Home ಬ್ರೇಕಿಂಗ್ ಸುದ್ದಿ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಹಣ ; ಯಡವಟ್ಟಿನ ನಿರ್ಧಾರಕ್ಕೆ ವಿರೋಧ

ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಹಣ ; ಯಡವಟ್ಟಿನ ನಿರ್ಧಾರಕ್ಕೆ ವಿರೋಧ

0

ರಾಜ್ಯ ಸರ್ಕಾರಿ ನೌಕರರು ನವೆಂಬರ್ ತಿಂಗಳ ವೇತನದಲ್ಲಿ ಇಂತಿಷ್ಟು ಭಾಗವನ್ನು ಪುಣ್ಯಕೋಟಿ ಯೋಜನೆಗೆ ಮೀಸಲಿಡಬೇಕು ಎಂದು ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನೌಕರರ ಯಾವುದೇ ಸಭೆ ಕರೆಯದೇ, ನೌಕರರ ಅನುಮತಿ ಪಡೆಯದೇ ಇಂತಹ ಫರ್ಮಾನಿಗೆ ಒಪ್ಪಿಗೆ ಸೂಚಿಸಿರುವುದು ರಾಜ್ಯ ಸರ್ಕಾರಿ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ರಚನೆಯ ದಿನದಿಂದ ಆಡಳಿತ ಅವ್ಯವಸ್ಥೆಯ ಕಾರಣಕ್ಕೆ ಒಂದಿಲ್ಲೊಂದು ಟೀಕೆ, ಆರೋಪಕ್ಕೆ ನಿರಂತರವಾಗಿ ಗುರಿಯಾಗುತ್ತಲೇ ಇದೆ. ವಿಶೇಷವಾಗಿ ಯಾವುದಾದರೊಂದು ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ತರುವ ಅವೈಜ್ಞಾನಿಕ ಮತ್ತು ನಾಗರಿಕ ಹಿತಾಸಕ್ತಿಗೆ ವಿರುದ್ಧದ ಕಾನೂನುಗಳನ್ನು ತಂದು ಮೇಲಿಂದ ಮೇಲೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದು ವಾಡಿಕೆಯಂತೆ ಬಂದಿದೆ. ಸಧ್ಯ ಪುಣ್ಯಕೋಟಿ ಯೋಜನೆ ಕೂಡಾ ಇದರ ಮುಂದುವರಿದ ಭಾಗವಾಗಿ ಸರ್ಕಾರಿ ನೌಕರರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೌಕರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23 ರ ಆಯವ್ಯಯದಲ್ಲಿ ಘೋಷಿಸಿರುವಂತೆ ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ಸ್ವಾಯತ್ತ ಸಂಸ್ಥೆಗಳ ನೌಕರರು ತಮ್ಮ ನವೆಂಬರ್ ತಿಂಗಳ ವಂತಿಗೆಯಲ್ಲಿ ಇಂತಿಷ್ಟು ಭಾಗವನ್ನು ಯೋಜನೆಗೆ ದೇಣಿಗೆ ಕೊಡಬೇಕೆಂದು ತಮ್ಮ ಆಯವ್ಯಯ ಭಾಷಣದಲ್ಲಿ ತಿಳಿಸಿರುತ್ತಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಿರುವುದು ಸರ್ಕಾರಿ ನೌಕರರ ಕರ್ತವ್ಯ ಎನ್ನುವ ಮೂಲಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನೌಕರರ ಯಾವುದೇ ಪೂರ್ವಾನುಮತಿ ಇಲ್ಲದೆ ನೌಕರರ ವಂತಿಗೆಯಲ್ಲಿ ಇಂತಿಷ್ಟು ಭಾಗವನ್ನು ತಡೆ ಹಿಡಿಯುವಂತೆ ಸರ್ಕಾರದ ಖಜಾನೆ ಅಧಿಕಾರಿಗಳಿಗೆ ಪತ್ರ ಬರೆದಿರುವುದು ನೌಕರರ ವಿರೋಧಕ್ಕೆ ಕಾರಣವಾಗಿದೆ.

