ರಾಜಕೀಯ ಲೆಕ್ಕಾಚಾರಗಳನ್ನು ವಾಸ್ತವಿಕ ಕಾರಣಗಳನ್ನಿಟ್ಟುಕೊಂಡು ಮಾಡಲಾಗುತ್ತದೆ. ಮೋದಿಯನ್ನು ಇಳಿಸುವ ಯೋಚನೆಯೂ ಇದೇ ಲೆಕ್ಕಾಚಾರವನ್ನು ಅವಲಂಬಿಸಿ. ಪ್ರಸ್ತುತ ಮೋದಿಯ ಇಮೇಜ್ ಕುಸಿದಿದೆ. ಹೀಗಾಗಿ ಸಂಘ ಪರಿವಾರಕ್ಕೆ ಮೋದಿ ಅಗತ್ಯವಿಲ್ಲ.
ಕಳೆದ ಕೆಲವು ವಾರಗಳಿಂದ ವಯಸ್ಸಿನ ಕಾರಣಕ್ಕಾಗಿ ಮೋದಿಯವರನ್ನು ಅವರ ಸ್ಥಾನದಿಂದ ಇಳಿಸಲಾಗುತ್ತದೆ ಎನ್ನುವ ಚರ್ಚೆಗಳು ರಾಜಕೀಯ ವಲಯಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ನಡೆಯುತ್ತಿದೆ. ಆದರೆ ಈ ಚರ್ಚೆಯಲ್ಲಿನ ತಪ್ಪು ಅಂಶವೆಂದರೆ ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅವರನ್ನು ಕುರ್ಚಿಯಿಂದ ಕೆಳಗಿಳಿಸಲಾಗುತ್ತಿದೆ ಎನ್ನುವುದು. ಈ ಚರ್ಚೆಗಳ ಪ್ರಕಾರ ಮೋದಿಗೆ 75 ವರ್ಷ ತುಂಬುತ್ತಿರುವುದರಿಂದ ಅವರನ್ನು RSS ಮತ್ತು BJP ಅಧಿಕಾರದಿಂದ ಕೆಳಗಿಳಿಸಲಿವೆ. ಆದರೆ RSS ಮತ್ತು BJP ಯನ್ನು ಸರಿಯಾಗಿ ಅರ್ಥಮಾಡಿಕೊಂಡವರು ಇಂತಹ ಚರ್ಚೆಗಳನ್ನು ಒಪ್ಪಲಾರರು.
ಈ ಹಿಂದೆ ಅಡ್ವಾನಿ ಮತ್ತು ಮುರಳಿ ಮನೋಹರ ಜೋಷಿಯವರನ್ನು ಕಾರಣಕ್ಕಾಗಿ ರಾಜಕೀಯದಿಂದ ಹೊರಗಿಡಲಾಗಿತ್ತು ಎನ್ನುವುದು ಹೊರಜಗತ್ತಿಗೆ ತಿಳಿಸಲಾದ ಸತ್ಯ. ಆದರೆ ಅವರಿಬ್ಬರು ಮೋದಿ-ಶಾ ರಾಜಕಾರಣದ ಶೈಲಿಗೆ ಹೊಂದುವುದಿಲ್ಲ ಎನ್ನುವ ಕಾರಣಕ್ಕಾಗಿ ಸಂಘ ಹೊರಗಿಟ್ಟಿತ್ತು ಎನ್ನುವುದು ರಾಜಕೀಯದ ಕುರಿತು ತಿಳುವಳಿಕೆ ಇರುವ ಎಲ್ಲರಿಗೂ ಗೊತ್ತಿರುವ ಸತ್ಯ.
