Monday, May 6, 2024

ಸತ್ಯ | ನ್ಯಾಯ |ಧರ್ಮ

ಸೆಟೆದು ನಿಂತ ಗಂಗೆಯ ಸ್ವಾಭಿಮಾನ

(ಈ ವರೆಗೆ…)ಮನೆಯಲ್ಲಿ ಊಟಕ್ಕೆ ಪರದಾಡುವ ಸ್ಥಿತಿ ಗಂಗೆಗೆ ಬಂದರೂ ಮೋಹನ ಈಚೆ ತಲೆಹಾಕಲಿಲ್ಲ. ತರಕಾರಿ ಮಾರುವ ಹೆಂಗಸಿಗೆ ಗಂಗೆಯ ಪರಿಸ್ಥಿತಿ ತಿಳಿದು ಮೋಹನ ಅಲ್ಲೇ  ಪಕ್ಕದ ರಸ್ತೆಯ ಮನೆಯಲ್ಲಿ ಇರುವುದಾಗಿ ಹೇಳುತ್ತಾಳೆ. ಗಂಗೆ ಆತನನ್ನು ನೋಡಲು ಆ ಮನೆಗೆ ಹೋಗುತ್ತಾಳೆ. ದೊಡ್ಡದಾದ ಮನೆಯಲ್ಲಿ ಸುಕನ್ಯಾ ಮತ್ತಿತರರು ಇರುತ್ತಾರೆ. ಆ ಮನೆಯಲ್ಲಿ ಗಂಗೆ ಏನು ನೋಡಿದಳು? ಸುಕನ್ಯಾ ಏನು ಕೇಳಿದಳು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ತೊಂದನೆಯ ಕಂತು.

ಸುಕನ್ಯಾ ಇನ್ನೇನು ಮೋಹನ ತನಗೆ ಪರಿಚಯವಾದ ಕತೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಅಕ್ಕಪಕ್ಕದ ಕೋಣೆಗಳಿಂದ ಒಂದಾದ ಮೇಲೊಂದು ಅಲರಾಂಗಳು ಹೊಡೆದು ಕೊಳ್ಳತೊಡಗಿದವು. ಅಲರಾಮಿನ ತಲೆ ಮೇಲೆ ಹೊಡೆದು ಒಬ್ಬೊಬ್ಬರೇ ಹುಡುಗಿಯರು ಕಣ್ಣುಜ್ಜಿ ಕೊಳ್ಳುತ್ತಾ ಹೊರಬಂದರು. ಅಲ್ಲೇ ಟೇಬಲ್ಲಿನ ಮೇಲಿದ್ದ ನೋಟ್ ಬುಕ್ ತೆರೆದ ಸುಕನ್ಯಾ, ಒಬ್ಬೊಬ್ಬ ಹುಡುಗಿಯ ಹೆಸರನ್ನು ಕರೆಯುತ್ತಾ, ಆ ದಿನ ಅವರು ಬುಕ್ ಆಗಿರುವ ವ್ಯಕ್ತಿ, ಸಮಯ, ಸ್ಥಳಗಳ ಬಗ್ಗೆ ಮಾಹಿತಿ ನೀಡಿದಳು. “ಇವತ್ತು ಭಾನುವಾರ ಗಿರಾಕಿಗಳ ಸಂಖ್ಯೆ ಜಾಸ್ತಿ ಇರ್ತದೆ. ಯಾರು ಒಂದೇ ಕಡೆ ಹೆಚ್ಚು ಹೊತ್ತು ಅಂಟ್ಕೊಂಡು ಕೂತ್ಕಬೇಡಿ. ಕೆಲ್ಸ ಮುಗಿತಿದ್ದಂಗೆ ಹೊರಟು ಬಂದ್ಬಿಡಿ. ತಡ ಮಾಡ್ಬೇಡಿ. ಬೇಗ ರೆಡಿಯಾಗಿ  ಹೋಗಿ” ಎಂದು ತಾಕಿತು ಮಾಡಿ ಅವರನ್ನೆಲ್ಲ ಅತ್ತ  ಕಳುಹಿಸಿದಳು.

