ದೆಹಲಿ: 2001ರಲ್ಲಿ ನಡೆದ ವ್ಯಾಪಾರಿ ಜಯಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್‌ಗೆ (Chhota Rajan) ಮುಂಬೈ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ರದ್ದುಗೊಳಿಸಿದೆ.
ಹೋಟೆಲ್ ಉದ್ಯಮಿ ಜಯಶೆಟ್ಟಿ ಅವರ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷದ ಮೇ ತಿಂಗಳಲ್ಲಿ ವಿಶೇಷ ನ್ಯಾಯಾಲಯವು ಛೋಟಾ ರಾಜನ್‌ನನ್ನು ದೋಷಿ ಎಂದು ನಿರ್ಧರಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಛೋಟಾ ರಾಜನ್ ಮುಂಬೈ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 2024ರ ಅಕ್ಟೋಬರ್ 23ರಂದು ಮುಂಬೈ ಹೈಕೋರ್ಟ್ ಛೋಟಾ ರಾಜನ್‌ಗೆ ವಿಧಿಸಿದ್ದ ಶಿಕ್ಷೆಯನ್ನು ತಡೆಹಿಡಿದು (suspend) ಜಾಮೀನು ಮಂಜೂರು ಮಾಡಿತ್ತು.
ಸುಪ್ರೀಂ ಕೋರ್ಟ್ ತೀರ್ಪು
ಆದರೆ, ಈ ನಿರ್ಧಾರವನ್ನು ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠವು ಇದರ ವಿಚಾರಣೆ ನಡೆಸಿತು.
“ನಾಲ್ಕು ಪ್ರಕರಣಗಳಲ್ಲಿ ದೋಷಿಯಾಗಿರುವ ವ್ಯಕ್ತಿಗೆ ವಿಧಿಸಲಾದ ಜೈಲು ಶಿಕ್ಷೆಯನ್ನು ಯಾವ ರೀತಿಯಲ್ಲಿ ರದ್ದುಪಡಿಸಲಾಗುತ್ತದೆ?” ಎಂದು ಪೀಠವು ಈ ಸಂದರ್ಭದಲ್ಲಿ ಪ್ರಶ್ನಿಸಿತು. ತದನಂತರ, ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿತು. ಛೋಟಾ ರಾಜನ್ ಪರ ವಕೀಲರು, ರಾಜನ್ ವಿರುದ್ಧ ಇರುವ 71 ಪ್ರಕರಣಗಳಲ್ಲಿ 47 ಪ್ರಕರಣಗಳಿಗೆ ಸಿಬಿಐ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು. ಆದರೆ, ಅವರ ವಾದವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿತು.
ಇತರ ಪ್ರಕರಣಗಳಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆಗೆ ಒಳಗಾಗಿರುವುದರಿಂದ, ಅವನು (ಛೋಟಾ ರಾಜನ್) ಮತ್ತೆ ಶರಣಾಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ
ಪ್ರಾಸಿಕ್ಯೂಷನ್ ವಾದದ ಪ್ರಕಾರ, ದಕ್ಷಿಣ ಮುಂಬೈನ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕರಾದ ಜಯಶೆಟ್ಟಿಗೆ ಛೋಟಾ ರಾಜನ್ ತಂಡದಿಂದ ಬಲವಂತದ ವಸೂಲಿ ಬೆದರಿಕೆಗಳು ಬಂದಿದ್ದವು. ಶೆಟ್ಟಿಯವರಿಗೆ ಪೊಲೀಸ್ ರಕ್ಷಣೆ ಒದಗಿಸಿದ್ದರೂ, ಅವರ ಕೊಲೆಗೆ ಎರಡು ತಿಂಗಳ ಮೊದಲು ಭದ್ರತೆಯನ್ನು ಹಿಂಪಡೆಯಲಾಗಿತ್ತು.
50 ಸಾವಿರ ರೂಪಾಯಿ ನೀಡಬೇಕೆಂಬ ಛೋಟಾ ರಾಜನ್ ಗ್ಯಾಂಗ್‌ನ ಬೇಡಿಕೆಯನ್ನು ನಿರಾಕರಿಸಿದ ಕಾರಣ, 2001ರ ಮೇ 4ರಂದು ಜಯಶೆಟ್ಟಿ ಅವರನ್ನು ಅವರ ಕಚೇರಿ ಹೊರಗೆ ಇಬ್ಬರು ತಂಡದ ಸದಸ್ಯರು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದ ವಿಚಾರಣೆಯ ನಂತರ, 2024ರ ಮೇ ತಿಂಗಳಲ್ಲಿ ಮುಂಬೈನ ವಿಶೇಷ ಎಂಸಿಒಸಿಎ (MCOCA) ನ್ಯಾಯಾಲಯವು ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹1,00,000 ದಂಡ ವಿಧಿಸಿತ್ತು.