ಒಂದು ವೇಳೆ RSS ಮತ್ತು BJP ಮೋದಿಯನ್ನು ಬದಲಾಯಿಸಲು ತೀರ್ಮಾನಿದ್ದೇ ಹೌದಾದರೆ ಅದಕ್ಕೆ ಕಾರಣ ಮೋದಿಯ ಅಸಮರ್ಥತೆಯೇ ಹೊರತು ವಯಸ್ಸು ಖಂಡಿತ ಅಲ್ಲ. ಮುಂದಿನ ದಿನಗಳಲ್ಲಿ ಮೋದಿಯ ಹೆಸರಿನಲ್ಲಿ ವೋಟು ಕೇಳುವುದು ಕಷ್ಟ. ಅಲ್ಲದೆ ಡ್ಯಾಮೇಜ್ ಆಗಿರುವ ಮೋದಿಯ ಇಮೇಜನ್ನು ರಿಪೇರಿ ಮಾಡುವುದು ಕೂಡಾ ಕಷ್ಟ. ಆ ಮಟ್ಟಿಗೆ ಮೋದಿಯ ಕಳಪೆ ಪ್ರದರ್ಶನ ಒಟ್ಟಾರೆ ಸರ್ಕಾರದ ಇಮೇಜನ್ನು ಹಾಳುಗೆಡವಿದೆ.
ಪ್ರಸ್ತುತ ಸಂಘಪರಿವಾರಕ್ಕೆ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದರಲ್ಲಿ ಆಸಕ್ತಿಯನ್ನು ಹೊಂದಿದೆಯೇ ಹೊರತು ಮೋದಿಯನ್ನು ಪ್ರಧಾನಿಯಾಗಿ ಮುಂದುವರೆಸುವುದರಲ್ಲಿ ಅಲ್ಲ. ಮೋದಿ ತಮ್ಮ ವರ್ಚಸನ್ನಷ್ಟೇ ಅಲ್ಲ, ಸರ್ಕಾರದ ಮೇಲಿನ ತಮ್ಮ ನಿಯಂತ್ರಣವನ್ನೂ ಕಳೆದುಕೊಂಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 2024ರ ಚುನಾವಣೆಯೂ ಮೋದಿಯ ವರ್ಚಸ್ಸು ಕುಸಿದಿರುವುದನ್ನು ಸ್ಪಷ್ಟವಾಗಿ ಹೇಳಿದೆ. ಇದೀಗ ಅವರಿಗೆ ಪಕ್ಷದ ಅಧ್ಯಕ್ಷನನ್ನಾಗಿ ತನ್ನ ಆಯ್ಕೆಯ ವ್ಯಕ್ತಿಯನ್ನೂ ಆರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮತ್ತು ಪಕ್ಷದ ಮೇಲೆ ಅವರಿಗಿದ್ದ ಮೊದಲಿನ ನಿಯಂತ್ರಣ ಕೈತಪ್ಪಿರುವುದಕ್ಕೆ ಇದು ಸಾಕ್ಷಿ. ಸಂಘ ಪರಿವಾರ ಮತ್ತು ಮೋದಿ ಪರಿವಾರದ ನಡುವಿನ ಭಿನ್ನಾಭಿಪ್ರಾಯ ಈಗ ಎದ್ದು ಕಾಣುವ ಅಂಶ. ಪಕ್ಷದ ಮೇಲೆ ಪರೋಕ್ಷ ಹಿಡಿತ ಸಾಧಿಸಲು ಬಯಸುತ್ತಿರುವ ಅಮಿತ್ ತನ್ನ ಕೈಗೊಂಬೆಯಾಗಿರುವ ಅಧ್ಯಕ್ಷನನ್ನು ಕೂರಿಸಲು ಸಂಘ ಪರಿವಾರ ಈಗ ಬಿಡುತ್ತಿಲ್ಲ.
