‘ಬಲರಾಮನ ದಿನಗಳು’ Review: ಬೆಂಗಳೂರಿನ ಭೂಗತ ಲೋಕದ ನೆನಪುಗಳನ್ನು ಜೀವಂತಗೊಳಿಸುವ ಗ್ಯಾಂಗ್‌ಸ್ಟರ್ ಡ್ರಾಮಾ; ಆದರೆ ಪ್ರೇಕ್ಷಕರ ಕೊರತೆ ಮಾತ್ರ ಆತಂಕಕಾರಿ!..” ಯುವ ಬರಹಗಾರ ನಿತಿನ್ ಕೃಷ್ಣ ಅವರ ಸಿನಿ ವಿಮರ್ಶೆ
Rating: ★★★.5 (3.5/5)
ತಾಂತ್ರಿಕ ಮಾಹಿತಿ
ನಿರ್ದೇಶನ & ಕಥೆ: ಕೆ. ಎಂ. ಚೈತನ್ಯ
ನಿರ್ಮಾಪಕರು: ಪದ್ಮಾವತಿ ಜಯರಾಮ್, ಶ್ರೇಯಸ್ ದರ್ಶನ್ (ಪದ್ಮಾವತಿ ಫಿಲ್ಮ್ಸ್)
ಸಂಗೀತ: ಸಂತೋಷ್ ನಾರಾಯಣನ್
ಛಾಯಾಗ್ರಹಣ: ಎಚ್. ಸಿ. ವೇಣುಗೋಪಾಲ್ (H. C. Venu)
ಸಂಪಾದನೆ: ಪಿ. ಹರಿದಾಸ್
ಕಲಾ ನಿರ್ದೇಶನ: ವಿಶ್ವಾಸ್ ಕಶ್ಯಪ್
ಆಕ್ಷನ್: ವಿಕ್ರಮ್ ಮೋರ್, ರವಿ ವರ್ಮ, ಯೋಗಾನಂದ ಡಿ.ಸಿ.
‘ಆ ದಿನಗಳು’ ನಂತರ ಮತ್ತೊಮ್ಮೆ ಬೆಂಗಳೂರಿನ ಅಂಡರ್‌ವರ್ಡ್‌ನತ್ತ..
ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿನ ಭೂಗತ ಲೋಕವನ್ನು ಆಧರಿಸಿದ ಸಿನಿಮಾಗಳು ಹೊಸದಲ್ಲ. ಆ ದಿನಗಳು, ಎದೆಗಾರಿಕೆ ಸೇರಿದಂತೆ ಹಲವು ಸಿನಿಮಾಗಳು ಈ ಜಗತ್ತನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತಂದಿವೆ. ಈಗ ನಿರ್ದೇಶಕ ಕೆ. ಎಂ. ಚೈತನ್ಯ ಅವರ ‘ಬಲರಾಮನ ದಿನಗಳು’ ಇದೇ ಹಿನ್ನೆಲೆಯನ್ನು ಆಧರಿಸಿಕೊಂಡು ಮತ್ತೊಮ್ಮೆ 1980-90ರ ದಶಕದ ಬೆಂಗಳೂರಿನ ಅಂಡರ್‌ವರ್ಡ್ ವಾತಾವರಣವನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿದೆ.
ನೈಜ ಘಟನೆಗಳ ಸ್ಫೂರ್ತಿ… ಆದರೆ ತನ್ನದೇ ಆದ ನಿರೂಪಣೆ!
