ಹಾಸನ : ವಿಶ್ವವಿದ್ಯಾಲಯವನ್ನು ಇಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಬುಧವಾರವು ಹೇಮಗಂಗೋತ್ರಿ ಕಾಲೇಜು ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ SFI, DYFI ಮತ್ತು ಕರವೇ ಮತ್ತು ರೈತ ಸಂಘಟನೆ ನಾಯಕರು ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿರವರು ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಉಪಮುಖ್ಯಮಂತ್ರಿಗಳ ನೇತೃತ್ವದ ಸಂಪುಟ ಉಪಸಮಿತಿಯ ಕಳೆದ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲ್ಪಟ್ಟಿದ್ದ ಎಂಟು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ತೀರ್ಮಾನಿಸಿದೆ ಎಂಬ ವರದಿಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಹೊಸದಾಗಿ ಶುರುವಾಗಿದ್ದ ಹಾಸನ ವಿಶ್ವವಿದ್ಯಾಲಯವನ್ನು ಸಹ ಮುಚ್ಚ ಬೇಕಾಗಿರುವುದು ಈ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ. ಇದರಿಂದ ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವು ದುಬಾರಿಯಾಗಲಿದೆ. ಪ್ರಸ್ತುತ ನಮ್ಮ ಜಿಲ್ಲೆಯ ಹಾಸನ ವಿಶ್ವವಿದ್ಯಾಲಯದ ವ್ಯಾಪ್ತಿಗೆ 57 ಕಾಲೇಜುಗಳು ಸೇರಿದ್ದು, ಒಟ್ಟು 23 ಸಾವಿರ ವಿದ್ಯಾರ್ಥಿಗಳು (ಸ್ನಾತಕ ಮತ್ತು ಸ್ನಾತಕೋತ್ತರ) ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಹಾಗಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚದೆ ಮುಂದುವರಿಸಬೇಕು ಹಾಗೂ ಹಾಸನ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳು ಪಕ್ಕದ ಜಿಲ್ಲೆ ಅಥವಾ ರಾಜಧಾನಿಗೆ ಪದವಿ, ಸ್ನಾತಕೋತರ ಪದವಿ ಶಿಕ್ಷಣ ಪಡೆಯಲು ಹೋಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಹಾಸನ ವಿಶ್ವವಿದ್ಯಾಲಯವನ್ನು ಇಲ್ಲೇ ಉಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿರವರು, SFI ನ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ವಿವೇಕ್, ಯುವಜನ ಫೆಡರೇಷನ್ ನ ಪೃಥ್ವಿ ಎಂ.ಜಿ ಕೆ.ಪಿ.ಆ.ರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್ ಕರವೇ ಜಿಲ್ಲಾಧ್ಯಕ್ಷ ಸತೀಶ್, ಡಾ. ಎಸ್.ಜೆ. ಮಹೇಶ್, ಡಾ. ಪುಷ್ಪಾವತಿ, ಡಾ. ಪುಟ್ಟರಾಜಪ್ಪ, ಡಾ. ಅಶೋಕ್, ಡಾ. ಪ್ರೇಮಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.