Home ಅಂಕಣ ಸಂಸತ್ತಿನ ಪೂರ್ವಸೂರಿಗಳು ಭಾಗ 5 : ಸ್ಪೀಕರ್ ಆಗಿ ಸಮಾಜವಾದಿ ನಾಯಕ ರಬಿ ರೇ ಅವರ...

ಸಂಸತ್ತಿನ ಪೂರ್ವಸೂರಿಗಳು ಭಾಗ 5 : ಸ್ಪೀಕರ್ ಆಗಿ ಸಮಾಜವಾದಿ ನಾಯಕ ರಬಿ ರೇ ಅವರ ಹೆಜ್ಜೆಗುರುತುಗಳು ಗಮನಾರ್ಹ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಐದನೇ ಲೇಖನ

ರಾಷ್ಟ್ರೀಯ ರಾಜಕಾರಣದಲ್ಲಿ ರೇ ಅವರೊಬ್ಬ ಅತ್ಯುನ್ನತ ವ್ಯಕ್ತಿತ್ವವಾಗಿದ್ದರು. ತನ್ನ ಕೊನೆಗಾಲದವರೆಗೂ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟದ್ದರು. ಒಡಿಶಾ ಜೊತೆಗೆ ದೇಶದ ಇತರ ಭಾಗಗಳ ಯುವರಾಜಕಾರಣಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.

ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂಭತ್ತನೇ ಲೋಕಸಭಾ ಚುನಾವಣೆಯು ಹೊಸದೇ ಒಂದು ಯುಗಕ್ಕೆ ನಾಂದಿ ಹಾಡಿತ್ತು. ಅದೇ ಮೊದಲ ಬಾರಿಗೆ ಯಾವ ಪಕ್ಷವೂ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅತಂತ್ರ ಸ್ಥಿತಿಯ ನಡುವೆಯೂ ಸಂಸತ್‌ ಸದಸ್ಯರು ತಮ್ಮ ಪಕ್ಷ ಬೇಧವನ್ನು ಮರೆತು ರಬಿ ರೇ ಅವರನ್ನು ಸ್ಪೀಕರ್‌ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡುತ್ತಾರೆ. ಸರಳತೆ ಮತ್ತು ಪಾರದರ್ಶಕ ಪ್ರಾಮಾಣಿಕತೆಗಳ ಒಟ್ಟು ಮೊತ್ತವಾಗಿದ್ದ ರೇ, ತಮ್ಮ ನಿಷ್ಪಕ್ಷಪಾತ ಮತ್ತು ವಿವೇಚನಾಯುಕ್ತ ಶೈಲಿಯಿಂದ ಸ್ಪೀಕರ್‌ ಸ್ಥಾನದ ಪ್ರತಿಷ್ಠೆ ಮತ್ತು ಘನತೆಯನ್ನು ಮೇಲಕ್ಕೆತ್ತಿ ಶ್ರೀಮಂತಗೊಳಿಸಿದರು.

1926 ನವೆಂಬರ್‌ 26 ರಂದು ಒರಿಸ್ಸಾದ ಆಗಿನ ಪುರಿ ಜಿಲ್ಲೆಯ (ಈಗ ಖುರ್ದಾ) ಭಾಂಗರ್‌ ಗ್ರಾಮದಲ್ಲಿ ರಬಿ ರೇ ಅವರ ಜನನ. ತನ್ನೂರಿನ ಇತರರಂತೆ ಅವರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಆಕರ್ಷಿತರಾಗಿದ್ದರು. ಒಬ್ಬ ನಿಜವಾದ ಸಮಾಜವಾದಿ ಮತ್ತು ಲೋಹಿಯಾ ಅವರ ಶಿಷ್ಯನಾಗಿದ್ದ ರೇ, 1946-47 ರ ಹೊತ್ತಿಗೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಅದು ರಾವೆನ್‌ಶಾ ಕಾಲೇಜಿನಲ್ಲಿ (ಈಗ ವಿಶ್ವವಿದ್ಯಾಲಯ) ಓದುವಾಗ ನಡೆದ ಘಟನೆ. ಅವರು ಯೂನಿಯನ್‌ ಜಾಕ್‌ ಧ್ವಜವನ್ನು ಇಳಿಸಿ ತ್ರಿವರ್ಣ ಪತಾಕೆಯನ್ನು ಹಾರಿಸಿದ್ದರು. ಆ ಮೂಲಕ ಇತರ ವಿದ್ಯಾರ್ಥಿಗಳೊಂದಿಗೆ ಬಂಧನಕ್ಕೊಳಗಾಗಿದ್ದರು. ಆದರೆ, ಆಗಿನ್ನೂ ದೇಶ ಬ್ರಿಟಿಷ್‌ ಆಳ್ವಿಕೆಯ ಅಡಿಯಲ್ಲಿದ್ದರೂ ಕೂಡ ಶಿಕ್ಷಣ ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರ ಮಣಿಯಲೇಬೇಕಾಗಿ ಬಂದಿತ್ತು.

