ದೇಶದಲ್ಲಿ ನಿಷೇಧಿತ ರಾಸಾಯನಿಕಗಳು ಮತ್ತು ಬೇರಿಯಂ ಲವಣಗಳಿರುವ ಪಟಾಕಿ ಮಾರಾಟ, ಖರೀದಿ ಮತ್ತು ಬಳಕೆಯನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ತನ್ನ ಆದೇಶಗಳನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದರೇಶ್ ಅವರನ್ನೊಳಗೊಂಡ ಪೀಠವು ಪಟಾಕಿ ಸಿಡಿಸುವ ಕುರಿತು ಹಿಂದಿನ ಆದೇಶಗಳನ್ನು ಜಾರಿಗೊಳಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ರಾಜಸ್ಥಾನ ರಾಜ್ಯದ ಅರ್ಜಿಗಳನ್ನು ಆಲಿಸಿದ ನಂತರ ಈ ತೀರ್ಪು ನೀಡಿದೆ.
ದೇಶಾದ್ಯಂತ ಬೇರಿಯಂ ಹಾಗೂ ನಿಷೇಧಿತ ಲವಣಗಳಿರುವ ಪಟಾಕಿಗಳ ತಯಾರಿ, ಮಾರಾಟ ಹಾಗೂ ಖರೀದಿ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ರಾಜಸ್ಥಾನದ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸಿ, ಈ ತೀರ್ಪು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಬಂದ ಆದೇಶದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿ ಮಾಲಿಕರು ಕಂಗಾಲಾಗಿದ್ದಾರೆ. ಇತ್ತೀಚೆಗೆ ದೇಶದ ನಾನಾ ಭಾಗಗಳಲ್ಲಿ ಆದ ಪಟಾಕಿ ಅವಘಡಗಳ ಅಡಿಯಲ್ಲಿ ಸುಪ್ರೀಂಕೋರ್ಟ್ ಈ ಅರ್ಜಿ ತಗೆದುಕೊಳ್ಳಲು ಕಾರಣ ಎಂದು ತಿಳಿಸಿದೆ.
ಇದೇ ಸಂದರ್ಭದಲ್ಲಿ ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಂಬಂಧ ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಪ್ರತಿನಿಧಿಗಳು ಬುಧವಾರ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಾಲಿನ್ಯ ತಡೆಯುವುದು ಕೇವಲ ನ್ಯಾಯಾಲಯದ ಕೆಲಸವಲ್ಲ. ಪಂಜಾಬ್‌ನಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಕೊಳೆಗಳನ್ನು ಸುಡುವಂತಹ ವಿವಿಧ ಕಾರಣಗಳಿಂದ ಮಾಲಿನ್ಯದ ಮಟ್ಟವು ಹೆಚ್ಚುತ್ತಿದೆ ಎಂದು ಗಮನಿಸಿದ ನ್ಯಾಯಾಲಯ, ಮಾಲಿನ್ಯವನ್ನು ತಡೆಯುವುದು ಕೇವಲ ನ್ಯಾಯಾಲಯದ ಕೆಲಸವಲ್ಲ, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಸರ್ಕಾರವು ಅತ್ಯುನ್ನತ ಹೊಣೆಗಾರಿಕೆಯನ್ನು ಹೊಂದಿದೆ ಎಂದು ತಿಳಿಸಿತು.