“..ಬಹುಶಃ ಈ ಹಿಂದಿಮೋಹಿಗಳು ಕನ್ನಡಿಗರನ್ನು ದಡ್ಡರು ಎಂದುಕೊಂಡಿರಬಹುದು. ಆದರೆ ಕನ್ನಡಿಗರು ದಡ್ಡರಲ್ಲ. ಇವರ ಸುಳ್ಳಿನ ಹೂರಣವನ್ನು ಬಯಲು ಮಾಡಿ, ತಕ್ಕ ಶಾಸ್ತಿ ಮಾಡಿದ್ದಾರೆ…” ಚಿಂತಕರಾದ ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ
ಸುಳ್ಳೇ ಬಿಜೆಪಿಯ ಮನೆದೇವ್ರು. ಇದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಸರ್ಕಾರ ಕನ್ನಡಕ್ಕೆ ಕೇವಲ 32 ಕೋಟಿ ಕೊಟ್ಟು, ಉರ್ದು ಭಾಷೆಗೆ 100 ಕೋಟಿ ಕೊಟ್ಟಿದೆ ಎಂಬ ಸುಳ್ಳನ್ನು ಪ್ರಚಾರ ಮಾಡಲು ಹೋಗಿ ಮತ್ತೆ ಬೆತ್ತಲಾಗಿದೆ. ವಾಸ್ತವದಲ್ಲಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ನಯಾಪೈಸೆ ಕೊಡದೆ ವಂಚಿಸಿದೆ. 100 ಕೋಟಿ ಕೊಟ್ಟಿರೋದು ಉರ್ದು ಭಾಷೆಗಲ್ಲ, ಉರ್ದು ಮಾಧ್ಯಮ ಸರ್ಕಾರಿ ಶಾಲೆಗಳಿಗೆ. ಹಾಗೆ ನೋಡಿದರೆ, *ಕನ್ನಡ ಮಾಧ್ಯಮ ಶಾಲೆಗಳಿಗೆ ಈ ವರ್ಷ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 36,000 ಕೋಟಿ ರೂ ನೀಡಿದೆ.* ಅದರ ಮುಂದೆ 100 ಕೋಟಿ ಏನೇನೂ ಅಲ್ಲ. ಅಷ್ಟಕ್ಕೂ ಈ *ಉರ್ದು ಮಾಧ್ಯಮ ಶಾಲೆಗಳಲ್ಲಿ ಉರ್ದು ಮಾತ್ರವಲ್ಲದೆ ದ್ವಿತೀಯ ಮತ್ತು ತೃತೀಯ ಭಾಷೆಯಾಗಿ ಕನ್ನಡ, ಇಂಗ್ಲಿಷ್ ಅನ್ನೂ ಕಲಿಸಲಾಗುತ್ತಿದೆ.* ಹಾಗಾಗಿ ಆ ಶಾಲೆಗಳಿಗೆ ಕೊಟ್ಟ ಅನುದಾನವನ್ನು ಉರ್ದು ಭಾಷೆಗೆ ಕೊಟ್ಟ ಅನುದಾನ ಎನ್ನಲಾಗುವುದಿಲ್ಲ.
ನಿಜ ಹೇಳಬೇಕೆಂದರೆ, ಕನ್ನಡ ಶಾಲೆಗಳಿಗಲ್ಲದೆ, ಕನ್ನಡ ಭಾಷಾ ಸಂಸ್ಕೃತಿಯ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆಗೆ 468.5 ಕೋಟಿ ರೂ ನೀಡಿದೆ. ತುಳು, ಬ್ಯಾರಿ, ಕೊಂಕಣಿ, ಕೊಡವ ಭಾಷಾ ಅಕಾಡೆಮಿಗಳಿಗೆ ತಲಾ 58 ಲಕ್ಷ ನೀಡಿದೆ. *ಕರ್ನಾಟಕದಲ್ಲಿ ಉರ್ದು ಅಕಾಡೆಮಿಯೂ ಇದ್ದು, ಈ ವರ್ಷ ಆ ಅಕಾಡೆಮಿಗೆ ಒಂದೇಒಂದು ನಯಾಪೈಸೆ ನೀಡಲಾಗಿಲ್ಲ.