ಬಲಗೈ ಬಂಟಳಾಗಿದ್ದ ತನ್ನ  ಸೋದರ ಸಂಬಂಧಿ, ವಸುಧಳನ್ನು ಕರೆದು ” ವಸು ಇವತ್ತು ಭಾನುವಾರ ಅನ್ನೋದು ನೆನಪಿದೆ ತಾನೇ. ಹೆಚ್ಚಾಗಿ ಆಫೀಷಿಯಲ್ಸೆ ಬರ್ತಿರೋದು. ಹೊಸದಾಗಿ ಬಂದಿರೊ ಆ ಸೋನು, ಬೀನ, ಗೀತಾ, ವಿಮಲಾ ಇವರನ್ನೆಲ್ಲ ಮನೆಯಲ್ಲೆ ಇಟ್ಕೋ, ಹೊರಗೆ ಕಳಿಸ್ಬೇಡ. ಬಂದವರ ಜೊತೆ ಹೇಗೆ ಖುಷಿಯಾಗಿ ಇರಬೇಕು, ಅವ್ರು ಮತ್ತೆ ಮತ್ತೆ ಬರೋಹಾಗೆ ಹೇಗೆ ಮಾಡ್ಬೇಕು, ಅನ್ನೊ ವಿಚಾರಗಳನ್ನೆಲ್ಲಾ ಅವರಿಗೆ ಸರಿಯಾಗಿ ಅರ್ಥಮಾಡ್ಸು. ಯಾಕೋ ಒಂದು ವಾರದಿಂದ ಆ ಇನ್ಸ್ಪೆಕ್ಟರ್ ಸಾಹೇಬ್ರು ನನ್ನ ಬೆನ್ನು ಬಿದ್ದವ್ರೆ.   ಇವತ್ತಿಡೀ ದಿನ ನಾನು ಅವರ್ಜೊತೆಗೆ ಇರ್ಬೇಕಾಗಬಹುದು. ಚಿಂತೆ ಮಾಡ್ಬೇಡ.. ಮೋಹನ್ಗೆ ಎಲ್ಲೂ ಹೋಗ್ಬೇಡಿ ಇವತ್ತು ಮನೆಯಲ್ಲೆ ಇರಿ ಅಂತ ಹೇಳಿದ್ದೀನಿ” ಎಂದು ಅವತ್ತಿನ ಕೆಲಸಕಾರ್ಯಗಳ ಒಂದು ದೊಡ್ಡ ಪಟ್ಟಿಯನ್ನೇ ಅವಳಿಗೆ ಕೊಟ್ಟು ಕಳುಹಿಸಿದಳು.

“ಬೀನಾ…” ಎಂದು ಕರೆದೊಡನೆ, ಕೆಲಗಳಿಗೆಯ ಹಿಂದಷ್ಟೇ ಬಾಗಿಲಲ್ಲಿ ರಂಗೋಲಿ ಹಾಕುತ್ತಾ ಕುಳಿತಿದ್ದ ಬೆದರುಗಣ್ಣಿನ ಹುಡುಗಿ ಸುಕನ್ಯಾಳ ಎದುರು  ಪ್ರತ್ಯಕ್ಷವಾದಳು. “ಬೆಳಗ್ಗೆ ಆರಕ್ಕೆ ಬರ್ಬೇಕಿದ್ದ ವರ್ತ್ನೆ ಹುಡ್ಗ ಯಕೋ ಇನ್ನೂ ಬಂದಿಲ್ಲ. ಕಾಯ್ತಾ ಕೂರೋದು ಬೇಡ.  ಇವರೆಲ್ಲ ಹೊರ್ಟು ರೆಡಿಯಾಗೋದ್ರೊಳ್ಗೆ ಒಂದೆಜ್ಜೆ ನೀನು, ವಿಮಲ ಹೋಗಿ ಮುಂದಿನ ತಿರುವಿನಲ್ಲಿರೋ ಪಂಕಜ್ಜಿ ಅಂಗ್ಡಿಲಿ ಒಂದ್ ಮೂರ್ ಮಾರು ಮಲ್ಲಿಗೆ ಹೂ ಕಟ್ಟಿಸ್ಕೊಂಡ್ ಬನ್ನಿ.  ತಲೆ ಬಗ್ಗಿಸಿದವರು ಮತ್ತೆ ಇಲ್ಲೆ ಬಂದು ತಲೆ ಎತ್ತ್ಬೇಕು ಗೊತ್ತಾಯ್ತಲ್ಲ” ಎಂದು ಸಣ್ಣದಾಗಿ ಗದರಿ ಅವಳನ್ನು ಅತ್ತ ಕಳುಹಿಸಿದಳು.