2014ರಲ್ಲಿ ಮೋದಿಯೇ ಜಾರಿಗೆ ತಂದ 75 ವರ್ಷಗಳ ಕಾನ್ಸೆಪ್ಟಿನ ಕುರಿತು RSS ಒಳಗೂ ಚರ್ಚೆ ನಡೆಯುತ್ತಿರುವುದು ನಿಜ. ಆದರೆ ಅದು ಮೋದಿಯವರ ಮೇಲೆ ಪದವಿ ಬಿಟ್ಟು ಕೆಳಗಿಳಿಯುವಂತೆ ಒತ್ತಡ ಹೇರಲು ಮಾತ್ರ. ಮೋದಿಯವರ ರಾಜಿನಾಮೆ ಕುರಿತು ಚರ್ಚೆ ಮುನ್ನೆಲೆಗೆ ಬರಲು ಮುಖ್ಯ ಕಾರಣ ಅವರ ಕುಸಿದ ವರ್ಚಸ್ಸು ಮತ್ತು ದುರ್ಬಲ ಆಡಳಿತ ಎನ್ನುವುದು ನಿಸ್ಸಂದೇಹ.
ಒಂದು ರಾಜಕೀಯ ಇಮೇಜನ್ನು ಎಷ್ಟೇ ಸುಂದರವಾಗಿ ಕಟ್ಟಿದರೂ ಅದು ಒಂದು ದಿನ ಕುಸಿದು ಬೀಳುವುದನ್ನು ಯಾರಿಂದಲೂ ತಡೆಯಲಾಗದು. ಹಾಗೆ ನೋಡಿದರೆ ಮೋದಿ ವರ್ಚಸ್ಸು ಒಬ್ಬರು ಊಹಿಸಬಹುದಾದ ಸಮಯಕ್ಕಿಂತಲೂ ಹೆಚ್ಚು ಕಾಲ ಬಾಳಿಕೆ ಬಂದಿದೆ. ಅದು ಬಿಜೆಪಿಗೆ ಮೂರು ಮೂರು ಬಾರಿ ಅಧಿಕಾರ ತಂದುಕೊಟ್ಟಿದೆ. ಹನ್ನೊಂದು ಇಡೀ ಭಾರತದ ರಾಜಕಾರಣವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದೆಂದರೆ ತಮಾಷೆಯಲ್ಲ. ಆದರೆ ಕೊಟ್ಟ ಭರವಸೆಗಳು ಈಡೇರಿಸದಿರುವುದು ಮತ್ತು ಅವರ ಈಗಿನ ಆಲೋಚನೆಗಳು ಇಂದಿನ ಕಾಲಕ್ಕೆ ಸಲ್ಲದಿರುವುದು ಅವರ ಜನಪ್ರಿಯತೆಯ ಕುಸಿತಕ್ಕೆ ಕಾರಣವಾಗಿವೆ.
ಈಗ ಹನ್ನೊಂದು ವರ್ಷಗಳು ಕಳೆದ ನಂತರ ಜನರಲ್ಲಿ ಭಕ್ತಿಯ ಪೊರೆ ಕಳಚಿದೆ, ಅವರಿಗೆ ಮೋದಿಯ ನಿಜರೂಪ ಗೊತ್ತಾಗುತ್ತಿದೆ. ಅವರ ವೈಫಲ್ಯಗಳು ಢಾಳಾಗಿ ಕಣ್ಣಿಗೆ ಕಾಣುತ್ತಿವೆ. ಅದೇ ವಾಕ್ಚಾತುರ್ಯ, ಅದೇ ಭಾಷೆ, ಅದದೇ ಉಪಮೆಗಳು ಮತ್ತು ಅದೇ ಹಳಸಲು ತಂತ್ರಗಳು ಈಗ ತಮ್ಮ ಹೊಳಪನ್ನು ಕಳೆದುಕೊಂಡಿವೆ. ಉದ್ಯೋಗ ಸೃಷ್ಟಿ, ಬೆಲೆ ನಿಯಂತ್ರಣ, ಕಪ್ಪುಹಣ ವಾಪಸ್ ತರುವುದು ಮತ್ತು ಮಹಿಳೆಯರಿಗೆ ಸಾಮಾಜಿಕ ಭದ್ರತೆ ಒದಗಿಸುವಂತಹ ವಿಷಯಗಳಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ಮೋದಿಯವರ ಇತ್ತೀಚಿನ ಭರವಸೆಯಾದ ʼವಿಕಸಿತ ಭಾರತ – 2047ʼ ಎನ್ನುವುದು ಬೆದರಿಕೆಯಂತೆ ಕಾಣತೊಡಗಿದೆ.
