಜ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಡಿಸೆಂಬರ್ ಅಂತ್ಯದೊಳಗೆ ಆದೇಶ ಪತ್ರ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ: ಡಿಸೆಂಬರ್ ಅಂತ್ಯದೊಳಗೆ ಆದೇಶ ಪತ್ರ

0

ಬೆಂಗಳೂರು: 2021ನೇ ಸಾಲಿನ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ಆದೇಶ ಪತ್ರ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.

ಇಂದು ನಗರದ ಸಚಿವರ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗವು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದಂತಹ ಎಲ್ಲಾ ಅಡೆತಡೆಗಳನ್ನು ಕಾನೂನು ರಿತ್ಯ ಬಗೆಹರಿಸಿ ಅಂತಿಮ ಆಯ್ಕೆ ಪಟ್ಟಿಯು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ನೇಮಕಾತಿ ಈ ಹಂತಕ್ಕೆ ತಲುಪಲು ಮುಖ್ಯಮಂತ್ರಿಗಳೆ ಕಾರಣ. ಅವರು ನನ್ನ ಮೇಲಿಟ್ಟ ಭರವಸೆಯಂತೆ ಕೆಲಸ ಮಾಡುತ್ತಿದ್ದೇನೆ. ತಮ್ಮೆಲ್ಲರ ಅಭಿನಂದನೆಗಳು ಅವರಿಗೆ ಸಲ್ಲಬೇಕೆಂದರು.

ನೇಮಕಾತಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಈಗಾಗಲೇ ಸಭೆಗಳನ್ನು ಮಾಡಿ, ವೇಳಾಪಟ್ಟಿಯನ್ನೂ ತಯಾರು ಮಾಡಿಕೊಳ್ಳಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ನೇಮಕಾತಿ ಆದೇಶ ಪ್ರತಿಯನ್ನು ಪಡೆದು ತಾವೆಲ್ಲರೂ ಇಲಾಖೆಗೆ ಬರುತ್ತೀರಿ ಎಂದು ಅಭ್ಯರ್ಥಿಗಳಿಗೆ ಭರವಸೆ ನೀಡಿದರು.

ಇಲಾಖೆಯ ಪ್ರತಿ ವಿಷಯದಲ್ಲಿಯೂ ಪಾರದರ್ಶಕವಾಗಿರಬೇಕು, ಯಾವುದೇ ರೀತಿಯ ಲೋಪಗಳು ಆಗದಂತೆ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಮುಂದೆಯೂ ಹೀಗೆ ಇರುತ್ತೇನೆ. ಇದು ನನ್ನ ಗುಣದಲ್ಲಿಯೆ ಇದೆ.
ಆಯ್ಕೆಯಾದ ಅಭ್ಯರ್ಥಿಗಳು
ಯಾವುದೇ ಸ್ಥಳದಲ್ಲಿ ನಿಯುಕ್ತಿ ಪಡೆದರೂ ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿ ಎಂದು ಕಿವಿಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಬಳಗದ ನಾಗಲಕ್ಷ್ಮೀ, ಜಯಶಂಕರ್, ಅಶೋಕ್, ಉಮೇಶ್, ಮತ್ತಿತರಿದ್ದರು.

You cannot copy content of this page

Exit mobile version