ಬಿಟ್ಟ ಕಣ್ಣು ಬಿಟ್ಟಂತೆ ಇದೆಲ್ಲವನ್ನು ನೋಡುತ್ತಾ ಕೂತಿದ್ದ ಗಂಗೆ. “ಯವ್ವೇ… ಏಟೊಂದ್ ಜನ ಹುಡ್ಗಿರೂ…ಯಾರ್ ಸುಕನ್ನಿ ಇವ್ರೆಲ್ಲ…” ಎಂದು ಬಾಯಿ ಮೇಲೆ ಕೈ ಇಟ್ಟು ಕೇಳಿದಳು.  ತಾನು ಕುಳಿತ ಆರಾಮಕುರ್ಚಿಯನ್ನು ಹಿಂದಕ್ಕೂ ಮುಂದಕ್ಕೂ ಆಡಿಸತೊಡಗಿದ ಸುಕನ್ಯಾ, “ಇದು ನಾನು ಮೋಹನ್ ಸೇರಿ ನಡೆಸ್ತಿರೋ ಬಿಸ್ನೆಸ್” ಎಂದಳು. ಬಿಸ್ನೆಸ್ ಎಂದ ಕೂಡಲೇ ಗಂಗೆಗೆ, ಮೋಹನ ತನ್ನನ್ನು ಮದುವೆ ಮಾಡಿಕೊಂಡು  ಕರೆದುಕೊಂಡು ಹೋಗಿದ್ದ, ಆ ಮನೆ ನೆನಪಾಯಿತು.

ಮೋಹನ ಆ ಮನೆಯಂತೆಯೇ ಈ ಮನೆಯನ್ನೂ  ಬಹಳ ಆಕರ್ಷಕವಾಗಿ ಕಾಣುವಂತೆ ಅಲಂಕರಿಸಿದ್ದನ್ನು ಗಮನಿಸಿದಳು ಗಂಗೆ.  ಮನೆಯ ತುಂಬಾ ಬೆಲೆ ಬಾಳುವ ಸಾಮಾನುಗಳು ಕಣ್ಣು ಕುಕ್ಕುತ್ತಿದ್ದವು. ದುಬಾರಿ ಬೆಲೆಯ ಸೋಫಾ ಸೆಟ್, ಡೈನಿಂಗ್ ಟೇಬಲ್, ಟಿ. ವಿ, ಶೋಕೇಸನ್ನು ಅಲಂಕರಿಸಿದ್ದ ಚಂದನೆಯ ಸಣ್ಣಪುಟ್ಟ  ಸಾಮಾಗ್ರಿಗಳು. ಹಾಲಿನ ಮಧ್ಯದಲ್ಲಿ ತೂಗಾಡುತ್ತಿದ್ದ ಬಾರಿ ಗಾತ್ರದ ವಿದ್ಯುತ್ ಅಲಂಕೃತ ದೀಪ, ಗೋಡೆಯಲ್ಲಿ ನೇತಾಡುತ್ತಿದ್ದ ಬಗೆಬಗೆಯ ಪೇಂಟಿಂಗ್ಸ್ ಇವೆಲ್ಲವೂ ನೋಡಿದವರನ್ನು ಮಂತ್ರಮುಗ್ಧರನ್ನಾಗಿಸಿ ಇನ್ನಷ್ಟು ಹೊತ್ತು ಅಲ್ಲಿಯೇ ಕೂರುವಂತೆ ಪ್ರೇರೇಪಿಸುತ್ತಿದ್ದವು.

ಮೋಹನ ತನಗೆ ಪರಿಚಯವಾದಂದಿನಿಂದ ಇಂದಿನವರೆಗೂ ಅವನ ಸಾಂಗತ್ಯದಲ್ಲಿ ತಾನು ಕಂಡುಂಡ ಸಿಹಿಕಹಿಗಳನ್ನೆಲ್ಲ ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿಕೊಂಡಳು ಸುಕನ್ಯಾ. ಅಷ್ಟೇ ಅಲ್ಲದೆ ತಾನು ಆಗಾಗ ಭೋಗನೂರಿಗೆ ಹೋಗಿ ಬರುವ ವಿಚಾರವನ್ನು, ವಾರದ ಕೆಳಗೆ ಮೋಹನನ ಅವ್ವ ಚಿಕ್ಕತಾಯಮ್ಮ ಮತ್ತು ತಂಗಿ ರತ್ನ ಇಲ್ಲಿಗೆ ಬಂದು ಒಂದೆರಡು ದಿನ ಇದ್ದು, ಹೊಸ ಬಟ್ಟೆಯ ಗಂಟಿನೊಂದಿಗೆ  ಸಂಭ್ರಮದಿಂದ ಊರು ಸೇರಿದ ಸುದ್ದಿಯನ್ನೆಲ್ಲಾ ಬೀಗುತ್ತಾ ಹೇಳಿ ಕೊಂಡಳು ಸುಕನ್ಯಾ.