ED ಮತ್ತು CBI ರೀತಿಯ ಸಂಸ್ಥೆಗಳ ದುರ್ಬಳಕೆ ಯಾವ ಮಟ್ಟಕ್ಕೆ ಹೆಚ್ಚಿದೆಯೆಂದರೆ ಇವೆರಡೂ ಸಂಸ್ಥೆಗಳು ವಿರೋಧ ಪಕ್ಷಗಳನ್ನು ವಿನಾಕಾರಣ ಬೆನ್ನಟ್ಟುತ್ತಿವೆ ಎನ್ನುವುದು ಈಗೀಗ ಚಿಕ್ಕ ಮಕ್ಕಳಿಗೂ ಅರ್ಥವಾಗತೊಡಗಿದೆ. ED ವಿಷಯದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್ ಕೂಡಾ ಒಂದೆರಡು ಬಾರಿ ಕಿಡಿ ಕಾರಿದೆ. ಚುನಾವಣಾ ಆಯೋಗ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ವರ್ತನೆಯೂ ಜನರಲ್ಲಿ ಬೇಸರ ಹುಟ್ಟಿಸಿದೆ. ಅವುಗಳ ಕುರಿತಾದ ಸಾರ್ವಜನಿಕ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಸಮರ್ಥ ಮತ್ತು ವಿಶ್ವಾಸರ್ಹ ರಾಜಕಾರಣಿಗಳ ತಂಡವೊಂದನ್ನು ಕಟ್ಟುವ ಬದಲು ಮೋದಿ ಶಾ, ಅಜಿತ್ ದೊವಲ್, ಜೈಶಂಕರ್ ಮತ್ತು ನಿರ್ಮಲಾ ಸೀತರಾಮನ್ ಅವರಂತಹ ಒಂದು ಸಣ್ಣ ಗುಂಪಿನ ಮೇಲೆ ಪೂರ್ತಿಯಾಗಿ ಅವಲಂಬಿತಗೊಂಡಿರುವುದು ಆಡಳಿತ ನಿಷ್ಕ್ರಿಯತೆಗೆ ಕಾರಣವಾಗಿದೆ. ರಾಜ್ಯಗಳಲ್ಲೂ ಪ್ರಬಲ ನಾಯಕರ ಬದಲು ತಮ್ಮ ಮಾತನ್ನು ಕೇಳಬಲ್ಲ ಸಣ್ಣ ನಾಯಕರಿಗೆ ಪಕ್ಷದ ಚುಕ್ಕಾಣಿಯನ್ನು ನೀಡುವ ಮೂಲಕ ಅಲ್ಲೂ ಭಿನ್ನಾಭಿಪ್ರಾಯ ಆಂತರಿಕೆ ಕಚ್ಚಾಟ ಹೆಚ್ಚಾಗುವಂತೆ ಮಾಡಿದ್ದಾರೆ.
