ದೆಹಲಿ: ಪೂಜಾ ಸ್ಥಳಗಳ ಕಾಯ್ದೆ-1991ರ ಪರಿಣಾಮಕಾರಿ ಅನುಷ್ಠಾನಕ್ಕೆ ಕೋರಿ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಈ ವಿಷಯವನ್ನು ಇತರ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಬೇಕು ಎಂದು ಗುರುವಾರ ಹೇಳಿದೆ. ಈ ಅರ್ಜಿಗಳ ವಿಚಾರಣೆಯನ್ನು ಮುಂದಿನ ತಿಂಗಳು 17ರಂದು ನಡೆಸಲಾಗುವುದು ಎಂದು ತಿಳಿಸಿದೆ.
ಆಗಸ್ಟ್ 15, 1947ರಂತೆ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಕಾಪಾಡಿಕೊಳ್ಳಬೇಕು ಮತ್ತು ಅವುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು 1991ರ ಕಾಯಿದೆ ಹೇಳುತ್ತದೆ. ಇತ್ತೀಚೆಗೆ ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕಾಯಿದೆಯ ಹಲವು ನಿಬಂಧನೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ತಮ್ಮ ಅರ್ಜಿಯಲ್ಲಿ, ಹಿಂದೂ ಕಡೆಯಿಂದ ಸಲ್ಲಿಸಲಾದ ಅರ್ಜಿಗಳ ಆಧಾರದ ಮೇಲೆ ನ್ಯಾಯಾಲಯಗಳು ಅನೇಕ ಮಸೀದಿಗಳಲ್ಲಿ ಸಮೀಕ್ಷೆಗೆ ಆದೇಶಿಸಿರುವುದನ್ನು ಓವೈಸಿ ಉಲ್ಲೇಖಿಸಿದ್ದಾರೆ ಮತ್ತು ಪೂಜಾ ಸ್ಥಳಗಳ ಕಾಯಿದೆಯ ಸರಿಯಾದ ಅನುಷ್ಠಾನಕ್ಕಾಗಿ ಆದೇಶಗಳನ್ನು ಹೊರಡಿಸುವಂತೆ ಮನವಿ ಮಾಡಿದ್ದಾರೆ.