ಭುವನೇಶ್ವರ್: ಒಡಿಶಾದಲ್ಲಿ ಭೀಕರ ಬಿಸಿಲಿನ ತಾಪಕ್ಕೆ ತತ್ತರಿಸಿದ ಇಬ್ಬರು ಶಿಕ್ಷಕರು, ಜನಗಣತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಬಿಸಿಲಿನ ತೀವ್ರತೆಗೆ ತುತ್ತಾಗಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ರಾಜ್ಯದಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, ಈ ಅವಘಡವು ಶಿಕ್ಷಕರ ಕುಟುಂಬಗಳಲ್ಲಿ ತೀವ್ರ ದುಃಖವನ್ನು ಉಂಟುಮಾಡಿದೆ.
ಮಯೂರ್‌ಭಂಜ್ ಜಿಲ್ಲೆಯ ಬೆಟನಾಟಿ ಪ್ರೌಢಶಾಲೆಯ ಶಿಕ್ಷಕರಾದ ರಾಜ್‌ಕಪೂರ್ ಹೆಂಬ್ರಮ್ ಅವರಿಗೆ ಜನಗಣತಿಗಾಗಿ ಮೂರು ಗ್ರಾಮಗಳನ್ನು ಹಂಚಿಕೆ ಮಾಡಲಾಗಿತ್ತು. ಶನಿವಾರ ಮನೆ-ಮನೆಗೆ ತೆರಳಿ ಸರ್ವೆ ಮಾಡುತ್ತಿದ್ದಾಗ, ವಿಪರೀತ ಬಿಸಿಲಿಗೆ ಅವರು ತೀವ್ರವಾಗಿ ಅಸ್ವಸ್ಥಗೊಂಡರು. ಜನಗಣತಿ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗಿದ ನಂತರ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಇನ್ನೊಂದು ಪ್ರಕರಣದಲ್ಲಿ, ಸುಂದರ್‌ಗಢ ಜಿಲ್ಲೆಯ ಜರಾಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅನುರಾಗ್ ಎಕ್ಕಾ ಅವರು ಕೂಡ ಶನಿವಾರ ಜನಗಣತಿ ಕರ್ತವ್ಯ ನಿರ್ವಹಿಸುವಾಗ ಬಿಸಿಲಿನ ಹೊಡೆತಕ್ಕೆ ಸಿಲುಕಿದರು. ಆರಂಭದಲ್ಲಿ ಅವರನ್ನು ಗುರುಂಡಿಯಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ಕೊನೆಯುಸಿರೆಳೆದರು.
ಜನಗಣತಿಯಂತಹ ಪ್ರಮುಖ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಶಿಕ್ಷಕರು ಹೀಗೆ ಬಿಸಿಲಿಗೆ ಬಲಿಯಾಗಿರುವುದು ಸ್ಥಳೀಯವಾಗಿ ಆತಂಕ ಮೂಡಿಸಿದೆ. ಈ ಘಟನೆಗಳ ಕುರಿತು ಪ್ರತಿಕ್ರಿಯಿಸಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಂದ ವರದಿ ಪಡೆದ ನಂತರವೇ ಸಾವಿಗೆ ನಿಖರವಾದ ಕಾರಣಗಳು ತಿಳಿಯಲಿವೆ ಎಂದು ತಿಳಿಸಿದ್ದಾರೆ.