ತನ್ನ ಪ್ರಾಂತ್ಯದ ಪ್ರತಿಷ್ಠಿತ ರಾವೆನ್‌ಶಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿಎ (ಆನರ್ಸ್) ಪದವಿ ಪಡೆದ ನಂತರ, ಕಟಕ್‌ನ ಮಧುಸೂದನ್‌ ಲಾ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡುತ್ತಾರೆ ರಬಿ ರೇ. ಎರಡೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗುವ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯದ ಬುನಾದಿಯನ್ನು ಹಾಕಿಕೊಂಡಿದ್ದರು.

ಲೋಹಿಯಾ ಅವರ ಅತ್ಯಂತ ನಿಕಟವರ್ತಿಗಳಲ್ಲಿ ರೇ ಒಬ್ಬರಾಗಿದ್ದರು. 1949 ರಲ್ಲಿ ಸ್ಥಾಪಿಸಲ್ಪಟ್ಟ ಯಂಗ್‌ ಸೋಷ್ಯಲಿಸ್ಟ್‌ ಲೀಗ್‌ (ವೈಎಸ್‌ಎಲ್‌) ಅಥವಾ “ನೌಜವಾನ್‌ ಸಮಾಜವಾದಿ ಸಂಘ”ದ ಸ್ಥಾಪಕರಲ್ಲಿ ರೇ ಒಬ್ಬರಾಗಿದ್ದರು. ನಂತರ ಅದು ಸಮಾಜವಾದಿ ಯುವಜನ ಸಭಾ (ಎಸ್‌ವೈಎಸ್‌) ಎಂದು ಮರುನಾಮಕರಣಗೊಳ್ಳುತ್ತದೆ. 1948 ರಲ್ಲಿ ಲೋಹಿಯಾ ಒಡಿಶಾ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಕೆಳವರ್ಗದ ಜನರ ಬಗ್ಗೆ ಆಡಿದ ಮಾತುಗಳು ರೇ ಅವರ ಹೃದಯವನ್ನು ಮೀಟುತ್ತವೆ. ಸಮಾಜವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದ ಅವರು, ರಾವೆನ್‌ಶಾ ಕಾಲೇಜಿನಲ್ಲಿ ತನ್ನ ಪರೀಕ್ಷಾ ಅರ್ಜಿಯಲ್ಲಿ ತುಂಬಬೇಕಿದ್ದ ಜಾತಿ ಕಾಲಮ್ಮನ್ನು ತುಂಬಲು ನಿರಾಕರಿಸುತ್ತಾರೆ.

