Home ಅಂಕಣ ಅಧಿಕಾರ ಮಾತ್ರ ಹಸ್ತಾಂತರ: ಕನ್ನಡಕ್ಕೆ, ಕನ್ನಡಿಗರಿಗೆ ಅದೇ ಅವಾಂತರ

ಅಧಿಕಾರ ಮಾತ್ರ ಹಸ್ತಾಂತರ: ಕನ್ನಡಕ್ಕೆ, ಕನ್ನಡಿಗರಿಗೆ ಅದೇ ಅವಾಂತರ

0

“..ಕರ್ನಾಟಕ ಮುಂದಿನ ಚುನಾವಣೆಯಲ್ಲಿ ಕೇವಲ ಅಧಿಕಾರ ಹಸ್ತಾಂತರವಾಗಬಹುದು ಆದರೆ ಕನ್ನಡ ನಾಡು ನುಡಿ ಏಳಿಗೆಯಾಗಲು ಸಾಧ್ಯವೇ ? ಈ ಮುಸಂಡಿ ರಾಜಕಾರಣಿಗಳಿಂದ ಸಾಧ್ಯವೇ ಇಲ್ಲ..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಇಂಡಿಯಾ, ಒಕ್ಕೂಟವಾಗಿ, ಸಂವಿಧಾನವನ್ನು ಅಳವಡಿಸಿಕೊಂಡ ನಂತರ, ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಅಧಿಕಾರ ಹಸ್ತಾಂತರ ಆಗಲೇಬೇಕು. ಹಾಗೆ ಆಗುತ್ತಲೆ ಬಂದಿದೆ, ಅದಕ್ಕೆ ಇಂಡಿಯಾ ಒಕ್ಕೂಟಕ್ಕೆ ಒಳಪಟ್ಟ ಕರ್ನಾಟಕವೇನು ಹೊರತಾಗಿಲ್ಲ. ಅಧಿಕಾರ ಮತ್ತು ಸಂಪತ್ತು ಹಂಚಿಕೆಯಾಗದೆ ಒಂದೇ ಕಡೆ, ಒಬ್ಬರ ಹತ್ತಿರ ಇದ್ದರೆ ಅದು ನಾಡಿಗೆ ವಿಪತ್ತಾಗಿ ಪರಿಣಮಿಸುತ್ತದೆ.

ಕರ್ನಾಟಕ, ರಾಜಕೀಯವಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. ಕಾರಣ ಬಿಜೆಪಿ ಆಗತಾನೆ ಅಧಿಕಾರದಿಂದ ಕೆಳಗಿಳಿದು ಕಾಂಗ್ರೆಸ್ ಅಧಿಕಾರವೇರುವ ತವಕದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಐದು ಗ್ಯಾರಂಟಿ ಯೋಜನೆಗಳು, ಇವುಗಳು ಭಾರಿ ಚರ್ಚೆಗೆ -ವಿವಾದಕ್ಕೆ ಗುರಿಯಾಗಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯಿಸಿದ್ದರು.

ಅನಂತರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆ ಆಶ್ಚರ್ಯವಾಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟಾರೆ 136 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಸಾಧಿಸಿತ್ತು. ಆನಂತರ ಗ್ಯಾರಂಟಿ ಯೋಜನೆಗಳು ಎಲ್ಲೆಡೆ ಪ್ರಚಾರ ಪಡೆದು ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ವಿಧಾನಸಭಾ ಚುನಾವಣೆಗಳಲ್ಲೂ ಅಸ್ತ್ರಗಳಾಗಿ ಬಳಕೆಯಾದವು.

ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ನಂತರ ಯಾರು ಸಿಎಂ ಆಗಬೇಕು ಎನ್ನುವ ಪ್ರಶ್ನೆ ಎದ್ದಿತು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಹಳ ಪೈಪೋಟಿ ಏರ್ಪಟ್ಟು, ಇಬ್ಬರು ದಿಲ್ಲಿಯ ದೊಣ್ಣೆ ನಾಯಕರ ತನಕ ಹೋಗಿ ಅಲ್ಲಿನ ಹೈಕಾಮಂಡ್ ಮುಂದೆ ವಿಧೇಯರಾಗಿ ನಿಂತು, ಸಿದ್ದರಾಮಯ್ಯ ಹೈಕಮಾಂಡ್ ನ ದೊರೆಗಳ ಮುಂದೆ ನೆಲದ ತನಕ ಬಗ್ಗಿ, ಅವರ ಪಾದ ಚರಣಗಳಿಗೆ ನಮಿಸಿದ ಪರಿಣಾಮ ಕರ್ನಾಟಕದಲ್ಲಿ ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದು ಕನ್ನಡಕ್ಕೆ ಸೇವೆ ಮಾಡಲಿಕ್ಕಲ್ಲ ಬದಲಾಗಿ ದಾಖಲೆ ಮಾಡಲಿಕ್ಕೆ, ೧) ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಶಯ್ಯ ಅವರು 16 ಬಾರಿ ರಾಜ್ಯದ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದರು, ಸಿದ್ದರಾಮಯ್ಯ 17ನೇ ಬಾರಿ ರಾಜ್ಯದ ಬಜೆಟ್ ಮಂಡಿಸಿ ಆ ದಾಖಲೆಯನ್ನು ಮುರಿದರು. ೨) ಕರ್ನಾಟಕದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು ದೇವರಾಜು ಅರಸು, ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ನಂತರ ಈ ದಾಖಲೆಯನ್ನು ಸಹ ಮುರಿದರು.

ಈ ದಾಖಲೆ ಮಾಡಲಿಕ್ಕೋಸ್ಕರವೇ ಸಿದ್ದರಾಮಯ್ಯ 2೦23ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು, ಅವರು ಅಂದುಕೊಂಡ ಹಾಗೆ ದಾಖಲೆಯನ್ನೇನೊ ಮಾಡಿದರು. ಕನ್ನಡಕ್ಕೆ ದುಡಿದರೆ?

ಮುಖ್ಯಮಂತ್ರಿಯಾದ ಮೇಲೆ ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನೇನೋ ಜಾರಿ ಮಾಡಿದರು ಸಹ, ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲಾ. ಸ್ತ್ರೀ ಶಕ್ತಿ ಯೋಜನೆ ಜಾರಿ ಮಾಡಿದರು, ಜನಗಳಿಗೆ ಸಾಕಾಗುವಷ್ಟು ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸುವ ವ್ಯವಸ್ಥೆ ಮಾಡಲಿಲ್ಲ. ಗೃಹಲಕ್ಷ್ಮಿ ಯೋಜನೆ ಕೆಲವರಿಗೆ ಎರಡು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಬರುತ್ತದೆ, ಕೆಲವರಿಗೆ-ಹಲವರಿಗೆ ತಿಂಗಳುಗಳ ಕಾಲ ಬರುವುದೇ ಇಲ್ಲ, ಚನ್ನಪಟ್ಟಣದಲ್ಲಿ ಮರು ಚುನಾವಣೆ ನಡೆಯುವ ಸಂದರ್ಭದಲ್ಲಿ ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಒಮ್ಮೆಗೆ ಜನಗಳ ಖಾತೆಗೆ ಹಾಕಿಲಾಗಿತ್ತು. ಯುವನಿಧಿ ಬರಲೇ ಇಲ್ಲ. ಗೃಹಜೋತಿ ಮತ್ತು ಅನ್ನ ಭಾಗ್ಯ ಒಂದು ಮಟ್ಟಿಗೆ ತಲುಪಿದವು. 2024 ಜೂನ್ ರಲ್ಲಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಂದುಕೊಂಡಷ್ಟು ಸಂಸದರು ಆಯ್ಕೆ ಆಗಲಿಲ್ಲದ ಕಾರಣ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕೆಲಸಕ್ಕೆ ಮುಂದಾದರು, ಜನರು ವಿಪರೀತ ಆಕ್ರೋಶದಿಂದ ಉಗಿದ ಮೇಲೆ, ನಾಮಕವಾಸ್ತೆಗೆ ಅಷ್ಟೊ ಇಷ್ಟೊ ಎನ್ನುವ ಹಾಗೆ ಗ್ಯಾರೆಂಟಿ ಯೋಜನೆಗಳು ಮುನ್ನಡೆಯುತ್ತಿವೆ.

ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ಸ್ / ಕರ್ನಾಟಕ ಆಡಳಿತ ಸೇವೆ (KAS) 2023-24 ಪ್ರಾಥಮಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ, ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡಲಾದ ಪ್ರಶ್ನೆಗಳಲ್ಲಿ ದೋಷ ಕಂಡು ಬಂದಿತ್ತು, ನಂತರ ಮರು ಪರೀಕ್ಷೆ ಮಾಡಿದರು ಸಹ ಅಲ್ಲಿಯೂ ದೋಷಗಳು ಕಂಡು ಬಂದವು. ಹೀಗೆ ಸರ್ಕಾರದ ಕೈಯಲ್ಲಿ ಒಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಆಗಲಿಲ್ಲ. ಕನ್ನಡ ರಾಮಯ್ಯ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಪ್ಷನಲ್ ಕನ್ನಡಕ್ಕೆ ಅವಕಾಶ ಇಲ್ಲದಿರುವುದು ತಿಳಿದಿರಲಿಲ್ಲವೇ ? ಅವಕಾಶ ಇದ್ದಿದ್ದರೆ ಕನ್ನಡನಾಡಿಗೆ ಪೂರಕವಾಗಿ ದುಡಿಯುವ ಹೆಚ್ಚಿನ ಪ್ರಮಾಣದ ಅಧಿಕಾರಿಗಳು ನೇಮಕಗೊಳ್ಳುತ್ತಿದ್ದರು.

ನಂತರ, ಡಿಸೆಂಬರ್ 2024 ರಲ್ಲಿ, 87ನೇ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ನಡೆಯಿತು. ಆಗ ಆ ಸಮ್ಮೇಳನ ಅಧ್ಯಕ್ಷತೆ ವಹಿಸಿದ ಗೊ.ರು ಚೆನ್ನಬಸಪ್ಪ ರವರ ಹಾದಿಯಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಸೇರಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ, ಹಿಂದಿ ಹೇರಿಕೆಯನ್ನು ವಿರೋಧಿಸಬೇಕೆಂದು ಭಾಷಣದಲ್ಲಿ ಹೇಳಿದ್ದರು. ನಂತರ ಆ ವಿಷಯವನ್ನು ಅಲ್ಲಿಗೆ ಕೈಬಿಟ್ಟು ತಮ್ಮ ಮೂರು ವರ್ಷದ ಆಡಳಿತ ಅವಧಿಯಲ್ಲಿ ಎರಡು ನುಡಿ ಪದ್ಧತಿ (ಶಾಲಾ ಪಠ್ಯಕ್ರಮದಲ್ಲಿ, ಮೊದಲನುಡಿಯಾಗಿ ಕನ್ನಡ, ಎರಡನೆ ನುಡಿಯಾಗಿ ಇಂಗ್ಲಿಷ್ ಅಷ್ಟೇ, ಮೂರನೇ ನುಡಿಯಾದ ಹಿಂದಿಯನ್ನು ತೆಗೆದುಹಾಕುವುದು) ಯನ್ನು ಜಾರಿಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲ.

ನಂತರ ಅನುಸೂಚಿತ ಜಾತಿಗಳ (ಎಸ್ ಸಿ) ವರ್ಗಕ್ಕೆ ಒಳಮಿಸಲಾತಿ ಜಾರಿ ಮಾಡುತ್ತೇವೆ ಎಂದು, ಅದಕ್ಕೆ ಒಂದು ಆಯೋಗವನ್ನು ನೇಮಿಸಿ, ಮೂರು ವರ್ಷ ತಮ್ಮ ಅಧಿಕಾರ ಅವಧಿಯಲ್ಲಿ ಕಾಲಹರಣ ಮಾಡಿದರು. ಇವರ ಈ ನಡತೆಯನ್ನು ವಿರೋಧಿಸಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳಾದ ವಿದ್ಯಾರ್ಥಿಗಳು ಒಗ್ಗೂಡಿ, ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸೆಪ್ಟೆಂಬರ್ 2025 ರಲ್ಲಿ ಧಾರವಾಡದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದರು. ಅದಕ್ಕೆ ಪ್ರತಿಕ್ರಿಸಿದ ಸಿದ್ದರಾಮಯ್ಯನವರು ಬಿಜೆಪಿಯೇ ಇದಕ್ಕೆ ಕಾರಣ ಅಂತೇಳಿ ಸುಮ್ಮನಾದರೆ ಹೊರ್ತು ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ದುಡಿದು ಸೇವೆ ಸಲ್ಲಿಸಲಿಲ್ಲ.