ಇದೆಲ್ಲದರ ನಡುವೆಯೂ ಬಹಳ ಬುದ್ಧಿವಂತಿಕೆಯಿಂದ ಮೋದಿಯ ಕುಸಿಯುತ್ತಿರುವ ವರ್ಷಸ್ಸನ್ನು ಮತ್ತೆ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಜಾಗತಿಕವಾಗಿ ಮೋದಿಗೆ ಬಹಳ ಹೊಗಳಿಕೆ ಸಿಗುತ್ತಿದೆ ಎನ್ನುವುದು, ಅವರಿಗೆ ಸಣ್ಣಪುಟ್ಟ ದೇಶಗಳು ಪ್ರಶಸ್ತಿ ನೀಡುತ್ತಿರುವುದು ಇವೆಲ್ಲವೂ ಅದರ ಒಂದು ಭಾಗ. ಆದರೆ ಅಂತಹ ಪ್ರಯತ್ನವನ್ನೂ ಛಿದ್ರಗೊಳಿಸಿದ್ದು ಅಮೇರಿಕಾದ ನಡವಳಿಕೆ. ಅದು ಇತ್ತೀಚೆಗೆ ಸಾವಿರಾರು ಅಕ್ರಮ ವಲಸೆಗಾರರನ್ನು ಕೈಕಾಲು ಕಟ್ಟಿ ಅಪಮಾನಕರ ರೀತಿಯಲ್ಲಿ ವಿಮಾನದಲ್ಲಿ ಕಟ್ಟಿ ಹಾಕಿ ಭಾರತಕ್ಕೆ ವಿಮಾನದಲ್ಲಿ ಪ್ರಾಣಿಗಳನ್ನು ಕಳುಹಿಸುವಂತೆ ಕಳಿಸಿತ್ತು. ಇದು ಮೋದಿಯವ ವರ್ಚಸಿಗೆ ಆದ ಗಾಯದ ಮೇಲೆ ಖಾರದ ಪುಡಿ ಸುರಿದಂತಿತ್ತು.
ಚೈನಾ ಜೊತೆ ಸರಿಯಾಗಿ ವ್ಯವಹರಿಸದೆ ಮೋದಿ ಈಗಾಗಲೇ ಆ ದೇಶದ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಇಸ್ರೇಲ್ ಗಾಜಾದಲ್ಲಿ ನಡೆಸುತ್ತಿರುವ ನರಮೇಧದ ವಿಷಯದಲ್ಲಿ ಸರಿಯಾಗಿ ಸ್ಪಂದಿಸದೆ ದೇಶದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕದನ ವಿರಾಮ ನಿರ್ಣಯದ ಮೇಲಿನ ಮತದಾನವನ್ನು ಬಹಿಷ್ಕರಿಸಲು ಕೆಲವು ದೇಶಗಳೊಂದಿಗೆ ಕೈಜೋಡಿಸುವ ಮೂಲಕ ಭಾರತಕ್ಕೆ ಹಿನ್ನಡೆಯಾಗಿದೆ. ಗಾಝಾದಲ್ಲಿ ನಡೆದ ನರಮೇಧದ ಬಗ್ಗೆ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ, ಮೋದಿ ಸರ್ಕಾರ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಮಾದರಿಯ ಪ್ರತಿಭಟನೆಗೂ ಅವಕಾಶ ಮಾಡಿಕೊಡುತ್ತಿಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನವಿದೆ ಎಂಬ ಭಾರತದ ಹೇಳಿಕೆಯನ್ನು ಯಾವ ದೇಶವೂ ಒಪ್ಪದಿರುವುದು ನಮ್ಮ ರಾಜತಾಂತ್ರಿಕ ನೀತಿಯಲ್ಲಿನ ವಿನಾಶಕಾರಿ ವೈಫಲ್ಯವನ್ನು ಬಹಿರಂಗಪಡಿಸಿದೆ. ಮುಂಬೈ ದಾಳಿಯ ಸಮಯದಲ್ಲಿ, ಆಗಿನ ಮನಮೋಹನ್ ಸಿಂಗ್ ಸರ್ಕಾರವು ರಾಜತಾಂತ್ರಿಕ ಪ್ರತಿದಾಳಿಯ ಮೂಲಕ ಪಾಕಿಸ್ತಾನವನ್ನು ಸಂಪೂರ್ಣವಾಗಿ ಕಟ್ಟಿಹಾಕಿತ್ತು. ಮುಂಬೈ ದಾಳಿಯ ಸಮಯದಲ್ಲಿನ ಪರಿಸ್ಥಿತಿಗೆ ಹೋಲಿಸಿದರೆ ಇದು ಆತಂಕಕಾರಿ ಬೆಳವಣಿಗೆ. ಗಾಯದ ಮೇಲೆ ಬರೆ ಎಳೆದಂತೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ನಾನೇ ಮಾಡಿಸಿದ್ದು ಎಂದು ಟ್ರಂಪ್ ಪದೇ ಪದೇ ಹೇಳಿಕೊಂಡಿದ್ದಾರೆ. ಟ್ರಂಪ್ ಹೇಳಿಕೆಯನ್ನು ಸಾರ್ವಜನಿಕವಾಗಿ ನಿರಾಕರಿಸುವ ಧೈರ್ಯವನ್ನೂ ಮೋದಿ ಮಾಡಲಿಲ್ಲ. ಇದೆಲ್ಲವೂ ಅವರ 56 ಇಂಚಿನ ಇಮೇಜನ್ನು ಚಿಂದಿ ಚಿಂದಿ ಮಾಡಿವೆ.
ಅಮೇರಿಕಾದಲ್ಲಿ ಅದಾನಿ ಗುಂಪು ಎದುರಿಸುತ್ತಿರುವ ಕಾನೂನು ತೊಡಕುಗಳು ಮೋದಿಯವರು ಅಮೇರಿಕಾದ ವಿರುದ್ಧ ಉಸಿರೆತ್ತದಂತೆ ಮಾಡಿವೆ ಎನ್ನುವ ಊಹಾಪೋಹಗಳು ಈಗ ಎಲ್ಲೆಡೆ ಹರಡಿವೆ. ಭಾರತದ ಪ್ರಧಾನಿ ತಮ್ಮ ವೈಯಕ್ತಿಕ ಜವಬ್ಧಾರಿಯ ಭಾರಕ್ಕೆ ನಲುಗುತ್ತಿದ್ದಾರೆ ಎನ್ನುವ ಚರ್ಚೆಗೆ ಇದು ಕಾರಣವಾಗಿದೆ. ಪರಿಸ್ಥಿತಿ ಹೀಗಿರುವಾಗ RSS ಮತ್ತು BJP ಮೋದಿಯ ಹೊರತಾದ ತಮ್ಮ ಭವಿಷ್ಯದ ಕುರಿತು ಯೋಚಿಸಲು ತೊಡಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಮೋದಿಯ ವರ್ಚಸ್ಸು ಈಗ ಪೂರ್ತಿಯಾಗಿ ನೆಲಕಚ್ಚಿದೆ. ಅದನ್ನು ಇನ್ನು ಸರಿಪಡಿಸಲಾಗದು ಎನ್ನುವುದು ಸಂಘ ಪರಿವಾರದ ಅರಿವಿಗೆ ಬಂದಿದೆ.
ಮೋದಿಯವರನ್ನು ಅವರ ಸ್ಥಾನದಿಂದ ಕಿತ್ತು ಒಗೆಯಲು RSS ಮತ್ತು ಬಿಜೆಪಿಗೆ ಅವರ ವಯಸ್ಸಲ್ಲದೆ ಇನ್ನೂ ಹಲವು ಕಾರಣಗಳಿವೆ. ನೀಡಿದ ಭರವಸೆಗಳನ್ನು ಈಡೇರಿಸದಿರುವುದು, ಜಾಗತಿಕ ಮಟ್ಟದದಲ್ಲಿ ಭಾರತದ ಇಮೇಜ್ ಡ್ಯಾಮೇಜ್ ಆಗಿದೆ. ಭಾರತದ ಜಾತ್ಯಾತೀತ ಗುಣ ಪೂರ್ತಿಯಾಗಿ ನಾಶವಾಗಿದೆ. ಮೋದಿ ಗಾಂಧಿ ಪ್ರತಿಪಾದಿಸಿದ್ದ ಅಹಿಂಸೆಯ ಸೂತ್ರವನ್ನು ತಮ್ಮ ಬಲಪ್ರಯೋಗದ ರಾಜಕಾರಣದಿಂದ ನಾಶ ಮಾಡಿದ್ದಾರೆ.
