ಮೊದಲು ಮುಖ್ಯ ಮಂತ್ರಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಿದ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಅಳವಡಿಸಬೇಕು. ಪೊಲೀಸರ ಈ ದಮನದ ಹಿಂದೆ ಯಾವ ಮತಾಂಧ ಶಕ್ತಿಗಳು ಇದ್ದಾವೆಂಬುದನ್ನು ಪತ್ತೆ ಹಚ್ಚಬೇಕು. ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಕನಿಷ್ಠ ಶಿಕ್ಷೆಯಾದರೆ ಬೇರೆಲ್ಲಾ ಪೊಲೀಸ್ ವ್ಯವಸ್ಥೆ ಎಚ್ಚರಗೊಳ್ಳುತ್ತದೆ. ಸಂವಿಧಾನ ವಿರೋಧಿ ದಮನಕ್ಕೆ ಇಳಿಯಲು ಹಿಂಜರಿಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ನಿಲ್ಲಿಸುತ್ತದೆ- ಶಶಿಕಾಂತ ಯಡಹಳ್ಳಿ
ಸರಕಾರಗಳು ಬದಲಾದರೂ ಈ ಪೊಲೀಸರ ಮನಸ್ಥಿತಿ ಅಷ್ಟು ಬೇಗ ಬದಲಾಗುವುದಿಲ್ಲವೆಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಕರ್ನಾಟಕ ಸರಕಾರದ ಯಾವುದೇ ಅಧಿಕೃತ ಆದೇಶಗಳಿಲ್ಲದಿದ್ದರೂ ಪೊಲೀಸ್ ವ್ಯವಸ್ಥೆ ಪ್ಯಾಲಿಸ್ಟೈನ್ ಸಂತ್ರಸ್ತರ ಪರವಾದ ಎಲ್ಲಾ ರೀತಿಯ ಪ್ರತಿರೋಧಗಳನ್ನು ದಮನಿಸುತ್ತಲೇ ಬಂದಿದೆ. ಇಸ್ರೇಲಿನ ಯುದ್ಧೋನ್ಮಾದದ ವಿರುದ್ಧ ಎಂಜಿ ರೋಡಲ್ಲಿ ಪ್ರತಿಭಟನೆ ಮಾಡುವವರನ್ನು ಪೊಲೀಸರು ಬಂಧಿಸಿದ್ದರು. ಹೋರಾಟದ ಸ್ಥಳವಾದ ಫ್ರೀಡಂ ಪಾರ್ಕಲ್ಲಿ ಧರಣಿ ಮಾಡಲೂ ಅನುಮತಿ ಕೊಡದೆ ಹೋರಾಟ ನಿರತರನ್ನು ಬಂಧಿಸಲಾಗಿತ್ತು. ಹೈಗ್ರೌಂಡ್ ಪೊಲೀಸರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸರಹದ್ದಿನ ಎಲ್ಲಾ ಭವನ ಸಭಾಂಗಣಗಳಿಗೆ ಪೊಲೀಸ್ ನೋಟೀಸನ್ನೇ ಕಳಿಸಿತು. ಕಾರ್ಯಕ್ರಮಗಳಿಗೆ ಸಭಾಂಗಣಗಳನ್ನು ಬಾಡಿಗೆ ನೀಡುವ ಮೊದಲು ಕಾರ್ಯಕ್ರಮದ ಕುರಿತ ಮಾಹಿತಿಯನ್ನು ಪೊಲೀಸ್ ಠಾಣೆಗೆ ತಿಳಿಸಿ ಒಪ್ಪಿಗೆ ಪಡೆಯಲೇಬೇಕೆಂದು ಆ ನೋಟೀಸಲ್ಲಿ ಸೂಚಿಸಲಾಗಿತ್ತು. ಮೊನ್ನೆ ನ.29 ರಂದು ರಂಗಶಂಕರದಲ್ಲಿ ಆಯೋಜನೆಗೊಂಡಿದ್ದ ಪ್ಯಾಲಿಸ್ಟೈನ್ ಕವಿತೆ ವಾಚನ ಕಾರ್ಯಕ್ರಮವನ್ನು ಸ್ವತಃ ಇನ್‌ಸ್ಪೆಕ್ಟರ್ ಬಂದು ನಿಲ್ಲಿಸಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿ ದಮನ ಮಾಡುತ್ತಿರುವ ಪೊಲೀಸ್ ದೌರ್ಜನ್ಯದ ಮೇಲೆ ಜನರ ಆಕ್ರೋಶ ಹೆಚ್ಚಾಗ ತೊಡಗಿತು. ರಂಗಮಂದಿರದ ಒಳಾಂಗಣದಲ್ಲಿಯೂ ಕಾವ್ಯವಾಚನ ಮಾಡಲು ಬಿಡದ ಪೊಲೀಸರ ದುರಾಚಾರವನ್ನು ಪ್ರಶ್ನಿಸಿ ಕೂಡಲೇ ನಾನು ಲೇಖನವನ್ನು ಬರೆದು ಜನರ ಆಕ್ರೋಶಕ್ಕೆ ಧ್ವನಿಯಾದೆ. ಪೀಪಲ್ ಮೀಡಿಯಾ ಆನ್ ಲೈನ್ ಪತ್ರಿಕೆಯಲ್ಲಿ ಅದು ಪ್ರಕಟವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಲೇಖನ ಅತ್ಯಂತ ವೇಗವಾಗಿ ಅತೀ ಹೆಚ್ಚು ಜನರನ್ನು ತಲುಪಿತು. ನಾಡಿನಾದ್ಯಂತ ಸರಕಾರ ಹಾಗೂ ಪೊಲೀಸ್ ವ್ಯವಸ್ಥೆ ಮೇಲೆ ಪ್ರತಿರೋಧ ಹೆಚ್ಚಾಗತೊಡಗಿತು. ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಜೆ.ಲೋಕೇಶರವರು ಈ ಲೇಖನವನ್ನು ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರಿಗೆ ರವಾನಿಸಿ ಸುದ್ದಿ ಮಾಡಲು ಪ್ರೇರೇಪಿಸಿದರು. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರದ ಮಂತ್ರಿಗಳಿಗೂ ಲೇಖನವನ್ನು ತಲುಪಿಸಿ ಪೊಲೀಸ್ ದಮನದ ಬಗ್ಗೆ ಗಮನ ಸೆಳೆದರು. ಆ ಲೇಖನವನ್ನು ಆಧರಿಸಿ ಮಾರನೇ ದಿನ ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡಿತು. ಪೊಲೀಸ್ ವ್ಯವಸ್ಥೆಗೆ ಸೆಡ್ಡು ಹೊಡೆಯುವಂತೆ ಡಿಸೆಂಬರ್ 2 ರಂದು ಪ್ರಗತಿಪರರು ಪ್ಯಾಲಿಸ್ಟೈನ್ ಹತ್ಯಾಕಾಂಡವನ್ನು ಖಂಡಿಸಿ ಹೋರಾಟವನ್ನು ಸ್ವಂತಂತ್ರ ಉದ್ಯಾನದಲ್ಲಿ ಹಮ್ಮಿಕೊಳ್ಳುವುದಾಗಿ ಪ್ರಕಟಣೆ ಕೊಟ್ಟರು. ವಾರ್ತಾಭಾರತಿ ಯವರು ಆನ್ ಲೈನ್ ಕಾವ್ಯವಾಚನ ಕಾರ್ಯಕ್ರಮ ಆಯೋಜಿಸಿದರು.

ಈ ಎಲ್ಲಾ ಬೆಳವಣಿಗೆಗಳು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಬಂದವು. ಆಕ್ರೋಶಗೊಂಡ ಸಿದ್ದರಾಮಯ್ಯನವರು ಕೂಡಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಮನವನ್ನು ನಿಲ್ಲಿಸಬೇಕೆಂದು ಪೊಲೀಸ್ ವರಿಷ್ಟಾಧಿಕಾರಿಗೆ ಆದೇಶಿಸಿದರು. ಹಾಗೂ ಈ ರೀತಿ ಪತ್ರಿಕಾ ಪ್ರಕಟನೆಯನ್ನೂ ಕೂಡಲೇ ಹೊರಡಿಸಿದರು. ಅದೇನೆಂದರೆ..
“ರಾಜ್ಯ ಸರಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕಥೆ ಕಾವ್ಯ ನಾಟಕ ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವ ಕೆಲಸವನ್ನು ಮಾಡುವುದಿಲ್ಲ. ನಾವು ಸಂವಿಧಾನದ ಮೂಲ ಸ್ಪೂರ್ತಿಗೆ ವಿರುದ್ದವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಳ ಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳುವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕೆಂದು ನಾನು ಪೊಲೀಸ್ ಮಹಾನಿರ್ದೇಶಕರಿಗೆ ಸೂಕ್ತ ಸೂಚನೆಗಳನ್ನು ನೀಡಿರುತ್ತೇನೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರಕಾರವೂ ಸದಾ ನಿಲ್ಲುತ್ತದೆ ಎಂಬುದನ್ನು ತಿಳಿಸಬಯಸುತ್ತೇನೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಟಿಸಬಾರದೆಂದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತರಾಗಬಾರದೆಂದು ನಾಡಬಾಂಧವರಲ್ಲಿ ವಿನಂತಿಸುತ್ತೇನೆ”
ಹೀಗೊಂದು ಪತ್ರಿಕಾ ಪ್ರಕಟನೆ ಸಿಎಂ ಕಛೇರಿಯಿಂದ ಹೊರಬೀಳುತ್ತಿದ್ದಂತೆ ನಾಡಿನ ಪ್ರಜ್ಞಾವಂತರಲ್ಲಿ ನಿರಾಳ ಭಾವ ಮೂಡಿ ಆತಂಕ ದೂರಾದಂತಾಯಿತು. ಈ ವಿಷಯದಲ್ಲಿ ತಮ್ಮ ಸಾಂವಿಧಾನಿಕ ಬದ್ಧತೆಯನ್ನು ಎತ್ತಿ ಹಿಡಿದ ಮಾನ್ಯ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು. ಒಂದು ಲೇಖನಕ್ಕೆ, ಒಂದು ವರದಿಗೆ, ಒಂದಿಷ್ಟು ಆಕ್ರೋಶಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯ ಮಂತ್ರಿಗಳಿಗೆ ಧನ್ಯವಾದಗಳು.
