ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾ, ಒಳಗೊಳಗೆ ತಮ್ಮ ಲಿಂಗತ್ವವನ್ನು ಬಚ್ಚಿಟ್ಟುಕೊಂಡು ಬದುಕುವ LGBTQ+ ಮಕ್ಕಳಿಗೆ ದೊಡ್ಡ ಧೈರ್ಯವೆಂದರೆ ಅವರ ಹೆತ್ತವರು. ಆದರೆ, ಹೆತ್ತವರೇ ತಮ್ಮ ಮಗುವಿನ ಲೈಂಗಿಕ ಭಿನ್ನತೆಯನ್ನು ಒಪ್ಪದೆ, ಆ ಮಗುವಿಗೆ ಹಿಂಸೆ ನೀಡಿದರೆ ಅದರ ಕೈ ಹಿಡಿಯುವವರು ಯಾರು? ಜಗತ್ತಿನಲ್ಲಿ ಕೋಟ್ಯಾಂತರ ಮಂದಿ LGBTQ+ ಮಕ್ಕಳು ತಮ್ಮ ಮನೆಯನ್ನು ತೊರೆದು, ಕುಟುಂಬದಿಂದ ದೂರವಾಗಿ ಬದುಕುತ್ತಾರೆ. ಮಕ್ಕಳ ಪೋಷಕರು ತಮ್ಮ ಮಗು ಗೇ, ಲೆಸ್ಬಿಯನ್, ಟ್ರಾನ್ಸ್‌ಜೆಂಡರ್ ಇತ್ಯಾದಿಗಳಲ್ಲಿ ಒಂದು ಎಂದು ಅರಿತೂ, ಅವರನ್ನು ಒಪ್ಪದೆ, ತಮಗೆ ಬೇಕಾದಂತೆ ಅವರು ಬದುಕಲು ಒತ್ತಡ ಹೇರುತ್ತಾರೆ. ಹೀಗಾಗಿ, ಮಾನಸಿಕ ಖಿನ್ನತೆಯಿಂದ ಈ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ. LGBTQ+ ಮಕ್ಕಳ ತಂದೆ ತಾಯಿಯ ಜವಾಬ್ದಾರಿಗಳ ಬಗ್ಗೆ ಬರೆಯುತ್ತಾರೆ ಲೇಖಕಿ ರುಕ್ಮಿಣಿ ಎಸ್ ನಾಯರ್
LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ.
ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡುತ್ತಾರೆ. ಸಣ್ಣ ಪುಟ್ಟ ಆಸೆಗಳನ್ನು ಕೂಡಾ ಬದಿಗೊತ್ತಿ ಮಕ್ಕಳಿಗಾಗಿ ಉತ್ತಮ ಜೀವನವನ್ನು ರೂಪಿಸುವತ್ತ ಗಮನ ಹರಿಸುತ್ತಾರೆ. ಹಗಲಿರುಳು ಮಕ್ಕಳಿಗಾಗಿ ದುಡಿಯುತ್ತಾರೆ ಅವರ ಉಡುಗೆ ತೊಡುಗೆ, ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ರೀತಿಯ ಖರ್ಚು ವೆಚ್ಚಕ್ಕಾಗಿ ಒಂದೊಂದು ರೂಪಾಯಿಯನ್ನು ಶೇಖರಿಸಿ ಇಡುತ್ತಾರೆ. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲೆಂದು ಪ್ರತಿಷ್ಠಿತ ಶಾಲೆಗಳನ್ನು ಹುಡುಕಿ ತಮ್ಮ ವರಮಾನಕ್ಕೂ ಮೀರಿದ ಖರ್ಚು ವೆಚ್ಚಗಳನ್ನು ಭರಿಸಿ ಸೇರಿಸುತ್ತಾರೆ. ಮಕ್ಕಳು ಬೆಳೆದು ಮುಂದೊಂದು ದಿನ ಶ್ರೇಷ್ಠ ವ್ಯಕ್ತಿಯಾಗಲೆಂದು ಬಯಸುತ್ತಾರೆ. ತಮಗೆಷ್ಟೇ ನೋವುಗಳು ತೊಂದರೆಗಳು ಇದ್ದರೂ ಮಕ್ಕಳ ಮೊಗದಲ್ಲಿ ಕಿರುನಗೆಯನ್ನು ಕಾಣಲು ಬಯಸುತ್ತಾರೆ.