ಕಾಲೇಜು ದಿನಗಳಿಂದಲೂ ಸಮಾಜವಾದದಲ್ಲಿ ತೀವ್ರ ನಂಬಿಕೆಯುಳ್ಳವರಾಗಿದ್ದ ರೇ, 1948 ರಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ತನಗೆ ಸಹಜವಾಗಿಯೇ ಒಲಿದಿದ್ದ ನಾಯಕತ್ವ ಗುಣಗಳು ಮತ್ತು ಸಮಾಜವಾದದ ಕಡೆಗಿನ ಆಳವಾದ ಬದ್ಧತೆಯಿಂದಾಗಿ ಸಮಾಜವಾದಿ ಚಳುವಳಿಯ ಮುಂಚೂಣಿಯಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. 1953 ರಲ್ಲಿ ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ನಡೆದ ಸಮಾಜವಾದಿ ಯುವಕ್‌ ಸಭಾದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ಮುಂದಿನ ವರ್ಷದ ತನಕ ಆ ಸ್ಥಾನದಲ್ಲಿ ಅವರು ಮುಂದುವರಿದಿದ್ದರು. 1955 ರಲ್ಲಿ ಅವರು ಒರಿಸ್ಸಾದ ಪುರಿಯಲ್ಲಿ ಎಸ್‌ವೈಎಸ್‌ ಸಮ್ಮೇಳನವನ್ನು ಆಯೋಜಿಸುತ್ತಾರೆ. ಅದರ ಉದ್ಘಾಟನೆಯನ್ನು ಶ್ರೀ ಮಧು ಲಿಮಾಯೆ ಅವರು ನೆರವೇರಿಸಿದ್ದರು. 1956 ರಲ್ಲಿ ಲೋಹಿಯಾ ನೇತೃತ್ವದೊಂದಿಗೆ ಅವರು ಒರಿಸ್ಸಾದಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸುತ್ತಾರೆ. ಆ ಅವಧಿಯಲ್ಲಿ ರೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದರು. 1960 ರಲ್ಲಿ ಸುಮಾರು ಒಂದು ವರ್ಷ ಕಾಲ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಸಮಾಜವಾದಿ ಚಳವಳಿಯ ಸಮಯದಲ್ಲಿ, 1960-74 ರ ಕಾಲಾವಧಿಯಲ್ಲಿ ಪಕ್ಷವು ಮುನ್ನಡೆಸುತ್ತಿದ್ದ ಹಲವು ಸತ್ಯಾಗ್ರಹಗಳ ಕಾರಣಗಳಿಂದ ಹಲವಾರು ಬಾರಿ ಜೈಲುವಾಸ ಅನುಭವಿಸಿದ್ದರು. 1975-76 ರ ತುರ್ತು ಪರಿಸ್ಥಿತಿಯ ಕಾಲದಲ್ಲೂ ಜೈಲುವಾಸ ಅನುಭವಿಸಿದ್ದರು.

ರೇ ಅವರ ಸಂಸತ್‌ ಪ್ರವೇಶ ಆರಂಭವಾಗುವುದು 1967 ರಲ್ಲಿ ನಡೆದ ನಾಲ್ಕನೇ ಲೋಕಸಭಾ ಚುನಾವಣೆಯ ಮೂಲಕ. ಸಂಸತ್ತಿನಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ (ಎಸ್‌ಎಸ್‌ಪಿ) ಸಂಸದೀಯ ನಾಯಕರೂ ಆಗಿದ್ದರು. ಈ ಅವಧಿಯಲ್ಲಿ ಲೋಹಿಯಾ ಕೂಡ ಸಂಸದರಾಗಿದ್ದರು. ತನ್ನ ನೇರ ಮತ್ತು ಸ್ಪಷ್ಟ ದೃಷ್ಟಿಕೋನಗಳು, ವಿರೋಧಿಸುವಾಗಲೂ ಅವರಿಗಿದ್ದ ಕಟ್ಟುವ ಗುಣಗಳ ಕಾರಣದಿಂದ ಅವರೊಬ್ಬ ಸಮರ್ಥ ಸಂಸದರಾಗಿ ರೂಪುಗೊಳ್ಳುತ್ತಾರೆ. ಸಂಸತ್ತಿನ ಚರ್ಚೆಗಳು ಮತ್ತು ಒಟ್ಟು ರಾಷ್ಟ್ರೀಯ ಬದುಕಿಗೆ ಅವರ ಕೊಡುಗೆ ಅಗಾಧವೂ ಶ್ರೀಮಂತವೂ ಆಗಿತ್ತು. 1974 ರಲ್ಲಿ ಒರಿಸ್ಸಾದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.