ಮೋದಿಯ ಮೇಲಿನ ಅಸಮಾಧಾನಕ್ಕೆ ಖಂಡಿತ ವಯಸ್ಸು ಕಾರಣವಲ್ಲ. ವಯಸ್ಸನ್ನು ಮುಂದಕ್ಕೆ ಮಾಡುತ್ತಿರುವುದು ಜನರನ್ನು ಗೊಂದಲಕ್ಕೆ ದೂಡುವುದಕ್ಕೆ ಮಾತ್ರ ಮತ್ತು ಮೋದಿಯ ವೈಫಲ್ಯದಿಂದ ಪಕ್ಷದ ಮೇಲಾಗುವ ಹಾನಿಯನ್ನು ತಪ್ಪಿಸಲು ಮಾತ್ರ. ಮೋದಿಯನ್ನು ಕೆಳಗಿಳಿಸಲು ವಯಸ್ಸು ಮಾತ್ರವೇ ಕಾರಣ ಎನ್ನುವಂತಿದ್ದರೆ RSS ಇಂತಹ ಚರ್ಚೆಯೊಂದನ್ನು ಮುನ್ನೆಲೆಗೆ ತರುತ್ತಲೇ ಇರಲಿಲ್ಲ. ಏಕೆಂದರೆ ಸರಿಯಾಗಿ ಕೆಲಸ ಮಾಡಬಲ್ಲವರಿಗೆ ವಯಸ್ಸು ಒಂದು ತೊಡಕೇ ಅಲ್ಲ. ಸಂಘ ಪರಿವಾರದ ಗಮನಿವುರುದು ಮೋದಿ ಇನ್ನು ಮುಂದೆಯೂ ನಮಗೆ ಚುನಾವಣೆಗಳಲ್ಲಿ ಗೆಲುವು ತಂದುಕೊಡಬಲ್ಲರೇ, ಮತ್ತು ತಮ್ಮ ಅಂತರರಾಷ್ಟ್ರೀಯ, ಕಾರ್ಪೊರೇಟ್ ಬೆಂಬಲವನ್ನು ಕಾಪಾಡಿಕೊಳ್ಳಬಲ್ಲರೆ ಎನ್ನುವದರ ಕುರಿತಾಗಿ ಮಾತ್ರ. ಇವೆರಡೂ ಮೋದಿಯಿಂದ ಸಾಧ್ವಾಗುವಂತಿದ್ದರೆ ಮೋದಿ ವಯಸ್ಸೊಂದು ವಿಷಯವೇ ಅಲ್ಲ.
RSS-BJP ಮೋದಿಯ ಜಾಗಕ್ಕೆ ಇನ್ನೊಬ್ಬರನ್ನು ತಂದು ಕೂರಿಸುವ ಮೊದಲು ಅದಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳನ್ನು ಬಹಳ ವಾಸ್ತವಿಕ ಮತ್ತು ತರ್ಕಬದ್ಧ ನೆಲೆಯಲ್ಲಿ ಮಾಡಲಿದೆ. ಇಷ್ಟು ವರ್ಷಗಳ ಮೋದಿ ಎನ್ನುವ ಇಮೇಜ್ BJPಯನ್ನು ಆಡಳಿತ ಕುರ್ಚಿಯ ಮೇಲೆ ಕುಳ್ಳಿರಿಸಿತು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲದ ಮಾತು ಎನ್ನುವುದು ಅದಕ್ಕೂ ಮನವರಿಕೆಯಾಗಿದೆ. ಮೋದಿ ತಾನು ಭಾಷಣಗಳಲ್ಲಿ ದೇವರ ಅಂಶ, ನಾನು ನಾನ್ ಬಯಾಲಾಜಿಕಲ್ ಮನುಷ್ಯ ಎಂದೆಲ್ಲ ಹೇಳಿಕೊಳ್ಳುವ ಮಟ್ಟಕ್ಕೆ ಸ್ವಯಂ ಪ್ರಶಂಸೆಯ ಭ್ರಮೆಯಲ್ಲಿದ್ದರೂ ಜನರು ಅಂತಹ ಭ್ರಮೆಯನ್ನು ಕಳಚಿಕೊಂಡು ವಾಸ್ತವಕ್ಕೆ ಬಂದಿದ್ದಾರೆ. ಅದೇ ಈಗ ಸಂಘ ಪರಿವಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು.
