Home ಅಂಕಣ ಕಾಂತಾರ ಚಾಪ್ಟರ್ 1: ಅದ್ಧೂರಿತನದ ವೈಭವದಲ್ಲಿ, ಅನವಶ್ಯಕ ದೃಶ್ಯಗಳ ರಂಜನೆ

ಕಾಂತಾರ ಚಾಪ್ಟರ್ 1: ಅದ್ಧೂರಿತನದ ವೈಭವದಲ್ಲಿ, ಅನವಶ್ಯಕ ದೃಶ್ಯಗಳ ರಂಜನೆ

0

“..ಕಾಂತಾರ ಒಂದು ಕಥೆ ಅಲ್ಲ, ‘ದಂತಕಥೆ’. ಈ ದಂತಕಥೆಯ ಮೂಲವನ್ನು ಅರಿಯದೆ ಅದರ ಪ್ರಭಾವ ತಿಳಿಯದು. ಇದೇ ಬೇರುಗಳ ಹುಡುಕಾಟದಲ್ಲಿ ಸಾಗುವ ಕಥೆಯೇ ಕಾಂತಾರ ಚಾಪ್ಟರ್ 1..” ಸಿನಿ ವಿಮರ್ಶಕ ನಿತಿನ್ ಕೃಷ್ಣ ಅವರ ಬರಹದಲ್ಲಿ

“ಕಾಂತಾರ” ಎಂಬ ಶೀರ್ಷಿಕೆ ಹೇಳುವಂತೆ, ಇದು ಕೇವಲ ಒಂದು ಕಥೆ ಅಲ್ಲ, ರಿಷಬ್ ಶೆಟ್ಟಿ ಹೇಳಿದಂತೆ ದಂತಕಥೆಯೇ ಸರಿ. ದಂತಕಥೆಯ ಮೂಲವನ್ನು ಅರಿಯದೆ ಅದರ ಪ್ರಭಾವ ತಿಳಿಯದು. ಇದೇ ಬೇರುಗಳ ಹುಡುಕಾಟದಲ್ಲಿ ಸಾಗುವ ಕಥೆಯೇ ಕಾಂತಾರ – ಮೊದಲ ಅಧ್ಯಾಯ.

ಚಿತ್ರವು ಪ್ರಾಚೀನ ಬನವಾಸಿ ಕದಂಬರ ಕಾಲಘಟ್ಟದಲ್ಲಿ ನಡೆಯುತ್ತದೆ.

ಪ್ರಾಚೀನ ಬನವಾಸಿ ಕದಂಬರ ಕಾಲಘಟ್ಟದಲ್ಲಿ ಹೊಂದಿಸಲಾದ ಈ ಚಿತ್ರ, ಒಂದೇ ಸಂದರ್ಭದಲ್ಲಿ ಎರಡು ವಿರೋಧಿ ಜಗತ್ತುಗಳನ್ನು ತೋರಿಸುತ್ತದೆ.

ಒಂದೆಡೆ ಬುಡಕಟ್ಟು ಜನಾಂಗದ ಕಾಡಿನ ಜೀವನಶೈಲಿ, ಕಲೆ, ನಿಸರ್ಗ, ಪದ್ಧತಿ ಮತ್ತು ದೈವ ನಂಬಿಕೆಗಳನ್ನು ತೋರಿಸುತ್ತಲೇ, ಮತ್ತೊಂದೆಡೆ ನಾಗರಿಕ ಸಮಾಜದ ರಾಜಮನೆತನ, ಜೀತಪದ್ಧತಿ, ಅಸ್ಪೃಶ್ಯತೆ, ಅಸಮಾನತೆ ಹಾಗೂ ದೌರ್ಜನ್ಯಗಳನ್ನು ಎದುರುಮಾಡುತ್ತದೆ. ಈ ಎರಡರ ಮಧ್ಯೆ ಹುಟ್ಟುವ ಸಂಘರ್ಷವೇ ಚಿತ್ರದ ಜೀವಾಳ.

