ಆಗ್ರಾದಲ್ಲಿ ಸಹ ಮೂರು ನಿಲ್ದಾಣಗಳಿವೆ. ಮೇನ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಮತ್ತು ಫೋರ್ಟ್ ಸ್ಟೇಷನ್. ನಮ್ಮ ರಿಸರ್ವೇಷನ್ ಇದ್ದುದು ಫೋರ್ಟ್ ಸ್ಟೇಷನ್; ಆದರೆ ನಾವು ಹೊರಟಿದ್ದು ಕಂಟೋನ್ಮೆಂಟ್ ಸ್ಟೇಷನ್ ಕಡೆಗೆ! ಟ್ಯಾಕ್ಸಿ ರೇಲ್ವೇ ಸ್ಟೇಶನ್ ನಿಂದ ತುಂಬಾ ದೂರದಲ್ಲಿತ್ತು. ಮುಂದೇನಾಯ್ತು ಓದಿ..ರೋಹಿತ್ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣದ ಏಳನೆಯ ಕಂತು
ತಾಜ್ ಮಹಲ್ ಆವರಣ ಹೊಕ್ಕರೆ ಹೊರಬಾರಲು ಮನಸ್ಸೇ ಬಾರದು. ಎಷ್ಟು ಕಂಡರೂ ತಣಿಯದ ಸೊಬಗು. ಮಕ್ಕಳು ಮರಿ, ಹಸಿವುಗಳು ಅರ್ಧ ಹಗಲು ಮುಗಿಯೋ ಹೊತ್ತಿಗೆ ಹೊರಗೆಳೆತಂದವು. ಬೆಳಗಿನ ಉಪಹಾರದ ಸೌತ್ ಇಂಡಿಯನ್ ಪ್ರಯೋಗ ಕೈಕೊಟ್ಟಿದ್ದರಿಂದ ಈಗ ಆಗ್ರಾ ಬಿರಿಯಾನಿ ತಲಾಶಿಗಿಳಿದೆವು. ಹೊರಬಂದು ಒಂದು ಮಟ್ಕಾ ಚಾ ಕುಡಿಯೋ ಹೊತ್ತಿಗೆ ಆಟೋದ ಸಲ್ಮಾನ್ ನಮಗಾಗಿ ಕಾಯುತ್ತಿದ್ದ. (ಉತ್ತರ ಪ್ರದೇಶ ರಾಜಸ್ತಾನಗಳಲ್ಲಿ ಮಣ್ಣಿನ ಲೋಟದ ಮಟ್ಕಾ ಟೀ ಭಾರೀ ಜನಪ್ರಿಯವಿದ್ದಿರಬೇಕು. ರಾಜಸ್ತಾನದಲ್ಲಂತೂ ಹಿತ್ತಾಳೆ ಪಾತ್ರೆಯಲ್ಲಿ ತಯಾರಿಸುವ ಚಾ ಕುಡಿದೇ ರುಚಿಯನ್ನು ಅನುಭವಿಸಬೇಕು)

ಒಳ್ಳೆಯ ಬಿರಿಯಾನಿ ಹೋಟೆಲಿಗೆ ಒಯ್ಯಲು ಸಲ್ಮಾನ್‌ಗೆ ಹೇಳಿದೆವು. ಆತ ಎಲ್ಲಿಗೋ ಒಯ್ಯುತ್ತಿದ್ದವನು ಮಾತು ಮುಂದುವರೆಸುತ್ತಾ ಹಾದಿ ಬದಲಿಸಿ ಒಂದು ಕಡೆ ಒಯ್ಯುವೆ, ಆ ಏರಿಯಾ ಅಷ್ಟು ಚೆನ್ನಾಗಿಲ್ಲ, ಆದರೆ ಹೋಟೆಲಿಗೆ ಒಳ್ಳೇ ಹೆಸರಿದೆ ಅಂದ. ಅವನು ಹೇಳಿದಂತೇ ಇತ್ತು ಪರಿಸ್ಥಿತಿ. ಮಟನ್ ಬಿರಿಯಾನಿ ಭಾಳ ವಿಶೇಷದ್ದೇನೂ ಅಲ್ಲದಿದ್ದರೂ ಪರವಾಗಿಲ್ಲ, ತೃಪ್ತಿಕರ. ಊಟ ಮುಗಿಸಿದವರೇ ಆಗ್ರಾ ಕೋಟೆ ಕಡೆಗೆ ದಂಡೆತ್ತಿ ಹೋದೆವು. ಅದೂ ಮುಗಿದರೆ ಇಂದೇ ಇತ್ಮದ್ ಉದ್ ದೌಲ ಕೂಡ ನೋಡಿ ಮುಗಿಸುವ ಇರಾದೆಯಿತ್ತು. ಆಗ್ರಾ ಕೋಟೆ ಮುಟ್ಟೋ ಹೊತ್ತಿಗೆ ಮಳೆ ಮರೆಯಾಗಿ ಬಿಸಿಲು ಕಾಯುತ್ತಿತ್ತು. ಟಿಕೆಟ್ ಕೌಂಟರಿನಲ್ಲಿ ಎರಡೆರಡು ಟಿಕೆಟ್ ಖರೀದಿಸ ಬೇಕಿತ್ತು. ಒಂದು ಆರ್ಕಿಯಾಲಜಿ ಇಲಾಖೆಯದು, ಮತ್ತೊಂದು ಆಗ್ರಾ ಡೆವಲಪ್‌ಮೆಂಟ್ ಅಥಾರಿಟಿಯದು. ನಮ್ಮ ಅಧಿಕಾರಶಾಹಿಯ ಅಧಿಕ ಪ್ರಸಂಗತನ ಹೀಗೇ ಇರೋದು. ಎರಡೂ ಸೇರಿಸಿ ಒಟ್ಟಿಗೇ ಕೊಟ್ಟು ಬಂದ ಹಣ ಹಂಚಿಕೊಳ್ಳುವುದ ಬಿಟ್ಟು ಬರೋ ಪ್ರವಾಸಿಗಳ ತಲೆ ತಿನ್ನೋ ಆಲೋಚನೆ ಇದು.
