Home ಜನ-ಗಣ-ಮನ ಕಲೆ – ಸಾಹಿತ್ಯ ಕಾವ್ಯವಾಚನದ ಮೇಲೆ ಪೊಲೀಸರ ದಮನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ

ಕಾವ್ಯವಾಚನದ ಮೇಲೆ ಪೊಲೀಸರ ದಮನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ

0

“ಪಕ್ಷ ಯಾವುದಾದರೇನು, ಸರಕಾರ ಯಾರದ್ದಾದರೇನು, ಎಲ್ಲರೂ ಜನವಿರೋಧಿಗಳೇ ಅಧಿಕಾರದ ಪಿತ್ತ ನೆತ್ತಿಗೇರಿದ ಮೇಲೆ” ಎನ್ನುವುದನ್ನು ನಿಜ ಮಾಡಲು ಹೊರಟಿದೆ ಕರ್ನಾಟಕದ ಕಾಂಗ್ರೆಸ್ ಪಕ್ಷಾಡಳಿತದ ಸರಕಾರ. 

ಬಿಜೆಪಿ ಪಕ್ಷದ ಅತಿರೇಕಗಳು ಹಾಗೂ ಜನವಿರೋಧಿತನದಿಂದಾಗಿ ಬೇಸತ್ತು ಹೋದ ಈ ನಾಡಿನ ಬಹುತೇಕ ಪ್ರಜ್ಞಾವಂತರು, ಪ್ರಗತಿಪರರು, ಸಾಂಸ್ಕೃತಿಕ ಲೋಕದ ನಾಯಕರುಗಳು, ಸಾಹಿತಿ ಕಲಾವಿದರುಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದವು. ಅವರೆಲ್ಲರ ಅಪೇಕ್ಷೆಯಂತೆ ಕಾಂಗ್ರೆಸ್ ಪಕ್ಷ  ಬಹುಮತದಿಂದ ಸರಕಾರ ರಚನೆ ಮಾಡಿತು. ಆದರೆ ಆರೇ ತಿಂಗಳಲ್ಲಿ  ಇಟ್ಟ ನಿರೀಕ್ಷೆಗಳೆಲ್ಲಾ ಒಂದೊಂದಾಗಿ ಹುಸಿಯಾಗತೊಡಗಿದವು. ಈ ಸರಕಾರವೂ ಸಹ ಜನತೆಯ ಶತ್ರುವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸತೊಡಗಿದವು. 

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹಕ್ಕು ಎಂಬುದು ಸಂವಿಧಾನವು ಈ ದೇಶವಾಸಿಗಳಿಗೆ ಕೊಟ್ಟ ಅಪೂರ್ವ ಕೊಡುಗೆಯಾಗಿವೆ. ಯಾವುದೇ ಸರಕಾರ ಈ ಹಕ್ಕನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ದಮನ ಮಾಡಲು ಯತ್ನಿಸಿದರೆ ಅದು ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಸರಕಾರ ಎಂಬುದರಲ್ಲಿ ಸಂದೇಹವೇ ಇಲ್ಲ. 

ಇವತ್ತು ನವೆಂಬರ್ 29 ರಂದು ಸಂಜೆ ಬೆಂಗಳೂರಿನ ರಂಗಶಂಕರದಲ್ಲಿ ಪ್ಯಾಲಿಸ್ಟೈನ್ ಯುದ್ದ ಸಂತ್ರಸ್ತರನ್ನು ಬೆಂಬಲಿಸಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದೇನು ದೊಡ್ಡ ಮಟ್ಟದ ಪ್ರತಿಭಟನೆ ಏನಲ್ಲ. ಯುದ್ಧೋನ್ಮಾದದ ವಿರುದ್ದ ಅದೊಂದು ಸಾಂಸ್ಕೃತಿಕ ಪ್ರತಿರೋಧವಾಗಿತ್ತು. ರಂಗ ಶಂಕರದ ಒಳಗೆ ಯುದ್ಧವಿರೋಧಿ ಕವಿತೆಗಳನ್ನು ವಾಚಿಸುವ, ಪ್ಯಾಲಿಸ್ಟೈನ್ ಕುರಿತ ಕಿರುನಾಟಕಗಳು ಹಾಗೂ ಬರಹಗಳನ್ನು ಓದುವ ಕಾರ್ಯಕ್ರಮ ಅಷ್ಟೇ. ಅದನ್ನೂ ಒಳಾಂಗಣದಲ್ಲಿ ಮಾಡಲಾಗುತ್ತಿತ್ತು. ಹೀಗೆ ಮಾಡುವುದರಿಂದ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರಲಿಲ್ಲ. ಆದರೂ ಸರಕಾರಕ್ಕೆ ಇದೂ ಕೂಡಾ ಒಪ್ಪಿತವಾಗಲಿಲ್ಲ. ಪೊಲೀಸರು ಬಂದು ಈ ಕಾರ್ಯಕ್ರಮ ಮಾಡಕೂಡದು ಎಂದು ನಿರ್ಬಂಧಿಸಿದ್ದರಿಂದ ಇಡೀ ಕಾರ್ಯಕ್ರಮ ರದ್ದಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಚುಕಲಾಯ್ತು. 

