ನಾನು ಇತ್ತೀಚಿಗೆ ನೋಡಿದ ಅದ್ಭುತ ನಾಟಕ ‘ನಕ್ಷತ್ರದ ದೂಳು’. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರ್ ನಾಗ್ ನಾಟಕೋತ್ಸವದಲ್ಲಿ ದೂರದ ರಾಯಚೂರಿಂದ ಬಂದು ನಾಟಕವನ್ನು ಪ್ರದರ್ಶನ ಮಾಡಿದರು. ಇದು ಕೇವಲ ನಾಟಕವಲ್ಲ. ದಲಿತ ಬದುಕಿನ ಕಥನ. ಅಮೇರಿಕಾದ ಖಗೋಳ ಶಾಸ್ತ್ರಜ್ಞ ಕಾರ್ಲ್ ಸೆಗನ್ ರೀತಿ ನಾನು ಸಹ ದೊಡ್ಡ ವಿಜ್ಞಾನಿ ಆಗಬೇಕು ಎಂದು ಕನಸು ಕಂಡಿದ್ದ ವೇಮುಲ ರೋಹಿತ್ ಚಕ್ರವರ್ತಿಯ ಬದುಕಿನ ಅನಾವರಣ.
ನಾಟಕ ಎಂದಾಗ ರಂಗದ ಮೇಲೆ ಒಂದಷ್ಟು ಜನರಿರಬೇಕು, ಹಾಡು-ಕುಣಿತಗಳು ಇರಬೇಕು ಎನ್ನುವ ಸಾಕಷ್ಟು ಕಲ್ಪನೆಗಳಿರುತ್ತವೆ. ಈ ಎಲ್ಲ ರೀತಿಯ ಕಲ್ಪನೆಗಳನ್ನು ಮೀರಿ ದೃಶ್ಯಕಾವ್ಯವಾಗಿ ನಮ್ಮ ಮುಂದೆ ಬಂದದ್ದು ʼನಕ್ಷತ್ರದ ದೂಳು’ ಏಕವ್ಯಕ್ತಿ ರಂಗಪ್ರಯೋಗದ ಮೂಲಕ. ಇದೊಂದು ನೈಜ ಘಟನೆ. ಅಂಬೇಡ್ಕರ್ ತತ್ವಗಳನ್ನು ನಂಬಿದ್ದ, ದೊಡ್ಡ ವಿಜ್ಞಾನಿಯಾಗಬೇಕು ಎಂದು ಕನಸು ಕಂಡಿದ್ದ ರೋಹಿತ್ ವೇಮುಲನ ಬದುಕು ಇದು. ಈತನ ಚಿತ್ರಣವನ್ನು ಬರವಣಿಗೆಯಲ್ಲಿ ತಂದದ್ದು ಖ್ಯಾತ ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ. ಈ ರೀತಿಯ ಬರವಣಿಗೆಗೆ ಸೂಕ್ಷ್ಮ ಸಂವೇದನೆಯ ಒಳನೋಟ ಬೇಕಾಗುತ್ತದೆ. ಇವರ ಒಳನೋಟದಲ್ಲಿದ್ದ ವೇಮುಲನನ್ನು ಅಭಿನಯದ ಮೂಲಕ ಚಿತ್ರಿಸಿದ್ದು ಸ್ನೇಹಿತರಾದ ಲಕ್ಷ್ಮಣ್ ಮಂಡಲಗೇರಾ.
ನಾನು ಮೊದಲು ಹೇಳಿದ ಹಾಗೆ ಇದು ದಲಿತ ಬದುಕಿನ ಕಥನ. ಅಂದರೆ ರೋಹಿತ್ ವೇಮುಲ ಪಾತ್ರಧಾರಿಯ ಅಭಿನಯದಲ್ಲಾಗಲೀ ಅಥವಾ ಆತ ಇದ್ದಷ್ಟು ದಿನ ಬದುಕಿನಲ್ಲಾಗಲಿ ಹೇಳಿದ ಮಾತುಗಳನ್ನು ಗಮನವಿಟ್ಟು ಪ್ರತಿಯೊಬ್ಬರು ಕೇಳಲೇಬೇಕು. ‘ನಾವು ದೂರದಲ್ಲಿರುವ ಮಲಾಲಾಳ ಧ್ವನಿ ನಮ್ಮದು ಎಂದು ಹೆಮ್ಮೆಪಡುತ್ತೇವೆ. ಆದರೆ ನಮ್ಮ ಪಕ್ಕದಲ್ಲಿಯೇ ನಡೆದ ಕೈರ್ಲಾಂಜಿಯಲ್ಲಿ ಸುರೇಖಾಳ ಇಡೀ ಕುಟುಂಬವನ್ನು ಅತ್ಯಾಚಾರ ಮಾಡಿದ್ದು ಕಾಣುವುದೇ ಇಲ್ಲ ಅಥವಾ ಕಂಡರೂ ಧ್ವನಿ ಎತ್ತುವುದಿಲ್ಲ’ ಇದು ನಾಟಕದಲ್ಲಿ ಬರುವ ಡೈಲಾಗ್. ಇದು ಕೇವಲ ಒಂದು ಡೈಲಾಗ್ ಎಂದು ಪರಿಗಣಿಸಿದರೆ ನಮ್ಮ ಅಸ್ಮಿತೆಗೆ ನಾವೇ ಧಕ್ಕೆ ತಂದುಕೊಂಡಂತೆ.