1977 ರಲ್ಲಿ ನಡೆದ ಆರನೇ ಲೋಕಸಭಾ ಚುನಾವಣೆಯು ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನು ಹುಟ್ಟುಹಾಕಿತ್ತು. ಸ್ವಾತಂತ್ರ್ಯಾ ನಂತರದ ಭಾರತದ ಚುನಾವಣಾ ರಾಜಕಾರಣದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಬಾರಿಗೆ ಸೋತಿತ್ತು. ಆ ಜಾಗದಲ್ಲಿ ಜನತಾ ಪಕ್ಷ ಸರಕಾರ ರಚಿಸಿತ್ತು. ರೇ ಅವರ ನಿಸ್ವಾರ್ಥ ಸೇವೆಯಿಂದ ಪ್ರಭಾವಿತರಾಗಿದ್ದ ಮೊರಾರ್ಜಿ ದೇಸಾಯಿ 1979 ರ ಜನವರಿಯಲ್ಲಿ ಅವರನ್ನು ಆರೋಗ್ಯ ಸಚಿವರಾಗಿ ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ತಮ್ಮ ಇತರ ಕರ್ತವ್ಯಗಳ ಜೊತೆಗೆ 1980 ರ ಜನವರಿ ತನಕ ಅವರು ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಒರಿಸ್ಸಾದ ಕೇಂದ್ರಪಾರ ಕ್ಷೇತ್ರದಿಂದ ಜನತಾ ದಳದ ಟಿಕೆಟ್‌ ಮೂಲಕ ರೇ ಎರಡನೇ ಬಾರಿಗೆ ಸಂಸತ್‌ ಪ್ರವೇಶ ಮಾಡುತ್ತಾರೆ. ಆದರೆ, ಅವರು ಬಹಳ ದೊಡ್ಡ ಪ್ರಸಿದ್ದಿ ಪಡೆಯುವುದು 1989-91 ಕಾಲಾವಧಿಯಲ್ಲಿ ಒಂಬತ್ತನೇ ಲೋಕಸಭೆಗೆ ಸ್ಪೀಕರ್‌ ಆಗುವ ಮೂಲಕ. ಅದು ಭಾರತೀಯ ರಾಜಕಾರಣದ ಅತ್ಯಂತ ಪ್ರಕ್ಷುಬ್ಧ ದಿನಗಳಾಗಿದ್ದವು. ಅವರು ಒರಿಸ್ಸಾ ಮೂಲದ ಮೊದಲ ಸ್ಪೀಕರ್‌ ಕೂಡ ಆಗಿದ್ದರು. 1991 ರಲ್ಲಿ ಮೂರನೇ ಬಾರಿಗೆ ಹತ್ತನೇ ಲೋಕಸಭೆಗೂ ಚುನಾಯಿತರಾಗುತ್ತಾರೆ.

1989 ಡಿಸೆಂಬರ್‌ 19 ರಂದು ಒಂಬತ್ತನೇ ಲೋಕಸಭೆಯ ಸ್ಪೀಕರ್‌ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ತನ್ನ ಈ ಉನ್ನತ ಹುದ್ದೆಯ ಗಂಭೀರ ಜವಾಬ್ದಾರಿ ಮತ್ತು ನಿಷ್ಪಕ್ಷಪಾತದ ಸಂಪೂರ್ಣ ಅರಿವಿದ್ದ ರೇ ಅವರು, ತಾವು ಸ್ಪೀಕರ್‌ ಸ್ಥಾನದಲ್ಲಿ ಇರುವ ತನಕ ಪಕ್ಷ ರಾಜಕಾರಣವನ್ನು ಮುಂದಿಡುವುದಿಲ್ಲವೆಂದೂ ಸರ್ವರಿಗೂ ನ್ಯಾಯಯುತವಾಗಿರುತ್ತೇನೆ ಎಂದೂ ಲೋಕಸಭೆಗೆ ಭರವಸೆ ನೀಡಿದ್ದರು.