ಸತತವಾಗಿ ಒಂದು ವರ್ಷಗಳ ಕಾಲ ಪ್ರೊಹಿಬಿಷನ್ ಟ್ರಾನ್ಸ್ಫರ್ ಸರ್ ಟೈನ್ ಲ್ಯಾಂಡ್(ಪಿಟಿಸಿಎಲ್) ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕೆಂದು ದಲಿತ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದರು ಸಿದ್ದರಾಮಯ್ಯ ಸರ್ಕಾರ ಆ ಕಾಯ್ದೆಯನ್ನು ‌ಅನುಷ್ಠಾನಗೊಳಿಸಲಿಲ್ಲ.

2025ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ, ಬೆಂಗಳೂರಿನ ಆರ್ಸಿಬಿ ತಂಡವು ಮೊದಲ ಬಾರಿಗೆ ಜಯಗಳಿಸಿತು, ಆಗ ತಂಡದ ಗೆಲುವಿಗೆ ಸರಕಾರವೇ ಕಾರಣ ಎಂದು ತೋರಿಸಿಕೊಳ್ಳಲು, ಅದಕ್ಕೆ ತಕ್ಕಂತೆ ಸಂಭ್ರಮಚರಣೆ ಮಾಡಲು ಹೋಗಿ, ಸಂಭ್ರಮಾಚರಣೆಯಲ್ಲಿ 11 ಜನರು ಕಾಲ್ತುಳಿತಕ್ಕೆ ಒಳಪಟ್ಟು ಸತ್ತು ಶೋಕಾಚರಣೆಯಾಯಿತು. ಆದರೆ ಗೆಲುವನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದ ಸರ್ಕಾರ, ಸಾವುಗಳಿಗೆ ತಾವು ಜವಾಬ್ದಾರರಲ್ಲ ಎಂಬುದಾಗಿ ವರ್ತಿಸಿ ಮೂರು ಜನ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಕೈ ತೊಳೆದುಕೊಂಡಿತು.

ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎನ್ನುವ ಲೋಕ ರೂಡಿ ಮಾತಿನಂತೆ ಕರ್ನಾಟಕ ಸರ್ಕಾರ ಇದೆ, ಇದಕ್ಕೆ ಉದಾಹರಣೆಯಾಗಿ ನೋಡುವುದಾದರೆ: ಉದ್ಯಮ ಆರಂಭಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (KIADB) ರಿಯಾಯಿತಿ ದರದಲ್ಲಿ ಜಾಗ ಪಡೆದು, ಬಳಿಕ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗೆ ₹250 ಕೋಟಿಗೆ ಮಾರಾಟ ಮಾಡಿದೆ ಎಂದು ಇನ್ಫೋಸಿಸ್ (Infosys) ಸಂಸ್ಥೆಯ ಮೇಲೆ ಆರೋಪ ಕೇಳಿ ಬಂದಿತ್ತು. ಇದಿಷ್ಟೇ ಅಲ್ಲದೆ ಐಟಿ ಇಲಾಖೆಯು 32 ಸಾವಿರ ಕೋಟಿ ತೆರಿಗೆ ವಂಚನೆ ಆರೋಪದ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆಗೆ ನೋಟಿಸ್ ನೀಡಿತ್ತು. ಈ ವಿಷಯ ಕುರಿತು ಇನ್ಫೋಸಿಸ್ ಸಂಸ್ಥೆಯನ್ನು ಕರ್ನಾಟಕ ಸರ್ಕಾರ ಇಲ್ಲಿಯವರೆಗೂ ಕೂದಲೆಳೆಯಷ್ಟು ವಿಚಾರಣೆಗೆ ಒಳಪಡಿಸಲಿಲ್ಲ ಎಂಬುದು ದುರ್ದೈವ.