ಈ ಸಿನಿಮಾ ನೈಜ ಘಟನೆಗಳು ಹಾಗೂ ಬೆಂಗಳೂರಿನ ಭೂಗತ ಲೋಕದ ಹಲವು ವ್ಯಕ್ತಿಗಳು ಮತ್ತು ಸಂದರ್ಭಗಳಿಂದ ಪ್ರೇರಿತವಾಗಿದೆ. ಆದರೆ ಇದು ಸಂಪೂರ್ಣ ಜೀವನಚರಿತ್ರೆಯಾಗಲಿ ಅಥವಾ ಡಾಕ್ಯುಮೆಂಟರಿಯಾಗಲಿ ಹೇಳಿಕೊಳ್ಳುವುದಿಲ್ಲ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಕೆಲವು ಪಾತ್ರಗಳು, ಘಟನೆಗಳು ಹಾಗೂ ನಿರೂಪಣೆಯನ್ನು ಕಾಲ್ಪನಿಕವಾಗಿ ರೂಪಿಸಲಾಗಿದೆ. ಆದರೂ ಬೆಂಗಳೂರಿನ ಅಂಡರ್‌ವರ್ಡ್ ಇತಿಹಾಸವನ್ನು ಓದಿರುವವರಿಗೆ ಅಥವಾ ತಿಳಿದಿರುವವರಿಗೆ ಚಿತ್ರದಲ್ಲಿನ ಹಲವು ಪಾತ್ರಗಳು ಹಾಗೂ ಸನ್ನಿವೇಶಗಳು ನೈಜ ಘಟನೆಗಳ ಪ್ರತಿಬಿಂಬವಾಗಿ ಕಾಣಿಸುತ್ತವೆ.
“ಆ ದಿನಗಳು” ಚಿತ್ರದಲ್ಲಿ ಅಗ್ನಿ ಶ್ರೀಧರ್ ಅವರ “ದಾದಾಗಿರಿಯ ದಿನಗಳು” ಕೃತಿಯಲ್ಲಿರುವ ನೈಜ ಪಾತ್ರಗಳ ಹೆಸರನ್ನೇ ಬಳಸುವ ಧೈರ್ಯವಿತ್ತು. ಆದರೆ ಬಲರಾಮನ ದಿನಗಳು ಆ ದಾರಿಯನ್ನು ಅನುಸರಿಸುವುದಿಲ್ಲ. ನೈಜ ವ್ಯಕ್ತಿಗಳಿಂದ ಸ್ಪಷ್ಟ ಸ್ಫೂರ್ತಿ ಪಡೆದಿದ್ದರೂ, ಪಾತ್ರಗಳಿಗೆ ಕಾಲ್ಪನಿಕ ಹೆಸರುಗಳನ್ನು ಬಳಸಲಾಗಿದೆ. ಉದಾಹರಣೆಗೆ, ಜಯರಾಜ್ ಪಾತ್ರಕ್ಕೆ ‘ಜಯರಾಮ್’, ಶ್ರೀಧರ್ ಪಾತ್ರಕ್ಕೆ ‘ಶಶಿಧರ್’ ಎಂಬ ಹೆಸರನ್ನು ನೀಡಲಾಗಿದೆ. ಈ ಆಯ್ಕೆ ಚಿತ್ರದ ಸ್ವತಂತ್ರತೆಯನ್ನು ಉಳಿಸಿಕೊಂಡರೂ, ಆ ದಿನಗಳುಯಲ್ಲಿ ಕಂಡ ನೈಜತೆಯ ತೀವ್ರತೆ ಮತ್ತು ಕೆಲ ಭಾವನಾತ್ಮಕ ಸಂಭಾಷಣೆಗಳ ಆಳವನ್ನು ಇಲ್ಲಿ ಸ್ವಲ್ಪ ಮಿಸ್ ಮಾಡಿದ ಅನುಭವವಾಗುತ್ತದೆ.
80-90ರ ದಶಕದ ಬೆಂಗಳೂರನ್ನು ಮತ್ತೆ ಕಟ್ಟಿಕೊಟ್ಟ ಕೆ. ಎಂ. ಚೈತನ್ಯ!
