Home ಅಂಕಣ ಕನ್ನಡ ಧ್ವಜದ ಅರಸಿನ ಕುಂಕುಮ ಬಣ್ಣ ಹಿಂದೂ ಧರ್ಮದ್ದಲ್ಲ, ಟಿಪ್ಪು ಸುಲ್ತಾನರ ಸೈನ್ಯದ್ದು!

ಕನ್ನಡ ಧ್ವಜದ ಅರಸಿನ ಕುಂಕುಮ ಬಣ್ಣ ಹಿಂದೂ ಧರ್ಮದ್ದಲ್ಲ, ಟಿಪ್ಪು ಸುಲ್ತಾನರ ಸೈನ್ಯದ್ದು!

0
* ಕನ್ನಡ ಧ್ವಜದಲ್ಲಿರುವ ಹಳದಿ ಮತ್ತು ಕೆಂಪು ಬಣ್ಣ ಹಿಂದೂ ಧರ್ಮದ ಅರಸಿನ ಕುಂಕುಮದ ಸಂಕೇತವಲ್ಲ..
* ಹಳದಿ ಮತ್ತು ಕೆಂಪು ಬಣ್ಣದ ಧ್ವಜದ ಮೂಲ ಪರಿಕಲ್ಪನೆ ಟಿಪ್ಪು ಸುಲ್ತಾನರದ್ದು..
* ಟಿಪ್ಪು ಸೈನ್ಯದ ಧ್ವಜ ಮತ್ತು ಕರ್ನಾಟಕದ ಕನ್ನಡ ಧ್ವಜಕ್ಕೂ ಒಂದಕ್ಕೊಂದು ಹೋಲಿಕೆ ಇದೆ..
ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಸಾಹಿತಿ ಭಾನು ಮುಸ್ತಾಕ್ ಅವರು ನಾವು ಆಯೋಜಿಸಿದ್ದ ಜನಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಕನ್ನಡವನ್ನು ಮುಸ್ಲಿಂ ಸಮುದಾಯ ಬೆಳೆಸಲು ಈ ಸಮಾಜ ಅವಕಾಶವನ್ನೇ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿ ಮಾಡಿದ್ರಿ. ಕೆಂಪು ಮತ್ತು ಹಳದಿ ಅರಸಿನ ಕುಂಕುಮದ ಬಾವುಟವನ್ನು ಹಾಕಿ ಅರಸಿನ ಕುಂಕುಮ ಲೇಪಿತರನ್ನಾಗಿ ಮಾಡಿದ್ರಿ. ಆಕೆಯನ್ನು ಮಂದಹಾಸನದ ಮೇಲೆ ಕೂರಿಸಿದ್ರಿ. ಕನ್ನಡದಿಂದ ನನ್ನ ಹೊರಗಟ್ಟುವಿಕೆ ಇವತ್ತಿನಿಂದಲ್ಲ, ಯಾವತ್ತಿನಿಂದಲೋ ಶುರುವಾಗಿದೆ’ ಎಂದಿದ್ದರು. 2023 ರ ಜನಸಾಹಿತ್ಯ ಸಮ್ಮೇಳನದ ಈ ಭಾಷಣ, ಭಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುತ್ತಾರೆ ಎಂದು ಸರ್ಕಾರ ಘೋಷಿಸಿದ ತಕ್ಷಣ ವಿವಾದದ ಸ್ವರೂಪ ಪಡೆದುಕೊಂಡಿದೆ.

ಮಹೇಶ್ ಜೋಷಿ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ನಡೆಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ಹೊರಗಿಡಲಾಗಿತ್ತು ಎಂಬ ಕಾರಣಕ್ಕಾಗಿ ಬೆಂಗಳೂರಿನ ಕೆ ಆರ್ ಸರ್ಕಲ್ ನಲ್ಲಿ ನಾವು ಪರ್ಯಾಯವಾಗಿ ‘ಜನಸಾಹಿತ್ಯ ಸಮ್ಮೇಳನ’ ಆಯೋಜಿಸಿದ್ದೆವು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಾನು ಮುಷ್ತಾಕ್ ವಹಿಸಿದ್ದರು. ಅವರ ಒಟ್ಟು ಮಾತಿನ ತಾತ್ಪರ್ಯ ಏನೆಂದರೆ, ‘ಕನ್ನಡದ ಸಂಕೇತಗಳನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಜನಸಮುದಾಯದಿಂದ ಅದನ್ನು ದೂರಮಾಡಬೇಡಿ’ ಎಂಬ ಕಾಳಜಿ ಮಾತ್ರವಾಗಿತ್ತು.

