ಹೊಸದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆಯ ಸಂದರ್ಭದಲ್ಲಿ 4ರಿಂದ 5 ಯುದ್ಧ ವಿಮಾನಗಳನ್ನು ಧ್ವಂಸ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ರಿಪಬ್ಲಿಕನ್ ಪಕ್ಷದ ಶಾಸಕರೊಂದಿಗಿನ ಭೋಜನ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ 4ರಿಂದ 5 ಜೆಟ್‌ಗಳನ್ನು ಗುರಿಯಾಗಿ ಮಾಡಲಾಗಿದೆ ಎಂದು ಹೇಳಿದರು.
ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಎರಡೂ ದೇಶಗಳ ನಡುವೆ ಯುದ್ಧವನ್ನು ನಿಲ್ಲಿಸಲು ನಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದ ಟ್ರಂಪ್, ಈ ಧ್ವಂಸವಾದ ವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂಬುದನ್ನು ತಿಳಿಸಲಿಲ್ಲ.
ʼನಿಜವಾಗಿಯೂ, ಯುದ್ಧದ ಸಮಯದಲ್ಲಿ ಗಗನಕ್ಕೆ ಹಾರುತ್ತಿದ್ದ ವಿಮಾನಗಳನ್ನೇ ಗುರಿಯಾಗಿಸಿ ಧ್ವಂಸ ಮಾಡಲಾಗಿದೆ. ನಾಲ್ಕು ಅಥವಾ ಐದು ಇರಬಹುದು, ಆದರೆ ನನಗನ್ನಿಸುವಂತೆ ಐದು ವಿಮಾನಗಳು ಧ್ವಂಸವಾಗಿವೆʼ ಎಂದು ಟ್ರಂಪ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಂದ ಮಾಡಿಕೊಂಡ ನಂತರ, ಏರ್ ಮಾರ್ಷಲ್ ಎ.ಕೆ. ಭಾರ್ತಿ, ಪಾಕಿಸ್ತಾನದ ಫೈಟರ್ ಜೆಟ್‌ಗಳನ್ನು ಭಾರತ ಗುರಿಯಾಗಿ ಮಾಡಿ ಧ್ವಂಸ ಮಾಡಿದೆ ಎಂದು ತಿಳಿಸಿದ್ದರು. ಆದರೆ, ಈ ಆರೋಪವನ್ನು ಪಾಕಿಸ್ತಾನ ತಿರಸ್ಕರಿಸಿತ್ತು ಮತ್ತು ತಮ್ಮ ಒಂದು ವಿಮಾನಕ್ಕೆ ಮಾತ್ರ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿತ್ತು.
ಪಾಕಿಸ್ತಾನ ತನ್ನ ವಾಯುಪಡೆ ರಫೇಲ್ ಸೇರಿದಂತೆ, ಆರು ಭಾರತೀಯ ಜೆಟ್ ವಿಮಾನಗಳನ್ನು, ಧ್ವಂಸ ಮಾಡಿದೆ ಎಂದು ಹೇಳಿಕೊಂಡಿತ್ತು. ಆದರೆ, ಈ ಹೇಳಿಕೆಯನ್ನು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ತಿರಸ್ಕರಿಸಿದ್ದರು.