ಬೆಂಗಳೂರು: ಗೋವುಗಳನ್ನು ಪೋಷಿಸುವ ಸಲುವಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ʻಪುಣ್ಯಕೋಟಿ ದತ್ತು ಯೋಜನೆʼಗೆ ಸಂಪನ್ಮೂಲ ಸಂಗ್ರಹಣೆಗಾಗಿ ಸರ್ಕಾರಿ ನೌಕರರ ಸಂಬಳಕ್ಕೆ ಕೈ ಹಾಕಿರುವುದು ಈಗ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಉಪಕಾರ್ಯದರ್ಶಿ ಸಹಿ ಮಾಡಿರುವ ಸುತ್ತೋಲೆಯೊಂದು ʻಪೀಪಲ್ ಮೀಡಿಯಾʼಗೆ ಲಭ್ಯವಾಗಿದ್ದು, ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ಅಧಿಕಾರಿಗಳು, ನೌಕರರಿಂದ ಹಣ ಸಂಗ್ರಹಣೆ ಮಾಡುವ ಅಧಿಕೃತ ಆದೇಶ ಹೊರಡಿಸಲಾಗಿದೆ.
ಪುಣ್ಯಕೋಟಿ ದತ್ತು ಯೋಜನೆಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿನಂತಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಪತ್ರ ಬರೆದಿದ್ದು, ʻರಾಜ್ಯ ಸರ್ಕಾರಿ ನೌಕರರು ಹಾಗು ನಿಗಮ ಮಂಡಳಿ ಪ್ರಾಧಿಕಾರ ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆಗಳ ನೌಕರರ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಗೆಯನ್ನು ಕಟಾವು ಮಾಡಿ ನಿಗದಿತ ಯೋಜನೆಗೆ ಬಳಸುವಂತೆ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರದ ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದು, ಎ ವೃಂದದ ಅಧಿಕಾರಿಗಳಿಗೆ ರೂ.11,000, ಬಿ ವೃಂದದ ಅಧಿಕಾರಿಗಳಿಗೆ ರೂ.4,000 ಮತ್ತು ಸಿ ವೃಂದದ ನೌಕರರಿಗೆ ರೂ.400 ಗಳನ್ನು ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ವಂತಿಕೆ ಪಡೆಯಲಾಗುವುದು ಎಂದು ತಿಳಿಸಲಾಗಿದೆ. ಡಿ ವೃಂದದ ನೌಕರರಿಗೆ ವಿನಾಯಿತಿ ನೀಡಲಾಗಿದೆ.
ಸರ್ಕಾರ ಬಜೆಟ್ ಸಂದರ್ಭದಲ್ಲಿ ವಿವಿಧ ಘೋಷಣೆಗಳನ್ನು ಹೊರಡಿಸುತ್ತದೆ. ಇದಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಹೊಣೆಯು ಸರ್ಕಾರದ್ದೇ ಆಗಿರುತ್ತದೆ. ಹೀಗಿರುವಾಗ ಇಂಥ ಯೋಜನೆಗಳಿಗೆ ಸರ್ಕಾರಿ ನೌಕರರಿಂದ ವಂತಿಕೆ ಸಂಗ್ರಹಿಸುವ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅಲ್ಲದೆ, ಪುಣ್ಯಕೋಟಿ ದತ್ತು ಯೋಜನೆಗೆ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.