“ಇಂಟೆಲಿಜೆನ್ಸಿಯಿಂದ ಮಾಹಿತಿ ಬಂದಿದೆ. ಪ್ಯಾಲಿಸ್ಟೈನ್ ಕುರಿತು ಕಾರ್ಯಕ್ರಮವನ್ನು ಎಲ್ಲಿಯೂ ಮಾಡಲು ಬಿಡಬೇಡಿ ಎಂದು ನಮಗೆ ಆದೇಶವಾಗಿದೆ. ನೀವು ಪ್ಯಾಲಿಸ್ಟೈನ್ ಪರವಾಗಿ ಕಾರ್ಯಕ್ರಮ ಮಾಡಿದರೆ ಬೇರೆ ಯಾರಾದರೂ ಬಂದು ಇಸ್ರೇಲ್ ಪರವಾಗಿ ಗಲಾಟೆ ಮಾಡಿದರೆ ಯಾರು ಹೊಣೆ? ಆದ್ದರಿಂದ ಈ ಕಾರ್ಯಕ್ರಮ ಮಾಡಕೂಡದು” ಎಂದು ಖುದ್ದಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ ಅವರೇ ಬಂದು ಕಾರ್ಯಕ್ರಮವನ್ನು ನಿರ್ಬಂಧಿಸಿ ಹೋಗಿದ್ದಾರೆ. ಒಳಾಂಗಣದಲ್ಲಿ ಮಾಡುವ ಕಾರ್ಯಕ್ರಮವನ್ನು ನಿಲ್ಲಿಸಲು ಈ ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಪ್ಯಾಲಿಸ್ಟೈನ್ ಪರ ಪದ್ಯವನ್ನೂ ಓದಬಾರದೆಂದು ಯಾವ ನ್ಯಾಯಾಲಯ ಆದೇಶ ಮಾಡಿದೆ? ಹಿಂಸೆಯ ವಿರುದ್ದ ಅಹಿಂಸಾತ್ಮಕ ಪ್ರತಿರೋಧವನ್ನು ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ? ಎಂದು ಈ ಪೊಲೀಸರನ್ನು ಹಿಡಿದು ಪ್ರಶ್ನಿಸಬೇಕಿದೆ. 

ಕೆಲವು ದಿನಗಳ ಹಿಂದೆ ಪ್ಯಾಲಿಸ್ಟೈನ್ ಜನರ ಪರವಾಗಿ ಹಾಗೂ ಇಸ್ರೇಲ್ ನರಹತ್ಯಾಕಾಂಡದ ವಿರುದ್ಧವಾಗಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಾಗಲೂ ಪೊಲೀಸರು ತಡೆ ಒಡ್ಡಿದ್ದರು. ಸಂಘಟಕರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಯಾಕೆ ಎಂದು ಕೇಳಿದಾಗ “ಸ್ವಾತಂತ್ರ್ಯ ಉದ್ಯಾನವನವನ್ನು ಹೊರತು ಪಡಿಸಿ ಬೇರೆಲ್ಲಿಯೂ ಪ್ರತಿಭಟನೆ ಮಾಡುವಂತಿಲ್ಲ. ಇದಕ್ಕೆ ನ್ಯಾಯಾಲಯದ ಸಮ್ಮತಿ ಇಲ್ಲ” ಎಂದು ಪೊಲೀಸರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. 