ಕೆಲವು ರಾಜಕೀಯ ತಜ್ಞರು ಬಿಹಾರ ಚುನಾವಣೆ ಮೋದಿಯನ್ನು ಇನ್ನಷ್ಟು ವರ್ಷಗಳ ಕಾಲ ಪ್ರಧಾನಿ ಪದವಿಯ ಮೇಲೆ ಕುಳ್ಳಿರಿಸಬಹುದು ಎನ್ನುತ್ತಾರೆ. ಆದರೆ ಅದೂ ಕೂಡಾ ಕಷ್ಟ ಸಾಧ್ಯ, ಏಕೆಂದರೆ ಹರಿಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಗಳಲ್ಲಿನ ಗೆಲವು ಮೋದಿ ಮತ್ತು ಗ್ಯಾಂಗಿನ ಚುನಾವಣಾ ಅಕ್ರಮಗಳ ಕುರಿತಾದ ಅನುಮಾನಗಳನ್ನು ಹೆಚ್ಚಿಸಿವೆಯೇ ಹೊರತು, ಅವರ ವರ್ಚಸ್ಸನ್ನು ಸಕಾರಾತ್ಮಕವಾಗಿ ಹೆಚ್ಚಿಸಿಲ್ಲ. ಇದೀಗ ಬಿಹಾರದಲ್ಲಿ ಚುನಾವಣೆಗೂ ಮೊದಲು ಮತದಾರರ ಪಟ್ಟಿಯ ತಿದ್ದುಪಡಿಗೆ ಹೊರಟಿರುವುದು ಮೋದಿಯವರ ಚುನಾವಣಾ ಅಕ್ರಮಗಳ ಕುರಿತಾದ ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿವೆ.
RSS-BJP ಗೆ ಈಗ ಹೊಸ ಕುದುರೆ ಬೇಕಿದೆ. ಈಗಿರುವ ಕುದುರೆ ಇನ್ನು ಓಡಲಾರದು ಎನ್ನುವುದು ಅದರ ಗಮನಕ್ಕೆ ಬಂದಿದೆ. 2029ರ ಚುನಾವಣೆಯ ನೇತೃತ್ವವನ್ನು ಮತ್ತೆ ಮೋದಿಗೆ ವಹಿಸಲಾಗುತ್ತದೆ ಎಂದು ಭ್ರಮಿಸುವುದು ನಿಜಕ್ಕೂ ರಾಜಕೀಯ ಮುಗ್ಧತೆ. ಆದರೆ ಮೋದಿಯ ಬದಲಿಗೆ ಬಂದು ಕೂರುವವರು ಯಾರು ಎನ್ನುವುದನ್ನು ಮಾತ್ರ ಕಾಲವೇ ನಿರ್ಧರಿಸಬೇಕಿದೆ.
— ಆಧಾರ: ದಿ ವೈರ್ ಪ್ರಕಟಿಸಿದ್ದ ಸಂಜಯ್ ಝಾ ಅವರ ಬರಹ