ಮಕ್ಕಳ ಬಾಲಲೀಲೆಗಳನ್ನು ನೋಡುತ್ತಾ ಅವರ ಆಟ ಪಾಠಗಳ ಜೊತೆಗೂಡುತ್ತಾರೆ. ಮಗುವು ಹೊರಳಿ, ತೆವಳಿ, ಅಂಬೆಗಾಲಿಟ್ಟು, ಬಿದ್ದು ಎದ್ದು ನಿಂತು ತಡವರಿಸಿ ಹೆಜ್ಜೆ ಇಟ್ಟು ನಡೆವಾಗ ತಮ್ಮ ಮಗು ಏನೋ ಸಾಧಿಸಿದ ಹೆಮ್ಮೆ ಮಾತಾಪಿತರಿಗೆ. ಮಗುವಿನ ಕಿಲಕಿಲ ನಗು ಮನೆಯ ತುಂಬಾ ಮಾರ್ದನಿಸುವಾಗ ಅಪ್ಪ ಅಮ್ಮನ ಮನದಲ್ಲಿಯೂ ಆ ನಗುವಿನ ಅಲೆಗಳು ಸಂತೋಷವನ್ನು ತುಂಬುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಮಗುವಿನ ಹೆಜ್ಜೆಯ ಗೆಜ್ಜೆ ಸದ್ದು ತುಂಬಿದಾಗ ಹಿರಿಹಿರಿ ಹಿಗ್ಗಿ ಮನೆಮಂದಿಯೆಲ್ಲಾ ಸಂತಸದಿಂದ ಉಬ್ಬಿ ಹೋಗುತ್ತಾರೆ. ಅಜ್ಜಿ ತಾತರಿಗಂತೂ ತಮ್ಮ ಮೊಮ್ಮಕ್ಕಳಿಗೆ ದೃಷ್ಟಿ ತೆಗೆದು ಎಷ್ಟು ನಿವಾಳಿಸಿದರೂ ಸಾಲದು. ಮಗುವಿನ ತಲೆಗೂದಲನ್ನು ಬಾಚಿ ಜುಟ್ಟು, ಜಡೆ ಕಟ್ಟಿ, ಪುಟ್ಟ ಫ್ರಾಕ್, ಲಂಗ ರವಿಕೆ,ಅಂಗಿ ಚಡ್ಡಿ, ದೋತಿ ತೊಡಿಸಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಹಚ್ಚಿ, ಕೆನ್ನೆಗೆ ಗಲ್ಲಕ್ಕೆ ಕಪ್ಪಾದ ದೃಷ್ಟಿ ಬೊಟ್ಟು ಇಟ್ಟು, ಮುದ್ದಾಗಿ ಕಾಣುವ ಮಗುವನ್ನು ಮುದ್ದಿಸಿ, ಲಾಲಿಸಿ ಸಂಭ್ರಮಿಸುವರು ಮನೆ ಮಂದಿಯೆಲ್ಲಾ. ಸಣ್ಣ ಮಗುವಾಗಿದ್ದಾಗ ಹೆಣ್ಣು ಗಂಡು ಎಂಬ ಬೇಧ ಭಾವ ತೋರದೇ ಎಲ್ಲಾ ರೀತಿಯ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಖುಷಿಪಡುವ ಮನೆ ಮಂದಿ ಮಗು ದೊಡ್ಡದಾಗುತ್ತಾ ಬಂದಂತೆ ಹೆಣ್ಣು ಅಥವಾ ಗಂಡು ಎನ್ನುವ ವ್ಯತ್ಯಾಸಕ್ಕೆ ಅನುಗುಣವಾಗಿ ವಸ್ತ್ರಗಳನ್ನು ತೊಡಿಸಲು ಪ್ರಾರಂಭಿಸುತ್ತಾರೆ. ಆಗಿನಿಂದಲೇ ತಾನು ನಿರ್ದಿಷ್ಟ ಲಿಂಗಕ್ಕೆ ಸೇರಿದವನು/ವಳು ಎಂದು ಮಗುವಿನ ಮನಸ್ಸಿಗೆ ಮನದಟ್ಟು ಆಗುವಂತೆ ನಡೆದುಕೊಳ್ಳುತ್ತಾರೆ.