ಆಗ್ರಾ ಒಂದು ಕಾಲದಲ್ಲಿ ಮುಘಲರ ರಾಜಧಾನಿ ಕೂಡ. ಈಗಿರುವ ಕೋಟೆಯನ್ನು ಕಟ್ಟಿಸಿದಾತ ಅಕ್ಬರನಂತೆ. ಅಕ್ಬರನ ಕಾಲದ ಕಟ್ಟೊಣಿಕೆಗಳಲ್ಲಿ ಇದು ಮಹತ್ವದ್ದು. ದೆಹಲಿಯ ಕೆಂಪುಕೋಟೆಗಿಂತ ವಿಸ್ತಾರವಾಗಿಯೂ ಸುಂದರವಾಗಿಯೂ, ಅಚ್ಚುಕಟ್ಟಾಗಿಯೂ ಇರುವ ಕೋಟೆ ಆಗ್ರಾದ ಈ ಕೆಂಪುಕೋಟೆ. ಪ್ರವೇಶ ದ್ವಾರದ ಪಕ್ಕದ ಕಂದಕದ ಆಳ ನೆಲ ಕೂಡ ಸ್ವಚ್ಛವಾಗಿತ್ತು. ಹಾಗೇ ತಾಜ್ ಆವರಣ ಕೂಡ. ಈ ತಾರೀಫು ಪುರಾತತ್ವ ಇಲಾಖೆಯ ಸುಪರ್ದಿಯ ಸ್ಮಾರಕಗಳಿಗೆ ಅನ್ವಯಿಸುತ್ತಿತ್ತೇ ಹೊರತು ಆಗ್ರಾ ನಗರಕ್ಕಲ್ಲ. ಊರ ತುಂಬಾ ಎಲ್ಲಿ ನೋಡಿದರೂ ಗಲೀಜು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಟಿಪ್ಪಣಿ ಹಾಕಿದ್ದಕ್ಕೆ ಗೆಳೆಯನೊಬ್ಬ ಇದರಲ್ಲೂ ರಾಜಕೀಯ ಕಂಡುಹಿಡಿದು ವಾಟ್ಸಾಪಿನಲ್ಲಿ ಜಗಳಕ್ಕೆ ಬಂದಿದ್ದ!
ಕೋಟೆಯ ಹೊರಗಿನ ವೃತ್ತದಲ್ಲಿ ಶಿವಾಜಿಯ ಪುತ್ಥಳಿಯೊಂದಿದೆ. ಈ ಕೋಟೆಯಲ್ಲಿಯೇ ಔರಂಗಝೇಬ ಶಿವಾಜಿಯನ್ನು ಬಂಧಿಸಿಟ್ಟಿದ್ದಂತೆ. ಕೋಟೆಯೊಳಗೆ ಸುಮಾರು ಇನ್ನೂರು ವರ್ಷಗಳ ಅವಧಿಯ ರಚನೆಗಳು ಹರಡಿ ಕೊಂಡಿವೆ. ಕೋಟೆ ಬಹಳ ಆಕರ್ಷಕವಾಗಿದೆ. ಒಳಹೊಕ್ಕು ಬೆಟ್ಟದಂತಿರುವ ಜಾಗಕ್ಕೆ ಏರಿ ಹೋದರೆ ಒಂದೊಂದೇ ಸ್ಮಾರಕಗಳು ತಮ್ಮ ಕಥೆ ಹೇಳುತ್ತವೆ. ಆರಂಭದಲ್ಲಿಯೇ ಅಕ್ಬರನ ಈಗಿಲ್ಲದ ಅರಮನೆಯೊಂದಿದೆ. ಸುಮಾರು ೧೫೬೫ ರ ಹೊತ್ತಿಗೆ ನಿರ್ಮಾಣವಾದ (ಬಹುಶಃ ಮರು ನಿರ್ಮಾಣ) ಕೋಟೆಯಿದು. ಅದೇ ಹೊತ್ತಿಗೆ ಅಥವಾ ಹಿಂಚುಮುಂಚಿನ ಅವಧಿಯಲ್ಲಿಯೇ ಅಕ್ಬರನ ವಿಸ್ತಾರವಾದ ಅರಮನೆ ಇತ್ತಂತೆ. ಈಗ ಅದರ ಅವಶೇಷಗಳು ಮಾತ್ರ ಇವೆ. ಅಲ್ಲೊಂದು ಬಾವಿ ಇದೆ. ಸದ್ಯ ಗ್ರಿಲ್ ಬಳಸಿ ಮುಚ್ಚಿದ್ದಾರೆ. ಅ ಬಾವಿಯು ಸಮೀಪದಲ್ಲೇ ಇರುವ ಯಮುನಾ ನದಿಗಿಂತ ಬಹಳ ಎತ್ತರದಲ್ಲಿದೆ. ಕೋಟೆಯ ವಿಸ್ತಾರ 94 ಎಕರೆಗಳಂತೆ. ಬಹಳ ವಿಸ್ತಾರವಾಗಿದೆ. ಸುಜಾತ ಜಹಾಂಗೀರನ ಅರಮನೆ ಮುಂಭಾಗದಲ್ಲಿ ವಿರಮಿಸಿದಳು. ಹೀಗಾಗಿ ನಾನು ಪ್ರಣತಿ ಮತ್ತು ರಿಶಿ ಒಂದು ಗುಂಪಾಗಿ ಮುಂದುವರಿದೆವು.
