Home ಇನ್ನಷ್ಟು ಕೋರ್ಟು - ಕಾನೂನು ತಮಗೆ ಬೇಕಾಂದತೆ ನ್ಯಾಯಮೂರ್ತಿಗಳ ಆಯ್ಕೆ: ಕೇಂದ್ರದ ವಿರುದ್ಧ ಸುಪ್ರೀಂ ವಾಗ್ದಾಳಿ

ತಮಗೆ ಬೇಕಾಂದತೆ ನ್ಯಾಯಮೂರ್ತಿಗಳ ಆಯ್ಕೆ: ಕೇಂದ್ರದ ವಿರುದ್ಧ ಸುಪ್ರೀಂ ವಾಗ್ದಾಳಿ

0

ಹೊಸದಿಲ್ಲಿ: ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೊಲಿಜಿಯಂ ಶಿಫಾರಸು ಮಾಡಿರುವ ಪಟ್ಟಿಯಿಂದ ಕೆಲ ನ್ಯಾಯಾಧೀಶರನ್ನು ಮಾತ್ರ ಕೇಂದ್ರ ಆಯ್ಕೆ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಆರೋಪಿಸಿದೆ.

ಕೊಲಿಜಿಯಂನ ಎಲ್ಲ ಶಿಫಾರಸುಗಳನ್ನು ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಲಾಗಿದೆ. ಈ ವಿಚಾರದಲ್ಲಿ ಕೇಂದ್ರವು ವ್ಯವಹರಿಸುವ ಶೈಲಿಯಿಂದಾಗಿ ಕೊಲಿಜಿಯಂಗೆ ಮುಜುಗರ ಉಂಟಾಗಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ಒಂದು ಹೈಕೋರ್ಟ್‌ನಿಂದ ಇನ್ನೊಂದು ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ವರ್ಗಾವಣೆಗೆ ಕೊಲಿಜಿಯಂ ಮಾಡಿರುವ ಹಲವು ಶಿಫಾರಸುಗಳು ಬಾಕಿ ಉಳಿದಿರುವುದು ಆತಂಕಕಾರಿ ವಿಷಯವೆಂದು ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. “ಈ ಪರಿಸ್ಥಿತಿಯು ಅಂತಿಮವಾಗಿ ಸುಪ್ರೀಂ ಕೋರ್ಟ್ ಅಥವಾ ಕೊಲಿಜಿಯಂ ಕೇಂದ್ರಕ್ಕೆ ಇಷ್ಟವಾಗದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.

ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಕೊಲಿಜಿಯಂ ಮಾಡಿರುವ ಶಿಫಾರಸುಗಳನ್ನು ಅಂಗೀಕರಿಸುವಲ್ಲಿ ಕೇಂದ್ರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು. ಕೇಂದ್ರ ಈ ರೀತಿ ಮಾಡುತ್ತಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನ್ಯಾಯಮೂರ್ತಿ ಕೌಲ್ ಕಳವಳ ವ್ಯಕ್ತಪಡಿಸಿದರು.

“ಇದು ಪದೆಪದೇ ಮರುಕಳಿಸುವ ಸಮಸ್ಯೆಯಾಗುತ್ತಿದೆ. ಈ ಹಿಂದೆಯೇ ಅಟಾರ್ನಿ ಜನರಲ್ ಅವರ ಗಮನಕ್ಕೆ ತಂದಿದ್ದೆವು.‘‘ ಕೆಲವು ಶಿಫಾರಸುಗಳನ್ನು ಅಂಗೀಕರಿಸಿ ಇನ್ನು ಕೆಲವನ್ನು ಬಾಕಿ ಉಳಿಸಿಕೊಂಡಿರುವುದು ನ್ಯಾಯಾಧೀಶರ ಹಿರಿತನದಂತಹ ಪ್ರಮುಖ ವಿಷಯಗಳಲ್ಲಿ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕೇಂದ್ರದ ವ್ಯವಹರಿಸುವ ಶೈಲಿಯಿಂದಾಗಿ ಹಿರಿಯ ವಕೀಲರು ನ್ಯಾಯಾಧೀಶರಾಗಿ ಜವಾಬ್ದಾರಿ ಹೊರಲು ಸಿದ್ಧರಿಲ್ಲ ಎಂದರು.