ನಾಟಕದ ಪ್ರತಿ ಮಾತು ಕೂಡ ದಲಿತರ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತದೆ. ಹಿಂದೂ ರಾಷ್ಟ್ರ ಮಾಡಬೇಕು ಎಂದು ಪದೇಪದೇ ಕೂಗಾಡುವ ಸಂಘ ಪರಿವಾರದವರಿಗೆ ರೋಹಿತ್ ಕೂಡ ನಮ್ಮವನು ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ ಅನಿಸುತ್ತದೆ. ಕೊನೆಗೂ ರೋಹಿತ್ ಸಂಶೋಧನೆ ಮಾಡುತ್ತಿದ್ದ ಹೈದ್ರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ 17 ಜನವರಿ 2016 ರಂದು ತನ್ನ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ರೋಹಿತ್ ಸಾವನ್ನು ಆತ್ಮಹತ್ಯೆ ಎಂದರೆ ತಪ್ಪಾಗುತ್ತದೆ. ಇದು ಸಾಂಸ್ಥಿಕ ಕೊಲೆ. ಹೈದ್ರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಇದ್ದ ಪ್ರೊಫೆಸರುಗಳು ಮತ್ತು ಸಂಘಪರಿವಾರದ ಗ್ಯಾಂಗ್ ಎಲ್ಲವೂ ಸೇರಿ ಒಬ್ಬ ಅಂಬೇಡ್ಕರ್ ವಾದಿ ಸ್ಕಾಲರ್ ಅನ್ನು ನೇಣಿಗೆ ಶರಣಾಗುವಂತೆ ಮಾಡುತ್ತಾರೆ.
ರಾಯಚೂರಿನ ರಂಗ ಕನಸು(ರಿ) ಮಂಡಲಗೇರಾ ತಂಡ ಪ್ರಸ್ತುತ ಪಡಿಸಿದ ನಕ್ಷತ್ರದ ದೂಳು ನಾಟಕವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ ಇನ್ಸಾಫ್ ಹೊಸಪೇಟೆ ಮತ್ತು ಬೆಳಕು ನಿರ್ವಹಣೆಯಲ್ಲಿ ಭೈರವ ಎಂ ಪೂಜಾರಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ನಾಟಕ ಇನ್ನೂ ಹೆಚ್ಚು ಪ್ರದರ್ಶನವನ್ನು ಕಾಣಬೇಕು. ನಮ್ಮ ನಡುವೆಯೇ ಎಲ್ಲರ ರೀತಿಯಲ್ಲಿ ಘನತೆಯಿಂದ ಬದುಕಬೇಕಾದ ಹುಡುಗ ರೋಹಿತನ ಕಥೆಯನ್ನು ಎಲ್ಲರೂ ಕಿವಿಕೊಟ್ಟು ಶ್ರದ್ಧೆಯಿಂದ ಕೇಳಬೇಕಾದ ಸಂದರ್ಭವಿದು. ನಮ್ಮ ನಾಡಿನಲ್ಲಿನ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರು ನಿಮ್ಮ ನೆಲಕ್ಕೆ ರೋಹಿತನನ್ನು ಕರೆಸಿಕೊಳ್ಳಬೇಕು. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು.
ಮನೋಜ್ ಆರ್ ಕಂಬಳಿ, ಶಿವಮೊಗ್ಗ
ಇದನ್ನೂ ಓದಿ-ಕಾವ್ಯವಾಚನದ ಮೇಲೆ ಪೊಲೀಸರ ದಮನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