ಭಾನು ಮುಷ್ತಾಕ್ ಅವರು ‘ಅರಸಿನ ಕುಂಕುಮ’ ಹಾಕಿಕೊಂಡು ಬಂದು ದಸರಾ ಉದ್ಘಾಟಿಸಲಿ ಎಂದು ಬಿಜೆಪಿ ಮತ್ತು ಹಿಂದುತ್ವವಾದಿಗಳು ಆಗ್ರಹಿಸಿದ್ದಾರೆ. ಕನ್ನಡ ಹೋರಾಟಗಾರರಾದ ನಾರಾಯಣ ಗೌಡರು ಕೂಡಾ ಇದೇ ರೀತಿಯಲ್ಲಿ ಮಾತನಾಡಿದ್ದು ವಿಪರ್ಯಾಸ ! ಕನ್ನಡ ಧ್ವಜದಲ್ಲಿರುವ ಹಳದಿ ಮತ್ತು ಕೆಂಪು ಬಣ್ಣ ಹಿಂದೂ ಧರ್ಮದ ಅರಸಿನ ಕುಂಕುಮದ ಸಂಕೇತವಲ್ಲ. 1965ರಲ್ಲಿ ಕನ್ನಡ ಹೋರಾಟಗಾರರಾದ ಎಂ. ರಾಮಮೂರ್ತಿ ಅವರು ಈ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ಸಿದ್ಧಪಡಿಸಿದ್ದರೂ ಅದರ ಮೂಲ ಪರಿಕಲ್ಪನೆ ಟಿಪ್ಪು ಸುಲ್ತಾನರದ್ದಾಗಿತ್ತು.  

ಟಿಪ್ಪು ಸುಲ್ತಾನರು ಇಸ್ಲಾಂ ಧರ್ಮಾನುಯಾಯಿ ಆಗಿದ್ದರೂ ಆಡಳಿತ ಭಾಷೆ ಕನ್ನಡವೇ ಇರುವಂತೆ ನೋಡಿಕೊಂಡರು. ಟಿಪ್ಪು ಸುಲ್ತಾನರ ಸೈನ್ಯ, ಆಡಳಿತ, ಸೈನ್ಯದ ದ್ವಜಗಳಲ್ಲಿ ಎಲ್ಲೂ ಕೂಡಾ ಧರ್ಮದ ಸಂಕೇತಗಳು ನುಸುಳದಂತೆ ಎಚ್ಚರ ವಹಿಸಿದ್ದರು. ರಾಜನೊರ್ವನ ಸೈನ್ಯದ ಧ್ವಜವೇ ಆತನ ನಿಲುವುಗಳನ್ನು ಹೇಳುತ್ತಿದ್ದ ಕಾಲವದು. ದೇಶದಾದ್ಯಂತ ಮುಸ್ಲಿಂ ಮತ್ತು ಹಿಂದೂ ರಾಜರುಗಳು ತಮ್ಮ ಧರ್ಮ, ಜಾತಿಯ  ಸಂಕೇತವಾದ ಧ್ವಜವನ್ನು ಹೊಂದಿದ್ದರು. ಟಿಪ್ಪು ಸೈನ್ಯವೂ ಕೂಡಾ 1782 ರಲ್ಲಿ ತನ್ನದೇ ಆದ ಪ್ರತ್ಯೇಕ ಧ್ವಜವನ್ನು ಹೊಂದಿತು.

ಟಿಪ್ಪು ಸೈನ್ಯದ ಧ್ವಜ ಮತ್ತು ಈಗ ಕರ್ನಾಟಕದಲ್ಲಿ ಅಧಿಕೃತಗೊಂಡಿರುವ ಕನ್ನಡ ಧ್ವಜಕ್ಕೂ ಒಂದಕ್ಕೊಂದು ಹೋಲಿಕೆ ಇದೆ.  ಕನ್ನಡದ ಧ್ವಜವು ದ್ವಿವರ್ಣ ಧ್ವಜ. ಈ ಧ್ವಜವನ್ನು ಎರಡು ಭಾಗಗಳಾಗಿ ಮಾಡಲಾಗಿದೆ. ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ. ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.