ರೇ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ, ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಪ್ರಧಾನ ಮಂತ್ರಿಗಳಾಗಿದ್ದರು. ರಾಜೀವ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಕಾಯ್ದುಕೊಂಡ ಉನ್ನತ ಗುಣಗಳ ಕಾರಣದಿಂದ ಲೋಕಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅವರನ್ನು ಪ್ರೀತಿಯಿಂದ ಗೌರವಿಸುತ್ತಿದ್ದರು.

ರೇ ಅವರು ಕೇವಲ ಒಂದೂವರೆ ವರ್ಷ ಮಾತ್ರವೇ ಸ್ಪೀಕರ್‌ ಹುದ್ದೆಯಲ್ಲಿದ್ದರಾದರೂ, ಪ್ರತಿ ಅಧಿವೇಶನದಲ್ಲು ಅವರಿಗೆ ಹಲವು ಸವಾಲುಗಳು ಎದುರಾಗಿದ್ದವು. ಅವುಗಳನ್ನು ಅವರು ದೃಢವಾಗಿ ಮತ್ತು ಚತುರತೆಯಿಂದ ನಿಭಾಯಿಸಿದ್ದರು. ಕೆಲವು ಕ್ಲಿಷ್ಟ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ, ಕೆಲವು ಕಾರ್ಯ ವಿಧಾನಗಳಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದರು. ಆ ಮೂಲಕ ಸಂಸತ್ತಿನ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಿ ಬದಲಾಯಿತು.

ಜನತಾ ದಳ ವಿಭಜನೆಯಾದ ನಂತದ ಆ ಪಕ್ಷದ ಸಂಸದರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಷಯದಲ್ಲಿ ರೇ ತೆಗೆದುಕೊಂಡ ನಿರ್ಧಾರವು ಅವರ ಅತ್ಯಂತ ಪ್ರಮುಖ ಮತ್ತು ದೂರಗಾಮಿ ನಿರ್ಧಾರಗಳಲ್ಲಿ ಒಂದು. 1990 ನವೆಂಬರ್‌ 6 ರಂದು ಜನತಾ ದಳ ವಿಭಜನೆಯಾಗಿ, ಅದರ 58 ಸದಸ್ಯರು ತಮ್ಮ ಹೊಸ ಗುರುತಾಗಿ ಜನತಾ ದಳ (ಎಸ್) ಎಂದು ಘೋಷಿಸಿಕೊಳ್ಳುತ್ತಾರೆ. ವಿಭಜನೆಯ ಸಮಯ ಮತ್ತು ಉಚ್ಛಾಟನೆ ಕುರಿತು ವಾದ ಮತ್ತು ಪ್ರತಿವಾದಗಳು ಎದ್ದಿದ್ದವು. ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಬಿಡಿಸುವ ಕಷ್ಟ ರೇ ಅವರದ್ದಾಗಿತ್ತು. ತಾನು ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಇದರ ಸಾಧಕ-ಬಾಧಕಗಳನ್ನು ಅವರು ನಿರ್ಲಿಪ್ತವಾಗಿ ಪರಿಶೀಲಿಸಿದ್ದರು. ಆ ಮೂಲಕ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರು. ತನ್ನ ಕಾನೂನು ಜ್ಞಾನ ಮತ್ತು ನಿಷ್ಪಕ್ಷಪಾತಿ ನಿಲುವುಗಳು ಇಲ್ಲಿ ಬಹಳ ಸಹಾಯ ಮಾಡಿದವು. ಇದೊಂದು ಐತಿಹಾಸಿಕ ಉಲ್ಲೇಖಾರ್ಹ ತೀರ್ಪಾಗಿ ಹೊರ ಬಂದಿತ್ತು.