ನೌಕರರ ಸಂಘದ ಅಧ್ಯಕ್ಷರು ಸರ್ಕಾರದ ಖಜಾನೆ ಅಧಿಕಾರಿಗಳಿಗೆ ಕಳಿಸಿರುವ ಪ್ರಸ್ತಾವನೆಯಲ್ಲಿ
ಸರ್ಕಾರದ ಎ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹11,000
ಬಿ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹4,000
ಸಿ ದರ್ಜೆ ನೌಕರರ ತಿಂಗಳ ವಂತಿಗೆಯಲ್ಲಿ ₹400 ರಂತೆ ನವೆಂಬರ್ ತಿಂಗಳ ವೇತನದಲ್ಲಿ ತಡೆ ಹಿಡಿಯುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಇದಕ್ಕೆ ರಾಜ್ಯ ಸರ್ಕಾರಿ ನೌಕರರ ಒಪ್ಪಿಗೆ ಇದೆ ಎಂದೂ ತಿಳಿಸಿರುತ್ತಾರೆ.

ಇದರ ಬೆನ್ನಲ್ಲೇ ಬಹುತೇಕ ರಾಜ್ಯ ಸರ್ಕಾರಿ ನೌಕರರು ಈ ಯೋಜನೆಗೆ ತಮ್ಮ ವಂತಿಗೆಯ ಹಣ ಬಳಸದಂತೆ ಅಸಮ್ಮತಿ ಪತ್ರವನ್ನು ಹೊರಡಿಸಿದ್ದಾರೆ. ಪತ್ರದಲ್ಲಿ ‘ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ನೌಕರರ ಯಾವುದೇ ಸಭೆ ಕರೆಯದೇ ಏಕಪಕ್ಷೀಯವಾಗಿ ಈ ನಿರ್ಧಾರ ಹೊರಡಿಸಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ’ ಎಂಬುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಜೊತೆಗೆ ‘ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ರಾಜ್ಯದ 20 ಕಡೆಗಳಲ್ಲಿ ಗೋಶಾಲೆ ಶುರು ಮಾಡಿರುವ ಪ್ರಸ್ತಾವನೆ ಮಾಡಿದೆ, ಅದರಲ್ಲಿ 14 ಕಡೆಗಳಲ್ಲಿ ಗೋಶಾಲೆಗಳೇ ಇಲ್ಲ ಎಂದು ಈಗಾಗಲೇ ಹೈಕೋರ್ಟ್ ಸರ್ಕಾರದ ಕಿವಿ ಹಿಂಡಿದೆ. ಇಷ್ಟಿದ್ದೂ ಯಾವ ನಂಬಿಕೆಯಿಂದ ನಮ್ಮ ಸಂಬಳ ತಡೆ ಹಿಡಿಯಬೇಕು’ ಎನ್ನುವ ರೀತಿಯಲ್ಲಿ ನೌಕರರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ‘ಸರ್ಕಾರ ಈಗಾಗಲೇ ಜಾರಿಗೆ ತಂದಿರುವ NPS (New Pension Scheme) ನೌಕರರಾಗಿರುವ ನಮಗೆ ಹೊಸ ಪಿಂಚಣಿ ಯೋಜನೆಯಿಂದ ಯಾವುದೇ ಉಪಯೋಗ ಇಲ್ಲ. ಅದನ್ನು ರದ್ದುಪಡಿಸಿ, OPS (Old Pension Scheme) ಯೋಜನೆ ಜಾರಿಗೊಳಿಸಿದರೆ ನಾವು ಪುಣ್ಯಕೋಟಿ ದತ್ತು ಯೋಜನೆಗೆ ನಮ್ಮ ಒಂದು ತಿಂಗಳ ನಿರ್ದಿಷ್ಟ ಹಣವನ್ನು ನೀಡಬಹುದು ಎನ್ನುವ ಹೊಸ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಸಧ್ಯ ಈ ಒಂದು ನಿರ್ಧಾರ ಏಕಪಕ್ಷೀಯ ಎಂದು ಸರ್ಕಾರಿ ನೌಕರರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಗೋಶಾಲೆ ಸ್ಥಾಪನೆ ವಿಚಾರದಲ್ಲಿ ಹೈಕೋರ್ಟ್ ಸರ್ಕಾರದ ತರಾಟೆ ತಗೆದುಕೊಂಡ ವಿಚಾರ ಪ್ರಸ್ತಾಪಿಸಿ ಆದ ಅವ್ಯವಹಾರದ ಬಗ್ಗೆಯೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದೂ ಕಂಡುಬಂದಿದೆ.

You cannot copy content of this page

Exit mobile version