‘ಟಿಪ್ಪು ಸುಲ್ತಾನರು 1783 ರಲ್ಲಿ ತನ್ನ ಸೈನ್ಯಕ್ಕೆಂದು ಅಧಿಕೃತಗೊಳಿಸಿದ ಧ್ವಜವು ಕೆಂಪು ಮತ್ತು ಹಳದಿ ಬಣ್ಣವನ್ನು ಸಮಾನಾಂತರವಾಗಿ ಬಳಸಲಾಗಿತ್ತು. ಕೆಂಪು ಮತ್ತು ಹಳದಿ ಬಣ್ಣದ ಮಧ್ಯದಲ್ಲಿ ಸೂರ್ಯನ ಚಿತ್ರವಿತ್ತು’ (ಆಧಾರ : ಕೆಚ್ಚೆದೆಯ ಅಚ್ಚ ಕನ್ನಡಿಗ ಟಿಪ್ಪು ಸುಲ್ತಾನ / ಕನ್ನಡಿಗರ ಮಾದರಿಗಳು, ಸಂಪಾದಕರು ಮತ್ತು  ಲೇಖಕರು :  ಲಕ್ಷ್ಮಣ ಕೊಡಸೆ, ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ, ಮುದ್ರಣ : 2016, ಪುಟ ಸಂಖ್ಯೆ : 10, 14)

ಕೆಂಪು ಮತ್ತು ಹಳದಿ ಬಣ್ಣದ ಕನ್ನಡದ ಧ್ವಜವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿಸಿ ವ್ಯಾಖ್ಯಾನಿಸುವುದು ಘೋರ ಅಪರಾಧವಾಗುತ್ತದೆ. ಟಿಪ್ಪು ಸುಲ್ತಾನರ ಸೈನ್ಯ ಹೊಂದಿದ್ದ ಕನ್ನಡ ಕೆಂಪು ಮತ್ತು ಹಳದಿ ಬಣ್ಣ (ಕೆಂಪು ಧ್ವಜದಲ್ಲಿ ಹಳದಿ ಸೂರ್ಯ, ಸುತ್ತಲೂ ಹಳದಿ ಪಟ್ಟಿ, ಮಧ್ಯೆ ಕಪ್ಪು ಚುಕ್ಕೆ) ಧ್ವಜವು ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ಎದುರು ಹೋರಾಡಿದ ಧ್ವಜವಾಗಿದೆ. ಕೆಂಪು ಮತ್ತು ಹಳದಿ ಬಣ್ಣದ ಧ್ವಜವು ಇಡೀ ಇಂಗ್ಲೇಂಡ್ ದೇಶವನ್ನೇ ನಡುಗಿಸಿತ್ತು!  ಸೂರ್ಯನ ಚಿತ್ರವಿದ್ದ ಕೆಂಪು ಹಳದಿ ಮಿಶ್ರಿತ ಧ್ವಜವು ಟಿಪ್ಪುವಿನ ಕಾಲದಲ್ಲೇ ರಾಜ ಗಾಂಭೀರ್ಯದಲ್ಲಿ ಕನ್ನಡದ ನೆಲದಾದ್ಯಂತ ಓಡಾಡಿತ್ತು. ಟಿಪ್ಪು ಸುಲ್ತಾನರ ಕುರಿತಾಗಿ ನಾನು ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬರೆದಿದ್ದು ಪ್ರಕಟಣೆಗೆ ಸಿದ್ದವಾಗಿದೆ. ಅದರಲ್ಲಿ ಟಿಪ್ಪು ಸುಲ್ತಾನರ ಕನ್ನಡತನದ ಬಗ್ಗೆ ವಿಸ್ತೃತ ಸಂಶೋಧಿತ ಬರಹಗಳಿವೆ.