ಈ ಲೇಖನ ಓದಿದ್ದೀರಾ? ಕಾವ್ಯವಾಚನದ ಮೇಲೆ ಪೊಲೀಸರ ದಮನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ
ಈಗ ನಮ್ಮ ಮುಂದಿರುವ ಪ್ರಶ್ನೆ ಪೊಲೀಸರು ಈಗಾಗಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ದಮನದ ಹೊಣೆಗಾರಿಕೆಯನ್ನು ಹೊರುವವರು ಯಾರು? ತಪ್ಪು ತಿಳುವಳಿಕೆಯಿಂದಲೋ, ಪೂರ್ವಾಗ್ರಹದಿಂದಲೋ ಸಾಂಸ್ಕೃತಿಕ ಕ್ಷೇತ್ರದವರು ಹಾಗೂ ಪ್ರತಿಭಟನಾಕಾರರ ಮೇಲೆ ಪೊಲೀಸರು ಮಾಡಿದ ಬಂಧನ, ಬೆದರಿಕೆ, ನಿರ್ಬಂಧ, ನಿಷೇಧ ಮುಂತಾದ ದೌರ್ಜನ್ಯಗಳ ಜವಾಬ್ದಾರಿ ಹೊರುವವರು ಯಾರು? ತಪ್ಪು ತಿಳುವಳಿಕೆಯಿಂದ ಆಗಿದೆ ಎಂದು ತಿಪ್ಪೆ ಸಾರಿಸುವುದರಿಂದ ಆದ ದಮನಕ್ಕೆ ಪರಿಹಾರ ಆಗುವುದಿಲ್ಲವಲ್ಲ. ಮೊದಲು ಮುಖ್ಯ ಮಂತ್ರಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಿದ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಅಳವಡಿಸಬೇಕು. ಪೊಲೀಸರ ಈ ದಮನದ ಹಿಂದೆ ಯಾವ ಮತಾಂಧ ಶಕ್ತಿಗಳು ಇದ್ದಾವೆಂಬುದನ್ನು ಪತ್ತೆ ಹಚ್ಚಬೇಕು. ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಕನಿಷ್ಠ ಶಿಕ್ಷೆಯಾದರೆ ಬೇರೆಲ್ಲಾ ಪೊಲೀಸ್ ವ್ಯವಸ್ಥೆ ಎಚ್ಚರಗೊಳ್ಳುತ್ತದೆ. ಸಂವಿಧಾನ ವಿರೋಧಿ ದಮನಕ್ಕೆ ಇಳಿಯಲು ಹಿಂಜರಿಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ನಿಲ್ಲಿಸುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ತೆಗೆದುಕೊಂಡು ಅವರೇ ಹೇಳಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಮಾದರಿ ಹೆಜ್ಜೆ ಇಡಬೇಕೆಂಬುದು ಎಲ್ಲಾ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ. ಪೊಲೀಸ್ ದಮನಕ್ಕೆ ಒಳಗಾದವರು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುವವರು ಈ ಕುರಿತು ಸರಕಾರವನ್ನು ಆಗ್ರಹಿಸಬೇಕು ಹಾಗೂ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಬೇಕಿದೆ. ಕನಿಷ್ಟ ಶಿಕ್ಷೆಯೂ ಇಲ್ಲದೇ ಹೋದರೆ ಈ ಪೋಲೀಸ್ ವ್ಯವಸ್ಥೆ ಬೇರೆ ಬೇರೆ ರೂಪದಲ್ಲಿ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಲೇ ಇರುತ್ತದೆ. ಇದರಿಂದ ಸರಕಾರದ ಹೆಸರೂ ಹಾಳಾಗುತ್ತದೆ. ಸಿದ್ದರಾಮಯ್ಯನವರ ಮೇಲೆ ಇಟ್ಟಿದ್ದ ಅಪಾರ ನಿರೀಕ್ಷೆಯೂ ಹುಸಿಯಾಗುತ್ತದೆ. ಹಾಗಾದಿರಲಿ ಎಂಬುದೇ ನಾಡಿನ ಪ್ರಗತಿಪರರ ಆಶಯವಾಗಿದೆ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು, ರಂಗಕರ್ಮಿ