
ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಲು ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನಂತರ ಬಿಜೆಪಿ ಮುಖಂಡರು ದಂಡು ದಂಡಾಗಿ ಆರೋಗ್ಯ ವಿಚಾರಿಸುವ ನೆಪದಲ್ಲಿ ದೇವೇಗೌಡರ ಮನೆಗೆ ತೆರಳುತ್ತಿದ್ದಾರೆ.
ಇತ್ತೀಚೆಗೆ ದೇವೇಗೌಡರಿಗೆ ಕಾಲಿನ ಮಂಡಿನೋವು ಕಾಣಿಸಿಕೊಂಡು ನಡೆದಾಡಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ದೇವೇಗೌಡರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಯಡಿಯೂರಪ್ಪ ಕೂಡಾ ದೇವೇಗೌಡರ ಆರೋಗ್ಯ ವಿಚಾರಿಸಲು ತೆರಳಿದ್ದರು.
ಆದರೆ ಇಂದು ವಿಧಾನ ಸಭಾ ಕಲಾಪವನ್ನೂ ಬಿಟ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಅಶೋಕ್ ಮತ್ತು ಸೋಮಣ್ಣ, ಕೆ.ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ್, ಮಾದುಸ್ವಾಮಿ, ಆನಂದ್ ಸಿಂಗ್ ಜೊತೆಗೆ ಪದ್ಮನಾಭನಗರದ ಹೆಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿದ್ದಾರೆ.
ಸದನದಲ್ಲಿ ಅಗತ್ಯ ವಿಚಾರಗಳ ಚರ್ಚೆ, ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ, 40% ಕಮಿಷನ್ ಆರೋಪದಂತಹ ಗಂಭೀರ ಚರ್ಚೆಯನ್ನು ಅರ್ಧಕ್ಕೇ ಬಿಟ್ಟು ಸಿಎಂ ಮತ್ತು ಸಚಿವರ ದಂಡು ದೇವೇಗೌಡರ ಮನೆಗೆ ಮಟಮಟ ಮಧ್ಯಾಹ್ನವೇ ಭೇಟಿ ನೀಡಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗುತ್ತಿದೆ.
ದೇವೇಗೌಡರ ಆರೋಗ್ಯ ವಿಚಾರಿಸಲು ಸದನ ಮುಗಿದ ನಂತರ ಹೋಗಬಹುದಿತ್ತು. ಇಂತಹ ಅಗತ್ಯ ಚರ್ಚೆ ಬದಿಗೊತ್ತಿ ಹೋಗಿರುವುದು ಸರ್ಕಾರದ ಬೇಜವಾಬ್ದಾರಿ ನಡೆ ಮತ್ತು ಪಲಾಯನವಾದಕ್ಕೆ ಸಾಕ್ಷಿ ಎಂಬುದು ಕಾಂಗ್ರೆಸ್ ಮತ್ತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಗಂಭೀರ ಆರೋಪವಾಗಿದೆ.
ಸಧ್ಯ ಸಿದ್ದರಾಮಯ್ಯ ದೇವೇಗೌಡರ ಭೇಟಿಯ ನಂತರ ದೇವೇಗೌಡರ ಮನೆಗೆ ಬಿಜೆಪಿ ನಾಯಕರು ದಂಡು ದಂಡಾಗಿ ಭೇಟಿ ನೀಡುತ್ತಿರುವುದು ಸೌಹಾರ್ದ ಭೇಟಿ ಎಂದರೂ ಸಿದ್ದರಾಮಯ್ಯರನ್ನು ಅನುಸರಿಸಿ ಮುಂದುವರೆಯುತ್ತಿರುವುದು ಹಾಸ್ಯಾಸ್ಪದ. ಅದೂ ಸದನ ನಡೆಯುವ ಸಮಯದಲ್ಲಿ ಸದನದ ಚರ್ಚೆ ಅರ್ಧಕ್ಕೇ ಬಿಟ್ಟು ಹೋಗುವುದು ಎಷ್ಟು ಸರಿ ಎಂಬುದನ್ನು ಬಿಜೆಪಿಯವರೇ ಉತ್ತರಿಸಬೇಕಿದೆ.