ಎಲ್ಲಕ್ಕಿಂತ ರೋಚಕ ಎನ್ನಿಸುವುದು ಬ್ರಿಟೀಷ್ ಧ್ವಜ ಮತ್ತು ಕನ್ನಡ ಧ್ವಜದ ಹೋರಾಟ! 1799 ಮೇ 04 ರಂದು ಶ್ರೀರಂಗಪಟ್ಟಣಕ್ಕೆ ನುಗ್ಗುತ್ತಿದ್ದ ಬ್ರಿಟೀಷ್ ಸೈನಿಕರು ಒಂದು ಕೈಯ್ಯಲ್ಲಿ ಬ್ರಿಟೀಷ್ ಧ್ವಜವನ್ನೂ, ಇನ್ನೊಂದು ಕೈಯ್ಯಲ್ಲಿ ಕತ್ತಿ ಅಥವಾ ಬಂದೂಕನ್ನೂ ಹಿಡಿದುಕೊಂಡಿದ್ದರು. ‘ಶ್ರೀರಂಗಪಟ್ಟಣ ಕೋಟೆಯ ಮೇಲಿರುವ ಟಿಪ್ಪು ಸೈನ್ಯದ ಕೆಂಪು ಹಳದಿ ಧ್ವಜವನ್ನು ಇಳಿಸಿ ಯಾರು ಮೊತ್ತ ಮೊದಲನೆಯದಾಗಿ ಬ್ರಿಟೀಷ್ ಧ್ವಜವನ್ನು ಹಾರಿಸುತ್ತಾರೋ ಅ ಸೈನಿಕನಿಗೆ ಸ್ಥಳದಲ್ಲೇ ಪದೋನ್ನತಿ(on spot promotion) ನೀಡಲಾಗುವುದು’ ಎಂದು ಬ್ರಿಟೀಷ್ ಸರ್ಕಾರ ಘೋಷಿಸುತ್ತದೆ. ಹಾಗಾಗಿ ಬ್ರಿಟೀಷ್ ಸೈನಿಕರೆಲ್ಲರೂ ಕೈಯ್ಯಲ್ಲಿ ಬ್ರಿಟೀಷ್ ಧ್ವಜ ಹಿಡಿದುಕೊಂಡಿದ್ದರು.

ಬ್ರಿಟೀಷ್ ಧ್ವಜ ಹಿಡಿದುಕೊಂಡ ಸೈನಿಕರು ಶ್ರೀರಂಗಪಟ್ಟಣ ಕೋಟೆಗೆ ಲಗ್ಗೆ ಹಾಕಲು ನದಿ ದಾಟುತ್ತಿರುವಾಗ ಕೋಟೆ ಮೇಲಿಂದ ಫಿರಂಗಿ ಮತ್ತು ಬಂದೂಕಗಳಿಂದ ಗುಂಡಿನ ಸುರಿಮಳೆಯನ್ನು ಸುರಿಸಲಾಗುತ್ತದೆ. ಘನಘೋರ ಯುದ್ದ ನಡೆಯುತ್ತದೆ. ರಕ್ತದ ನದಿಯೇ ಹರಿಯುತ್ತಿದೆಯೇನೋ ಎಂಬಂತೆ ರಕ್ತ ನೆಲದಲ್ಲಿರುತ್ತದೆ.

ಈ ಮಧ್ಯೆ  ಸಾರ್ಜೆಂಟ್ ಗ್ರಾಹಾಂ ಎಂಬ ಬಾಂಬೆ ಸೇನೆಗೆ ಸೇರಿದ ಬ್ರಿಟೀಷ್ ಸೈನಿಕ ಒಂದು ಕೈಯಲ್ಲಿ ಕತ್ತಿಯನ್ನು ಮತ್ತೊಂದು ಕೈಯಲ್ಲಿ ಬ್ರಿಟಿಷ್ ಧ್ವಜವನ್ನು ಹಿಡಿದುಕೊಂಡು ಬಂದು ಶ್ರೀರಂಗಪಟ್ಟಣ ಕೋಟೆಯ ಮೇಲಿದ್ದ ಕೆಂಪು ಹಳದಿ ಧ್ವಜವನ್ನು ಕಿತ್ತು ಬ್ರಿಟೀಷ್ ದ್ವಜವನ್ನು ನಿಲ್ಲಿಸುತ್ತಾನೆ. ಬ್ರಿಟೀಷ್ ಧ್ವಜ ಶ್ರೀರಂಗಪಟ್ಟಣ ಕೋಟೆಯಲ್ಲಿ ಸ್ಥಾಪನೆ ಆಗುತ್ತಿದ್ದಂತೆ ಕೆಂಪು ಹಳದಿ ಧ್ವಜ ಹಿಡಿದಿದ್ದ ಟಿಪ್ಪುವಿನ ಸೈನಿಕರು ಆತನ ಮೇಲೆ ಗುಂಡು ಹಾರಿಸುತ್ತಾರೆ. ಆತ ಕ್ಷಣಾರ್ಧದಲ್ಲಿ ನೆಲಕ್ಕುರುಳುತ್ತಾನೆ. ಆದರೆ ಆತ ನೆಟ್ಟ ಬ್ರಿಟೀಷ್ ಧ್ವಜ ಮಾತ್ರ 1947 ಆಗಸ್ಟ್ 14ರ ಮಧ್ಯರಾತ್ರಿ ತನಕ ಮೈಸೂರಿನಲ್ಲಿ ಹಾರಾಡುತ್ತಿತ್ತು. ಬ್ರಿಟೀಷ್ ಸೇನೆಯು “India is ours’ (ಭಾರತ ನಮ್ಮದು) ಎಂದು ಕೂಗಿಕೊಂಡು ಶ್ರೀರಂಗಪಟ್ಟಣ ಕೋಟೆ ಒಳಕ್ಕೆ ನುಗ್ಗುತ್ತದೆ. ಅಪ್ರತಿಮ ದೇಶಪ್ರೇಮಿ ಟಿಪ್ಪು ಸುಲ್ತಾನರು ಅಂದು ಹುತಾತ್ಮರಾಗುತ್ತಾರೆ.

