ಸಕಲೇಶಪುರ: ತಾಲೂಕಿನಲ್ಲಿ ಸೋಮವಾರ ಮಳೆಯ ಆರ್ಭಟ ತುಸು ಕಡಿಮೆಯಾಗಿದ್ದು ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು ಎಲ್ಲೆಡೆ ಶೀತದ ವಾತಾವರಣ ಮೂಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹಲವು ಅನಾಹುತಗಳು ಸಂಭವಿಸಿದ್ದು ಹಲವಡೆ ಭೂಕುಸಿತಗಳು ಉಂಟಾಗಿದ್ದು ಅಲ್ಲದೆ ಸಾವಿರಾರು ಮರಗಳು ಉರುಳಿದೆ. ಸುರಿದ ಮಳೆ ಹಿನ್ನಲೆಯಲ್ಲಿ ಶಿರಾಡಿ ಘಾಟ್‌ನಲ್ಲಿ ಶನಿವಾರ ಸಂಜೆ ಹಾಗೂ ಭಾನುವಾರ ದಿನವಿಡಿ ಮಳೆ ಸುರಿದ ಪರಿಣಾಮ ವ್ಯಾಪಕ ಭೂಕುಸಿತ ಉಂಟಾಗಿ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೋಮವಾರ ತಾಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಿದ್ದರು. ಸೋಮವಾರ ಮುಂಜಾನೆ ತಾಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣ ತುಸು ಕಡಿಮೆಯಾದ್ದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪಟ್ಟಣದಲ್ಲಿ ಟ್ರಾಫಿಕ್ ಕಿರಿಕಿರಿ : ಸೋಮವಾರ ಬ್ಯಾಂಕ್, ಸರ್ಕಾರಿ ಕಚೇರಿಗಳು ಹಾಗೂ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಜನ ಆಗಮಿಸಿದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಮಾಡಲು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಅಲ್ಲದೆ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಟ್ರಾಫಿಕ್ ಕಿರಿಕಿರಿ ನಿರ್ಮಾಣವಾಗಿತ್ತು.
ಶಿರಾಡಿ ಘಾಟ್‌ನಲ್ಲಿ ಅಪಾಯಕಾರಿ ಮರಗಳ ತೆರವು : ಶಿರಾಡಿ ಘಾಟ್‌ನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಹೆದ್ದಾರಿ ಬದಿಯಲ್ಲಿದ್ದ ಮರಗಳು ಎರಡು ಕಾರುಗಳ ಮೇಲೆ ಬಿದ್ದಿದ್ದವು. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ನಿರ್ದೇಶನದಂತೆ ಆರ್.ಎಫ್.ಓ ಹೇಮಂತ್ ಕುಮಾರ್ ಹಾಗೂ ತಹಶೀಲ್ದಾರ್ ಸುಪ್ರೀತಾ ನೇತೃತ್ವದಲ್ಲಿ ಅರಣ್ಯ ಇಲಾಖೆ ವತಿಯಿಂದ ಹೆದ್ದಾರಿ ಬದಿಯಲ್ಲಿನ ಹಲವು ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು.
ಉರುಳಿರುವ ಮರಗಳು : ಭಾರಿ ಮಳೆಯಿಂದ ತಾಲೂಕಿನ ಎಲ್ಲೆಡೆ ಮರಗಳು ಉರುಳಿದ್ದು ಕೆಂದನ ಮನೆ ಜಯಪ್ರಕಾಶ್‌ರವರ ಕಾಫಿ ತೋಟದ ಸಮೀಪ ಭಾರಿ ಮರವೊಂದು ರಸ್ತೆಗೆ ಬಿದ್ದಿರುತ್ತದೆ. ಬಿಸ್ಲೆ ಘಾಟ್ ರಸ್ತೆಯಲ್ಲಿ ಹಲವಾರು ಮರಗಳು ಬಿದ್ದಿರುತ್ತದೆ.