2026ರ ಫಿಫಾ ವಿಶ್ವಕಪ್ ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಪೇನ್ ವಿರುದ್ಧ ನಡೆಯಲಿರುವ 16ರ ಸುತ್ತಿನ ಮಹತ್ವದ ನಾಕೌಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವಕಪ್‌ನಲ್ಲಿ ಪ್ರತಿಯೊಂದು ಕ್ಷಣವನ್ನೂ ಸವಿಯಲು ಬಯಸುತ್ತೇನೆ ಎಂದು ಭಾವುಕರಾಗಿ ಹೇಳಿದರು.
41 ವರ್ಷದ ರೊನಾಲ್ಡೊ, “ಇದು ನನ್ನ ಕೊನೆಯ ವಿಶ್ವಕಪ್. ಆದರೆ ಸ್ಪೇನ್ ವಿರುದ್ಧದ ಪಂದ್ಯವೇ ನನ್ನ ಕೊನೆಯ ಪಂದ್ಯವಾಗಬಾರದು ಎಂದು ಆಶಿಸುತ್ತೇನೆ. ಸಾಧ್ಯವಾದಷ್ಟು ದೂರ ತಂಡವನ್ನು ಮುನ್ನಡೆಸಲು ಬಯಸುತ್ತೇನೆ. ಈ ವಿಶ್ವಕಪ್‌ನ ಪ್ರತಿಯೊಂದು ಕ್ಷಣವನ್ನೂ ಆನಂದಿಸಲು ಇಚ್ಛಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಮೂರು ಗೋಲುಗಳನ್ನು ದಾಖಲಿಸಿರುವ ರೊನಾಲ್ಡೊ, ಪೋರ್ಚುಗಲ್ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ತಂಡದ ಯಶಸ್ಸೇ ತನ್ನ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ಮೊದಲ ಸ್ಥಾನದಲ್ಲಿದ್ದು, ಅವರು 30 ಪಂದ್ಯಗಳನ್ನು ಆಡಿದ್ದಾರೆ. ರೊನಾಲ್ಡೊ 26 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಗೋಲುಗಳ ಪಟ್ಟಿಯಲ್ಲೂ ಮೆಸ್ಸಿ 20 ಗೋಲುಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ರೊನಾಲ್ಡೊ 11 ಗೋಲುಗಳನ್ನು ಗಳಿಸಿದ್ದಾರೆ.
ಇತ್ತ ಬ್ರೆಜಿಲ್ ಫುಟ್‌ಬಾಲ್ ಅಭಿಮಾನಿಗಳಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. 16ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ತಂಡ ನಾರ್ವೆ ವಿರುದ್ಧ ಅಚ್ಚರಿಯ ಸೋಲು ಅನುಭವಿಸಿದ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ನೇಮರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
68ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ನೇಮರ್, ಹೆಚ್ಚುವರಿ ಸಮಯದಲ್ಲಿ (90+10ನೇ ನಿಮಿಷ) ಗೋಲು ಬಾರಿಸಿದರೂ ಬ್ರೆಜಿಲ್‌ಗೆ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಪಂದ್ಯದ ಅಂತ್ಯದಲ್ಲಿ ಕಣ್ಣೀರಿಡುತ್ತಿದ್ದ ನೇಮರ್ ಅವರ ದೃಶ್ಯ ಅಭಿಮಾನಿಗಳ ಮನಸ್ಸನ್ನು ಮುಟ್ಟಿದ್ದು, ಬ್ರೆಜಿಲ್ ಫುಟ್‌ಬಾಲ್‌ನ ಒಂದು ಸುವರ್ಣ ಅಧ್ಯಾಯಕ್ಕೆ ತೆರೆ ಬಿದ್ದಂತಾಗಿದೆ.
