ಉಡುಪಿ: ದೇಶದ ಗಮನ ಸೆಳೆದಿರುವ ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೊಬೈಲ್ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಉಡುಪಿ ಕಾಲೇಜಿನಲ್ಲಿ ಸತತ ಐದು ಗಂಟೆಗಳ ಸುಧೀರ್ಘ ಕಾಲದ ಸಭೆ ನಡೆಸಿದ್ದಾರೆ.
ಸತತ 5 ಗಂಟೆಗಳ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಡನೆ ವಿವರವಾಗಿ ಮಾತನಾಡಿದ ಅವರು, “ಈಗಷ್ಟೇ ತನಿಖೆ ಆರಂಭ ಮಾಡಿದ್ದೇನೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆಯಾಯಿತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈಗಷ್ಟೇ ತನಿಖೆ ಆರಂಭಿಸಿದ್ದೇವೆ, ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ಸಾಕ್ಷಿ ಸಿಕ್ಕಿದೆಯಾ ಎನ್ನುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಪೊಲೀಸರ ಹೇಳಿಕೆ ಹೊರತಾಗಿ ಸದ್ಯ ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ” ಎಂದು ಮನವಿ ಮಾಡಿದರು.
“ಪ್ರಕರಣದ ಕುರಿತು ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ರೂಮರ್‌ಗಳಿಗೆ, ವಾಟ್ಸಪ್ ಮೆಸೇಜ್‌ಗಳಿಗೆ ಗಮನ ಕೊಡಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ” ಎಂದರು.
ಘಟನೆಗೆ ಸಂಬಂಧಿಸಿದ ಫೋನುಗಳನ್ನು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಸದ್ಯಕ್ಕೆ ಇಷ್ಟು ಮಾತ್ರವೇ ಹೇಳಲು ಸಾಧ್ಯ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಹೋದಲ್ಲೆಲ್ಲ ನಮ್ಮನ್ನು ಹಿಂಬಾಲಿಸಿ ತೊಂದರೆ ಕೊಡಬೇಡಿ ಎಂದು ಮಾಧ್ಯಮಗಳ ಬಳಿ ವಿನಂತಿಸಿಕೊಂಡರು. ಸದ್ಯ ನನ್ನ ಬಳಿ ನಿಮಗಾಗಿ ಯಾವುದೇ ಸುದ್ದಿಯಿಲ್ಲ. ಮಹಿಳಾ ಆಯೋಗಕ್ಕೆ ದೂರು ಬಂದ ಕಾರಣ ನಾನು ಇಲ್ಲಿಯವರೆಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನಾನು ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಇಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರ. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ, ಕಾಯಬೇಕು. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ. ಟಾಯ್ಲೆಟ್‌ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ ಎಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದು ಖುಷ್ಬು ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ವಿಷಯ, ಬಹಳ ಸೂಕ್ಷ್ಮವಾದ ವಿಷಯ ಇದು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದರು.
ಇಂದು ಬಿಜೆಪಿ ಪಕ್ಷ ಮತ್ತು ABVP ಸಂಘಟನೆಗಳು ಉಡುಪಿ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು. ಬೆಂಗಳೂರಿನಲ್ಲಿ ಗೃಹ ಸಚಿವರ ಮನೆಗೆ ನುಗ್ಗಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.