ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣಕ್ಕೆ, ಶಿವಮೊಗ್ಗ ಪೊಲೀಸರು ಮತ್ತು ಸೈಬರ್ ಕ್ರೈಂ ಪೊಲೀಸರ ಸಹಕಾರದಿಂದ ಸುಖಾಂತ್ಯಗೊಂಡಿದೆ.
ಕಳೆದ ಆರು ತಿಂಗಳಿಂದ ಸಂಬಳ ಆಗಿಲ್ಲವೆಂದು ಮನನೊಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಪ್ರಮುಖರ ಹೆಸರು ಬರೆದಿಟ್ಟು, ಜೀವನಕ್ಕೆ ವಿದಾಯ ಹೇಳುತ್ತೇನೆ ಎಂದು ಪ್ರಭಾಕರ್ ಡೆತ್ ನೋಟ್ ಬರೆದಿಟ್ಟಿದ್ದರು. ಇದನ್ನು ವಾಟ್ಸಾಪ್ ಗ್ರೂಪ್ ಮೂಲಕ ಕಳಿಸಲಾಗಿತ್ತು. ಗ್ರೂಪ್ ಗೆ ಈ ಸಂದೇಶ ಬರುತ್ತಿದ್ದಂತೆ ಶಿವಮೊಗ್ಗದ ಪ್ರಭಾಕರ್ ಮನೆ ಮುಂದೆ ಸ್ನೇಹಿತರು, ಬಂಧು ಬಳಗದವರು ಜಮಾಯಿಸಿದ್ದರು.
ಇದನ್ನೂ ಓದಿ : NPS ನೌಕರನ ಡೆತ್ ನೋಟ್ ನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ಷಡಕ್ಷರಿ ಹೆಸರು
ನಂತರ ಶಿವಮೊಗ್ಗದ ಪೊಲೀಸರಿಗೂ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಧ್ಯ ಸತತ ಕಾರ್ಯಾಚರಣೆ ಮತ್ತು ಸೈಬರ್ ಕ್ರೈಂ ಪೊಲೀಸರ ಸಹಕಾರದಿಂದ ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಅವರು ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾರೆ.
ಮನೆ ಬಿಟ್ಟು ಹೋಗುವಾಗ ತನ್ನ ಕಾರು ತಗೆದುಕೊಂಡು ಹೋಗಿದ್ದ ಪ್ರಭಾಕರ್ ಸೀದಾ ಉಡುಪಿ ಮೂಲಕ ಮಂಗಳೂರು ಹೋಗಿದ್ದಾರೆ. ನಂತರ ಕರಾವಳಿ ಮಾರ್ಗದಲ್ಲೇ ಭಟ್ಕಳ ಶಿರಸಿ ಮೂಲಕ ಹುಬ್ಬಳ್ಳಿ ತಲುಪಿದ್ದಾರೆ. ಹುಬ್ಬಳ್ಳಿ ಹೋಗಿ ಮೊಬೈಲ್ ಆನ್ ಮಾಡುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರಿಗೆ ಪ್ರಭಾಕರ್ ಬದುಕಿರುವ ಬಗ್ಗೆ ಹಾಗೂ ಹುಬ್ಬಳ್ಳಿಯಲ್ಲಿ ಇರುವ ಬಗ್ಗೆ ಸುಳಿವು ಸಿಕ್ಕಿದೆ.
ಆ ಮೂಲಕ ಶಿವಮೊಗ್ಗದಿಂದ ನಾಪತ್ತೆ ಆಗಿದ್ದ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.