ಸ್ಪೀಕರ್ ಆಗಿ ರೇ ತೆಗೆದುಕೊಂಡ ಮತ್ತೊಂದು ಪ್ರಮುಖ ನಿರ್ಧಾರವೆಂದರೆ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕುವಂತೆ ರಾಷ್ಟ್ರಪತಿಗಳಿಗೆ ಕೋರುವ ಮೊಟ್ಟ ಮೊದಲ ಪ್ರಸ್ತಾವನೆಯೊಂದನ್ನು ಅಂಗೀಕರಿಸುವುದು. ಅವರು ಆ ಪ್ರಸ್ತಾವನೆಯನ್ನು ಒಪ್ಪಿ, ನ್ಯಾಯಾಧೀಶರನ್ನು ತೆಗೆದುಹಾಕಲು ಸಲ್ಲಿಸಿದ್ದ ಆಧಾರಗಳ ತನಿಖೆಗೆ ಒಂದು ಸಮಿತಿಯನ್ನೂ ರಚಿಸಿದ್ದರು. ಕಾನೂನಿನ ಅಡಿಯಲ್ಲಿ ಈ ಪ್ರಸ್ತಾವನೆಗೆ ತನ್ನದೇ ಆದ ನೆಲೆ ಇರುವುದರಿಂದ, ಇತರ ಪ್ರಸ್ತಾವನೆಗಳಂತೆ ಸದನದ ವಿಸರ್ಜನೆಯೊಂದಿಗೆ ಅದು ರದ್ಧಾಗುವುದಿಲ್ಲ. ಕೊನೆಗೆ ಹತ್ತನೇ ಲೋಕಸಭೆಯು ಈ ಪ್ರಸ್ತಾವನೆಯನ್ನು ಅಂಗೀಕರಿಸುತ್ತದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರದ ಲಭ್ಯತೆ, ಕುಡಿಯುವ ನೀರಿನ ಸೌಲಭ್ಯ, ವಸತಿ, ಆರೋಗ್ಯ ರಕ್ಷಣೆ, ಉಳುವವನಿಗೆ ಭೂಮಿ, ಕೃಷಿ ಉಪಕರಣಗಳು, ಉದ್ಯೋಗ, ಗುಡಿಸಲುಗಳ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ, ಬಡ ಮತ್ತು ದುರ್ಬಲ ವರ್ಗಗಳ ಶೋಷಣೆ ಹಾಗೂ ಕಿರುಕುಳದ ವಿರುದ್ಧ ರಕ್ಷಣೆ ಮುಂತಾದ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಎತ್ತಲು ಸಂಸದರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವ ಮೂಲಕ ರೇ ಲೋಕಸಭೆಯ ಕಾರ್ಯನಿರ್ವಹಣೆಗೆ ಹೊಸ ದಿಕ್ಸೂಚಿಯನ್ನು ಒದಗಿಸಿದವರು. ಕೋಮು ಗಲಭೆಗಳು, ಬೆಲೆ ಏರಿಕೆ, ಯೋಜನೆ ಮತ್ತು ಅಭಿವೃದ್ಧಿ, ರಕ್ಷಣೆಯನ್ನು ಬಲಪಡಿಸುವುದು ಮುಂತಾದ ರಾಷ್ಟ್ರೀಯ ಕಾಳಜಿಯ ವಿಷಯಗಳಿಗೂ ಅವರು ಆದ್ಯತೆ ನೀಡಿದ್ದರು. ಇಂತಹ ಸೂಕ್ಷ್ಮ ಮತ್ತು ನಿರ್ಣಾಯಕ ವಿಷಯಗಳಲ್ಲಿ ಸದನವು ತನ್ನ ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಲು  ಮೂಲಕ ಅವರು ಅನುವು ಮಾಡಿಕೊಡುತ್ತಿದ್ದರು. ಎಲ್ಲ ಚರ್ಚೆಗಳಲ್ಲಿಯೂ ಸಕಾರಾತ್ಮಕ ಮತ್ತು ರಚನಾತ್ಮಕ ಫಲಿತಾಂಶಗಳು ಹೊರಬರುವಂತೆ ಅವರು ಸದನದ ಚರ್ಚೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರು.

