Home ಅಂಕಣ ಮಾತು, ಮೌನ ಮತ್ತು ಮಾಯಾ ಏಂಜೆಲೋ

ಮಾತು, ಮೌನ ಮತ್ತು ಮಾಯಾ ಏಂಜೆಲೋ

0

“..ತನ್ನ ಎಳೆಯ ವಯಸ್ಸಿನಲ್ಲೇ ತಾಯಿಯ ಪ್ರಿಯಕರ ಮಿಸ್ಟರ್ ಫ್ರೀಮನ್ ನಿಂದ ಬರ್ಬರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಏಂಜೆಲೋ ಐದು ವರುಷ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಳು..” ಲೇಖಕರಾದ ಹರೀಶ್ ಗಂಗಾಧರ್ ಅವರ ಬರಹದಲ್ಲಿ

ಪದಗಳು ಮುಖ್ಯ.
ಪದಗಳು ನಮ್ಮನ್ನು ಘಾಸಿಗೊಳಿಸಬಹುದು. ಪದಗಳು ನಮ್ಮನ್ನು ಗುಣಪಡಿಸಿ ಚೇತರಿಕೆಗೆ ಕಾರಣವಾಗಬಹುದು. ಪದಗಳು ಹಿತ, ಮುದ ನೀಡಬಹುದು.
ಕೆಲವೊಮ್ಮೆ ಮಾತು ಹೊರಡುವುದಿಲ್ಲ, ಅದು ಹಾಗೆಯೇ.
ಘಾಸಿಗೊಂಡ ಹೃದಯದ ಭಾರಕ್ಕೆ ನಾಲಿಗೆ ಹೊರಳುವುದಿಲ್ಲ. ಮನಸಿನಲ್ಲಿ ಎದ್ದ ಮಾರುತಕ್ಕೂ ಬಾಯಿಂದ ಬಾರದ ಮಾತಿಗೂ ಮೈಲಿ ದೂರ.
ಒಮ್ಮೊಮ್ಮೆ ಹಾ… ಹುಂ… ಎಂಬ ಏಕಾಕ್ಷರ ಹೊರಬೀಳಬಹುದು.
ಒಮ್ಮೊಮ್ಮೆ ನಾ ತಲೆಯಾಡಿಸಬಹುದು, ಗೊಣಗಬಹುದು. ಆದರೆ ಎಲ್ಲವೂ ನಿಧಾನ ಗತಿಯಲ್ಲೇ ನಡೆಯುತ್ತದೆ. ತಳ ಕಾಣದ ಕಡಲಲ್ಲಿ ಕಾಣೆಯಾದ ನಾ ಮುಳುಗುವ ಹಾಗೆ.

ತೆರದ ಮನಸ್ಸಿನಿಂದ ಉತ್ಸಾಹದಿಂದ ಮಾತುನಾಡುವುದೆಂದರೆ ಜೀವನೋತ್ಸಾಹ ಇರುವುದೆಂದೇ ಅರ್ಥ. ಬದುಕು ಭಾರವಾದಂತೆ ಮಾತು ಮಾಯಾವಾಗುತ್ತವೆ. ಬದುಕು, ಮಾತು ಎರಡೂ ಬೇಡ ಅನಿಸುತ್ತೆ. ಮಾತು ಮತ್ತು ಬದುಕಿನ ಬೆಸುಗೆ ಬೆರಗುಗೊಳಿಸುವಂತದ್ದು.

