ಹೊಸದೆಹಲಿ: ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಕ್ರಮಗಳನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ಮನೆಯನ್ನು ಬುಲ್ಡೋಜರ್‌ಗಳಿಂದ ಹೇಗೆ ಕೆಡವಬಹುದು ಎಂದು ನ್ಯಾಯಾಲಯ ಕೇಳಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ದೇಶಾದ್ಯಂತ ನಡೆಯುತ್ತಿರುವ ಬುಲ್ಡೋಜರ್ ಕ್ರಮವನ್ನು ನಿಲ್ಲಿಸುವಂತೆ ಮನವಿಯಲ್ಲಿ ಕೋರಿದ್ದಾರೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರಿಸಿದರು.
ಒಬ್ಬ ವ್ಯಕ್ತಿಯ ಮೇಲೆ ಅಪರಾಧದ ಆರೋಪ ಇದ್ದ ಮಾತ್ರಕ್ಕೆ ಆತನ ಸ್ಥಿರಾಸ್ತಿಯನ್ನು ಕೆಡವುವ ಅಧಿಕಾರ ಯಾರಿಗೂ ಇರುವುದಿಲ್ಲ ಎಂದು ಅವರು ಹೇಳಿದರು. ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ಅದನ್ನು ಕೆಡವಲಾಗುವುದು ಎಂದು ತುಷಾರ್ ಹೇಳಿದ್ದಾರೆ.
ಆಗ ಇಂತಹ ಸಂದರ್ಭಗಳಿಗೆ ನಾವು ಮಾರ್ಗಸೂಚಿಗಳನ್ನು ನೀಡುತ್ತೇವೆ, ಆರೋಪಿ ಅಥವಾ ಅಪರಾಧಿ ಎನ್ನುವ ಒಂದೇ ಕಾರಣಕ್ಕೆ ನೀವು ಹೇಗೆ ಅವರ ಮನೆಯನ್ನು ಬೀಳಿಸುತ್ತೀರಿ ಎಂದು ನ್ಯಾಯಮೂರ್ತಿ ಗವಾಯಿ ಕೇಳಿದರು.
ಇಂತಹ ಘಟನೆಗಳು ನಡೆಯದಂತೆ ತಡೆಯಲು ಏಕೆ ಸೂಚನೆ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಪ್ರಶ್ನಿಸಿದರು. ಪೂರ್ವಭಾವಿ ನೋಟಿಸ್ ನೀಡಿ, ಉತ್ತರ ನೀಡಲು ಕಾಲಾವಕಾಶ ನೀಡಬೇಕು, ಪ್ರಕರಣವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ನೀಡಬೇಕು, ನಂತರ ನೆಲಸಮ ಪ್ರಕ್ರಿಯೆಗೆ ಮುಂದಾಗಬೇಕು ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.
ಅಕ್ರಮ ನಿರ್ಮಾಣಗಳನ್ನು ತಮ್ಮ ಪೀಠ ಬೆಂಬಲಿಸುವುದಿಲ್ಲ ಎಂದ ಅವರು, ಆದರೆ ಅಕ್ರಮ ಕಟ್ಟಡಗಳನ್ನು ಕೆಡವಲು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.