ರೇ ಅವರ ಅಧಿಕಾರಾವಧಿಯಲ್ಲಿ ನಡೆದ ಇನ್ನೊಂದು ಐತಿಹಾಸಿಕ ಸಂಗತಿಯೆಂದರೆ, ಪ್ರಧಾನ ಮಂತ್ರಿ ವಿ.ಪಿ. ಸಿಂಗ್‌ ಸಲ್ಲಿಸಿದ್ದ ಮೊಟ್ಟ ಮೊದಲ ವಿಶ್ವಾಸಮತ ಯಾಚನೆ ಒಂದೇ ದಿನದಲ್ಲಿ ಚರ್ಚೆ ನಡೆದು ಅಂಗೀಕಾರಗೊಳ್ಳುವುದು. ಹನ್ನೊಂದು ತಿಂಗಳುಗಳ ತರುವಾಯ ಮೊದಲ ಬಾರಿಗೆ ವಿಶ್ವಾಸಮತ ಯಾಚನೆಯಲ್ಲಿ ಸೋತು ವಿ.ಪಿ. ಸಿಂಗ್‌ ಸರಕಾರ ಪತನವಾಗುವುದರ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಯಾಗುತ್ತದೆ.

ತನ್ನ ಅಧಿಕಾರಾವಧಿಯಲ್ಲಿ, ಸಂಸದರಿಗೆ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಿ ಚರ್ಚೆ ನಡೆಸಲು ಅನುಕೂಲವಾಗುವಂತೆ ಸದನದ ಕಾರ್ಯವಿಧಾನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರು. ಸದನದ ಕಲಾಪ ಪಟ್ಟಿಯಲ್ಲಿಲ್ಲದಿದ್ದರೂ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸಲು ಸಂಸದರು “ಶೂನ್ಯ ವೇಳೆ”ಯನ್ನು ಬಳಸಿಕೊಳ್ಳುತ್ತಿದ್ದರು. ಸದನದ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲೆಂದು ರೇ, ಈ ಶೂನ್ಯ ವೇಳೆಯನ್ನು ಸಾಂಸ್ಥಿಕವಾಗಿ ಮರು ರೂಪಿಸಿದರು. ಸದನದ ವಿವಿಧ ಪಕ್ಷಗಳು ಮತ್ತು ಗುಂಪುಗಳ ನಾಯಕರ ಅಭಿಪ್ರಾಯಗಳನ್ನು ಪಡೆದುಕೊಂಡ ನಂತರ, ಪ್ರತಿ ಸಭೆಯ ಬೆಳಿಗ್ಗೆ 10:30ರೊಳಗೆ ತಮ್ಮ ವಿಷಯಗಳನ್ನು ಸಲ್ಲಿಸಿದರೆ, ಅಂತಹ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಸಂಕ್ಷಿಪ್ತವಾಗಿ ಸಲ್ಲಿಸಲು ಏಳು ಸಂಸದರಿಗೆ ಅವಕಾಶ ನೀಡಲಾಗಿತ್ತು. ಈ ವ್ಯವಸ್ಥೆಯನ್ನು ಸದನದ ಎಲ್ಲ ವಿಭಾಗಗಳು ಮೆಚ್ಚಿಕೊಂಡವು. ಅದಕ್ಕೆ ಕಾರಣ ಸದನದಲ್ಲಿ ಹೆಚ್ಚು ವಿಷಯಗಳನ್ನು ಕ್ರಮಬದ್ಧವಾಗಿ ಚರ್ಚಿಸಬಹುದು ಮತ್ತು ಸದನದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಮಾತ್ರವೇ ಆಗಿರಲಿಲ್ಲ. ಸದನದ ಗದ್ದಲಕ್ಕೆ ಕಾರಣವಾಗುತ್ತಿದ್ದ ಕೆಲವು ವಿಷಯಗಳಲ್ಲಿ ಸರಕಾರವು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಇದು ರಚನಾತ್ಮಕವಾಗಿ ಕೆಲಸ ಮಾಡುತ್ತಿತ್ತು.