ಕೆ. ಎಂ. ಚೈತನ್ಯ ಅವರ ನಿರ್ದೇಶನ ಚಿತ್ರದ ಪ್ರಮುಖ ಬಲಗಳಲ್ಲಿ ಒಂದು. 80 ಮತ್ತು 90ರ ದಶಕದ ಬೆಂಗಳೂರಿನ ವಾತಾವರಣವನ್ನು ಅವರು ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಲೊಕೇಷನ್‌ಗಳು, ಕಲಾ ನಿರ್ದೇಶನ, ಉಡುಪು, ವಾಹನಗಳು ಹಾಗೂ ಮೇಕಿಂಗ್ ಎಲ್ಲವೂ ಆ ಕಾಲಘಟ್ಟದ ಅನುಭವವನ್ನು ಪರಿಣಾಮಕಾರಿಯಾಗಿ ಮೂಡಿಸುತ್ತವೆ. ಆ ಕಾರಣಕ್ಕೇ ಈ ಸಿನಿಮಾ ಕೇವಲ ಕಥೆ ಹೇಳುವುದಕ್ಕಿಂತ ಒಂದು ಕಾಲಘಟ್ಟವನ್ನು ಮರುಜೀವಂತಗೊಳಿಸುವ ಪ್ರಯತ್ನವಾಗಿ ಕಾಣಿಸುತ್ತದೆ.
ವಿನೋದ್ ಪ್ರಭಾಕರ್ ನಿಯಂತ್ರಿತ ಹಾಗು ನೈಜ್ಯ ಅಭಿನಯ… ವಿನಯ್ ಗೌಡ ಅಚ್ಚರಿಯ ಪ್ಯಾಕೇಜ್!!!
ನಟನೆಯ ವಿಚಾರಕ್ಕೆ ಬಂದರೆ, ವಿನೋದ್ ಪ್ರಭಾಕರ್ ಈ ಚಿತ್ರದ ದೊಡ್ಡ ಶಕ್ತಿಗಳಲ್ಲಿ ಒಬ್ಬರು. ಬಲರಾಮ ಪಾತ್ರದಲ್ಲಿ ಅವರು ಅತಿಯಾದ ಹೀರೋಯಿಸಂಗೆ ಹೋಗದೆ, ನಿಯಂತ್ರಿತ ಭಾವನೆಗಳು ಹಾಗೂ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಅತುಲ್ ಕುಲಕರ್ಣಿ ಹಾಗೂ ಆಶಿಷ್ ವಿದ್ಯಾರ್ಥಿ ಅವರಂತಹ ಅನುಭವಿ ಕಲಾವಿದರ ನಡುವೆ ಕೂಡ ತಮ್ಮ ಪಾತ್ರವನ್ನು ಪ್ರಭಾವಶಾಲಿಯಾಗಿ ನಿಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಶಶಿಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ, ಜಯರಾಮ್ ಪಾತ್ರದಲ್ಲಿ ಆಶಿಷ್ ವಿದ್ಯಾರ್ಥಿ ಹಾಗು ರೈ ಪಾತ್ರದಲ್ಲಿ ರಮೇಶ್ ಇಂದಿರಾ ತಮ್ಮ ಅನುಭವಕ್ಕೆ ತಕ್ಕ ಅಭಿನಯ ನೀಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಟಿ ಪ್ರಿಯ ಆನಂದ್ ಕೂಡ ಬಲರಾಮನ ಮಡದಿ, ರೇವತಿಯ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆದರೆ ಚಿತ್ರದ ಅಚ್ಚರಿಯ ಪ್ಯಾಕೇಜ್ ಎಂದರೆ ವಿನಯ್ ಗೌಡ. ‘ಕತ್ತಿ’ ಪಾತ್ರದಲ್ಲಿ ಅವರು ತೋರಿಸಿರುವ ಪರದೆ ಮೇಲಿನ ಪ್ರೆಸೆನ್ಸ್ ಹಾಗೂ ಅಭಿನಯ , ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ.
ತಾಂತ್ರಿಕವಾಗಿ ಕನ್ನಡ ಚಿತ್ರರಂಗದ ಒಳ್ಳೆಯ ಗುಣಮಟ್ಟದ ಸಿನಿಮಾ!