ಕರ್ನಾಟಕ ಸರ್ಕಾರವು ಹಣ ಉಳ್ಳವರ ಬಗ್ಗೆ ತೋರುವ ಧೋರಣೆ ಇದಾದರೆ, ಇದಕ್ಕೆ ವಿರುದ್ಧವಾಗಿ ತನ್ನ ಪೌರುಷವನ್ನು ಬಡವರ ಮೇಲೆ ಹೇಗೆ ತೋರಿಸುತ್ತದೆ ಎಂಬುದಕ್ಕೆ ಉದಾಹರಣೆ: 2025ರ ಡಿಸೆಂಬರ್ ನಲ್ಲಿ ಬೆಂಗಳೂರು ಉತ್ತರದ ಯಲಹಂಕ ಸಮೀಪದ ಕೋಗಿಲು ಲೇಔಟ್ (ವಸೀಮ್ ಕಾಲೋನಿ ಮತ್ತು ಫಕೀರ್ ಕಾಲೋನಿ) ಪ್ರದೇಶದಲ್ಲಿ ವಾಸಿಸುತ್ತಿದ್ದ ಜನಗಳಿಗೆ ಯಾವುದೇ ಮಾಹಿತಿಯನ್ನು ನೀಡದೆ ಅವರ ಮನೆಗಳನ್ನು ಬುಲ್ಡೋಜರ್ ಹತ್ತಿಸಿ ಹೊಡೆದು ಹಾಕಿತು, ಬಡತನದಿಂದ ಕಷ್ಟದಲ್ಲಿದ್ದ ಆ ಜನರು ಅಷ್ಟೊ ಇಷ್ಟೊ ಜಾಗದಲ್ಲಿ ಒಂದು ಸೂರು ಕಟ್ಟಿಕೊಂಡಿದ್ದರು. ಈ ಪಾಪಿ ಸರ್ಕಾರ ಆ ಬಡವರ ಮನೆಗಳನ್ನು ದ್ವಂಸ ಮಾಡಿ ಅವರನ್ನು ಬೀದಿ ಪಾಲು ಮಾಡಿತು, ಕೋಗಿಲು ಬಡಾವಣೆ ಜನರು ಈ ಅಕ್ರಮದ ವಿರುದ್ಧ ಹೋರಾಡಿದರೂ ಸಹ ಕರ್ನಾಟಕ ಸರ್ಕಾರದಿಂದ ಯಾವುದೇ ಅನುದಾನವನ್ನು, ಸಹಾಯವನ್ನು ಇಲ್ಲಿಯವರೆಗೂ ಪಡೆದಿಲ್ಲ. ಈ ಘಟನೆಗಳು ನಡೆದಿದ್ದು ಸಮಾಜವಾದಿ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ.

ಈ ವರ್ಷದಲ್ಲಿ ನಡೆದ 10ನೇ ತರಗತಿಯ ಶೈಕ್ಷಣಿಕ ಪರೀಕ್ಷೆಯಲ್ಲಿ ಕಡ್ಡಾಯವಾಗಿರುವ ಹಿಂದಿಯನ್ನು ತೆಗೆಯಲೇಬೇಕೆಂದು ಕನ್ನಡಪರ ಸಂಘಟನೆಗಳು ಹೋರಾಡಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯನ್ನು ಭೇಟಿ ಮಾಡಲು ನೋಡಿದಾಗ ಹೋರಾಟಗಾರರ ಕೈಗೆ ಸಿಗದೆ ಕದ್ದು ತಿರುಗಾಡುತ್ತಿದ್ದರು. ಕೊನೆಗೆ ಶಿಕ್ಷಣ ಮಂತ್ರಿಯಾದ ಮಧು ಬಂಗಾರಪ್ಪನವರ ಮನೆಗೆ ಹೋರಾಟಗಾರರು ಮುತ್ತಿಗೆ ಹಾಕಿ ಒತ್ತಾಯಿಸಿದಾಗ, ಹೋರಾಟಗಾರರ ಬೇಡಿಕೆಗೆ ಸ್ಪಂದಿಸಿ ಪಾಸ್ ವಿಥೌಟ್ ಹಿಂದಿ ಕಾನೂನನ್ನು ಜಾರಿಗೆ ಮಾಡುತ್ತೇವೆ ಎಂದು ಆದೇಶ ಮಾಡಿದರು, ಕೊಟ್ಟ ಮಾತಿಗೆ ನಡೆದುಕೊಳ್ಳಲು ಯೋಗ್ಯತೆ ಇಲ್ಲದಿರುವ ಸರ್ಕಾರ ಇದಾದುದರಿಂದ ಕನ್ನಡನಾಡಿಗೆ ದ್ರೋಹ ಮಾಡಲೆಂದು ಕೊನೆಗೂ ಹಿಂದಿ ಪರೀಕ್ಷೆಗೆ ಅಂಕಗಳನ್ನು ನೀಡಿತು.

