ತುಮಕೂರು : ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲವೆಂದು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಕೊಳ್ಳದೆ ನಿರ್ಲಕ್ಷ್ಯ ವಹಿಸಿ ತಾಯಿ ಮತ್ತು ಅವಳಿ ಶಿಶುಗಳ ಸಾವಿಗೆ ಕಾರಣರಾಗಿರುವ ಜಿಲ್ಲಾಸ್ಪತ್ರೆಯ ಡಾ.ಉಷಾ ಮತ್ತು ಕರ್ತವ್ಯದಲ್ಲಿದ್ದ ನರ್ಸ್ ಗಳಾದ ಯಶೋಧ, ಸವಿತ, ವಿದ್ಯಾಭಾರತಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪಿಯುಸಿಎಲ್ ಆಗ್ರಹಿಸಿದೆ.
ಈ ಆರೋಪಿಗಳನ್ನು ಅಮಾನತು ಮಾಡಿರುವುದು ತಕ್ಷಣದ ಕ್ರಮವಾದರೂ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಉನ್ನತ ಮಟ್ಟದ ತನಿಖೆಯನ್ನು ತುರ್ತಾಗಿ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಿಯುಸಿಎಲ್ ತುಮಕೂರು, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು. ಘಟನೆ ನಡೆದ ಭಾರತಿನಗರ ಪ್ರದೇಶಕ್ಕೆ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಬುಧವಾರ ಕಸ್ತೂರಿ(30)ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅಕ್ಕಪಕ್ಕದ ಮನೆಯ ಮಹಿಳೆಯರ ಪರವಾಗಿ ತುಮಕೂರು ಕೊಳಗೇರಿ ಸಮಿತಿಯ ಮಹಿಳಾ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾದಾಗ ಕರ್ತವ್ಯನಿರತ ವೈದ್ಯರು ಮತ್ತು ಸಿಬ್ಬಂದಿಗಳು ತಾಯಿ ಕಾರ್ಡ್ ಆಧಾರ್ ಕಾರ್ಡ್ ಇಲ್ಲವೆಂದು ಚಿಕಿತ್ಸೆ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ, ಬೆಂಗಳೂರಿಗೆ ಹೋಗುವಂತೆ ಹೇಳಿ ಗದರಿಸಿ ಆಚೆ ಕಳಿಸಿದ್ದರು. ಈ ಕುರಿತು ಸ್ಲಂ ಸಮಿತಿಯ ಕಾರ್ಯಕರ್ತರಾದ ಸರೋಜಮ್ಮ, ಶಾರದಮ್ಮ, ಗಂಗಮ್ಮ ಭೇಟಿ ನೀಡಿದ ಪಿಯುಸಿಎಲ್ ತಂಡದ ಗಮನಕ್ಕೆ ತಂದಿದ್ದರು.
ಸ್ಥಳೀಯ ಸ್ಲಂ ಸಮಿತಿ ಕಾರ್ಯಕರ್ತರಾದ ಸರೋಜಮ್ಮ ಮಾತನಾಡಿ, ʼನಾನು ಜಿಲ್ಲಾಸ್ಪತ್ರೆಗೆ ಕಸ್ತೂರಿಯವರಿಗೆ ನೋವು ಕಾಣಿಸಿಕೊಂಡಾಗ ಅಕ್ಕಪಕ್ಕದವರ ಸಹಕಾರ ಪಡೆದು ಕಸ್ತೂರಿರವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲು ಪರಿಪರಿಯಾಗಿ ವಿನಂತಿಸಿದೆ. ಆಗ ಅವರಿಗೆ ನಡೆಯಲೂ ಆಗುತ್ತಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ತಾಯಿ ಕಾರ್ಡ್ ಇಲ್ಲದೇ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಗದರಿಸಿ ಈಚೆಗೆ ಕಳಿಸಿದರು. ಆಗಲೇ ಚಿಕಿತ್ಸೆಗೆ ದಾಖಲಿಸಿಕೊಂಡಿದ್ದರೆ ಮೂರು ಜೀವಗಳು ಉಳಿಯುತ್ತಿದ್ದವುʼ ಎಂದು ಕಣ್ಣೀರಿಟ್ಟರು.