ತಾಂತ್ರಿಕವಾಗಿ ನೋಡಿದರೆ, ಇತ್ತೀಚಿನ ಕನ್ನಡ ವಾಣಿಜ್ಯ ಸಿನಿಮಾಗಳಲ್ಲಿ ಇದು ಉತ್ತಮ ಗುಣಮಟ್ಟದ ನಿರ್ಮಾಣ ಎನ್ನಬಹುದು. ಎಚ್. ಸಿ. ವೇಣುಗೋಪಾಲ್ ಅವರ ಛಾಯಾಗ್ರಹಣ ಚಿತ್ರದ ವಾತಾವರಣವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಕಥೆಯ ತೀವ್ರತೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪಿ. ಹರಿದಾಸ್ ಅವರ ಸಂಕಲನ ಚಿತ್ರದ ನಿರೂಪಣೆಗೆ ಕೊಂಚ ಸ್ಲೋ ಎನ್ನಿಸಿದರೂ ಉತ್ತಮ ಲಯ ನೀಡುತ್ತದೆ. ವಿಕ್ರಮ್ ಮೋರ್, ರವಿ ವರ್ಮ ಹಾಗೂ ಯೋಗಾನಂದ ಡಿ.ಸಿ. ಸಂಯೋಜಿಸಿರುವ ಆಕ್ಷನ್ ದೃಶ್ಯಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ.
ಸಂಭಾಷಣೆಗಳಲ್ಲಿ ಇನ್ನಷ್ಟು ಭಾವನಾತ್ಮಕ ಆಳ ಇರಬಹುದಿತ್ತು
ಆದರೆ ಸಂಭಾಷಣೆಗಳ ವಿಚಾರದಲ್ಲಿ ಇನ್ನಷ್ಟು ಆಳ ಇರಬಹುದಿತ್ತು ಎಂಬ ಭಾವನೆ ಉಳಿಯುತ್ತದೆ. ವಿಶೇಷವಾಗಿ ಆ ದಿನಗಳು ಹಾಗೂ ಎದೆಗಾರಿಕೆ ಚಿತ್ರಗಳಲ್ಲಿ ಕಂಡ ಮನಸ್ಸಿಗೆ ತಾಕುವ ಸಂಭಾಷಣೆಗಳ ಮಟ್ಟವನ್ನು ಈ ಸಿನಿಮಾ ಸಂಪೂರ್ಣವಾಗಿ ತಲುಪುವುದಿಲ್ಲ. ಕೆಲವು ಭಾವನಾತ್ಮಕ ದೃಶ್ಯಗಳಲ್ಲಿ ಸಂಭಾಷಣೆಗಳಿಗೆ ಇನ್ನಷ್ಟು ತೂಕ ನೀಡಿದ್ದರೆ ಚಿತ್ರದ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತಿತ್ತು.
ಒಟ್ಟಾರೆ :-
ಬೆಂಗಳೂರು ಅಂಡರ್‌ವರ್ಡ್ ಕಥೆಗಳ ಬಗ್ಗೆ ಈಗಾಗಲೇ ಆಸಕ್ತಿ ಹೊಂದಿರುವವರಿಗೆ ಈ ಸಿನಿಮಾ ಖಂಡಿತವಾಗಿಯೂ ವಿಶೇಷ ಅನುಭವ ನೀಡುತ್ತದೆ. ಆ ಕಾಲಘಟ್ಟವನ್ನು ಮತ್ತೆ ಅನುಭವಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ.
ಆದರೆ ಈ ಹಿನ್ನೆಲೆ ಪರಿಚಯವಿಲ್ಲದ ಪ್ರೇಕ್ಷಕರಿಗೆ ಆರಂಭದಲ್ಲಿ ಕಥೆಯೊಳಗೆ ಪ್ರವೇಶಿಸಲು ಸ್ವಲ್ಪ ಸಮಯ ಬೇಕಾಗಬಹುದು. ಆದರೂ ಸಿನಿಮಾ ನಿರಾಸೆಗೊಳಿಸುವುದಿಲ್ಲ.