ಒಕ್ಕೂಟ ಸರಕಾರದ ಸಚಿವ ಮತ್ತು ಲೋಕಸಭಾ ಸ್ಪೀಕರ್ ಆಗಿ, ರೇ ಅವರು ಸದನದ ನಡಾವಳಿಯಲ್ಲಿ ಒಂದು ಶ್ರೀಮಂತ ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಅವರು ತನ್ನ ಬದುಕಿನಲ್ಲಿ ಸಮಾಜವಾದಿ ವಿಚಾರಗಳಿಗೆ ಮತ್ತು ಮೌಲ್ಯಗಳಿಗೆ ಬದ್ಧತೆಯಿಂದ ಕೆಲಸ ಮಾಡಿದ್ದರು. ವಿವಿಧ ಸಂಸದೀಯ ನಿಯೋಗಗಳ ನಾಯಕರಾಗಿ ವ್ಯಾಪಕವಾಗಿ ಪ್ರಯಾಣ ಮಾಡಿದ್ದರು. “ಚೌಕಂಬಾ” (ಹಿಂದಿ) ಪಾಕ್ಷಿಕ ಮತ್ತು “ಸಮತಾ” (ಒರಿಯಾ) ಮಾಸ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ರಬಿ ರೇ, 2017 ಮಾರ್ಚ್‌ 6 ರಂದು ತಮ್ಮ ದೀರ್ಘಕಾಲದ ಅನಾರೋಗ್ಯದಿಂದ, ಪತ್ನಿ ಡಾ. ಸರಸ್ವತಿ ಸ್ವೈನ್‌ ಅವರನ್ನು ಅಗಲಿ, ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಆಗಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರೇ ಅವರ ಪತ್ನಿಗೆ ಬರೆದ ಪತ್ರದಲ್ಲಿ “ಅವರ ನಿಧನದೊಂದಿಗೆ, ದೇಶವು ಸಮಾಜದ ತಳಮಟ್ಟದೊಂದಿಗೆ ಸದಾ ಸಂಪರ್ಕವನ್ನಿಟ್ಟುಕೊಂಡಿದ್ದ ನಾಯಕನನ್ನು ಕಳೆದುಕೊಂಡಿತು.” ಎಂದು ಬರೆದರು.

ಆಗಿನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರೇ ಅವರನ್ನು “ಪರಿಣತ ಸಮಾಜವಾದಿ ನಾಯಕ” ಎಂದು ಬಣ್ಣಿಸಿದರು. ಅವರ ಶಿಷ್ಯರಲ್ಲಿ ಒಬ್ಬರಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, “ರಬಿ ರೇಜೀ ನನಗೆ ರಕ್ಷಕನಂತೆ ಇದ್ದರು. ಅವರ ನಿಧನವು ಭಾರತೀಯ ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ ಮತ್ತು ಸಮಾಜವಾದಿ ಚಳುವಳಿಗೆ ಅವರು ನೀಡಿದ ಕೊಡುಗೆಗಳು ಶಾಶ್ವತವಾಗಿ ಉಳಿಯುತ್ತವೆ” ಎಂದು ಹೇಳಿದರು.

ರಾಷ್ಟ್ರೀಯ ರಾಜಕಾರಣದಲ್ಲಿ ರೇ ಅವರೊಬ್ಬ ಅತ್ಯುನ್ನತ ವ್ಯಕ್ತಿತ್ವವಾಗಿದ್ದರು. ತನ್ನ ಕೊನೆಗಾಲದವರೆಗೂ ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟದ್ದರು. ಒಡಿಶಾ ಜೊತೆಗೆ ದೇಶದ ಇತರ ಭಾಗಗಳ ಯುವರಾಜಕಾರಣಿಗಳಿಗೆ ಬಹಳ ದೊಡ್ಡ ಸ್ಪೂರ್ತಿಯಾಗಿದ್ದರು. ಕೃಷಿ ವಿಗಣ್ಯ ಕೇಂದ್ರ ಮತ್ತು ನವೋದಯ ವಿದ್ಯಾಲಯ ಸ್ಥಾಪನೆ ಸೇರಿದಂತೆ ತನ್ನ ಆರು ದಶಕಗಳ ಕಾಲದ ರಾಜಕೀಯ ಬದುಕಿನಲ್ಲಿ ತನ್ನ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ರಬಿ ರೇ ಸಮಾಜವಾದಿ ರಾಜಕಾರಣದ ಪ್ರತಿಪಾದಕರಾಗಿದ್ದರು. ಸಮಾಜದ ಸಮಾಜೋ-ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದವರು.

You cannot copy content of this page

Exit mobile version