ತುಮಕೂರು: ಬಾಣಂತಿ ಮತ್ತು ಮಗುವನ್ನು ಸೂತಕದ ಕಾರಣಕ್ಕೆ ಮನೆಯಿಂದ ಹೊರಗಿಟ್ಟು ಮಗುವಿನ ಸಾವಿಗೆ ಕಾರಣವಾಗಿದ್ದ ಘಟನೆ ತುಮಕೂರಿನ ಕೋರ ಎನ್ನುವಲ್ಲಿ ಸುದ್ದಿಯಾಗಿತ್ತು. ಕಾಡುಗೊಲ್ಲ ಸಮುದಾಯದ ಮೌಢ್ಯದ ಕಾರಣಕ್ಕೆ ಸಣ್ಣ ಮಗುವೊಂದು ತೀರಿಕೊಂಡು ವಿಷಯ ಚರ್ಚೆಗೆ ಗ್ರಾಸವಾಗಿತ್ತು.
ಈ ಹಿನ್ನಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ ನೂರುನ್ನೀಸ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳಿಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಗು ಮೃತಪಟ್ಟ ನಂತರವೂ ಮಹಿಳೆಯನ್ನು ಊರೊಳಗೆ ಸೇರಿಸದೆ ಸುರಿವ ಮಳೆಯಲ್ಲೇ ಗುಡಿಸಲಿನಲ್ಲಿ ಬಿಟ್ಟ ಕುರಿತು ಊರಿನ ಜನರಿಂದ ಮಾಹಿತಿ ಪಡೆದ ನ್ಯಾಯಾಧೀಶರು ಊರಿನ ಜನರಿಗೆ ತಿಳುವಳಿಕೆ ಹೇಳಿ ಮಹಿಳೆಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಗುಡಿಸಲನ್ನು ಕೆಡವಿ, ಮಹಿಳೆಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದರು.
ಈ ಕುರಿತು ಮಾತನಾಡಿದ ಅವರು “ಆರೋಗ್ಯದ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನೋದನ್ನು ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ತಪ್ಪಿಸವರ ವಿರುದ್ಧ ಕಠಿಣ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು, ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ” ಎಂದರು.