Thursday, May 2, 2024

ಸತ್ಯ | ನ್ಯಾಯ |ಧರ್ಮ

ಶಾಸಕ ರೇಣುಕಾಚಾರ್ಯ ಕುಟುಂಬಕ್ಕೆ ಸಿಎಂ ಸಾಂತ್ವನ

ಹೊನ್ನಾಳಿ, ದಾವಣಗೆರೆ: ಇಂದು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಕುರಿತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದು,  ಸಂಪೂರ್ಣ ತನಿಖೆಯಾಗುವವರೆಗೂ, ಕಾರಣ ನಿಖರವಾಗಿ ಪತ್ತೆಯಾಗುವವರೆಗೆ ಯಾವುದೇ  ತೀರ್ಮಾನಕ್ಕೆ ಬರುವುದು ಬೇಡ ಎಂದು ಕುಟುಂಬದವರಿಗೆ ಸಾಂತ್ವನ ಸೂಚಿಸಿದರು.

ʼಚಂದ್ರು ಸಾವು ನಮ್ಮೆಲ್ಲರಿಗೂ ಕಾಡುತ್ತಿದೆ. ಇಲ್ಲಿಗೆ ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ನಾನೊಬ್ಬ ಸಹೋದರನಾಗಿ ಬಂದಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.   ಎರಡು ರೀತಿಯ ಸಾಧ್ಯಾಸಾಧ್ಯತೆಗಳಿವೆ. ಚಂದ್ರು  ಹಿನ್ನೆಲೆ ಗಮನಿಸಿದರೆ ಕೊಲೆಯಾಗಿರುವ ಸಂಭವವಿರಬಹುದು ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಕಾರಿನ ಸ್ಥಿತಿ ನೋಡಿದರೆ ಅಪಘಾತವಾಗಿರಬಹುದುದೆಂಬ ಸಾಧ್ಯತೆಯೂ ಇದೆ. ಯಾವುದನ್ನೂ ನಾವು ತೆಗೆದುಹಾಕುವಂತಿಲ್ಲ. ಎರಡೂ ಆಯಾಮದಲ್ಲಿ ತನಿಖೆ  ಮಾಡಲು ಸೂಚಿಸಲಾಗಿದೆʼ ಎಂದು ಮಾತನಾಡಿದರು.

ʼಸಾಕ್ಷ್ಯಾಧಾರಗಳು ಬಹಳ ಮುಖ್ಯ. ಚಂದ್ರು ಹಿಂದಿನ ಸೀಟಿಗೆ ಯಾಕೆ ಬಂದ ಎನ್ನುವ ಪ್ರಶ್ನೆಯಿದೆ. ಅವನ ತಲೆಯಲ್ಲಿ ಕೂದಲು ಹೋಗಿರುವುದು, ಕಾರಿನ ಮುಂದಿನ ಗಾಜು ಒಡೆದಿದೆ, ಹಿಂದಿನ ಗಾಜಿಗೆ ಏನೂ ಆಗದಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಮಾನ್ಯರಿಗೆ ಕಾಡುವ ಪ್ರಶ್ನೆಗಳು. ಆದರೆ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆ ವರದಿ ಬರಬೇಕು. ಅದಕ್ಕೆ ಬೆಂಬಲವಾಗಿ ಎಫ್. ಎಸ್.ಎಲ್ ವರದಿಯೂ ಮುಖ್ಯ. ಅಲ್ಲಿನ ಪದಾರ್ಥಗಳನ್ನು ಆಯ್ಕೆ ಮಾಡಿ ತನಿಖೆ ಮಾಡುತ್ತಾರೆ. ದೇಹದ ನೀರು, ಕಾಲುವೆ ನೀರು ಇವುಗಳ ವರದಿ ಅಗತ್ಯ. ಅಪರಾಧ ಹೇಗಾಗಿರಬಹುದೆಂಬ ಮರುಸೃಷ್ಟಿ ಮಾಡಿ ಪರಿಣಿತರು ನೋಡುತ್ತಾರೆ. ಈ ಮೂರು ತನಿಖೆ ಆದ ನಂತರ ಮುಂದಿನ ತನಿಖೆಯ ಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪ್ರತ್ಯೇಕ ತನಿಖಾ ತಂಡದ ಅಗತ್ಯತೆಯ ಬಗ್ಗೆ ತೀರ್ಮಾನಿಸಲಾಗುವುದುʼ ಎಂದು ಹೇಳಿದರು.

ʼಚಂದ್ರಶೇಖರ್ ಅಗಲಿರುವುದು ಅವರ ಪೋಷಕರಿಗೆ ಭರಿಸಲಾಗದ ದುಃಖವಾಗಿದೆ. ಚಂದ್ರು ಅವರನ್ನು ಶಾಸಕ ರೇಣುಕಾಚಾರ್ಯ ತುಂಬಾ ಹಚ್ಚಿಕೊಂಡಿದ್ದರು. ಸಿವಿಲ್ ಇಂಜಿನಿಯರ್ ಆಗಿಯೂ ಕೂಡ  ತಮ್ಮ ದೊಡ್ಡಪ್ಪನಿಗೆ ಸಹಾಯವಾಗಲು ಬಡವರ ಕಣ್ಣೀರು ಒರೆಸುತ್ತಾ, ಇಲ್ಲದವರಿಗೆ ಸಹಾಯ ಮಾಡುತ್ತಾ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾ ಜನಪ್ರಿಯನಾಗಿದ್ದ. ರೇಣುಕಾಚಾರ್ಯರ ಅರ್ಧ ಭಾರವನ್ನು ಅವನೇ ಹೊತ್ತಿದ್ದ. ಈ ರೀತಿ ಸಾವಾಗುತ್ತದೆ ಎಂದು ಯಾರೂ ಕನಸು ಮನಸಿನಲ್ಲಿ ನೆನಸಿರಲಿಲ್ಲ. ರೇಣುಕಾಚಾರ್ಯ ವರಿಗೆ ಆಘಾತವಾಗಿದೆ. ದೊಡ್ಡ ಯಕ್ಷಪ್ರಶ್ನೆಯಾಗಿ ಈ ಸಾವು ನಮ್ಮೆಲ್ಲರನ್ನು ಕಾಡುತ್ತಿದೆ.  ರೇಣುಕಾಚಾರ್ಯ ಸಹೋದರ ಇದ್ದಂತೆ. ಅವರ ಸಂಕಟ  ನಮ್ಮ ಸಂಕಟ ಕೂಡʼ ಎಂದು ಮಾತನಾಡಿದರು.

Related Articles

ಇತ್ತೀಚಿನ ಸುದ್ದಿಗಳು