ಕದಂಬರ ಸಾಮಂತನಾದ ಭಂಗ್ರಾ ರಾಜ್ಯದ ದೊರೆಯ ಆಸೆ–ದುರಾಸೆಯ conquest ಪ್ರಯಾಣದಲ್ಲಿ ಅವನು ಒಂದು ರಹಸ್ಯಮಯ ವೃದ್ಧನನ್ನು ಸಮುದ್ರ ತೀರದಲ್ಲಿ ಮೀನು ಹಿಡಿಯುವಾಗ ಕಾಣುತ್ತಾನೆ. ಆತನ ಬಳಿಯಿದ್ದ ಅಪರೂಪದ ವಸ್ತುಗಳು ಅವನನ್ನು ಕಾಡಿನ ಆಳದಲ್ಲಿರುವ ಕಾಂತಾರ ಕಡೆಗೆ ಕರೆದುಕೊಂಡು ಹೋಗುತ್ತವೆ. ಅಲ್ಲಿ ಬುಡಕಟ್ಟು ಜನರ ದೈವಿಕ “ಈಶ್ವರನ ಹೂತೋಟ” ಅವನ ಕಣ್ಣಿಗೆ ಬೀಳುತ್ತದೆ. ತದನಂತರ ಅವನಿಗೇನಾಯಿತು!? ಅವನು ಅದನ್ನು ವಶಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾದನೋ ಇಲ್ಲವೋ!? ಇದನ್ನು ಚಿತ್ರಮಂದಿರದಲ್ಲೇ ನೋಡಬೇಕು..

ದಶಕಗಳ ನಂತರ ಕಥೆ ಭಂಗ್ರಾ ರಾಜವಂಶದ ವಿಜಯೇಂದ್ರ (ಜಯರಾಮ್), ಅವನ ಅಸಮರ್ಥ ಮಧ್ಯಪಾನಿಯ ವ್ಯಸನಿ ಮಗ ಕುಲಶೇಖರ (ಗುಲ್ಶನ್ ದೇವಯ್ಯ) ಮತ್ತು ಬುದ್ಧಿವಂತ ಮಗಳು ಕನಕಾವತಿ (ರುಕ್ಮಿಣಿ ವಸಂತ್) ಕಡೆ ತಿರುಗುತ್ತದೆ. ಇದೇ ಸಮಯದಲ್ಲಿ ಬುಡಕಟ್ಟುಗಳ ಕಾವಲುಗಾರ ಬೆರ್ಮೆ (ರಿಷಬ್ ಶೆಟ್ಟಿ), ನಾಯಕನಾಗಿ ತನ್ನ ಜನರ ಅಭಿವೃದ್ಧಿಗಾಗಿ ಹೋರಾಡುತ್ತಾನೆ. ಕಾಂತಾರದ ಜನರು ಭಂಗ್ರಾಕ್ಕೆ ಬಂದಾಗ, ಪರಿಸ್ಥಿತಿ ಪೂರ್ಣ ವಿಕಸಿತ ಸಂಘರ್ಷಕ್ಕೆ ತಿರುಗುತ್ತದೆ.

ಆ ಭೂಮಿ ಯಾರದು, ಅದನ್ನು ರಕ್ಷಿಸುವವನು ಯಾರು, ಅದನ್ನು ನಾಶಗೊಳಿಸುವ ಶಕ್ತಿ ಯಾರಿಗಿದೆ ಎಂಬ ದೊಡ್ಡ ಸಂಘರ್ಷವೇ ಚಿತ್ರದ ದ್ವಿತೀಯಾರ್ಧವನ್ನು ತೀವ್ರಗೊಳಿಸುತ್ತದೆ.

ಅಭಿನಯ ಮತ್ತು ನಿರ್ದೇಶನ
ರಿಷಬ್ ಒಬ್ಬ ಮಾಂತ್ರಿಕ. ನಿರ್ದೇಶನಕ್ಕೆ ಎಷ್ಟು ಹೊಗಳಬೇಕೋ, ನಟನೆಗೆ ಅದರ ಮೂರು ಪಟ್ಟು ಹೊಗಳಬೇಕು ರಿಷಬ್‌’ರನ್ನು.

ಜಾತಿ ಮತ್ತು ಜೀತ ಪದ್ಧತಿಯ ವಿರುದ್ಧ ಹೊರಟುಬರುವ ಬೇರ್ಮೆ ಈ ಚಿತ್ರದಲ್ಲಿ ಒಬ್ಬ ಕ್ರಾಂತಿಕಾರಿಯೇ ಸರಿ. ಆಕ್ಷನ್ ದೃಶ್ಯಗಳಲ್ಲಂತೂ ರಿಷಬ್ ಎಕ್ಸಲೆಂಟ್.

