ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 80 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲೋಕಸಭೆಯು ಸೋಮವಾರ ಸ್ವಾತಂತ್ರ್ಯ ಚಳವಳಿಯ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ಈ ಕುರಿತು ಸಭೆಯಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, 80 ವರ್ಷಗಳ ಹಿಂದೆ ಇದೇ ದಿನದಂದು, ಮಹಾತ್ಮ ಗಾಂಧಿಯವರು ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯಲು ಕಾರಣವಾದ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು. “ಇದು ಭಾರತಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ತಿರುವು” ಎಂದು ಅವರು ಹೇಳಿದರು.
ಹುತಾತ್ಮ ಯೋಧರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಅವರ ತ್ಯಾಗ ಬಲಿದಾನಗಳು ಪ್ರತಿಯೊಬ್ಬರಿಗೂ ಸಮರ್ಪಣಾ ಭಾವದಿಂದ ದೇಶ ಸೇವೆ ಮಾಡಲು ಪ್ರೇರಣೆ ನೀಡುತ್ತವೆ ಎಂದರು. ಆಗಸ್ಟ್ 8, 1942 ರಂದು ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯು ಬ್ರಿಟಿಷರ ನಿರ್ಗಮನಕ್ಕೆ ಕಾರಣವಾಯಿತು. ಈ ಚಳುವಳಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಪ್ರಾರಂಭಿಸಲಾಯಿತು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲು ಗಾಂಧಿಯವರ ಸ್ಪಷ್ಟವಾದ ಕರೆಯನ್ನು ಒಳಗೊಂಡಿತ್ತು. ಗಾಂಧಿಯವರು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಿಂದ ಮಹತ್ವದ ಭಾಷಣ ಮಾಡಿದರು. ಅಲ್ಲಿ ಅವರು “ಮಾಡು ಇಲ್ಲವೆ ಮಡಿ” ಎಂಬ ಪ್ರಸಿದ್ಧ ಕರೆ ನೀಡಿದರು ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುಯತ್ತಿರುವ ಕಾಮನ್ ವೆಲ್ತ್ ಗೇಮ್ ಬಗ್ಗೆ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದ ಭಾರತೀಯ ತಂಡವನ್ನು ಅಭಿನಂದಿಸಿದರು. ಭಾರತ ಇಲ್ಲಿಯವರೆಗೆ 18 ಚಿನ್ನ, 15 ಬೆಳ್ಳಿ ಮತ್ತು 22 ಕಂಚು ಸೇರಿ - 55 ಪದಕಗಳನ್ನು ಪಡೆದಿದೆ ಇದು ಭಾರತೀಯರಿಗೆ ಖುಷಿ ಮತ್ತು ಹೆಮ್ಮಯ ವಿಚಾರ. ಇಂತಹ ಪ್ರಭಾವಶಾಲಿ ಪ್ರಶಸ್ತಿಗಳು ಯುವ ಪೀಳಿಗೆಗೆ ಉತ್ತೇಜನ ನೀಡುತ್ತದೆ ಎಂದು ಶ್ರೀ ಬಿರ್ಲಾ ಹೇಳಿದರು.