ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ – 2 ಚಿತ್ರದ ಎರಡನೇ ಭಾಗಕ್ಕೆ ರಚಿತಾ ರಾಮ್ ನಾಯಕಿಯಾಗುವುದು ಬಹುತೇಕ ಪಕ್ಕಾ ಆಗಿದೆಯನ್ನುವ ಮಾತು ಕೇಳಿಬರುತ್ತಿದೆ.
ಈ ಕುರಿತು ನಾಗಶೇಖರ್ ಮತ್ತು ರಚಿತಾ ರಾಂ ಅವರ ನಡುವೆ ಮಾತುಕತೆ ನಡೆದಿದ್ದು ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ಭಾಗದಲ್ಲಿ ನಟಿಸಿದ್ದ ರಮ್ಯಾ ಅವರೇ ಈ ಭಾಗದಲ್ಲೂ ನಟಿಸಬಹುದೆನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು.
ಒಳ್ಳೆಯ ಹಾಡುಗಳ ಹಾಗೂ ಸಂಗೀತ ಹೊಂದಿದ್ದ ಸಂಜು ವೆಡ್ಸ್ ಗೀತಾ ಒಂದನೇ ಭಾಗ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಹೀಗಾಗಿ ಚಿತ್ರದ ಎರಡನೇ ಭಾಗದ ಕುರಿತೂ ಕುತೂಹಲ ಮೂಡಿದೆ. ಹಿಂದಿನ ಭಾಗಕ್ಕೆ ಹಾಡು ಬರೆದಿದ್ದ ಕವಿರಾಜ್ ಅವರೇ ಈ ಚಿತ್ರಕ್ಕೆ ಹಾಡು ಬರೆಯಲಿದ್ದು ಅವರು ಈ ಕುರಿತು ಕಳೆದ ವಾರ ಫೇಸ್ಬುಕ್ ಪೋಸ್ಟ್ ಹಾಕಿದ್ದರು.
‘ನಾನು ಈ ಪಾತ್ರಕ್ಕೆ ನಟಿಯರನ್ನು ಪರಿಗಣಿಸುವಾಗ, ನನ್ನ ಮನಸ್ಸಿನಲ್ಲಿ ಮೂವರ ಹೆಸರುಗಳು ಇದ್ದವು ಮತ್ತು ರಚಿತಾ ರಾಮ್ ಖಂಡಿತವಾಗಿಯೂ ಅವರಲ್ಲಿ ಒಬ್ಬರಾಗಿದ್ದರು. ರಚಿತಾ ಅವರ ಹಿಂದಿನ ಸಿನಿಮಾಗಳಲ್ಲಿನ ಅಭಿನಯವು ಅವರನ್ನು ಪಾತ್ರಕ್ಕೆ ಆಯ್ಕೆ ಮಾಡುವ ವಿಶ್ವಾಸವನ್ನು ನೀಡಿತು. ರಚಿತಾ ಅವರು ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟರು ಮತ್ತು ಅವರ ಪಾತ್ರವನ್ನು ಮೆಚ್ಚಿಕೊಂಡರು. ನಂತರ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು’ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ.
ಚಿತ್ರದ ಕಥಾನಾಯಕನಾಗಿ ಶ್ರೀನಗರ ಆಯ್ಕೆಯಾಗಿದ್ದು, ಹಿಂದಿನ ಭಾಗದಲ್ಲೂ ಅವರೇ ನಟಿಸಿದ್ದರು.
ನಿರ್ದೇಶಕರು ಆಗಸ್ಟ್ 15 ರಂದು ಅಧಿಕೃತವಾಗಿ ತಮ್ಮ ಚಿತ್ರವನ್ನು ಪ್ರಾರಂಭಿಸಲು ಯೋಜಿಸಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸಲು ಪ್ರಕಾಶ್ ರಾಜ್ ಮತ್ತು ರಮ್ಯಾ ಕೃಷ್ಣನ್ ಅವರನ್ನು ಸಂಪರ್ಕಿಸಲು ಮತ್ತು ವಿಶೇಷ ಪಾತ್ರದಲ್ಲಿ ತಮನ್ನಾ ಭಾಟಿಯಾ ಅವರನ್ನು ಕರೆತರಲು ನಿರ್ದೇಶಕರು ಯೋಚಿಸುತ್ತಿರುವುದಾಗಿ ತಿಳಿದುಬಂದಿದೆ.
ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರು ಸಂಗೀತ ನೀಡಲಿದ್ದು ಸತ್ಯ ಹೆಗಡೆಯವರ ಕೆಮೆರಾ ಕಣ್ಣಿರಲಿದೆ.