ಕಸ್ತೂರಿ ಕಳೆದ ಒಂದೂವರೆ ತಿಂಗಳ ಹಿಂದೆ 7 ವರ್ಷದ ಹೆಣ್ಣು ಮಗುವಿನೊಂದಿಗೆ ಭಾರತಿ ನಗರಕ್ಕೆ ಬಂದ್ದರು. ʼನನ್ನ ಗಂಡ ಆರು ತಿಂಗಳ ಹಿಂದೆ ಸಾವನಪ್ಪಿದ್ದು ಮನೆಯವರ ಹಿಂಸೆಯಿಂದ ಬೆಂಗಳೂರು ಬಿಟ್ಟು ಬಂದಿದ್ದೇನೆ ನನಗೆ ಆಶ್ರಯ ನೀಡಿʼ ಎಂದು ಮಹಿಳಾ ಸಮಿತಿಯನ್ನು ಕೋರಿದ್ದರು. ಅವರ ಮನವಿಯ ಮೇರೆ ಮಹಿಳಾ ಸಮಿತಿಯ ಕಾರ್ಯಕರ್ತರು ತುಂಬು ಗರ್ಭಿಣಿಯನ್ನು ಕಳೆದ ಒಂದೂವರೆ ತಿಂಗಳಿಂದ ಪೋಷಣೆ ಮಾಡಿದ್ದರು.
ತಮಿಳು ಮೂಲದವರಾಗಿರುವ ಕಸ್ತೂರಿಯವರ ವೈಯಕ್ತಿಕ ಮಾಹಿತಿಯನ್ನು ಹೆಚ್ಚಾಗಿ ಸ್ಥಳೀಯರಿಗೆ ನೀಡಿರಲಿಲ್ಲ. ಈ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತರ ಗಮನಕ್ಕೆ ತಂದಾಗ ಆಧಾರ್ ಕಾರ್ಡ್ ನೀಡುವಂತೆ ಕೇಳಿದರು ಆಧಾರ್ ಕಾರ್ಡ್ ಇರಲಿಲ್ಲ ಹಾಗಾಗಿ ಅಕ್ಕಪಕ್ಕದ ಮನೆಯವರೆ ಊಟ ನೀಡಿದ್ದು, ಸ್ಲಂ ಸಮಿತಿಯ ಕವಿತರವರ ಮನೆಯಲ್ಲಿ ತಾತ್ಕಾಲಿಕ ಆಶ್ರಯ ನೀಡಿರುತ್ತಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಯಾವುದೇ ದಾಖಲೆಗಳು ಇಲ್ಲದಿದ್ದರು ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕಾಗಿರುವುದು ಜಿಲ್ಲಾಸ್ಪತ್ರೆಯ ಕರ್ತವ್ಯ. ಆದ್ದರಿಂದ ಸರ್ಕಾರ ಮೂರು ಜೀವಗಳ ಹಾನಿಗೆ ಜವಾಬ್ದಾರಿ ಹೊರಬೇಕು ಎಂದು ಪ್ರೊ.ಕೆ ದೊರೈರಾಜ್ ಹೇಳಿದರು.
ʼಈ ಪ್ರಕರಣವನ್ನು ಬೆಳಕಿಗೆ ತಂದ ತುಮಕೂರು ಸ್ಲಂ ಸಮಿತಿಯ ಮಹಿಳಾ ಕಾರ್ಯಕರ್ತರನ್ನು ಅಭಿನಂಧಿಸುತ್ತೇನೆ. ಎಷ್ಟೋ ಘಟನೆಗಳು ನಡೆದರು ಬೆಳಕಿಗೆ ಬರಲಿಲ್ಲ. ಸರ್ಕಾರ ಕೂಡಲೇ ಮೃತ ಮಹಿಳೆಯ ಸಂಬಂಧಿಗಳ ಮಾಹಿತಿ ಸಂಗ್ರಹಿಸಿ ಮೃತ ದೇಹವನ್ನು ಹಸ್ತಾಂತರಿಸಬೇಕು. 7 ವರ್ಷದ ಹೆಣ್ಣು ಮಗುವಿನ ಶಿಕ್ಷಣ ಮತ್ತು ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ ಅವರು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಸ್ಪಂದನೆ ನೀಡುತ್ತಿವೆ. ಆದರೆ ಸ್ಥಳೀಯರನ್ನು ಬೆದರಿಸುವ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಚಿಕಿತ್ಸೆಗೆ ನಿರ್ಲಕ್ಷ್ಯವಹಿಸುವವರ ವಿರುದ್ಧ ಕ್ರಮಕ್ಕೆ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಬೇಕೆಂದುʼ ಒತ್ತಾಯಿಸಿದರು.