ಆಗ್ರಾ ಕೋಟೆಯ ಒಂದು ಪಾರ್ಶ್ವದಲ್ಲಿ ತಾಜ್‌ಮಹಲ್ ಕಾಣುತ್ತದೆ. ಈ ಪಾರ್ಶ್ವ ಮಾತ್ರವೇ ಪ್ರವಾಸಿಗರಿಗೆ ಲಭ್ಯ. ಹೀಗಾಗಿ ಅಲ್ಲಿ ಆಗ್ರಾ ಸ್ಮಾರಕಗಳಿಗಿಂತ ಹೆಚ್ಚು ಸೆಳೆಯುವುದು ದೂರದಲ್ಲಿದ್ದರೂ ತಾಜ್ ಮಹಲೇ. ಪ್ರತೀ ಕಟ್ಟಡದ ಬಾಲ್ಕನಿ ಸಿಕ್ಕಾಗಲೂ ಇಲ್ಲಿಂದ ತಾಜ್ ಹೇಗೆ ಕಾಣುತ್ತದೆ ಎಂಬುದೇ ಕುತೂಹಲ. ಕಡೆಕಡೆಗೆ ಷಹಜಹಾನ್ ನ ಅಂತಃಪುರವೂ ಅಲ್ಲಿ ತಾಜಮಹಲು ಸ್ಪಷ್ಟವಾಗಿ ಕಾಣುವುದೂ, ಕುಳಿತು ಅದನ್ನು ನೋಡಲೆಂದೇ ಪೀಠವೂ ಇರುವುದು ಕಾಣುತ್ತದೆ. ಇದೇ ಅಂತಃಪುರದಲ್ಲಿ ತನ್ನ ಗತಿಸಿದ ಪತ್ನಿಯ ನೆನಪಲ್ಲಿ ಷಹಜಹಾನ್ ಹಲವು ವರ್ಷಗಳನ್ನು ತಾಜಮಹಲ್ ನೋಡುತ್ತಲೇ ಕಳೆದನಂತೆ.
ಉಳಿದಂತೆ ದಿವಾನಿ ಇ ಆಮ್, ದಿವಾನ್ ಇ ಖಾಸ್, ಮತ್ತೆರಡು ಸುಂದರವಾದ ಅಮೃತಶಿಲೆಯಿಂದ ನಿರ್ಮಿತವಾದ ಮಸ್ಜಿದ್ ಗಳು ಇವೆ. ಅವುಗಳಲ್ಲಿ ಒಂದು ರಾಜನದಂತೆ, ಮತ್ತೊಂದು ರಾಣಿವಾಸದವರಿಗಂತೆ. ಜಹಾಂಗೀರನ ಅರಮನೆ ಮುಂದೆ ಆತ ನಹಾನಕ್ಕೆ ಬಳಸುತ್ತಿದ್ದ ಕಲ್ಲು ತೊಟ್ಟಿಯೊಂದಿದೆ. ಸುಮಾರು ಐದು ಅಡಿ ಎತ್ತರದ ಮತ್ತು ಎಂಟು ಅಡಿ ವ್ಯಾಸದ, ಅದಕ್ಕೆ ಏರಿಹೋಗುವ ಮೆಟ್ಟಿಲುಗಳೂ ಇವೆ. ಈ ಆವರಣ ಸುತ್ತಾಡುವಾಗ ಹಲವು ಗುಹೆ ಮಾದರಿಯ ದಾರಿಯಲ್ಲಿ ಕರೆದೊಯ್ಯುತ್ತಾರೆ. ಆಲ್ಲೆಲ್ಲ ಪಕ್ಷಿಗಳ ಹಿಕ್ಕೆಯದೋ, ಮೂತ್ರದ್ದೋ ಇಲ್ಲವೇ ಗಾಳಿಯಾಡದ ಉಸಿರು ಕಟ್ಟಿಸುವಂಥ ಎಂಥದೋ ಕಮಟು ವಾಸನೆ. ಈ ಬದ್ಬೂಗೆ ಕಾರಣ ಕಲ್ಲ ಕಟ್ಟಡವೂ ಇರಬಹುದು. ಬಹುಶಃ ಅದಕ್ಕೇ ಅಂದಿನ ರಾಜರು ಕೂಡ ತಮ್ಮ ಅರಮನೆಗಳನ್ನು ವಾತಾನುಕೂಲಿಯಾಗಿ ಕಟ್ಟಿಗೆ ಇಲ್ಲವೇ ಮಣ್ಣಿನಿಂದ ನಿರ್ಮಿಸಿಕೊಳ್ಳುತ್ತಿದ್ದರೆಂದು ಕಾಣುತ್ತದೆ. ಅಕ್ಬರನೇ ಕಟ್ಟಿಸಿದ ಕೆಂಪು ಕಲ್ಲಿನ ಈ ಕೋಟೆ ಭದ್ರವಾಗಿದ್ದರೂ; ಅವನ ಅರಮನೆ ಇಲ್ಲದಿರಲು ಇದೂ ಕಾರಣವಿದ್ದೀತು.
ಶೀಷ್ ಮಹಲ್ ನಮಗೆ ಮಿಸ್ ಆಯ್ತು, ಅವಸರವೋ ಇಲ್ಲವೇ ಗೈಡ್ ಇಲ್ಲದ ಕಾರಣಕ್ಕೋ ಕಾಣೆ; ಆದರೆ ಇಲ್ಲಿ ಮಿಸ್ ಆದುದು ರಾಜಸ್ತಾನದಲ್ಲಿ ಕಾಣ ದೊರೆಯಿತು. ಕೋಟೆಯಿಂದ ಹೊರ ಬರುವಾಗ ಬಹುಶಃ ದಿವಾನ್ ಇ ಆಮ್ ಎದುರೆಂದು ಕಾಣುತ್ತದೆ ಒಂದು ಸುಂದರ ಗೋರಿ ಕಂಡುಬಂತು. ಬಹಳ ಕಲಾತ್ಮಕವಾಗಿರುವ ಅದು ಒಬ್ಬ ಬ್ರಿಟಿಷ್ ಅಧಿಕಾರಿಯದೆಂದು ಅಲ್ಲಿನ ಕಲ್ಲ ಮೇಲಿನ ಬರೆಹ ಅರುಹುತ್ತಿತ್ತು.
