Home ಆರೋಗ್ಯ ಪೀರಿಯಡ್ಸ್‌ ಮುಂದೂಡಲು ಮಾತ್ರೆ ತಗೋತೀರ? ಹಾಗಿದ್ದರೆ ಈ ವಿಷಯ ತಿಳಿದುಕೊಂಡಿರಿ

ಪೀರಿಯಡ್ಸ್‌ ಮುಂದೂಡಲು ಮಾತ್ರೆ ತಗೋತೀರ? ಹಾಗಿದ್ದರೆ ಈ ವಿಷಯ ತಿಳಿದುಕೊಂಡಿರಿ

0

ಪೀರಿಯಡ್ಸ್‌ ಅಥವಾ ಮುಟ್ಟನ್ನು ಮುಂದೂಡುವ ಸಲುವಾಗಿ ನಮ್ಮಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಹೆಚ್ಚು. ಅದರಲ್ಲೂ ಮುಟ್ಟನ್ನು ಅಶುದ್ಧವೆಂದು ಪರಿಗಣಿಸುವ ಕುಟುಂಬಗಳಲ್ಲಿ ಮದುವೆ, ಹಬ್ಬ, ದೇವಸ್ಥಾನದ ಪ್ರಯಾಣದ ಸಂದರ್ಭಗಳಲ್ಲಿ ಮುಟ್ಟು ಹತ್ತಿರದಲ್ಲಿದ್ದರೆ ಮಾತ್ರೆ ತೆಗೆದುಕೊ‍ಳ್ಳುವುದು ಹೆಚ್ಚು.

ಮುಟ್ಟಿನ ಸಂದರ್ಭದಲ್ಲಿ ಹಲವು ಕಾರಣಗಳಿಗಾಗಿ ಹೆ‍ಣ್ಣು ಮಕ್ಕಳಿಗೆ ಇತರ ದಿನಗಳಂತೆ ಸಹಜವಾಗಿರುವುದು ಕಷ್ಟವಾಗುತ್ತದೆ. ಈ ದಿನಗಳಲ್ಲಿ ಅವರಿಗೆ ವಿಶ್ರಾಂತಿಯೂ ಬೇಕಾಗುತ್ತದೆ. ಈಗಾಗಲೇ ಕೆಲವು ಕಂಪನಿಗಳು ಈ ನಿಟ್ಟಿನಲ್ಲಿ ಯೋಚಿಸಿ ತಮ್ಮ ರಜಾಪಟ್ಟಿಯಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ ಸೌಲಭ್ಯವನ್ನು ನೀಡುತ್ತಿವೆ.

ಆದರೆ ಸಾಂಪ್ರದಾಯಿಕ ಸಮಾಜವು ಹೆಣ್ಣುಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಶುಭ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ನಿಷೇಧ ಹೇರುತ್ತದೆ ಮತ್ತು ಇದೇ ಕಾರಣಕ್ಕಾಗಿ ಮನೆಯಲ್ಲಿ ಏನಾದರೂ ಶುಭ ಕಾರ್ಯಕ್ರಮವಿದ್ದ ಸಂದರ್ಭದಲ್ಲಿ ಮನೆಯ ಹೆಣ್ಣುಮಕ್ಕಳ ಮುಟ್ಟಿನ ಗಡುವು ಹತ್ತಿರವಿದ್ದರೆ ಮಾತ್ರೆ ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತದೆ. ದೇವರು ದಿಂಡರ ಮೇಲಿನ ಭಯದಿಂದ ಕೆಲವು ಹೆಂಗಸರು ಸ್ವತಃ ತಾವೇ ಮಾತ್ರೆ ತೆಗೆದುಕೊಳ್ಳುತ್ತಾರೆ.

ಆದರೆ ಹೀಗೆ ಮಾಡುವುದರಿಂದ ಅವರು ಅದಕ್ಕೆ ತೆರುವ ಬೆಲೆ ಬಹಳ ದೊಡ್ಡದಿರುತ್ತದೆ. ಇದರಿಂದ ಆರೋಗ್ಯ ಹದಗೆಡುತ್ತದೆ. ಸಾಮಾನ್ಯವಾಗಿ ಮುಟ್ಟನ್ನು ಮುಂದೂಡಲು ಶುಗರ್‌ ಪಿಲ್ಸ್ ಮತ್ತು ಪ್ರೊಜೆಸ್ಟಿನ್ ಔಷಧಿಗಳನ್ನು ಬಳಸುತ್ತಾರೆ.

ಇವುಗಳ ಬಳಕೆಯಿಂದ ಹಾರ್ಮೋನ್ ಅಸಮತೋಲನ ಉಂಟಾಗುವ ಸಾಧ್ಯತೆಯಿರುತ್ತದೆ. ಹೆ‍ಣ್ಣುಮಕ್ಕಳ ನಿದ್ರೆ, ಲೈಂಗಿಕ ಸಾಮರ್ಥ್ಯ, ಭಾವನೆಗಳು, ಆಲೋಚನೆಗಳು ಎಲ್ಲವೂ ಮುಟ್ಟನ್ನು ಅವಲಂಬಿಸಿರುತ್ತದೆ. ಈ ಮಾತ್ರೆಗಳು ವಾಕರಿಕೆ, ತಲೆನೋವು, ಎದೆನೋವು, ಎದೆ ಊದಿಕೊ‍ಳ್ಳುವುದು, ಮುಟ್ಟಿನ ರಕ್ತಸ್ರಾವದ ಮಾದರಿಗಳಲ್ಲಿನ ಬದಲಾವಣೆಗಳಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

ಮುಂದುವರೆದು ಇದರಿಂದ ಮುಂದಿನ ದಿನಗಳಲ್ಲಿ ಪೀರಿಯಡ್ಸ್ ಅನಿಯಮಿತವಾಗಬಹುದು. ಹೀಗಾಗಿ ದೇವರು ಇತ್ಯಾದಿ ನಂಬಿಕೆಯ ಹೆಸರಿನಲ್ಲಿ ಇಂತಹ ಮಾತ್ರೆಗಳ ಮೊರೆಹೋಗಿ ನಿಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಮುಟ್ಟೆನ್ನುವುದು ಕೇವಲ ಒಂದು ನೈಸರ್ಗಿಕ ಪ್ರಕ್ರಿಯೆ. ಅದು ಅಶುದ್ಧವಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಹಾಗೂ ನೈರ್ಮಲ್ಯದ ಕಡೆ ಗಮನ ಕೊಡಿ.

You cannot copy content of this page

Exit mobile version