ತಾನು ಸಣ್ಣ ಮಗುವಿದ್ದಾಗ ಯಾವ ರೀತಿಯ ಉಡುಗೆ ತೊಡುಗೆ ತೊಡಿಸಿ ಪಾಲಕರು, ಪೋಷಕರು ತನ್ನನ್ನು ಅಲಂಕರಿಸಿದ್ದರು ಎನ್ನುವುದು ಕೂಡಾ ಆ ಕಂದನ ನೆನಪಿನಲ್ಲಿ ಉಳಿದಿರುವುದಿಲ್ಲ. ಆದರೂ ಬೆಳೆದಂತೆ ಕಾಲಕ್ರಮೇಣ ತನ್ನ ಇಷ್ಟದ ಅನುಸಾರವಾಗಿ ಆರಾಮದಾಯಕ ಎನಿಸುವ ಬಟ್ಟೆಯನ್ನು ತೊಡಲು ಬಯಸುತ್ತದೆ. ಆಗ ಪೋಷಕರಲ್ಲಿ ಗೊಂದಲ ಉಂಟಾಗುತ್ತದೆ. ತನ್ನ ಇಷ್ಟದ ಆಭರಣಗಳನ್ನು ಧರಿಸಲು ಬಯಸುತ್ತದೆ. ತನಗೆ ಪ್ರಿಯವೆನಿಸುವ ರೀತಿಯಲ್ಲಿ ಅಲಂಕರಿಸಿಕೊಳ್ಳಲು ಆಸೆಪಡುತ್ತದೆ. ಇದೆಲ್ಲವೂ ಪೋಷಕರ ಗಮನಕ್ಕೆ ಬಂದಾಗ ಹೌಹಾರಿ ಹೋಗುತ್ತಾರೆ.
ತಮ್ಮ ಮಗುವಿನಲ್ಲಿ ಏಕೆ ಇಂತಹ ತದ್ವಿರುದ್ಧ ಬಯಕೆಗಳು ಎಂದು ಚಿಂತಾಕ್ರಾಂತರಾಗುತ್ತಾರೆ. ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಏನೆಂದುಕೊಳ್ಳುತ್ತಾರೆ ಎನ್ನುವ ಅಂಜಿಕೆ ಪೋಷಕರ ಮನದಲ್ಲಿ ಮೂಡುತ್ತದೆ. ತಮ್ಮ ಮಗುವಿನಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಭಾವನೆಗಳ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುವ ಇವರು ಮಗುವನ್ನು ಗದರಿಸಿ ಮಗುವು ತನ್ನ ಇಷ್ಟದ ಹಾಗೆ ನಡೆದುಕೊಳ್ಳುವುದನ್ನು ವಿರೋಧಿಸುತ್ತಾರೆ. ಇದರಿಂದ ಆ ಪುಟ್ಟ ಮನಸ್ಸಿಗೆ ಎಷ್ಟು ಆಘಾತವಾಗುತ್ತದೆ ಎನ್ನುವುದನ್ನು ಮನಗಾಣದಾಗುತ್ತಾರೆ.
ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ
ಬಲವಂತವಾಗಿ ಮಗುವನ್ನು ಅದರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿರ್ಬಂಧವನ್ನು ಹೇರುತ್ತಾರೆ. ಮಗುವಿಗೆ ತನ್ನ ತಪ್ಪು ಏನೆಂದು ಕೂಡಾ ಇಲ್ಲಿ ತಿಳಿದಿರುವುದಿಲ್ಲ. ತನಗೇನು ಅನಿಸುತ್ತದೆ ಅದನ್ನೇ ಮಾಡಲು ಹಾಗೂ ಹಾಗೆ ನಡೆದುಕೊಳ್ಳಲು ಮಗುವು ಇಚ್ಚಿಸುತ್ತದೆ. ಆದರೆ ತನ್ನ ಇಷ್ಟಾನಿಷ್ಟಗಳಿಗೆ ಅಪ್ಪ ಅಮ್ಮನ ವಿರೋಧ ಕಂಡಾಗ ಮಗು ಒಳಗೊಳಗೇ ಕೊರಗಲು ಪ್ರಾರಂಭಿಸುತ್ತದೆ. ಮಗುವಲ್ಲವೇ ಅದಕ್ಕೇನು ತಿಳಿಯುತ್ತದೆ? ತಿಳಿಯದೇ ಮಾಡಿದ್ದನ್ನು ನಾವು ಸರಿಪಡಿಸಿದರೆ ಆಯಿತು ಎಂದುಕೊಳ್ಳುವ ಪೋಷಕರು ಆ ಪುಟ್ಟ ಮನಸ್ಸಿಗೆ ಆಗುವ ಆಘಾತವನ್ನು ಊಹಿಸದಾಗುತ್ತಾರೆ.
ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಟ್ಟಾಗ ಅವರಲ್ಲಿ ಆಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಮಕ್ಕಳನ್ನು ಕುತೂಹಲಕ್ಕೆ ಹಾಗೂ ಮುಜುಗರಕ್ಕೆ ಒಳಪಡಿಸುತ್ತದೆ. ಅಂತಹಾ ಸಮಯದಲ್ಲಿ ಮಕ್ಕಳು ಕೇಳುವ ಸಂಶಯಭರಿತ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಹೇಳಲು ಪೋಷಕರು ಅಸಮರ್ಥರಾಗುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ಮನೆಗಿಂತ ಹೆಚ್ಚಾಗಿ ಹೊರಗೆ ಅಂದರೆ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ ಹಾಗಾಗಿ ಇವರ ಮೇಲೆ ಹೆಚ್ಚು ಗಮನ ಕೊಡಲು ಕೂಡಾ ಪೋಷಕರಿಗೆ ಅಸಾಧ್ಯವಾಗುತ್ತದೆ.
ಜೊತೆಗೆ ಇಬ್ಬರೂ ಹೊರಗೆ ದುಡಿಯಲು ತೆರಳುವುದರಿಂದ ಮಕ್ಕಳೊಂದಿಗೆ ಕಳೆಯುವ ಸಮಯವೂ ಕಡಿಮೆ ಇರುತ್ತದೆ. ಹಲವಾರು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿ ಮಕ್ಕಳು ತಮ್ಮ ಜೊತೆ ಮಾತನಾಡಲು ಬಯಸಿದಾಗ ಕೆಲವೊಮ್ಮೆ ಅವರ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಹೀಗಾದಾಗ ತಮ್ಮ ಜಿಜ್ಞಾಸೆಗಳಿಗೆ ಸರಿಯಾದ ಪರಿಹಾರ ದೊರೆಯದೇ ಮಕ್ಕಳು ಪೋಷಕರಿಂದ ದೂರವೇ ಉಳಿದುಬಿಡುತ್ತಾರೆ. ಕೆಲವೊಮ್ಮೆ ತಮ್ಮ ಮಕ್ಕಳು ಏನು ಮಾಡುತ್ತಾರೆ? ಶಾಲೆಗೆ ಹೋದಾಗ ಹೊರಗೆ ಹಾಗೂ ಮನೆಯಲ್ಲಿ ಒಬ್ಬರೇ ಇದ್ದಾಗ ಹೇಗೆ ಇರುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ತಮಗೆ ತಿಳಿದಂತೆ, ತಮ್ಮ ಅನುಭವದ ಮೇರೆಗೆ ಮಕ್ಕಳಿಗೆ ತಿಳಿಹೇಳಿ ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿಯೇ ಬೆಳೆಯುತ್ತಿದ್ದಾರೆ ಎಂದು ತಮ್ಮಲ್ಲಿಯೇ ಅಂದುಕೊಳ್ಳುತ್ತಾರೆ. ಇತ್ತ ಮಾತಾಪಿತರ ಬಳಿ ಮಾತನಾಡಲು ಅವಕಾಶ ಸಿಗದೇ ಗೊಂದಲಕ್ಕೆ ಒಳಗಾದ ಮಕ್ಕಳು ತಮ್ಮ ಮನಸ್ಸಲ್ಲಿ ಮೂಡುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇತರೇ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೆರೆಹೊರೆಯವರಿಂದ, ಪರಿಚಿತರಿಂದ, ಸಂಬಂಧಿಕರಿಂದ ಲೈಂಗಿಕ ಶೋಷಣೆಗೂ ಒಳಗಾಗುತ್ತಾರೆ. ಇದನ್ನು ಪೋಷಕರಲ್ಲಿ ಹೇಳಲು ಅಂಜುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶಗಳೂ ಇರುವುದಿಲ್ಲ. ಶಾಲೆಯ ಚಟುವಟಿಕೆ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಮಾತನಾಡುವ ಪೋಷಕರು ಮಕ್ಕಳಿಗೆ ಆಗುವ ಇಂತಹಾ ಅಹಿತಕರ ಅನುಭವಗಳ ಬಗ್ಗೆ ಚಿಂತಿಸಿಯೇ ಇರುವುದಿಲ್ಲ. ತಾವು ತಮ್ಮ ಮಕ್ಕಳಿಗೆ ಸಂಪೂರ್ಣ ಸುರಕ್ಷತೆಯನ್ನು ಕೊಟ್ಟಿದ್ದೇವೆ ಎನ್ನುವ ಭ್ರಮೆಯಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ಮಕ್ಕಳು ಏನಾದರೂ ಹೇಳಲು ಹತ್ತಿರ ಬಂದರೆ ನಿರ್ಲಕ್ಷ್ಯವನ್ನು ತೋರುತ್ತಾರೆ. ತಮ್ಮ ಓರಗೆಯವರಿಗಿಂತ ತಮ್ಮ ಮಕ್ಕಳು ಭಿನ್ನರು ಎನ್ನುವುದು ಎಷ್ಟೋ ಪಾಲಕರ ಗಮನಕ್ಕೆ ಬಾರದೇ ಹೋಗುತ್ತದೆ. ಹದಿ ಹರೆಯದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳದೆ ಇರುವುದು ಕೂಡಾ ಇದಕ್ಕೆ ಕಾರಣ. ತಾವು ಹೇಳಿದಂತೆ ಮಕ್ಕಳು ಕೇಳಬೇಕು, ಅವರಿಗೆ ಪ್ರಪಂಚ ಜ್ಞಾನವಿಲ್ಲವೆಂದು ತಿಳಿದು ಮಕ್ಕಳು ಏನಾದರೂ ಸಂಶಯವನ್ನು ಕೇಳಿ ಬಳಿ ಬಂದಾಗ ತಮ್ಮ ಅನುಭವಕ್ಕೆ ಅನುಗುಣವಾಗಿ ಬೋಧಿಸಲು ಪ್ರಾರಂಭಿಸುತ್ತಾರೆ. ತಮ್ಮ ಮಗುವಿನ ಅನುಭವ ತಮಗಿಂತಲೂ ಭಿನ್ನ ಎನ್ನುವುದನ್ನು ಒಪ್ಪಿಕೊಳ್ಳಲು ಪೋಷಕರು ತಯಾರಾಗುವುದೇ ಇಲ್ಲ. ಹೀಗಾದಾಗ ಮಕ್ಕಳು ಪೋಷಕರ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡಿ ಅಂತರ್ಮುಖಿಯಾಗುತ್ತಾರೆ.
ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: LGBTQ+ ಮಕ್ಕಳ ತೊಳಲಾಟಗಳು!