ಹೋಗಲಿ. ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಗೆ ನ್ಯಾಯಾಲಯದ ಅನುಮತಿ ಇದೆ ಅಲ್ಲವೆ? ಆದರೆ ಅಲ್ಲಿಯೂ ಸಹ ಪ್ರತಿಭಟನೆ ಮಾಡದಂತೆ ತಡೆದಿದ್ದು ಯಾಕೆ? ಅಂದು ಎಡಪಕ್ಷಗಳು ಪ್ಯಾಲೆಸ್ಟೈನ್ ಕುರಿತು “ಯುದ್ಧ ಬೇಡ ಶಾಂತಿ ಬೇಕು” ಎಂಬ ಘೋಷಣೆಯೊಂದಿಗೆ ಮತಪ್ರದರ್ಶನವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾಡಲು ಅನುಮತಿ ಕೋರಿದಾಗ “ನಿರಾಕರಿಸಲಾಗಿದೆ” ಎಂಬ ಉತ್ತರ ಪೊಲೀಸರಿಂದ ಬಂತು. ಅದನ್ನು ಪ್ರತಿಭಟಿಸಿ ನಿಗದಿತ ದಿನದಂದು ಎಡಪಕ್ಷಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದಾಗ ಎಲ್ಲರನ್ನೂ ಬಂಧಿಸಲಾಯ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಅಂದ್ರೆ ಇದೇನಾ?

ಈಗ ರಂಗಮಂದಿರದ ಆವರಣದಲ್ಲಿ ಪದ್ಯ ಓದಿದರೆ, ನಾಟಕ ವಾಚನ ಮಾಡಿದರೆ ಅದು ಹೇಗೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ?  ಈ ಪೊಲೀಸರಿಗೆ ಏನಾಗಿದೆ? ಸರಕಾರ ಯಾಕೆ ಪ್ರತಿಭಟನಾ ಸ್ವಾತಂತ್ರ್ಯ ವನ್ನು ಪೊಲೀಸರ ಮೂಲಕ ಹತ್ತಿಕ್ಕುತ್ತಿದೆ. ಈ ನಾಡಿನಲ್ಲಿ ಕವಿತೆ ಓದುವುದೂ ಅಪರಾಧವೆ? ಹಾಡುವುದೂ ರಾಜದ್ರೋಹವೇ? ನಾಟಕ ವಾಚನವೂ ವಿದ್ರೋಹವೆ? 

ಬಿಜೆಪಿಯಂತಹ ಸರ್ವಾಧಿಕಾರಿ ಮನೋಭಾವನೆಯ ಸರಕಾರ ಇದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಹಾಗೂ ಪ್ರತಿಭಟನಾ ಹಕ್ಕಿನ ದಮನ ಸರ್ವೇಸಾಮಾನ್ಯವಾಗಿತ್ತು. ಆದರೆ ಕಾಂಗ್ರೆಸ್ ಸರಕಾರವೂ ಈಗ ಅದೇ ಧೋರಣೆಯನ್ನು ಅನುಸರಿಸಿದರೆ ಬಿಜೆಪಿಗೂ ಕಾಂಗ್ರೆಸ್ಸಿಗೂ ಏನಿದೆ ವ್ಯತ್ಯಾಸ? ಅದಕ್ಕೆ ಹೇಳಿದ್ದು ಆಳುವ ಅಧಿಕಾರವೆಂಬುದು ಯಾವಾಗಲೂ ಜನತೆಯ ಶತ್ರುವಿನಂತೆ ವರ್ತಿಸುತ್ತದೆ ಎಂದು. 