ಕಾಲೇಜು ದಿನಗಳಲ್ಲಿ ಮಾಯಾ ಏಂಜೆಲೋ ಬರೆದ I Know Why the Caged Bird Sings ಓದಿದ ನೆನಪು-

ತನ್ನ ಎಳೆಯ ವಯಸ್ಸಿನಲ್ಲೇ ತಾಯಿಯ ಪ್ರಿಯಕರ ಮಿಸ್ಟರ್ ಫ್ರೀಮನ್ ನಿಂದ ಬರ್ಬರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಏಂಜೆಲೋ ಐದು ವರುಷ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಳು. ದೌರ್ಜನ್ಯದ ವಿಷಯ ತಿಳಿದ ಏಂಜೆಲೋ ಚಿಕ್ಕಪ್ಪಂದಿರು ಮಿಸ್ಟರ್ ಫ್ರೀಮನ್ ನನ್ನ ಹತ್ಯೆಗೈದ ನಂತರವಂತೂ, ಪಾಪದ ಬೇಗೆಯಲ್ಲಿ ಬೆಂದ ಏಂಜೆಲೋ ಸಂಪೂರ್ಣವಾಗಿ ಮೌನಕ್ಕೆ ಶರಣಳಾದಳು. ಆದರೆ ಸೂಕ್ತ ಸಮಯಕ್ಕೆ ಸಹಾಯವನ್ನು ಹೊತ್ತು ತಂದ ಟೀಚರ್ ಬರ್ತಾ ಫ್ಲವರ್ಸ್, ಏಂಜೆಲೋಗೆ ಜಗತ್ತಿನ ಶ್ರೇಷ್ಠ ಬರಹಗಾರರನ್ನು ಪರಿಚಯಿಸಿದಳು. ಏಂಜೆಲೋ ಮುಂದೆ ಎಡ್ಗರ್ ಆಲೆನ್ ಪೋ, ಚಾರ್ಲ್ಸ್ ಡಿಕನ್ಸ್, ಷೇಕ್ಸ್ಪಿಯರ್, ಜಾರ್ಜಿಯಾ ಡಗ್ಲಾಸ್ ಜಾನ್ಸನ್, ಫ್ರಾನ್ಸೆಸ್ ಹಾರ್ಪರ್ ರನ್ನು ಓದಿದಳು. ನಿಧಾನವಾಗಿಯಾದರು ಸರಿ ಖಚಿತವಾಗಿ ಕಳೆದುಕೊಂಡಿದ್ದ ಅವಳ ದನಿಯನ್ನು ಮರುಪಡೆದುಕೊಂಡಳು. ಹಾಗೆ ಪಡೆದ ದನಿಯನ್ನು ಮತ್ತೆಂದೂ ಕಳೆದುಕೊಳ್ಳಲಿಲ್ಲ. ಬಾಲ್ಯದಲ್ಲೇ ಮೌನಕ್ಕೆ ಶರಣಾಗಿದ್ದ ಹುಡುಗಿ 1960 ರ ದಶಕದಲ್ಲಿ ನಡೆದ ಬರಿಯ ನಾಗರೀಕ ಹಕ್ಕು ಹೋರಾಟದ (Civil Rights Movement) ದನಿಯಾಗದೆ, ವರ್ಣಬೇಧದ ಕ್ರೌರ್ಯವನ್ನು ಅನುಭವಿಸಿದ ಕೋಟ್ಯಂತರ ದಮನಿತರ ದನಿಯಾದಳು. ಅವಳು ಬರೆದ Still I Rise ಕವಿತೆ ಯಾರಿಗೆ ತಾನೇ ಸ್ಪೂರ್ತಿಯಾಗಿಲ್ಲ.

ಭಾಷೆ ನಮಗೆ ನಮ್ಮ ಅನುಭವ ಹಂಚಿಕೊಳ್ಳುವ ಶಕ್ತಿ ನೀಡುತ್ತದೆ. ಜಗತ್ತಿನ ಜೊತೆಗೆ ಬೆಸುಗೆ ಕಟ್ಟಿಕೊಂಡು ನಮ್ಮ ಬದುಕನ್ನಷ್ಟೇ ಅಲ್ಲ ಜನರ ಬದುಕನ್ನೇ ಬದಲಾಯಿಸುತ್ತದೆ.
“ಹೇಳಿಕೊಳ್ಳಲಾಗದ ಕಥೆಗಳನ್ನ ಒಡಲಲ್ಲಿ ಇಟ್ಟುಕೊಂಡು ಬದುಕುವಷ್ಟು ಯಾತನಾಮಯವಾದುದ್ದು ಜಗತ್ತಿನಲ್ಲಿ ಬೇರೇನೂ ಇಲ್ಲ. ಮೌನ ಮರಣಕ್ಕಿಂತ ಕ್ರೂರ. ಮೌನವೇ ನೋವು. ಮಾತು ಬಾರದೆ ಇದ್ದಾಗ ಬರೆದುಬಿಡಬೇಕು. ಬರೆಯಲಾಗದೆ ಇದ್ದಾಗ ಓದಿಬಿಡಿ. ಓದಲೂ ಕೂಡ ಆಗದಿದ್ದಾಗ ಆಲಿಸಬೇಕು. ಪದಗಳು ಹೆಮ್ಮರದ ಬೀಜಗಳು. ಭಾಷೆ ಬದುಕುವ ಚೇತನ ಕಂಡುಕೊಳ್ಳುವ ಹಾದಿ ಮತ್ತು ನಮ್ಮೆಲ್ಲಾ ನೋವುಗಳನ್ನು ವಾಸಿ ಮಾಡುವ ಮುಲಾಮು- ಮಾಯಾ ಏಂಜೆಲೋ.

Get out and meet people, talk, express. Silence is pain.

You cannot copy content of this page

Exit mobile version