ವಿಶೇಷವಾಗಿ ಗುಳಿಗ ದರ್ಶನದ ದೃಶ್ಯಗಳಲ್ಲಿ goosebumps ತರಿಸುವ ನಟನೆ ಕಾಣಬಹುದು. ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಅವರ ಖಾತೆಗೆ ಸೇರುವಂತೆ ತೋರುತ್ತದೆ.

ಗುಲ್ಶನ್ ದೇವಯ್ಯನ ನಟನೆ ಅಚ್ಚುಕಟ್ಟಾಗಿದೆ. ಪ್ರಮೋದ್ ಶೆಟ್ಟಿ ಗುಲ್ಶನ್ ಅವರ ಪಾತ್ರಕ್ಕೆ ಒಳ್ಳೆ ಸಹಕಾರ ಕೊಟ್ಟಿದ್ದಾರೆ.

ಆದರೆ ರುಕ್ಮಿಣಿ ವಸಂತ್ – ಮೊದಲಾರ್ಧದಲ್ಲಿ ಭಾರೀ ಸ್ಕ್ರೀನ್ ಪ್ರೆಸೆನ್ಸ್ ಇದ್ದರೂ ಕರಾವಳಿ ಕನ್ನಡ ಸಂಭಾಷಣಾ ಶೈಲಿಯಲ್ಲಿ ವಿಫಲರಾಗಿದ್ದಾರೆ. ಅವರ ಡೈಲಾಗ್ ಡೆಲಿವರಿ ನಾಟಕೀಯವಾಗಿ, ನಂಬಿಸುವಂತೆ ಕಾಣಲಿಲ್ಲ.

ಚಿತ್ರದ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಕರಾವಳಿ ಭಾಗದ ಕನ್ನಡ ಮಾತನಾಡುತ್ತಿದ್ದಾಗ ರುಕ್ಮಿಣಿಯವರ ಬೆಂಗಳೂರು ಶೈಲಿಯ ಕನ್ನಡ ಕನ್ವಿನ್ಸಿಂಗ್ ಆಗಿ ಇರಲಿಲ್ಲ. ಆದರೆ ಕ್ಲೈಮ್ಯಾಕ್ಸ್ ಭಾಗದಲ್ಲಿ ಅವರ ಅಭಿನಯ ಉತ್ತಮವಾಗಿ ಮೂಡಿಬಂದಿದೆ.

ತಾಂತ್ರಿಕ ಅಂಶಗಳು
-ಸಿನೆಮಾಟೋಗ್ರಫಿ ಮತ್ತು ಆಕ್ಷನ್:-
ಚಿತ್ರದ ನಿಜವಾದ ಹೀರೋಗಳು ಎಂದರೆ ಅದು ಸಿನೆಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಮತ್ತು ಆಕ್ಷನ್ ಕೊರಿಯೋಗ್ರಾಫರ್‌ಗಳಾದ ಅರ್ಜುನ್ ರಾಜ್ ಮತ್ತು ಟೋಡೋರ್ ಲಜರೋವ್. ಭಾರತೀಯ ಸಿನಿ ಇತಿಹಾಸದಲ್ಲೇ ಇದೊಂದು ಅತ್ಯದ್ಭುತ ಸಿನೆಮಾಟೋಗ್ರಫಿ ಮತ್ತು ಆಕ್ಷನ್ ಹೊಂದಿರುವ ಮೈಲಿಗಲ್ಲು ಸಿನೆಮಾ ಎಂದರೆ ತಪ್ಪಾಗುವುದಿಲ್ಲ.

ರಥದ ಎಪಿಸೋಡ್‌ಗಳು ಮತ್ತು ಆ ದೃಶ್ಯಾವಳಿಗಳನ್ನು ತೋರಿಸಿರುವ ರೀತಿ ಬಹಳ ಅದ್ಬುತ. ಇಂಟರ್ವಲ್ ಮುನ್ನ ಬರುವ ಹುಲಿ ಸೀಕ್ವೆನ್ಸ್ ಮತ್ತು ಆ ಫೈಟ್ ಬಹುಶಃ ಭಾರತೀಯ ಸಿನಿ ಚರಿತ್ರೆಯಲ್ಲೇ ಒಂದು ಅತ್ಯುತ್ತಮವಾದದ್ದು. ಈ ದೃಶ್ಯವನ್ನು ಚಿತ್ರೀಕರಿಸಿದ ರೀತಿ ಗೂಸ್‌ಬಂಪ್ಸ್ ತರುತ್ತದೆ.

