ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಅಥವಾ ಚುನಾವಣಾ ಅಫಿಡವಿಟ್ಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದರೆ ಅಥವಾ ಮಹತ್ವದ ವಿವರಗಳನ್ನು ಮರೆಮಾಚಿದರೆ, ಅವರ ವಿರುದ್ಧ ಮತದಾರರು ಸೇರಿದಂತೆ ಯಾವುದೇ ಸಾಮಾನ್ಯ ನಾಗರಿಕರು ನೇರವಾಗಿ ಖಾಸಗಿ ಕ್ರಿಮಿನಲ್ ದೂರನ್ನು (Private Criminal Complaint) ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 125A ಅಡಿಯಲ್ಲಿ ಬರುವ ಅಪರಾಧಗಳಿಗೆ ಸಂಬಂಧಿಸಿದಂತೆ ದೂರು ನೀಡಲು ಕೇವಲ ಚುನಾವಣಾ ಆಯೋಗ ಅಥವಾ ಸರ್ಕಾರಿ ಅಧಿಕಾರಿಗಳೇ ಬರಬೇಕೆಂಬ ನಿಯಮವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ನ್ಯಾಯಪೀಠವು ಸೋಮವಾರ ಈ ತೀರ್ಪನ್ನು ಪ್ರಕಟಿಸಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 195(1) ರ ಪ್ರಕಾರ ಕೆಲವು ನಿರ್ದಿಷ್ಟ ಅಪರಾಧಗಳಿಗೆ ಸರ್ಕಾರಿ ಅಧಿಕಾರಿಯ ದೂರು ಅಗತ್ಯವಿದ್ದರೂ, ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125A ಆ ನಿರ್ಬಂಧಿತ ಪಟ್ಟಿಯಲ್ಲಿ ಬರುವುದಿಲ್ಲ.
ಈ ಸೆಕ್ಷನ್ ಅನ್ನು 2002 ರಲ್ಲಿ ಪರಿಚಯಿಸಲಾಗಿದ್ದು, 2006 ರಲ್ಲಿ CrPC ಸೆಕ್ಷನ್ 195 ಕ್ಕೆ ತಿದ್ದುಪಡಿ ತಂದಿದ್ದರೂ ಸಹ ಇದನ್ನು ಆ ಪಟ್ಟಿಗೆ ಸೇರಿಸದಿರುವುದು ಉದ್ದೇಶಪೂರ್ವಕ ನಿರ್ಧಾರವಾಗಿದೆ ಎಂದು ನ್ಯಾಯಪೀಠ ವಿಶ್ಲೇಷಿಸಿದೆ. ಅಲ್ಲದೆ, ಚುನಾವಣಾ ಆಯೋಗ ಹೊರಡಿಸುವ ಆಡಳಿತಾತ್ಮಕ ಮಾರ್ಗಸೂಚಿಗಳು ಅಥವಾ ಪ್ರಕಟಣೆಗಳು ಕಾನೂನಿನ ನಿಬಂಧನೆಗಳ ನ್ಯಾಯಾಂಗ ವ್ಯಾಖ್ಯಾನವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಕರ್ನಾಟಕದ ಬೀದರ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು 2023ರ ವಿಧಾನಸಭಾ ಚುನಾವಣೆಯ ನಾಮಪತ್ರ ಅಫಿಡವಿಟ್ನಲ್ಲಿ ತಮ್ಮ ನಿವಾಸದ ವಿಳಾಸದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಕುಮಾರ್ ಮದ್ಕಿ ಎಂಬುವವರು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ CrPC ಸೆಕ್ಷನ್ 200 ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಆದರೆ, ಇಂತಹ ದೂರುಗಳನ್ನು ವೈಯಕ್ತಿಕವಾಗಿ ದಾಖಲಿಸಲು ಬರುವುದಿಲ್ಲ, ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರ ನೀಡಬೇಕು ಎಂದು ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಖಾಸಗಿ ದೂರು ಸಲ್ಲಿಸಲು ಅವಕಾಶವಿದೆ ಎಂದು ಕಾನೂನುಬದ್ಧ ಹಕ್ಕನ್ನು ಎತ್ತಿಹಿಡಿದ ನ್ಯಾಯಾಲಯ, ಪ್ರಸ್ತುತ ಪ್ರಕರಣದಲ್ಲಿ ದಾಖಲೆಗಳ ಪ್ರಕಾರ ಆರೋಪ ಸಾಬೀತುಪಡಿಸಲು ಸೂಕ್ತ ಆಧಾರಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