ಇದು ಸಾಲದೆ, ಈ ವರ್ಷದ ಮೇ ತಿಂಗಳಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಲ್ಲಿಯೂ ಕುಟುಂಬ ರಾಜಕೀಯಕ್ಕೆ ಮಣೆ ಹಾಕಲಾಗಿತ್ತು. ಅಧಿಕಾರ ಮತ್ತು ಸಂಪತ್ತನ್ನು ಒಂದೇ ಕಡೆ ನೆಲೆಸುವ ಹಾಗೆ ಮಾಡಿ ನಾಡಿನ ಭವಿಷ್ಯಕ್ಕೆ ಮಣ್ಣಾಕುವ ಕೆಲಸವನ್ನು ಈ ಸರ್ಕಾರ ಮತ್ತು ಸರ್ಕಾರದ ಮಾಜಿ ಮುಖ್ಯಮಂತ್ರಿ ತಮ್ಮ ನಡತೆಯಲ್ಲಿ ತೋರಿಸಿದ್ದರು.

ಸಿದ್ದರಾಮಯ್ಯ ದೆಹಲಿಯ ದೊಣ್ಣೆ ನಾಯಕರಿಗೆ ಕೊಟ್ಟ ಮಾತಿನಂತೆ ಮೇ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಗೆ ಹಸ್ತಾಂತರ ಮಾಡಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ, ಪ್ರೆಸ್ ಮೀಟ್ ಮಾಡಿ ಕೆಲವು ಯೋಜನೆಗಳನ್ನು ಘೋಷಿಸಿದರು, ಇವುಗಳಲ್ಲಿ ಕೆಲವು ನಾಡು ನುಡಿಗೋಸ್ಕರ ಇವೆ ಎಂದುಕೊಂಡರು, ಎಷ್ಟರಮಟ್ಟಿಗೆ ಅನುಷ್ಠಾನವಾಗಿ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ತಿಳಿಯದ ಉತ್ತರ. ಮಾಜಿ ಉಪ ಮುಖ್ಯಮಂತ್ರಿಯಾಗಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಲೂಟಿ ಮಾಡಿದ್ದು ಸಾಲದೆಂದು ಈಗ ಮುಖ್ಯಮಂತ್ರಿಯಾಗಿ ಇನ್ನಷ್ಟು ದೋಚಲು ಮುಂದಾಗಿದ್ದಾರೆ.

ಡಿಕೆಶಿ ಅವರು, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಹೋಬಳಿಯ ರೈತರ ಭೂಮಿಯನ್ನು ಕಬಳಿಸಲು ಆಗದ ಕಾರಣ ಈಗ ಬಿಡದಿ ಜನರನ್ನು ಪೀಡಿಸುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಮಾಡುವ ನೆಪದಲ್ಲಿ ಒಂಬತ್ತು ಊರುಗಳ 9600 ಎಕರೆ ಭೂಮಿಯನ್ನು ಕಬಳಿಸಲು ಸಂಚು ಹೂಡಿದ್ದಾರೆ, ಇದಕ್ಕೆ ಸ್ಥಳೀಯರ, ಹೋರಾಟಗಾರರ ಮತ್ತು ನಾಡಿನಾದ್ಯಂತ ವ್ಯಾಪಕ ವಿರೋಧವಿದ್ದರು ಇವರು ಈ ಯೋಜನೆಯನ್ನು ಕೈ ಬಿಡಲು ಮುಂದಾಗಿಲ್ಲ, ಇದಕ್ಕೆ ಪಕ್ಷದವರ ಒಮ್ಮತವು ಇದೆ.