* ಇದು ವಾಸ್ತವ. ಇದನ್ನು ಮರೆಮಾಚಿ, *ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಲಾಗಿರುವ ಒಟ್ಟು 468.5 ಕೋಟಿಯಲ್ಲಿ ಕನ್ನಡ ಒಟಿಟಿ ಫ್ಲ್ಯಾಟ್‌ಫಾರಂಗಳ ಅಭಿವೃದ್ಧಿ, ಕನ್ನಡ ಹಳೆಯ ಹಸ್ತಪ್ರತಿಗಳ ಡಿಜಿಟಲೀಕರಣ, ಥಿಯೇಟರ್‍ಗಳ ಅಭಿವೃದ್ಧಿಗೆ ಅಂತ ಮೀಸಲಾಗಿಟ್ಟಿರುವ 32 ಕೋಟಿ ರೂ. ಅನುದಾನವನ್ನಷ್ಟೇ ಪೋಕಸ್ ಮಾಡಿ ಬಿಜೆಪಿ ಇಂತಹ ಸುಳ್ಳು ಸುದ್ದಿ ಹಬ್ಬಿಸಿದೆ.* ಕಳೆದ ಬಾರಿ ಮಂಡ್ಯದಲ್ಲಿ ಕೇವಲ ಮೂರು ದಿನಗಳ ಕಾಲ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೇ ರಾಜ್ಯ ಸರ್ಕಾರ 29.65 ಕೋಟಿ ರೂ. ಖರ್ಚು ಮಾಡಿದೆ. ಅಂತದ್ದರಲ್ಲಿ ಇಡೀ ವರ್ಷದ ಬಜೆಟ್‌ನಲ್ಲಿ ಕನ್ನಡಕ್ಕೆ ಕೇವಲ 32 ಕೋಟಿ ಮೀಸಲಿಡಲಾಗಿದೆ ಎಂಬ ಸುಳ್ಳನ್ನು ಪ್ರಚಾರ ಮಾಡಲು ಮುಂದಾದ ಬಿಜೆಪಿ ಈಗ ಜನರೆದುರು ಅಕ್ಷರಶಃ ಬೆತ್ತಲಾಗಿ ಅವಮಾನಕ್ಕೀಡಾಗಿದೆ.
ಹೋಗಲಿ, ಕನ್ನಡದ ಬಗ್ಗೆ ಈಗ ದಿಢೀರ್ ಇಷ್ಟೆಲ್ಲ ಪ್ರೇಮವನ್ನು ವ್ಯಕ್ತಪಡಿಸುತ್ತಿರುವ ಬಿಜೆಪಿಗೆ ನಿಜವಾಗಲೂ ಕನ್ನಡದ ಬಗ್ಗೆ ಅಭಿಮಾನವಿದೆಯಾ? ಎಂಬ ಪ್ರಶ್ನೆ ಕೇಳಿಕೊಂಡರೆ, ನಿರಾಸೆಯ ನೂರಾರು ಉತ್ತರಗಳು ಎದ್ದು ನಿಲ್ಲುತ್ತವೆ. ಹಿಂದು, ಹಿಂದಿ, ಹಿಂದೂಸ್ಥಾನ ಎಂಬ ಐಡಿಯಾಲಜಿಯ ಬಿಜೆಪಿ ತನ್ನ ಹೈಕಮಾಂಡ್ ನಾಯಕರ ಮನವೊಲಿಸುವ ಸಲುವಾಗಿ ಸದಾ ಹಿಂದಿ ಹೇರಿಕೆಯ ಪರವಾಗಿ ನಿಲ್ಲುತ್ತಾ ಬಂದ ಪಕ್ಷ. ಕನ್ನಡಿಗ ಹೋರಾಟಗಾರರನ್ನು ಕೀಳು ಭಾವನೆಯಲ್ಲಿ ಕಾಣುವ, ಕೇಸು ದಾಖಲಿಸಿದ್ದ ಪಕ್ಷ. ಬೊಗಳೆ ಬಿಜೆಪಿಯ ಬೋಗಸ್ ಕನ್ನಡಪ್ರೇಮದ ಸ್ಯಾಂಪಲ್‌ಗಳು ಇಲ್ಲಿವೆ….
• ಕನ್ನಡದ ಪ್ರತ್ಯೇಕ ಧ್ವಜಕ್ಕೆ ಅನುಮತಿ ನೀಡಲಿಲ್ಲ
• ಕನ್ನಡದ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡಬೇಕೆಂದು ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಮನ್ನಣೆ ನೀಡಲಿಲ್ಲ
• ಕನ್ನಡಿಗರು ಕಟ್ಟಿಬೆಳೆಸಿದ ಸ್ಟೇಟ್ ಬ್ಯಾಂಕ್ ಇಂಡಿಯಾ, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಉತ್ತರ ಭಾರತೀಯ ಬ್ಯಾಂಕ್‌ಗಳೊಟ್ಟಿಗೆ ವಿಲೀನ ಮಾಡಿದರು
• ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದ್ದರೂ ಕೇಂದ್ರ ಬಜೆಟ್‌ನಲ್ಲಿ ಕೇವಲ 3 ಕೋಟಿ ಕೊಟ್ಟು, ಯಾರೂ ಬಳಸದ ಸಂಸ್ಕೃತ ಪ್ರಚಾರಕ್ಕೆ 600 ಕೋಟಿ ನೀಡಿದರು.
• ಉತ್ತರ ಕರ್ನಾಟಕದ ಕನ್ನಡಿಗರಿಗೆ ನೀರುಣಿಸುವ ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಗ್ರೀನ್ ಟ್ರಿಬ್ಯೂನಲ್ ಅನುಮತಿ ನೀಡಲಿಲ್ಲ
• ಕನ್ನಡಿಗರಿಂದ ಸಂಗ್ರಹಿಸಿದ ಜಿಎಸ್‌ಟಿ ತೆರಿಗೆ ಮರುಹಂಚಿಕೆಯಲ್ಲಿ ಕನ್ನಡಿಗರಿಗೆ ಮೋಸ ಮಾಡಿ, ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ಹೆಚ್ಚು ಹಂಚಿಕೆ ಮಾಡಿದರು
• ಕನ್ನಡಿಗರಿಗೆ ಅನುಕೂಲವಾಗಬಲ್ಲ ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅನುಮತಿ ನೀಡಲಿಲ್ಲ
• ಕನ್ನಡದ ನೆಲದಲ್ಲಿ ನಡೆಯುತ್ತಿರುವ ಏರ್‍ಶೋ ಅನ್ನು ಗುಜರಾತ್‌ಗೆ ಸ್ಥಳಾಂತರಿಸಲು ಹುನ್ನಾರ
• ಕನ್ನಡ ನೆಲದಲ್ಲೇ ಹುಟ್ಟಿ, ವಚನ ರೂಪದಲ್ಲಿ ಕನ್ನಡದಲ್ಲೇ ತನ್ನ ಸಾರವನ್ನು ಸಾರಿದ ಬಸವಜನಿತ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲಿಲ್ಲ.
• ಕರ್ನಾಟಕ ಪ್ರಾದೇಶಿಕ ವ್ಯಾಪ್ತಿಯ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕರೇ ನೇಮಕವಾಗುವಂತೆ ಬ್ಯಾಂಕ್ ನೇಮಕಾತಿ ನಿಯಮ ರೂಪಿಸಿದರು
• ಹುಬ್ಬಳ್ಳಿಯಲ್ಲೇ ಕೇಂದ್ರ ಕಚೇರಿ ಹೊಂದಿರುವ ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರ ಅರ್ಜಿ ತಿರಸ್ಕಾರ ಮಾಡಿದರು. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಕಡೆಗಣನೆ.
• ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕನ್ನಡಿಗರ ಪ್ರಾತಿನಿಧಿಕ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡಿದರು.
• ಕನ್ನಡಿಗರು ಬರದಿಂದ ತತ್ತರಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನಿರ್ದೇಶನ ನೀಡುವವರೆಗೆ ಬರ ಪರಿಹಾರ ನೀಡದೆ ಸತಾಯಿಸಿದರು.
ಇಂತಹ ಬಿಜೆಪಿ ಈಗ ರಾಜಕೀಯ ಲಾಭಕ್ಕೋಸ್ಕರ ಸುಳ್ಳಿನ ಪ್ರಚಾರ ಮಾಡುತ್ತಾ, ಜನರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತಿದೆ. ಬಹುಶಃ ಈ ಹಿಂದಿಮೋಹಿಗಳು ಕನ್ನಡಿಗರನ್ನು ದಡ್ಡರು ಎಂದುಕೊಂಡಿರಬಹುದು. ಆದರೆ ಕನ್ನಡಿಗರು ದಡ್ಡರಲ್ಲ. ಇವರ ಸುಳ್ಳಿನ ಹೂರಣವನ್ನು ಬಯಲು ಮಾಡಿ, ತಕ್ಕ ಶಾಸ್ತಿ ಮಾಡಿದ್ದಾರೆ. ಈಗಲಾದರೂ ಬಿಜೆಪಿ ಸುಳ್ಳುಗಳ ಮೊರೆಹೋಗುವುದು ಬಿಟ್ಟು ಒಂದು ಜವಾಬ್ಧಾರಿಯುತ ವಿರೋಧ ಪಕ್ಷವಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಿದರೆ, ಕನ್ನಡಿಗರ ಮನಗೆಲ್ಲಬಹುದೇನೊ. ಯಾಕೆಂದರೆ, ಇಂತಹ ಜಿಜುಬಿ ಫೇಕ್ ಸುದ್ದಿಗಳ ಅಪಪ್ರಚಾರದ ಮೂಲಕ ಕನ್ನಡಿಗರನ್ನು ಯಾಮಾರಿಸಲೂ ಸಾಧ್ಯವಿಲ್ಲ, ಅವರ ಮನಗೆಲ್ಲಲೂ ಸಾಧ್ಯವಿಲ್ಲ.
ಜೈ ಕರ್ನಾಟಕ, ಜೈ ಕನ್ನಡ!
– ಮಾಚಯ್ಯ ಎಂ ಹಿಪ್ಪರಗಿ