ಸಂಗೀತ :-
ಅಜನೀಶ್ ಲೋಕನಾಥ್ ಈ ಬಾರಿಯ ಅತಿದೊಡ್ಡ ನಿರಾಸೆ. ಕಾಂತಾರ ಮೊದಲ ಭಾಗ ಬಹಳಷ್ಟು ಹಿಟ್ ಆಗಿದ್ದೇ ಅವರ ಮ್ಯೂಸಿಕ್‌ನಿಂದ. “ಸಿಂಗಾರ ಸಿರಿಯೇ” ಹಾಡು ಕನ್ನಡದ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳಲ್ಲಿ ಒಂದು. “ಸಿಂಗಾರ ಸಿರಿಯೇ”ಯಂತಹ ನೆನಪಿನಲ್ಲಿ ಉಳಿಯುವ ಹಾಡು ಚಾಪ್ಟರ್ 1 ರಲ್ಲಿ ಇಲ್ಲ.

ಸಂಗೀತದ ಮಟ್ಟದಲ್ಲಿ ಮೊದಲ ಕಾಂತಾರ ನೀಡಿದ ಭರವಸೆಯನ್ನೂ ಈ ಅಧ್ಯಾಯ ತಲುಪಿಲ್ಲ.

ವಿಎಫ್‌ಎಕ್ಸ್ ಮತ್ತು ನಿರ್ಮಾಣ :
125 ಕೋಟಿ ಬಜೆಟ್‌ನಲ್ಲಿ ಹೊಂಬಾಳೆ ನಿರ್ಮಾಣ ಸಂಸ್ಥೆಯು ಅದ್ಭುತ ದೃಶ್ಯವೈಭವ ನೀಡಿದರೂ, ಕೆಲವು ವಿಶ್ಯವಲ್ ಎಫೆಕ್ಟ್ ಸನ್ನಿವೇಶಗಳು ಇನ್ನೂ ಹೆಚ್ಚು ನಿಖರವಾಗಿರಬಹುದಿತ್ತು.

ಪ್ರೇಕ್ಷಕರ ಅನುಭವ
ಸಿನೆಮಾದ ಮೊದಲ ಭಾಗ ಕೊಂಚ ಸ್ಲೋ ಮತ್ತು ಲ್ಯಾಗ್ ಎನ್ನಿಸಿದರೂ, ಅದರಲ್ಲಿರುವ ಹೈ ಮೂವ್‌ಮೆಂಟ್‌ಗಳು ತುಂಬಾ ಚೆನ್ನಾಗಿ ವರ್ಕ್ ಆಗಿದೆ. ಕೆಲ ಹಾಸ್ಯ ದೃಶ್ಯಗಳನ್ನು ಸ್ಪೇಸ್ ಇಲ್ಲದಿದ್ದರೂ ಸುಮ್ಮನೆ ತುರುಕಿದ ರೀತಿ ಎನ್ನಿಸುತ್ತದೆ ಆದರೂ ಹುಲಿ ಸೀಕ್ವೆನ್ಸ್ ಹಾಗೂ ಇಂಟರ್ವಲ್ ಬ್ಲಾಕ್ ಭಾರತೀಯ ಸಿನೆಮಾ ಇತಿಹಾಸದಲ್ಲೇ ಅತ್ಯುತ್ತಮ ಕ್ಷಣಗಳಲ್ಲಿ ಒಂದೆಂದು ಹೇಳಬಹುದು.