ಪ್ಯಾಲಿಸ್ಟೈನ್ ನಲ್ಲಿರುವ ಮುಸ್ಲಿಂ ಜನಾಂಗದ ಮೇಲೆ ಇಸ್ರೇಲಿ ನರಹಂತಕ ಪಡೆಗಳಿಂದ ಹತ್ಯಾಕಾಂಡ ನಡೆಯುತ್ತಿದೆ. ಹದಿನೈದು ಸಾವಿರಕ್ಕೂ ಹೆಚ್ಚು ಅಸಹಾಯಕ ಜನರು ಯುದ್ಧಕ್ಕೆ ಬಲಿಯಾಗಿದ್ದಾರೆ. ಇದರ ಅರ್ಧದಷ್ಟು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೂ ನರಹತ್ಯೆ ಮುಂದುವರೆಯುತ್ತಲೇ ಇದೆ. ಇದನ್ನು ಖಂಡಿಸಲೇ ಬೇಕಾದದ್ದು ಮಾನವೀಯತೆ ಇರುವ ಮನುಷ್ಯರ ಕರ್ತವ್ಯ ಅಲ್ಲವೇ? ಆದರೆ ಅಲ್ಲಿ ಸಾಯುತ್ತಿರುವವರು ಮುಸ್ಲಿಮರು ಎನ್ನುವ ಕಾರಣಕ್ಕೆ ಬಿಜೆಪಿ ಸರಕಾರ ಈಗ ಪ್ಯಾಲಿಸ್ಟೈನ್ ಪರವಾಗಿ ಇಲ್ಲ. ಯಾಕೆಂದರೆ ಸಂಘ ಪರಿವಾರದ ಮುಸ್ಲಿಂ ವಿರೋಧ ಮತ್ತು ಧರ್ಮದ್ವೇಷದ ಹಿಂದುತ್ವದ ಬಗ್ಗೆ ಗೊತ್ತಿರುವ ಸಂಗತಿ. ಆದರೆ ಈ ಕಾಂಗ್ರೆಸ್ ಕೂಡಾ ಸಾಫ್ಟ್‌ ಹಿಂದುತ್ವ ಹೊಂದಿದೆ ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಪ್ಯಾಲೆಸ್ಟ್ಯೆನಿನ ಮುಸ್ಲಿಂ ಜನತೆಯ ಪರವಾಗಿ ನಿಂತರೆ ಎಲ್ಲಿ ಹಿಂದೂ ಮತಗಳನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಳ್ಳುತ್ತೆವೆಯೋ ಎನ್ನುವ ಆತಂಕ ಈ ಕಾಂಗ್ರೆಸ್ ಪಕ್ಷದ್ದು. ಅದಕ್ಕಾಗಿಯೇ ಕರ್ನಾಟಕದಲ್ಲಿ ಎಲ್ಲಿಯೂ ಪ್ಯಾಲಿಸ್ಟೈನ್ ಸಂತ್ರಸ್ತರ ಪರ ಹಾಗೂ ಇಸ್ರೇಲಿ ಯುದ್ಧೋನ್ಮಾದದ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಯನ್ನು ಮಾಡಲೂ ಬಿಡುತ್ತಿಲ್ಲ. ಮಾಡಿದರೆ ಪೊಲೀಸರ ದಮನ ತಪ್ಪುತ್ತಿಲ್ಲ. 

ಸಂವಿಧಾನದ ಬಗ್ಗೆ ಮಾತಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೊಲೀಸರ ದಮನ ಕಾರ್ಯ ಗೊತ್ತಿಲ್ಲವೇ? ಗೊತ್ತಿದ್ದರೂ ಜಾಣಮೌನ ವಹಿಸಿದ್ದಾರಾ?  ಅನ್ಯಾಯದ ವಿರುದ್ಧ ಕವಿತೆ ಓದಲೂ ನಿರ್ಬಂಧವಾ? ಎಲ್ಲ ಗೊತ್ತಿದ್ದೂ ಸುಮ್ಮನಿದ್ದರೆ ಮುಖ್ಯಮಂತ್ರಿಗಳೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಭಾಗವಾ? ಸಂವಿಧಾನವೇ ಕೊಟ್ಟ ಪ್ರತಿಭಟನಾ ಸ್ವಾಂತಂತ್ರ್ಯವನ್ನು ನಿರ್ಬಂಧಿಸುವ ಸರಕಾರ ಸಂವಿಧಾನದ ವಿರೋಧಿಯಾ? ಪ್ರಶ್ನೆಗಳು ಹಲವಾರಿವೆ. ಉತ್ತರಿಸಬೇಕಾದವರು ಮೌನವಾಗಿದ್ದಾರೆ.

ಈ ಕೆಳಗಿನ ವಾಕ್ಯವನ್ನು ಮತ್ತೆ ಮತ್ತೆ ಗಟ್ಟಿಯಾಗಿ ಪಟ್ಟದಲ್ಲಿರುವವರಿಗೆ ಕೇಳಿಸುವಂತೆ ಕೂಗಿ ಹೇಳಬೇಕಿದೆ.

ಪ್ಯಾಲೆಸ್ಟೈನ್ ಪರ ವಹಿಸಲು ನೀನು ಮುಸ್ಲಿಮನಾಗಬೇಕಿಲ್ಲ, ಮನುಷ್ಯನಾಗಿದ್ದರೆ ಸಾಕು”

ಶಶಿಕಾಂತ ಯಡಹಳ್ಳಿ, ಪತ್ರಕರ್ತರು

You cannot copy content of this page

Exit mobile version