ಕೋಟೆಯಿಂದ ಹೊರಬಂದದ್ದೇ ನನ್ನ ಸಹಧರ್ಮಿಣಿ ರೂಮು ಸೇರಿ ರೆಸ್ಟ್ ಮಾಡುವ ಇರಾದೆ ವ್ಯಕ್ತಮಾಡಿದಳು. ದಿನೇಶ್ ಇಷ್ಟು ದೂರ ಬಂದು ಮಥುರಾ ನೋಡದೆ ಹೋಗೋದು ಹ್ಯಾಗೆ ಎಂದು ಏನೋ ಸ್ಕೆಚ್ ಹಾಕುತ್ತಿದ್ದರು. ಹಲವು ನನ್ನ ಪರಿಚಿತರು ಮಥುರಾದಲ್ಲಿ ಹಾಗೆ ನೋಡಲೇ ಬೇಕಾದ್ದು ಏನೂ ಇಲ್ಲ ಎಂಬಂತ ಚಿತ್ರಣ ನೀಡಿದ್ದರಿಂದ ನಮಗೆ ಕುತೂಹಲವೇನೂ ಇರಲಿಲ್ಲ. ಸಲ್ಮಾನ್ ಆಟೋದಲ್ಲಿ ನಾವು ಹೋಟೆಲ್ ಕಡೆ ಹೊರಟರೆ, ದಿನೇಶ್ ಕುಟುಂಬ ಮತ್ತೊಂದು ದಾರಿ ಹಿಡಿಯಿತು. ವಾಸ್ತವದಲ್ಲಿ ಇತ್ಮದ್ ಉದ್ ದೌಲವನ್ನು ಅಂದೇ ನೋಡುವ ಯೋಚನೆ ಇತ್ತಾದರೂ ಸಲ್ಮಾನ್ ಅಲ್ಲೇನೊ ಉತ್ಸವ ನಡೆಯುತ್ತಿರುವುದಾಗಿಯೂ, ಅಲ್ಲಿ ಈಗ ಹೋದರೆ ಟ್ರಾಫಿಕಿನಲ್ಲಿ ಸಿಕ್ಕಿ ಬೀಳಬಹುದು ಎಂದ. ಅವನನ್ನು ನಂಬದಿರಲು ಹೆಚ್ಚೇನೂ ಕಾರಣವಿಲ್ಲದ್ದರಿಂದ ಅದರ ವಿಸಿಟನ್ನು ಮಾರನೇ ದಿನಕ್ಕೆ ಮುಂದೂಡಿಕೊಂಡೆವು.
ಮಥುರಾಗೆ ಹೋಗುವ ಯೋಜನೆ ಕೈಬಿಟ್ಟ ದಿನೇಶ್ ಅವರ ತಂಡ ಬರ್ತ್ ಡೇ ಕೇಕಿನೊಂದಿಗೆ ಹೊಟೆಲ್ ರೂಮಿಗೆ ವಾಪಾಸು ಬಂತು. ಸಂಜೆ ರಿಶಿ ತನ್ನ ಬರ್ತ್ ಡೇಯನ್ನು ಆಗ್ರಾದಲ್ಲಿಯೇ ಆಚರಿಸಿಕೊಂಡ. ಅವನಿಗೆ ಅದು ಬಹಳ ವರ್ಷ ನೆನಪಲ್ಲಿ ಉಳಿಯಬಹುದು.
ನಹೀ ಚಾಹಿಯೇ!
ಇದು ನಾವು ಅಷ್ಟು ದಿನಗಳ ಪ್ರವಾಸದಲ್ಲಿ ಅತಿ ಹೆಚ್ಚು ಬಳಕೆ ಮಾಡಿದ ಹಿಂದಿ ಪದ ಪುಂಜ. ಪ್ರವಾಸಿ ಸ್ಥಳ ಅಂದಮೇಲೆ ಆಟೋದವರಿಂದ, ವ್ಯಾಪಾರದವರಿಂದ, ಗೈಡುಗಳು ಮತ್ತು ಕೆಮೆರಾಮೆನ್ ಗಳಿಂದ ಬಚಾವಾಗಲು ನಾವು ಕಂಡು ಕೊಂಡಿದ್ದ ಸುಲಭ ದಾರಿ. ಅವರು ಬಾಯಿ ಬಿಡುವ ಮುನ್ನವೇ ನಾವು ನಹೀ ಚಾಹಿಯೇ ಭಯ್ಯಾ ಎಂದು ಪಠಿಸುತ್ತಿದ್ದೆವು. ಆರುಷನ ಬರ್ತ್ ಡೇ ಸೆಲಬ್ರೇಟ್ ಮುಗಿದ ಮೇಲೆ ಚಹಾ ಕುಡಿಯಲೆಂದು ಹೋಟೆಲಿಂದ ಹೊರಬಿದ್ದೆವು. ಆಟೋವೊಂದು ಸಮೀಪ ಬಂತು. ನಾನು ತಿರುಗಿ ಕೂಡ ನೋಡದೆ ನಹೀ ಚಾಹಿಯೇ ಭಯ್ಯಾ ಎಂದೆ. ಆಟೋದವ ನಕ್ಕ, ಯಾರೆಂದು ತಿರುಗಿ ನೋಡಿದರೆ ಸಲ್ಮಾನ್. ಅಷ್ಟು ಹೊತ್ತಿಗೆ ಜೊತೆಗಿದ್ದ ಮಕ್ಕಳಿಬ್ಬರೂ ಸಲ್ಮಾನ್ ಭಯ್ಯಾನ ಜೊತೆ ಮಾತಿಗೆ ತೊಡಗಿದ್ದರು. ಪಕ್ಕದ ಸೌತ್ ಮೀಲ್ ಬೋರ್ಡ್ ನೇತು ಹಾಕಿದ್ದ ಹೋಟೆಲೊಂದಕ್ಕೆ ಡ್ರಾಪಿಸಿದ. ತಕ್ಕಮಟ್ಟಿಗೆ ಪರವಾಗಿಲ್ಲ ಎನಿಸುವ ದೋಸೆ ಕೊಟ್ಟ ಆತ. ಅಲ್ಲಿಯೇ ಊಟದ ಶಾಸ್ತ್ರವನ್ನು ಮುಗಿಸುವ ಎಂಬ ದಿನೇಶ್ ಮಾತು ಕೇಳಿದ್ದರೆ ಚೆನ್ನಿತ್ತು ಎಂದೆನಿಸಿದ್ದು ಅಂದು ರಾತ್ರಿ ಉಡುಪಿ ಹೋಟೆಲು ಎಂಬ ಬೋರ್ಡು ತಗುಲಿಸಿ ಕೊಂಡಿದ್ದ ಕಟ್ಟಡದಲ್ಲಿ ಶತಮಾನದ ಅಪಾಯಕಾರಿ ಊಟ ತಿಂದಾಗ!
ಮಾರನೇ ದಿನಕ್ಕೆ ಸಲ್ಮಾನ್ ತಾನೇ ಆಟೋದಲ್ಲಿ ಫತೇಪುರ್ ಗೆ ಕರೆದೊಯ್ಯುವುದಾಗಿ ಹೇಳಿದರೂ ಆ ದೂರಕ್ಕೆ ಆಟೋದಲ್ಲಿ ಹೋಗುವುದು ಸಾಧುವಾಗಲಾರದು ಎನಿಸಿ ಬೇರೊಂದು ಟ್ಯಾಕ್ಸಿ ಬುಕ್ ಮಾಡಿಕೊಂಡೆವು. ಬ್ಯಾಗೇಜು ಸಮೇತ ಹೊರಟು ಇತ್ಮದ್ ಉದ್ದೌಲ ಮತ್ತು ಫತೇಪುರ್ ಸಿಕ್ರಿ ಕಂಡು ಮುಗಿಸಿ ಜೈಪುರದ ಟ್ರೇನು ಹಿಡಿಯಬೇಕಿತ್ತು. ಎಂದಿನಂತೆ ಸೀಟು ಕಾಯ್ದಿರಿಸಿದ್ದೆವು. ಸಿಕಂದ್ರಾದಲ್ಲಿರುವ ಅಕ್ಬರ್ ಟಾಂಬ್ ನೋಡುವ ಕುತೂಹಲ ಇದ್ದರೂ ಅದು ಫತೇಪುರ್ ಗೆ ವಿರುದ್ಧ ದಿಕ್ಕಿನ ಊರಾಗಿತ್ತು ಹಾಗಾಗಿ ಅದನ್ನು ಕೈಬಿಟ್ಟೆವು. ಈ ನಡುವೆ ಭಾರೀ ಅಲ್ಲದಿದ್ದರೂ ಸಣ್ಣ ಶಾಪಿಂಗ್ ಆಯ್ತು. ಆಗ್ರಾದಲ್ಲಿ ಚರ್ಮದ ಉದ್ಯಮಗಳು ಬಹಳೇ ಇರುವುದರಿಂದ ಇತರೆಡೆಗೆ ಹೋಲಿಸಿದರೆ ಚರ್ಮದ ವಸ್ತುಗಳು ಕೊಂಚ ಸಸ್ತಾ. ಆದರೆ ಹುಷಾರಾಗಿ ವ್ಯಾಪಾರ ಮಾಡಬೇಕು. ಸಲ್ಮಾನ್ ಹಲವು ಸರ್ತಿ ಮಾರ್ಕೆಟ್ ವಿಷಯ ಎತ್ತಿದರೂ ಅದನ್ನು ನಾವು ಅಷ್ಟು ಪ್ರೋತ್ಸಾಹಿಸಲಿಲ್ಲ; ಆತ ಕೂಡ ನಮಗೆ ಕಿರಿಕಿರಿ ಮಾಡದೆ ಹೇಳಿ ಸುಮ್ಮನಾದ.
ಮಾರನೇ ದಿನ ಲಗ್ಗೇಜ್ ಸಮೇತ ತಯಾರಾಗಿ ನಿಂತರೂ ಡ್ರೈವರ್ ಬಂದದ್ದು ಕೊಂಚ ತಡವಾಯ್ತು. ಮತ್ತೇನೊ ಗಡಿಬಿಡಿಯಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಅವನಿಗೆ ಮೊದಲೇ ಹೇಳಿದ್ದಂತೆ ಮೊದಲಿಗೆ ಇತ್ಮದ್ ಉದ್ ದೌಲ ಗೆ ದೌಡಾಯಿಸಲು ಹೇಳಿದೆವು. ಆತ ಕಣಿ ಹಾಕ್ಕಂಡು ಮೊದಲು ಸಿಕ್ರಿ ಮುಗಿಸಿ ಬಂದು ಬಿಡೋಣ, ನಂತರ ಅವಕಾಶವಾದರೆ ಇತ್ಮದ್ ಉದ್ ದೌಲ ನೋಡೋಣ ಎಂದ. ಅದೂ ಅಲ್ಲದೆ ತಾಜ್ ಮಹಲ್ ನೋಡಿದ ಮೇಲೆ ಅಲ್ಲಿ ಹೋಗಿ ನೋಡೋವಂಥದ್ದೇನೂ ಇಲ್ಲ ಎಂದ. ನಾನು ಕಳೆದ ಬಾರಿ ಬಂದಾಗಲೂ ಟ್ಯಾಕ್ಸಿಯವನ ಮಾರ್ಕೆಟ್ ಕಮಿಷನ್ ಕಾರಣದಿಂದ ಈ ಸ್ಮಾರಕ ನೋಡುವುದು ತಪ್ಪಿಸಿಕೊಂಡಿದ್ದೆವು; ಈ ಬಾರಿ ಹಾಗಾಗಬಾರದೆಂದು ಹಟಕ್ಕೆ ಬಿದ್ದು ಹೋದೆವು. ವ್ಯರ್ಥವೆನಿಸಲಿಲ್ಲ.
