ದೆಹಲಿ: ರಾಜಕೀಯ ಪಕ್ಷಗಳನ್ನು 2013ರ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ’ (POSH Act) ವ್ಯಾಪ್ತಿಗೆ ತರಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ನಿರಾಕರಿಸಿದೆ. ಇದು ಶಾಸಕಾಂಗಕ್ಕೆ ಸಂಬಂಧಿಸಿದ ವಿಷಯ ಎಂದು ನ್ಯಾಯಾಲಯ ತಿಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ಇದು ಸಂಸತ್ತಿನ ವ್ಯಾಪ್ತಿಗೆ ಬರುವುದರಿಂದ ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರಾದ ಯೋಗಮಯಾ ಎಂ.ಜಿ ಅವರಿಗೆ ತಿಳಿಸಿದರು.
ಕೆಲವು ಮಹಿಳಾ ಸಂಸದರ ಸಹಕಾರ ಪಡೆದು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸುವಂತೆ ನ್ಯಾಯಾಲಯ ಅರ್ಜಿದಾರರ ಹಿರಿಯ ವಕೀಲೆ ಶೋಭಾ ಗುಪ್ತಾ ಅವರಿಗೆ ಸಲಹೆ ನೀಡಿತು.
ರಾಜಕೀಯ ಪಕ್ಷಗಳನ್ನು POSH ಕಾಯ್ದೆಯ ವ್ಯಾಪ್ತಿಗೆ ತರಲು ಹೊಸ ಕಾಯಿದೆ ಬೇಡ, ಆದರೆ ಕಾಯ್ದೆಯ ವ್ಯಾಖ್ಯಾನವನ್ನು ಬದಲಿಸಬೇಕು ಎಂದು ಅರ್ಜಿದಾರರು ಪ್ರತಿಪಾದಿಸಿದರು. ಈ ಹಿಂದೆ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು, ಆಗ ಮನವಿ ಸಲ್ಲಿಸಲು ಅನುಮತಿ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಲಾಗಿತ್ತು ಎಂದು ವಕೀಲೆ ಹೇಳಿದರು.
POSH ಕಾಯ್ದೆಯ ವ್ಯಾಖ್ಯಾನದ ಪ್ರಕಾರ, ರಾಜಕೀಯ ಪಕ್ಷಗಳು “ಕೆಲಸದ ಸ್ಥಳ” ಮತ್ತು “ಉದ್ಯೋಗದಾತ” ವ್ಯಾಪ್ತಿಗೆ ಬರುವುದರಿಂದ, ಮಹಿಳಾ ರಾಜಕೀಯ ಕಾರ್ಯಕರ್ತರ ಲೈಂಗಿಕ ಕಿರುಕುಳದ ದೂರುಗಳನ್ನು ಪರಿಹರಿಸಲು ಅವರು ಈ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕು ಎಂದು ವಕೀಲೆ ವಾದಿಸಿದರು. ಆದರೆ, 2021ರ ಕೇರಳ ಹೈಕೋರ್ಟ್ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿತು, ಆ ತೀರ್ಪಿನಲ್ಲಿ ರಾಜಕೀಯ ಪಕ್ಷಗಳಿಗೆ POSH ಕಾಯ್ದೆಯ ಅಡಿಯಲ್ಲಿ ಆಂತರಿಕ ದೂರು ಸಮಿತಿ (ICC) ರಚಿಸುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು.
ಆದರೆ, ಹೈಕೋರ್ಟ್ ತೀರ್ಪನ್ನು ಪ್ರತ್ಯೇಕವಾಗಿ ಪ್ರಶ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಈ ಅರ್ಜಿಯನ್ನು ಪರಿಗಣಿಸಲು ನ್ಯಾಯಪೀಠವು ಒಪ್ಪದ ಕಾರಣ, ಅರ್ಜಿದಾರರು ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದರು.
ಡಿಸೆಂಬರ್ 9, 2024ರಂದು ಇದೇ ಅರ್ಜಿದಾರರು ಸಲ್ಲಿಸಿದ್ದ ಇದೇ ರೀತಿಯ PIL ಒಂದನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತ್ತು. ರಾಜಕೀಯ ಪಕ್ಷಗಳನ್ನು ನಿಯಂತ್ರಿಸುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
ರಾಜಕೀಯದಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡಬೇಕು ಮತ್ತು ರಾಜಕೀಯ ಪಕ್ಷಗಳಿಗೆ POSH ಕಾಯ್ದೆ ಅನ್ವಯಿಸಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಮೇ 12, 2023ರ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು (ICC) ಸ್ಥಾಪಿಸಲು ನಿರ್ದೇಶನ ನೀಡಿತ್ತು ಮತ್ತು ಮಹಿಳೆಯರು ದೂರುಗಳನ್ನು ಸಲ್ಲಿಸಲು ‘SheBox’ ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿತ್ತು. ಅಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ POSH ಕಾಯ್ದೆಯನ್ನು ಏಕರೂಪವಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿತ್ತು.