“ಕೇಂದ್ರವು ಕೆಲವು ಶಿಫಾರಸುಗಳನ್ನು ತಕ್ಷಣವೇ ಸ್ವೀಕರಿಸುತ್ತಿದೆ. ಅದು ಶ್ಲಾಘನೀಯ. ಆದರೆ ಅನೇಕ ಬಾರಿ ಕೊಲಿಜಿಯಂನ ಕೆಲವು ಶಿಫಾರಸುಗಳನ್ನು ಮಾತ್ರ ಆಯ್ಕೆ ಮಾಡಿ ಅನುಮೋದಿಸುತ್ತಿರುವುದು ಕಳವಳಕಾರಿಯಾಗಿದೆ. ದಯವಿಟ್ಟು ಇದಕ್ಕೆ ಕಡಿವಾಣ ಹಾಕಿ ಎಂದು ಅಟಾರ್ನಿ ಜನರಲ್ ವೆಂಕಟ ರಮಣಿಯವರಿಗೆ ಕೋರ್ಟ್ ಸಲಹೆ ನೀಡಿತು. ಯಾವ ನ್ಯಾಯಾಧೀಶರು ಯಾವ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಬೇಕು ಎಂಬುದನ್ನು ನ್ಯಾಯಾಂಗದ ವಿವೇಚನೆಗೆ ಬಿಡುವುದು ಸಮಂಜಸವಾಗಿದೆ ಎಂದು ಕೋರ್ಟ್‌ ಹೇಳಿದೆ. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಪ್ರಶಾಂತ್ ಭೂಷಣ್, ಈ ವಿಚಾರದಲ್ಲಿ ಕೇಂದ್ರದ ಧೋರಣೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಬಹಳ ಸಹನೆಯಿಂದ ಸಂಭಾಳಿಸಿದೆ ಎಂದರು.

ಈ ಕುರಿತು ನ್ಯಾಯಾಲಯ ಕೇಂದ್ರಕ್ಕೆ ಆದೇಶ ನೀಡುವ ಸಮಯ ಬಂದಿದೆ. ಇಲ್ಲವಾದಲ್ಲಿ ಏನೇ ಮಾಡಿದರೂ ನಡೆಯುತ್ತದೆ ಎಂದು ಸುಮ್ಮನಾಗಬಹುದು ಎಂದರು. ಈ ಬಗ್ಗೆ ಈ ಹಿಂದೆಯೇ ಎಜಿ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ಕೇಂದ್ರದ ಗಮನಕ್ಕೆ ತಂದಿರುವುದಾಗಿ ಭರವಸೆ ನೀಡಿದ್ದರು ಎಂದು ನ್ಯಾಯಮೂರ್ತಿ ಕೌಲ್ ನೆನಪಿಸಿದರು. ಕೇಂದ್ರದೊಂದಿಗೆ ಆಳವಾದ ಚರ್ಚೆಗೆ ಹೆಚ್ಚಿನ ಸಮಯ ಕೇಳಲಾಗಿದೆ. ಆದರೆ ಆ ನಂತರವೂ ಇತ್ತೀಚೆಗೆ ಕೊಲಿಜಿಯಂ ಮಾಡಿರುವ ಶಿಫಾರಸುಗಳಿಂದ ಕೇಂದ್ರವು ಕೆಲವರ ಹೆಸರನ್ನು ಆಯ್ಕೆ ಮಾಡಿ ಅನುಮೋದನೆ ನೀಡಿದೆ ಎಂದು ಆಕ್ಷೇಪಿಸಿದರು. ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 20ಕ್ಕೆ ಮುಂದೂಡಿದೆ.

You cannot copy content of this page

Exit mobile version