ಈ ತಿಂಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಡಿಕೆಶಿ ತನ್ನ ತಂತ್ರಗಾರಿಕೆಯನ್ನೆಲ್ಲ ಬಳೆಸಿ, ಅಪರೇಷನ್ ಕಮಲ ಆಗದಂತೆ ಕಾಂಗ್ರೆಸಿನ ಎಲ್ಲಾ ಎಂಎಲ್ಎಗಳನ್ನು ಬಿಡದಿಯ ರೆಸಾರ್ಟ್ ನಲ್ಲಿ ಕೂಡಿಟ್ಟು, ಪಕ್ಷದಿಂದ ಸ್ಪರ್ಧಿಸಿದ್ದ ಐದು ಜನ ಎಂಎಲ್ಸಿ ಗಳ ಗೆಲುವಿಗೆ ಪ್ರಮುಖ ಕಾರಣರಾದರು.

ಕೇಂದ್ರ ಸರ್ಕಾರದ ವತಿಯಿಂದ ಕರ್ನಾಟಕದಲ್ಲಿ ನಡೆಯುವ ವಿಶೇಷ ತೀವ್ರ ಪರಿಷ್ಕರಣೆ(ಎಸ್ ಐ ಆರ್) ಗೆ ಕರ್ನಾಟಕದಲ್ಲಿನ ಕಾಂಗ್ರೆಸ್ ಪಕ್ಷ ಮತ್ತು ಡಿಕೆಶಿ ಯಾವುದೇ ವಿರೋಧವನ್ನು ವ್ಯಕ್ತಪಡಿಸದೆ, ಎಸ್ಐಆರ್ ನ ಮುಂದೆ ಬಾಲ ಅಲ್ಲಾಡಿಸುತ್ತಾ ವಿಧೇಯದರಾಗಿ ನಡೆದುಕೊಳ್ಳುತ್ತಿದ್ದಾರೆ. ಎಸ್ಐಆರ್ ನಡೆದರೆ ಕರ್ನಾಟಕದಲ್ಲಿ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಅದರ ಬಗ್ಗೆ ಯೋಚಿಸದೆ ಸರ್ಕಾರ ಎಲ್ಲರಿಗೂ ವಾಸ ಸ್ಥಳ ಪತ್ರ ನೀಡುತ್ತದೆ ಎಂದು ಡಿಕೆಶಿ ಅವರು ಭರವಸೆ ನೀಡಿದ್ದಾರೆ. ಕೇವಲ ವಾಸ ಸ್ಥಳ ಪತ್ರ ಎಸ್ಐಆರ್‌ನಲ್ಲಿ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಇದು ಬಹಳಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲವೋ ಆದರೆ ಡಿಕೆಶಿ, ತಮ್ಮ ರಾಜಕೀಯ ನಾಟಕ ಮುಂದುವರೆಸುತ್ತಿದ್ದಾರೆ.

ಕೊಪ್ಪಳದಲ್ಲಿ ಕಾರ್ಖಾನೆಗಳ ಮಾಲಿನ್ಯದಿಂದ ಜನ ಸಾಯುತ್ತಿದ್ದಾರೆ, ಸತ್ತು ಬದುಕುತ್ತಿದ್ದಾರೆ. 2026-27 ರ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಕನ್ನಡ ನಾಡಿಗೆ ಪೂರಕವಾದ ಎರಡು ನುಡಿ ಪದ್ಧತಿಯನ್ನು ಜಾರಿಗೊಳಿಸುವ ಬಗ್ಗೆ ಮಾನ್ಯರು ಚಕಾರವನ್ನೆ ಎತ್ತಿಲ್ಲ.

ಮಾಜಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಅವರಿಂದ ಸಲಹೆಗಳನ್ನು ಪಡೆಯುತ್ತೇನೆ ಎಂಬ ನಾಟಕವಾಡಿ ಕುಮಾರಸ್ವಾಮಿ ರವರಿಂದ ‘ಅತೀ ವಿನಯಂ ದೂರ್ತ ಲಕ್ಷಣಂ’ ಎಂದು ಮುಖಭಂಗ ಮಾಡಿಸಿಕೊಂಡರು ಡಿಕೆಶಿ. ಇನ್ನುಳಿದ ಎರಡು ವರ್ಷಗಳಲ್ಲಿ ಅಭಿವೃದ್ಧಿ ಮಾಡುತ್ತಾರೆ ಎಂಬುದು ಮರೀಚಿಕೆಯ ಮಾತು, ಎಷ್ಟು ದೋಚಿ ಗುಡ್ಡೆ ಹಾಕುತ್ತಾರೆ ಎಂಬುದನ್ನು ಲೆಕ್ಕ ಹಾಕಬೇಕಾಷ್ಟೇ. ಕರ್ನಾಟಕ ಇನ್ನೂ ಯಾವ ಮಟ್ಟದ ದುರ್ಗತಿಗೆ ತಲುಪುತ್ತದೆ ಎಂಬುದು ಹೇಳಲು ಅಸಾಧ್ಯ!!

ಕರ್ನಾಟಕ ಮುಂದಿನ ಚುನಾವಣೆಯಲ್ಲಿ ಕೇವಲ ಅಧಿಕಾರ ಹಸ್ತಾಂತರವಾಗಬಹುದು ಆದರೆ ಕನ್ನಡ ನಾಡು ನುಡಿ ಏಳಿಗೆಯಾಗಲು ಸಾಧ್ಯವೇ ? ಈ ಮುಸಂಡಿ ರಾಜಕಾರಣಿಗಳಿಂದ ಸಾಧ್ಯವೇ ಇಲ್ಲ.

ಅಧಿಕಾರ ಬೇಕು ಹಾಗಾಗಿ ಚುನಾವಣೆಯಲ್ಲಿ ಗೆಲ್ಲಬೇಕು ಅದಕ್ಕೆ ಏನುಬೇಕೊ ಎಲ್ಲವನ್ನು ಮಾಡಲು ಸಿದ್ಧ. ಇವರ ಭರವಸೆಗಳು ಇವರ ಕೆಲಸಗಳು ಅಧಿಕಾರಕ್ಕಾಗಿ, ಅಧಿಕಾರದಿಂದ ಲೂಟಿ ಮಾಡಲು ಸಲುವಾಗಿಯೇ ಹೊರತು ನಾಡು-ನುಡಿಗೆ ಸೇವೆ ಮಾಡಲು ಅಲ್ಲವೇ ಅಲ್ಲ.

ಆದ್ದರಿಂದ ಜನ ಸಾಮಾನ್ಯರಾದ ನಾವು ನೀವುಗಳು ಸಂಘಟಿತರಾಗಿ ‘ಕನ್ನಡನಾಡು ನುಡಿ ಮತ್ತು ಎಲ್ಲಾ ರೀತಿಯ ಸಮಾನತೆ’ಗೆ ದುಡಿಯೋಣ. ಹೇಗೆ ಯಾವ ಧರ್ಮವಾಗಲಿ ದೇವರಾಗಲಿ ಬಂದು ಕನ್ನಡವನ್ನು ಬೆಳೆಸುವುದಿಲ್ಲವೋ ಅದೇ ರೀತಿ ಯಾವುದೇ ಪಕ್ಷದ ರಾಜಕಾರಣಿ ಕೂಡ ಕನ್ನಡ ಬೆಳೆಸಲಾರ ಬದಲಿಗೆ ತನ್ನ ಓಟಿಗೆ ಸೀಟಿಗೆ ಬಳಸಿಕೊಳ್ಳದೆ ಬಿಡಲಾರ.

You cannot copy content of this page

Exit mobile version