ಇದನ್ನೆಲ್ಲಾ ಉಸಿರು ಬಿಗಿ ಹಿಡಿದು ಕೇಳಿಸಿಕೊಳ್ಳುತ್ತಿದ್ದ ಗಂಗೆಯನ್ನು, ಸುಕನ್ಯಾಳ  ಎದೆ ಮೇಲೆ ರಾರಾಜಿಸುತ್ತಿದ್ದ ಗಟ್ಟಿಮುಟ್ಟಾದ ಚಿನ್ನದ ತಾಳಿ ಸರ ಅಣಕಿಸಿದಂತೆನಿಸಿತು. ಗಂಗೆ ಪೇಲವವಾಗಿ ನೇತಾಡುತ್ತಿದ್ದ ತನ್ನ  ಕರಿಮಣಿ ಸರದತ್ತ ಒಮ್ಮೆ ಕಣ್ಣಾಡಿಸಿದಳು. ಎದೆಗೊದ್ದಂತೆ ಸಂಕಟ ಉಕ್ಕಿಬಂದಿತು. ಪರಿಚಿತಳ ಸೋಗುಹಾಕಿ ತನ್ನ ಹಿಂದೆ ಬಂದು ಈ ಮನೆ ಸೇರಿಕೊಂಡ ಸುಕನ್ಯಾಳ ಮುಂದೆ ತನ್ನ ದುಃಖ ತೋರಗೊಡಬಾರದೆಂದು ನಿರ್ಧರಿಸಿದಳು ಗಂಗೆ.

ಬಾಯಿಗೆ ಬೀಗ ಹಾಕಿದವಳಂತೆ ತುಟಿಕ್ ಪಿಟಿಕ್ ಎನ್ನದೆ ಎದ್ದು ಹೊರ ನಡೆಯಲನುವಾದಳು. ಗಂಗೆಯನ್ನು ತಡೆದು ನಿಲ್ಲಿಸಿದ ಸುಕನ್ಯಾ “ನಿನ್ನನ್ನ ನಂಬಿಕೊಂಡಿದ್ದಿದ್ರೆ  ಅವ್ರು ಇಷ್ಟರ ಮಟ್ಟಿಗೆ ಬೆಳೆದು ನಿಲ್ಲಕ್ ಆಗ್ತಿತ್ತಾ. ನಮ್ಮಿಬ್ಬರಿಗೂ ಬೇಕಾಗಿದ್ದು  ರಾಯಲ್ ಲೈಫ್. ಅದನ್ನ ನಮ್ಮ ಪರಿಶ್ರಮದಿಂದ  ಪಡ್ಕೊಂಡು ಎಂಜಾಯ್ ಮಾಡ್ತಿದ್ದೀವಿ. ನೋಡು ಬ್ಯೂಟಿನಲ್ಲಿ ನನ್ಗೂ ನಿನ್ಗೂ ತಾಳೆನೆ ಆಗೋದಿಲ್ಲ ಅಷ್ಟು ಚೆನ್ನಾಗಿದ್ಯ ನೀನು. ಸ್ವಲ್ಪ ಮನಸ್ಸು ಮಾಡು..ಆ ಮೊಗುನ ಹೆತ್ತು ನಿಮ್ನಪ್ಪನ ಮನೆಗೆ ಬಿಟ್ಟು ಬಾ. ಒಟ್ಟಿಗೆ ಜೀವ್ನ  ಮಾಡೋಣ. ನಾವು ಮೂರು ಜನ ಸೇರಿ  ಬಿಸ್ನೆಸ್ನ ಇನ್ನಷ್ಟು ಇಂಪ್ರೂ ಮಾಡಿ, ಆದಷ್ಟು ಬೇಗ ಈ ಸಿಟಿಯಲ್ಲಿ ನಮ್ಮದೇ ಒಂದು ದೊಡ್ಡ ಬಂಗ್ಲೆ ಕಟ್ಟಿ ಧಾಮ್ ಧೂಮ್ ಅಂತ ಬದುಕಿ ತೋರಿಸೋಣ….

.

ಸುಕನ್ಯಾ ಮಾತಾಡುತ್ತಲೇ ಇದ್ದಳು. ಗಂಗೆ ತನ್ನ ಹೊಟ್ಟೆಯ ಕೂಸಿನ ಮೇಲೊಮ್ಮೆ ಕೈ ಆಡಿಸಿ, ಮಲಿನ ಆದವಳಂತೆ ಅಲ್ಲಿಂದ ಕಾಲುಕಿತ್ತು  ಒಂದೇ ಉಸಿರಿಗೆ ತನ್ನ ಮನೆ ಸೇರಿದಳು. ಬಚ್ಚಲು ಹೊಕ್ಕಿದವಳೆ ಜೋರಾಗಿ  ನಲ್ಲಿ ತಿರುಗಿಸಿ, ಮೈ ಮನಸ್ಸುಗಳ ಉದ್ವೇಗವೆಲ್ಲಾ ತಣ್ಣಗಾಗುವವರೆಗು ಅದರ ಕೆಳಗೆ ತಲೆ ಇಟ್ಟು ಕೂತೇ ಇದ್ದಳು…

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ಮನೆಯ ಹಾದಿ ಮರೆತ ಮೋಹನ

Related Articles

ಇತ್ತೀಚಿನ ಸುದ್ದಿಗಳು