ಇದು ಜಹಾಂಗೀರ್ ನ ಪತ್ನಿ ನೂರಜಹಾನಳ ತಂದೆ ಮಿರ್ಝಾ ಘಿಯಾಸ್ ಬೇಗ್ ಮತ್ತವನ ಪತ್ನಿಯ ಸಮಾಧಿ. 1622 ರಲ್ಲಿ ನಿರ್ಮಾಣವಾಗಿರುವ ಕಟ್ಟಡ. ಪುಟ್ಟದಾದರೂ ಗಮನ ಸೆಳೆಯುವಂತಿದೆ. ಇದು ಮತ್ತು ಸಿಕಂದ್ರಾದ ಅಕ್ಬರ್ ಟಾಂಬ್ ಎರಡೂ ತಾಜ್ ಮಹಲ್ ನಿರ್ಮಾಣಕ್ಕೆ ಸ್ಫೂರ್ತಿ ಎಂದು ಹೇಳಲಾಗುತ್ತದೆ. ಅಷ್ಟೇನೂ ಎತ್ತರವಲ್ಲದ ಜಗತಿಯ ಮೇಲೆ ನಿರ್ಮಿತವಾಗಿದೆ. ನಾಲ್ಕು ಕಡೆಯೂ ನೀರ ದಾರಿಗಳಿವೆ. ಸದ್ಯ ನೀರಿಲ್ಲ, ಯೂಟ್ಯೂಬಿನಲ್ಲಿ ನೀರು ಹರಿಯುತ್ತಿರುವ ವಿಡಿಯೋ ಲಭ್ಯವಿದೆ. ನದಿಯ ಮಗ್ಗುಲಿಗೇ ಇದೆ. ಮೇಂಟೆನೆನ್ಸ್ ಕೂಡ ಚೆನ್ನಾಗಿದೆ. ದಿನೇಶ್ ಅವರು ಹೇಳಿದಂತೆ, ತಾಜ್‌ಮಹಲ್ ನೋಡಿದ ಮೇಲೆ ಉಳಿದೆಲ್ಲವೂ ಸಪ್ಪೆ ಎನಿಸುವುದು ಸಹಜವೇ; ಆದರೆ ಪ್ರತೀ ಸ್ಮಾರಕಕ್ಕೂ ಚರಿತ್ರೆಯಲ್ಲಿ ತನ್ನದೇ ಮಹತ್ವ ಇರುತ್ತದೆ.
ಫತೇಪುರ್ ಸಿಕ್ರಿ ಆಗ್ರಾದಿಂದ ಕೇವಲ 38 ಕಿ.ಮೀ. ದೂರದಲ್ಲಿದ್ದರೂ ಬಹಳ ಸಮಯವೇ ಹಿಡಿಯಿತು. ಆಗ್ರಾ ನಗರದಿಂದ ಹೊರಬಂದು ಫತೇಪುರ್ ರಸ್ತೆ ತಲುಪೋ ಹೊತ್ತಿಗೆ ಡ್ರೈವರಣ್ಣ ಯಾಕೆ ಅವಸರ ಮಾಡಿದ ಅಂತ ಅರ್ಥವಾಯ್ತು. ಯಾವುದೊ ಮಾರ್ಕೆಟ್ ರಸ್ತೆ ಹಾಯ್ದು ಊರು ದಾಟಲೇ ಅರ್ಧ ತಾಸು ಹಿಡೀತು. ಆಗ್ರಾ ಸಣ್ಣ ಊರೇನಲ್ಲ. ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರೋ ಊರು. ಈಗಾಗಲೇ ಮೆಟ್ರೋ ಕಾಮಗಾರಿ ಆರಂಭವಾಗಿದೆ. ಇಡಿಯಾಗಿ ಯುಪಿಯಲ್ಲಿಯೇ ರಸ್ತೆ ಸರಿ ಇಲ್ಲವೋ, ಇಲ್ಲವೇ ನಾವು ಓಡಾಡಿದ ಪ್ರದೇಶದಲ್ಲಿ ಮಾತ್ರವೋ ಕಾಣೆ ಫತೇಪುರ್ ಸಿಕ್ರಿ ರಸ್ತೆಯಂತೂ ಅಧ್ವಾನ. ನಮ್ಮ ಡ್ರೈವರಣ್ಣ ಬೇರೆ ಅವಸರದ ಆಸಾಮಿ. ಒಂದು ಕಡೆ ಗುಂಡಿ ಅವಾಯ್ಡ್ ಮಾಡದೆ ಇಳಿಸಿಯೇ ಬಿಟ್ಟ. ಅರ್ಧ ಅಡಿಗೂ ಮೀರಿದ ಆಳದ ಗುಂಡಿ ನೀರು ತುಂಬಿದ್ದರಿಂದ ಅಂದಾಜಾಗಲಿಲ್ಲವೋ ಏನೊ. ಗಾಡಿಯ ಕೆಳಗಿದ್ದ ಸ್ಟೆಪ್ನಿ ಕಳಚಿ ಕೆಳಬಿತ್ತು. ಅದನ್ನು ಸರಿ ಮಾಡಲು ಮತ್ತರ್ಧ ತಾಸು ಹಿಡೀತು.