ಸ್ಲಂ ಜನಾಂದೋಲನದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ʼಘಟನೆ ಇಡೀ ಆರೋಗ್ಯ ವ್ಯವಸ್ಥೆ ಬಡವರಿಗೆ ಅದರಲ್ಲೂ ದಾಖಲೆಯಿಲ್ಲದವರಿಗೆ ನಿರಾಕರಿಸಲ್ಪಟ್ಟಿದೆ ಎನ್ನುವುದಕ್ಕೆ ಸಾಕ್ಷಿಕರಿಸಿದೆ. ಸುಪ್ರೀಂ ಕೋರ್ಟ್ ಆಧಾರ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ. ಕಳೆದ 50 ವರ್ಷಗಳಿಂದ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ಯೋಜನೆಯ ಭಾಗವಾಗಿ ಯಾವುದೇ ದಾಖಲೆಗಳಿಲ್ಲದಿದ್ದರೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗುವಿನ ಚಿಕಿತ್ಸೆ ಉಚಿತವಾಗಿ ನೀಡಬೇಕಿದೆ ಎಂದು ಈಗಿನ ಎನ್.ಯು.ಹೆಚ್.ಆರ್.ಎಂ ಮಾನದಂಡಗಳು ಇದನ್ನು ಹೇಳದೆ. ಆದರೆ ಆರೋಗ್ಯ ಇಲಾಖೆ ಇದನ್ನು ಪಾಲಿಸುತ್ತಿಲ್ಲ. ಹಾಗಾಗಿ ಸದರಿ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯಿದೆಯಡಿಯು ಸಹಾ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು. ಸತ್ಯ ಮರೆಮಾಚಲು ಕೆಲವೊಂದು ಕಾಣದ ಕೈಗಳು ಪ್ರಯತ್ನಿಸುತ್ತಿದ್ದು, ಪೋಲಿಸ್ ಇಲಾಖೆ ಇದಕ್ಕೆ ಆಸ್ಪದ ನೀಡದೇ ನೈಜ ವರದಿಯನ್ನು ಉನ್ನತ ಮಟ್ಟದ ತನಿಖಾ ಸಮಿತಿಯ ಮುಂದೆ ಮಂಡಿಸಬೇಕು, ನೆರವಿಗೆ ಬಂದವರ ಮೇಲೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಗಂಭೀರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉನ್ನತ ಮಟ್ಟದ ಸಮಿತಿ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿಗಳು ಆದೇಶಿಸುವಂತೆ ಒತ್ತಾಯಿಸಬೇಕಾಗುತ್ತದೆ. ಪ್ರಸ್ತುತ ಮಾಹಿತಿ ಪ್ರಕಾರ ನೀತಿ ಆಯೋಗದ ಸೂಚನೆ ಮೇಲೆ ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ತಕ್ಷಣ ಕೈಬಿಡಬೇಕು ಇಲ್ಲವಾದಲ್ಲಿ ತುಮಕೂರು ನಾಗರಿಕರು ಪ್ರತಿಭಟಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ನಟರಾಜಪ್ಪ, PUCL ನ ಕಾರ್ಯದರ್ಶಿ ತಿರುಮಲಯ್ಯ, ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ಶಂಕರಯ್ಯ, ಗಣೇಶ್ ಹಾಗೂ ಭಾರತಿನಗರ ಶಾಖಾ ಸಮಿತಿ ಪದಾಧಿಕಾರಿಗಳಾದ ಶಾರದಮ್ಮ, ಗಂಗಾ, ಕೆಂಪಣ್ಣ, ಗಂಗಮ್ಮ ಉಪಸ್ಥಿತರಿದ್ದರು.