ತಮ್ಮ ಲಿಂಗತ್ವಕ್ಕೆ ವಿಭಿನ್ನವಾದ ನಡವಳಿಕೆ ಮಕ್ಕಳಲ್ಲಿ ಕಂಡುಬಂದರೆ ಅವರನ್ನು ಟೀಕೆಮಾಡಿ, ನಿಂದಿಸಿ, ಗದರಿ ಹಾಗೆಲ್ಲಾ ನಡೆಕೊಳ್ಳದ ಹಾಗೆ ತಾಕೀತು ಮಾಡುತ್ತಾರೆ. ಮನೆಯ ಹೊರಗಿನಿಂದಲೂ ಮಕ್ಕಳು ಅವಹೇಳನಕ್ಕೆ ಒಳಗಾಗುತ್ತಾರೆ. ಹೀಗೆ ಅಪಹಾಸ್ಯಕ್ಕೆ ಒಳಗಾದ ಮಕ್ಕಳು ತಾವು ಏನೋ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎನ್ನುವ ಕೀಳರಿಮೆಗೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ತಮ್ಮ ಘನತೆ ಗೌರವ ಮನೆತನದ ಮರ್ಯಾದೆ ಹಾಳಾಗುತ್ತದೆ ಎಂದೆಲ್ಲಾ ಹೆದರುವ ಪಾಲಕರು ತಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ತರಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಾರೆ. ಸಮಾಜದ ಕುಹಕಕ್ಕೆ ಹೆದರಿ ತಮ್ಮ ಮಕ್ಕಳಲ್ಲಿ ಸಹಜವಾಗಿ ಉಂಟಾಗುವ ವಿಭಿನ್ನ ರೀತಿಯ ಬದಲಾವಣೆಯನ್ನು ಪ್ರಾರಂಭದಲ್ಲೇ ಚಿವುಟಿ ಹಾಕುವ ವ್ಯರ್ಥ ಪ್ರಯತ್ನಗಳು ಅವಿರತವಾಗಿ ಪೋಷಕರಿಂದ ನಡೆಯುತ್ತವೆ. ಆಗೆಲ್ಲಾ ಮಕ್ಕಳು ಮಾನಸಿಕವಾಗಿ ಜರ್ಜರಿತರಾಗುವುದನ್ನು ಅರ್ಥಮಾಡಿಕೊಳ್ಳದೇ ಕಾಲಕ್ರಮೇಣ ಸರಿಹೋಗುವರು ಎಂದು ಪೋಷಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಪೋಷಕರ ಕಾಳಜಿ ಅತ್ಯಗತ್ಯ. ತಾವು ಸದಾ ಜೊತೆಗಿದ್ದೇವೆ ಎನ್ನುವ ಭರವಸೆ ಮಕ್ಕಳ ಮನಸ್ಸಲ್ಲಿ ಸುರಕ್ಷಿತ ಭಾವನೆ ಮೂಡಿಸುತ್ತದೆ. ಸಣ್ಣ ಮಗುವಾಗಿದ್ದಾಗ ನಾವು ತೋರುವ ಕಾಳಜಿ, ಪ್ರೀತಿ, ಸಹಕಾರ, ಎಲ್ಲವೂ ಸದಾ ಕಾಲವಿರಬೇಕು ಎಂದು ಮಕ್ಕಳು ಬಯಸುತ್ತಾರೆ. ಶಿಸ್ತಿನಿಂದ ಪಾಲನೆ ಪೋಷಣೆ ಮಾಡದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಆದರೂ ಅವರಿಗೆ ಅಗತ್ಯವಿದ್ದಾಗ ಏನೇ ಆದರೂ ನಾವು ಜೊತೆಗಿದ್ದೇವೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹಾಗಾಗಬೇಕಾದರೆ ನಾವು ಸ್ನೇಹಿತರಂತೆ ಅವರ ಜೊತೆ ನಡೆದುಕೊಳ್ಳಬೇಕು.
ಲೇಖನ: ರುಕ್ಮಿಣಿ ಎಸ್ ನಾಯರ್