ಹಾಗೇ ಮಾತಿಗೆಳೆಯುತ್ತಿದ್ದಂತೆ ಅಲ್ಲಿನ ಸರ್ಕಾರವನ್ನು ವಾಚಾಮಗೋಚರ ಬೈದ. ಗೋಹತ್ಯೆ ಕಾನೂನು ತಂದು ರೈತರು ಬೆಳೆ ಕಾಪಾಡಿ ಕೊಳ್ಳೋದೆ ಕಷ್ಟವಾಗಿದೆ ಎಂದ. ಎಜುಕೇಶನ್ ಸಿಸ್ಟಂ ಸರಿ ಇಲ್ಲ ಎಂದ. ಆಗ್ರಾದಂಥ ನಗರದಲ್ಲಿ ಕೂಡ ಜಾನುವಾರುಗಳ ಕಾರಣಕ್ಕೆ ವಾಹನ ಸವಾರರು ಕಷ್ಟ ಪಡೋದು ಕಣ್ಣಿಗೆ ರಾಚುತ್ತಿತ್ತು. ಕಾರು ಅವನದೇ ಸ್ವಂತದ್ದಂತೆ. ರಸ್ತೆ ವಿಚಾರದಲ್ಲಿ ಅವನ ದೂರು ಸಾಧುವೇ ಆಗಿತ್ತು. ಹಾಗೇ ಮಾತಾಡ್ತಾ ತಾನು ಒಂದು ಪಕ್ಷದವನೆಂದೂ ಹೇಳಿಕೊಂಡ. ಅದೀಗ ಅಲ್ಲಿ ವಿರೋಧ ಪಕ್ಷ.
ಫತೇಪುರ ತಲುಪಿದಾಗ ಅಲ್ಲೇನೊ ಪಾರ್ಕಿಂಗ್ ಲಾಬಿಯ ಕಾರಣದಿಂದ ನಾವು ಕಿಲೋಮೀಟರ್ ದೂರದಲ್ಲಿಯೇ ಇಳಕೊಳ್ಳಬೇಕಾಯ್ತು. ಮತ್ತೆ ಅಲ್ಲಿಂದ ಐದಾರು ನೂರು ಮೀಟರಿಗೆ ಆಟೊ. ಅದೇ ಹೊತ್ತಿಗೆ ತುಂತುರು ಮಳೆ. ಫತೇಪುರ್ ಸಿಕ್ರಿ ಅಕ್ಬರನ ಕನಸಿನ ಊರು. ಆತ ಹೊಸತಾಗಿ ಕಟ್ಟಿಸಿದ ರಾಜಧಾನಿ. ಗುಜರಾತ್ ದಿಗ್ವಿಜಯವೂ ಇದಕ್ಕೆ ಕಾರಣವಂತೆ. ಇಡಿ ಊರು ಆವರಣ ಒಂದು ಬೆಟ್ಟದ ಮೇಲಿದೆ. ಕೆಳಗಿನಿಂದ ರಸ್ತೆ ಮೂಲಕ ಏರಿ ಹೋದರೆ ಬುಲಂದ್ ದರ್ವಾಜ ಕಾಣುತ್ತದೆ. ಅಲ್ಲಿಗೆ ತಲುಪಲು ಸುಮಾರು ಎಪ್ಪತ್ತೆಂಬತ್ತು ಕಡಿದಾದ ಮೆಟ್ಟಿಲುಗಳಿವೆ. ದಿಲ್ಲಿಯ ಅಲಾಯಿ ದರ್ವಾಝ ಸುಂದರವೆಂದು ಹೆಸರಾದರೆ ಇದು ಅತಿ ಎತ್ತರದ್ದು ಎಂದು ಜನಪ್ರಿಯ. ಪ್ರವೇಶ ದ್ವಾರಕ್ಕೆ ಹೋದಾಗ ಸಮಸ್ಯೆಯೊಂದು ಎದುರಾಯ್ತು. ಕೋಟೆಯ ಒಳಾವರಣದಲ್ಲಿ ಶೇಖ್ ಸಲೀಂ ಚಿಸ್ತಿ ಅವರ ದರ್ಗಾ ಇರುವ ಕಾರಣಕ್ಕೆ ಬೆತ್ತಲೆ ಕಾಲುಗಳಿಗೆ ಪ್ರವೇಶವಿಲ್ಲ. ನಮ್ಮ ದಿನೇಶ್ ಅಂದು ಶಾರ್ಟ್ಸ್ ತೊಟ್ಟು ಬಂದಿದ್ದರು. ಅಲ್ಲೇ ಒಂದು ಕೌಂಟರಿನಲ್ಲಿ ಪರಿಹಾರ ರೂಪದ ಲುಂಗಿಯೂ ಲಭ್ಯವಿದ್ದವು. ಅವುಗಳ ಬಣ್ಣವೊ ಕಣ್ಣಿಗೆ ಚುಚ್ಚುವಂತಿತ್ತು. ಅದನ್ನು ಸುತ್ತಿಕೊಂಡ ದಿನೇಶ್ ಅವರಿಗೆ ಮಂಗಳೂರು ಮೀನನಾಥನಂತೆ ಕಾಣುತ್ತಿದ್ದೀರಿ ಎಂದು ರೇಗಿಸಿದೆವು.