ಟಿಪ್ಪು ಸುಲ್ತಾನರು ಶ್ರೀರಂಗಪಟ್ಟಣದಲ್ಲಿ ಪ್ರತ್ಯೇಕ ಅರಮನೆಯಲ್ಲಿ ವಾಸವಾಗಿದ್ದುಕೊಂಡು, ಅಧಿಕಾರ ರಹಿತ ಒಡೆಯರ್ ರವರ ವೈಯಕ್ತಿಕ ಬದುಕಿಗೆ ತೊಂದರೆ ನೀಡಲಿಲ್ಲ. ದಸರಾವನ್ನು ನಾಡಹಬ್ಬ ಎಂದು ಘೋಷಿಸಿದ ಟಿಪ್ಪು ಸುಲ್ತಾನರು ತಾನೇ ಮುಂದೆ ನಿಂತು ದಸರಾವನ್ನು ನಡೆಸಿಕೊಟ್ಟರು. ಅಂದು ಟಿಪ್ಪು ಸುಲ್ತಾನರು ನಿಂತಿದ್ದ ಜಾಗದಲ್ಲಿ ಈ ಬಾರಿ ಭಾನು ಮುಷ್ತಾಕ್ ನಿಂತುಕೊಳ್ಳಲಿದ್ದಾರೆ. ಅಂದೂ ಕೂಡಾ ಟಿಪ್ಪುವಿನ ಸೈನ್ಯ ಕೆಂಪು ಹಳದಿ ಬಣ್ಣದ ಧ್ವಜವನ್ನು ಹಿಡಿದು ನಿಂತಿತ್ತು. ಇಂದೂ ಅದೇ ಕೆಂಪು ಹಳದಿ ಬಣ್ಣದ ಅಡಿಯಲ್ಲೇ ಭಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ. ಅಂದು ಟಿಪ್ಪು ಸುಲ್ತಾನರು ಸರ್ವಾಧಿಕಾರಿಯಾಗಿದ್ದರೂ ಸಾಮ್ರಾಜ್ಯಶಾಹಿ ಬ್ರಿಟೀಷರ ಎದುರು ಹೋರಾಟಕ್ಕೆ ತನ್ನ ಧರ್ಮದ ಧ್ವಜವನ್ನು ಬಳಸಲಿಲ್ಲ. ಕನ್ನಡಿಗರೆಲ್ಲರನ್ನೂ ಕೆಂಪು ಹಳದಿ ಧ್ವಜದಡಿ ತಂದರು. ಬ್ರಿಟೀಷರ ವಿರುದ್ಧ ಹೋರಾಡಿದ ಇಂತಹ ಐತಿಹಾಸಿಕ ಧ್ವಜವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಅದರ ಮಹತ್ವವನ್ನು ಕುಬ್ಜಗೊಳಿಸುವುದೇ ನಿಜವಾಗಿಯೂ ಕನ್ನಡಕ್ಕೆ ಮಾಡುವ ಅವಮಾನವಾಗುತ್ತದೆ.

You cannot copy content of this page

Exit mobile version