ಚೀನಾದಲ್ಲಿ ಎಚ್‌ಎಂಪಿವಿ ಎಂಬ ವೈರಸ್ ನಿಂದಾಗಿ ಅಲ್ಲಿನ ಆಸ್ಪತ್ರೆಗಳು ಜನರಿಂದ ತುಂಬಿದೆ ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಸ್ಪತ್ರೆಯಲ್ಲಿ ಜನರಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಕೊರೊನಾ ರೀತಿಯಲ್ಲೇ ಈ ವೈರಸ್ ಮಾರಕ ಎಂದು ಸುದ್ದಿಯಾಗುತ್ತಿದೆ. ಆದರೆ ಚೀನಾದಲ್ಲಿರುವ ಭಾರತೀಯರು ಈ ರೀತಿಯಾಗಿ ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಹೇಳುತ್ತಿದ್ದಾರೆ.
ಮಾಧ್ಯಮಗಳಲ್ಲಿ ಆಗುತ್ತಿರುವ ಸುದ್ದಿಗೂ ಚೀನಾದಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ಚೀನಾದಲ್ಲಿರುವ ಭಾರತೀಯರು ಹೇಳುತ್ತಿದ್ದಾರೆ. ಚೀನಾದಲ್ಲಿ ಯಾವುದೇ ಎಚ್ ಎಂಪಿವಿ ವೈರಸ್ ಹಾವಳಿ ಇಲ್ಲ. ಇಲ್ಲಿ ಎಲ್ಲವೂ ನಾರ್ಮಲ್ ಆಗೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಜನ ಮಾಸ್ಕ್ ಕೂಡ ಧರಿಸದೇ ಸಂಚರಿಸುತ್ತಿದ್ದಾರೆ ಎಂದಿದ್ದಾರೆ. ತಮ್ಮ ವಿಡಿಯೋದಲ್ಲಿ ಆಸ್ಪತ್ರೆಯೊಂದರ ಸ್ಥಿತಿಯನ್ನು ತೋರಿಸಿದ್ದು, ದೇಶದ ಮಾಧ್ಯಮಗಳಲ್ಲಿ ಬರುವ ಸುದ್ದಿ ಸುಳ್ಳು ಎಂದಿದ್ದಾರೆ.
ಚೀನಾದಲ್ಲಿರುವ ಅನೇಕ ಭಾರತೀಯರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದು, ಈ ಬಗ್ಗೆ ಆತಂಕ ಪಡುವ ಯಾವ ವೈರಸ್ ಕೂಡ ಇಲ್ಲಿಲ್ಲ. ಇದೊಂದು ಕಲ್ಪಿತ ಸುದ್ಧಿ ಎಂದಿದ್ದಾರೆ.
ದಕ್ಷಿಣ ಕನ್ನಡ ಮೂಲದ ಅಸೀಮಾ ಧೋಳ ಅವರು ಕೂಡ ಚೀನಾದ ವುಹಾನ್ ನಲ್ಲಿ ಕೆಲಸದಲ್ಲಿದ್ದಾರೆ. ಅವರೂ ಕೂಡ ವಿಡಿಯೋ ಒಂದನ್ನು ಮಾಡಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ದೇಶದ ಮಾಧ್ಯಮಗಳು ಮಾತ್ರ ಚೀನಾದ ಸ್ಥಿತಿಯ ಬಗ್ಗೆ ತಮಗೆ ಗೊತ್ತಿಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳಾದ ಬಿಬಿಸಿ ಹಾಗೂ ಸಿಎನ್‌ಎನ್ ನಲ್ಲಿ ಎಚ್‌ಎಂಪಿವಿ ವೈರಸ್ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ.. ಭಾರತೀಯ ಮಾಧ್ಯಮಗಳದು ಕಲ್ಪಿತ ಸುದ್ಧಿ ಎಂದಿದ್ದಾರೆ.