ಮಳೆ ಜೋರಾಗದಿದ್ದರೂ ಎಡೆಬಿಡದೆ ಹನಿ ಹಾಕುತ್ತಲೇ ಇತ್ತು. ಅಕ್ಬರ್ ಅತ್ಯುತ್ಸಾಹದಲ್ಲಿ ಕಟ್ಟಿದ ಈ ಊರು ನಂತರ ಅನಾಥವಾಗಲು ಚರಿತ್ರೆ ಎರಡು ಕಾರಣಗಳನ್ನು ಗುರ್ತಿಸುತ್ತದೆ. ಕೊಂಚ ಬರಪೀಡಿತ ಪ್ರದೇಶವಾದ ಅದು ನೀರಿನ ಕೊರತೆಯಿಂದ ಅನಾಥವಾಯ್ತು ಎಂದು ಕೆಲವರೂ; ಅಕ್ಬರ್ ಆಸಕ್ತಿಯಿಂದಲೇ, ವಿಶೇಷ ಮುತುವರ್ಜಿಯಿಂದಲೇ ನಿರ್ಮಿಸಿದರೂ ಆತನ ದಿನ್ ಇಲಾಹಿ ಕಲ್ಪನೆಗೆ ಆದ ಗತಿಯೇ ಇದಕ್ಕೂ ಆಯ್ತಂತೆ. ಬುಲಂದ್ ದರ್ವಾಜ ದಾಟಿ ಇರುವ ಮಸ್ಜಿದ್‌ನ ಬಲ ಭಾಗದಿಂದ ಹೊರ ಹೋದರೆ ಜೋದಾಬಾಯಿಯ ಅರಮನೆ ಸಿಗುತ್ತದೆ. ಅಲ್ಲಿಗೆ ಕಳೆದ ಸರ್ತಿ ಹೋಗಲಾಗಿರಲಿಲ್ಲ. ಈ ಬಾರಿ ಹೋದ ಶಾಸ್ತ್ರವನ್ನು ಮುಗಿಸಿದೆವು. ಅದೆ ಕೆಂಪು ಕಲ್ಲಿನ ಎರಡಂತಸ್ತಿನ ಕಟ್ಟಡ. ಆಗ್ರಾದ ಕೋಟೆಯೊಳಗಿದ್ದ ಜಹಾಂಗೀರ್ ಅರಮನೆಯಂಥದೇ ಇದೂ ಕೂಡ. ನಡುವಿನ ಆವಾರದಲ್ಲಿ ತುಳಸಿಕಟ್ಟೆಯಂಥದೊಂದು ಏನೊ ಇತ್ತು. ಅಕ್ಬರನ ರಜಪೂತ ಪತ್ನಿ ಜೋದಾಬಾಯಿ ಗುಜರಾತ್ ಮೂಲದವಳಂತೆ. ಹೀಗಾಗಿಯೋ ಇಲ್ಲ ಅಕ್ಬರ್ ಕಂಡ ಗುಜರಾತಿನ ಆಕರ್ಷಣೆಯೋ ಫತೇಪುರ್ ಸಿಕ್ರಿ ಯ ವಾಸ್ತುಶಿಲ್ಪದ ಮೇಲೆ ಗುಜರಾತಿ ವಾಸ್ತುಶಿಲ್ಪದ ಪ್ರಭಾವ ಢಾಳಾಗಿದೆ ಎನ್ನುತ್ತಾರೆ. ಅಂದ ಹಾಗೆ ಫತೇಪುರಸಿಕ್ರಿ ಎಂದರೆ ವಿಜಯದ ನಗರ ಎಂದರ್ಥವಂತೆ.
ಒಂದಷ್ಟು ಅರಮನೆಗಳ ಅವಶೇಷಗಳು, ಬೀರಬಲ್ಲನ ಅರಮನೆ ಇತ್ಯಾದಿ ನೋಡಿ ಬೆಟ್ಟವಿಳಿದು ಬರುವ ಹೊತ್ತಿಗೆ ಡ್ರೈವರಣ್ಣ ಅಲ್ಲಿಗೇ ಗಾಡಿಯೊಂದಿಗೆ ಹಾಜರಾಗಿದ್ದ. ಆಗ್ರಾದಿಂದ ಜೈಪುರಕ್ಕೆ ಹೊರಡಲು ಇನ್ನೂ ಸಮಯವಿತ್ತು. ಎಲ್ಲೊ ಒಂದೆಡೆ ಟೋಲಿನಲ್ಲಿ ಒಂದಷ್ಟು ಸಮಯ ವ್ಯರ್ಥವಾಗಿ ಸತ್ತಿತು. ಆಗ್ರಾ ಹತ್ತಿರ ಬರುತ್ತಲೂ ದಿನೇಶ್ ಆಘಾತದ ಸುದ್ದಿ ಕೊಟ್ಟರು. ನಮ್ಮ ಟ್ಯಾಕ್ಸಿ ರೈಲ್ವೇ ಸ್ಟೇಷನ್ ಗೆ ಐದು ಕಿ.ಮೀ. ದೂರವಿದೆ ಎಂದು ಎಣಿಸಿದ್ದರೆ ವಾಸ್ತವ ಬೇರೆಯೇ ಇತ್ತು. ಉತ್ತರ ಭಾರತದ ರಾಜ್ಯಗಳಲ್ಲಿ ಒಂದೊಂದೇ ಊರುಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ರೇಲ್ವೇ ನಿಲ್ದಾಣಗಳಿವೆ. ಆಗ್ರಾದಲ್ಲಿ ಸಹ ಮೂರು ನಿಲ್ದಾಣಗಳಿವೆ. ಮೇನ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಮತ್ತು ಫೋರ್ಟ್ ಸ್ಟೇಷನ್. ನಮ್ಮ ರಿಸರ್ವೇಷನ್ ಇದ್ದುದು ಫೋರ್ಟ್ ಸ್ಟೇಷನ್; ಆದರೆ ನಾವು ಹೊರಟಿದ್ದು ಕಂಟೋನ್ಮೆಂಟ್ ಸ್ಟೇಷನ್ ಕಡೆಗೆ. ಕಡೇ ಗಳಿಗೆಯಲ್ಲಿ ಈ ವಿಷಯ ಡ್ರೈವರಿಗೆ ಹೇಳಿದೆವು. ಮತ್ತೆ ಟ್ರೈನ್ ತಪ್ಪಬಹುದು ಎಂಬ ಆತಂಕವಿದ್ದರೂ ಹಾಗೇನೂ ಆಗಲಿಲ್ಲ. ಟ್ರೈನು ಹೊರಡುವ ಮೂರು ನಿಮಿಷಕ್ಕೆ ಮೊದಲು ಸೀಟು ಹಿಡಿದು ಕುಳಿತೆವು. ಊಟಕ್ಕೆ ಸಮಯ ಸಿಗಲಿಲ್ಲ. ಟ್ರೇನಿನಲ್ಲಿ ಮಾರಾಟಕ್ಕೆ ಬಂದ ಹಲವು ತಿಂಡಿಗಳ ರುಚಿ ನೋಡಿದೆವು. ಅಂತೂ ಉತ್ತರಪ್ರದೇಶದಿಂದ ರಾಜಸ್ತಾನದ ಕಡೆ ರೈಲು ಹೊಂಟಿತು..
ರೋಹಿತ್ ಅಗಸರಹಳ್ಳಿ
ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.