ಎರಡನೇ ಭಾಗದಲ್ಲಿ ಕಥೆ ತೀವ್ರಗೊಳ್ಳುತ್ತಾ ಹೊಸ ಬುಡಕಟ್ಟುಗಳ ಪರಿಚಯದ ಮೂಲಕ ಒಳ್ಳೆಯದು–ಕೆಟ್ಟದಿನ, ತಂತ್ರ – ಕುತಂತ್ರಗಳ ಹೋರಾಟ ಮತ್ತಷ್ಟು ಗಾಢವಾಗುತ್ತದೆ. ಕ್ಲೈಮ್ಯಾಕ್ಸ್ ದೃಶ್ಯ ವೈಭವ ಅದ್ಭುತ, ಆದರೆ ಸ್ವಲ್ಪ ಉದ್ದಗೊಂಡಂತೆ ಅನಿಸುತ್ತದೆ.

ಕ್ಲೈಮ್ಯಾಕ್ಸ್ ಮತ್ತು ವಿಎಫ್‌ಎಕ್ಸ್
ಕ್ಲೈಮ್ಯಾಕ್ಸ್‌ನಲ್ಲಿನ ದೃಶ್ಯ ವೈಭವ ಅದ್ಬುತ. ಎಕ್ಸ್‌ಟೆಂಡೆಡ್ ಕ್ಲೈಮ್ಯಾಕ್ಸ್ ಕೊಂಚ ದೊಡ್ಡದೆನಿಸಿತು.

ದೈವಗಳ ಬಗ್ಗೆ ವಿವರಿಸಲು ಬಹಳ ಸಮಯ ತೆಗೆದುಕೊಂಡಿತು. ಕ್ಲೈಮ್ಯಾಕ್ಸ್‌ನಲ್ಲಿ ವಿಎಫ್‌ಎಕ್ಸ್ ಅದ್ಭುತವಾಗಿದ್ದರೂ, ಈ ಭಾರಿ ಬಜೆಟ್‌ನಲ್ಲಿ ಇನ್ನೂ ಕೊಂಚ ಚೆನ್ನಾಗಿರಬಹುದಿತ್ತು ಎಂಬುದನ್ನು ಬಿಟ್ಟರೆ ದೃಶ್ಯಾವಳಿ ಪ್ರೇಕ್ಷಕರಿಗೆ ರಾಸಾವಳಿ!

ನಿರ್ಮಾಣ ಮತ್ತು ಬಜೆಟ್
ವಿಜಯ್ ಕಿರಗಂದೂರು ಹಾಗೂ ಚಲುವೆ ಗೌಡರವರು ಹೊಂಬಾಳೆ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಿರುವ ಈ ಸಿನೆಮಾ ನೋಡುಗರ ಕಣ್ಣಿಗೆ ಹಬ್ಬದಂತೆ ಕಾಣುತ್ತದೆ.150 ಕೋಟಿ ಭಾರಿ ಮೊತ್ತದಲ್ಲಿ ನಿರ್ಮಾಣಗೊಂಡ ಸಿನೆಮಾ ನೋಡುಗರಿಗೆ ಒಂದು ದೃಶ್ಯ ವೈಭವ.

ಒಟ್ಟಾರೆ ಮೌಲ್ಯಮಾಪನ
“ಕಾಂತಾರ – ಮೊದಲ ಅಧ್ಯಾಯ” ದೃಶ್ಯ ವೈಭವದ ಅದ್ಭುತ ಚಿತ್ರ. ನಿರ್ದೇಶನ, ಅಭಿನಯ, ಚಿತ್ರಕಲೆ, ಆ್ಯಕ್ಷನ್—all top class.

ಆದರೂ, ಸಂಗೀತ, ನಟಿಯ ಬೆಂಗಳೂರು ಮಿಶ್ರಿತ ಕರಾವಳಿ ಕನ್ನಡ ಆಕ್ಸೆಂಟ್, ಅನವಶ್ಯಕವಾಗಿ ತುರುಕಿದ ಹಾಸ್ಯ ದೃಶ್ಯಗಳು ಮತ್ತು ಲ್ಯಾಗ್ ಮುಂತಾದ ಕೆಲವು ನ್ಯೂನತೆಗಳಿಂದಾಗಿ, “ಕಾಂತಾರ – ಒಂದು ದಂತಕಥೆ” ಸಿನೆಮಾಗೆ ಹೋಲಿಸಿದರೆ, ಸ್ವಲ್ಪ ಹಿಂದೆ ಬೀಳುವುದೇನೋ ನಿಜ.
⭐ ರೇಟಿಂಗ್ : 3.25 – 3.5 / 5

You cannot copy content of this page

Exit mobile version