ಒಟ್ಟಾರೆ, ಇತ್ತೀಚಿನ ಕನ್ನಡ ವಾಣಿಜ್ಯ ಸಿನಿಮಾಗಳ ಪೈಕಿ ಚಿತ್ರಮಂದಿರದಲ್ಲೇ ತಪ್ಪದೇ ಅನುಭವಿಸಬಹುದಾದ ಚಿತ್ರಗಳಲ್ಲಿ ‘ಬಲರಾಮನ ದಿನಗಳು’ ಕೂಡ ಒಂದು.
3.5/5 stars
⸻
ಕೊನೆಯ ಮಾತು: ಸಿನಿಮಾ ಚೆನ್ನಾಗಿದೆ… ಆದರೆ ಖಾಲಿ ಚಿತ್ರಮಂದಿರ, ಇದು ಕನ್ನಡ ಚಿತ್ರರಂಗದ ವೈಫಲ್ಯ !!?
ಈ ಚಿತ್ರದ ಬಗ್ಗೆ ಹೇಳಲೇಬೇಕಾದ ಮತ್ತೊಂದು ವಿಷಯವಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ. ಅದೂ ಸರ್ಕಾರಿ ರಜೆ ಇದ್ದ ಶುಕ್ರವಾರ. ಬೆಂಗಳೂರಿನ ಸೀಗೇಹಳ್ಳಿಯ ಎಸ್‌ಬಿಆರ್ ಐನಾಕ್ಸ್‌ನಲ್ಲಿ ನಾನು ಸಿನಿಮಾ ವೀಕ್ಷಿಸಿದಾಗ ಚಿತ್ರಮಂದಿರದಲ್ಲಿ ಕೇವಲ ಐದು ಮಂದಿ ಮಾತ್ರ ಪ್ರೇಕ್ಷಕರಿದ್ದರು. ಕನಿಷ್ಠ ಹತ್ತು ಟಿಕೆಟ್‌ಗಳು ಮಾರಾಟವಾಗದ ಕಾರಣ ಪ್ರದರ್ಶನವೇ ರದ್ದಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಅಲ್ಲಿದ್ದ ಪ್ರೇಕ್ಷಕರ ಒತ್ತಾಯದ ಮೇರೆಗೆ ಪ್ರದರ್ಶನ ನಡೆಯಿತು.
ಒಂದು ಉತ್ತಮ ಗುಣಮಟ್ಟದ ಕನ್ನಡ ಸಿನಿಮಾ ಮೊದಲ ದಿನವೇ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಗಂಭೀರ ಚಿಂತನೆಯ ವಿಷಯ. ಇದು ಕೇವಲ ‘ಬಲರಾಮನ ದಿನಗಳು’ ಚಿತ್ರದ ಸಮಸ್ಯೆಯಲ್ಲ. ಉತ್ತಮ ಸಿನಿಮಾಗಳನ್ನು ಕರ್ನಾಟಕದ ಸಾಮಾನ್ಯ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕನ್ನಡ ಚಿತ್ರರಂಗ ವಿಫಲವಾಗುತ್ತಿದೆ ಎಂಬುದು ಮುಚ್ಚುಮರೆಯ ಒಳಗುಟ್ಟಿನ ವಿಷಯವೇನಲ್ಲ. ಇನ್ನಷ್ಟು ಪರಿಣಾಮಕಾರಿ ಪ್ರಚಾರ, ಸಂವಹನ ಹಾಗೂ ನೆಲಮಟ್ಟದ ತಲುಪುವಿಕೆಯ ಬಗ್ಗೆ ಕನ್ನಡ ಚಿತ್ರರಂಗ ಅತ್ಯಂತ ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ.
ಪ್ರೇಕ್ಷಕರು ಉತ್ತಮ ಕನ್ನಡ ಸಿನಿಮಾಗಳನ್ನು ಬಯಸುತ್ತಾರೆ. ಆದರೆ ಅಂತಹ ಸಿನಿಮಾಗಳು ಅವರ ಗಮನಕ್ಕೆ ತಲುಪುವ ವ್ಯವಸ್ಥೆಯೂ ಅಷ್ಟೇ ಮುಖ್ಯವಾಗಿ ಆಗಬೇಕಿದೆ.
