ಬೆಳಗಾವಿ : ಬೆಳಗಾವಿ ( Belagavi) ಚಳಿಗಾಲದ ಅಧಿವೇಶನದ ( winter session ) ನಡುವೆ ಇವತ್ತು ರೈತರ ಜತೆ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ.
ಅಧಿವೇಶನದಲ್ಲಿ ಬಿಜೆಪಿ ರೈತರ ಸಮಸ್ಯೆಗಳ ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬೃಹತ್ ಪ್ರತಿಭಟನೆಗೆ ಮುಂದಾಗಿದೆ.ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ. ಬೃಹತ್ ಪ್ರತಿಭಟನೆ ನಡೆಸುವ ಮೂಲಕ 20 ಸಾವಿರ ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಕಬ್ಬು ಬೆಳೆಗಾರರು, ಮೆಕ್ಕೆಜೋಳ, ಭತ್ತ, ತೊಗರಿ ಬೆಳೆಗಾರರಿಗೆ ಅನ್ಯಾಯವಾಗಿದೆ. ಪ್ರವಾಹ ಪರಿಹಾರ, ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಕಡೆಗಣನೆ ಹೀಗೆ ಹಲವು ವಿಚಾರ ಮುಂದಿಟ್ಟು ಸದನದ ಒಳಗೆ ಮತ್ತು ಹೊರಗೂ ಹೋರಾಟಕ್ಕೆ ಕರೆಕೊಟ್ಟಿದೆ.
ವಿಪಕ್ಷ ನಾಯಕ ಅಶೋಕ್ ಕಿಡಿ
ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.ರಾಜ್ಯದಲ್ಲಿ 2400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಜಾನೆ ಖಾಲಿ ಖಾಲಿಯಾಗಿದೆ. ಕಾಂಗ್ರೆಸ್ನವರು ಜಾಲಿ ಜಾಲಿ ಮಾಡುತ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸರಕಾರ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ನಟಿಸುತ್ತಿದೆ ಎಂದು ಅಶೋಕ್ ಟೀಕಿಸಿದರು. ಪರಿಹಾರದ ವಿಚಾರ ಕೇಳಿದರೆ ಕೇಂದ್ರದ ಮೇಲೆ ಆರೋಪಿಸುತ್ತಾರೆ. ರಾಜ್ಯ ಸರಕಾರಕ್ಕೆ ಜವಾಬ್ದಾರಿಯೇ ಇಲ್ಲ ಎಂದಿದ್ದಾರೆ. ಇನ್ನೂ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಇತ್ಯರ್ಥ ಆಗಿಲ್ಲ. ಕೇಂದ್ರವು ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರವು ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದ ಕಾರಣ ಮೆಕ್ಕೆ ಜೋಳ ಬೆಳೆಯುವ ರೈತರು 1500, 1600 ರೂಪಾಯಿಗೆ ಮೆಕ್ಕೆ ಜೋಳ ಮಾರಾಟ ಮಾಡಿದ್ದಾರೆ. ಹತ್ತಿ, ತೊಗರಿ ಪರಿಹಾರದ ವಿಚಾರ ಕೇಳಿದರೆ ಕೇಂದ್ರದ ಮೇಲೆ ಆರೋಪಿಸುತ್ತಾರೆ ಎಂದು ಟೀಕಿಸಿದ್ದಾರೆ .
