ಹಲವಷ್ಟು ವರ್ಷಗಳ ಹಿಂದೆ ಅಂಟು ಕಾಯಿಲೆಯಾಗಿ ಹರಡುತ್ತಿದ್ದ ‘ಮದ್ರಾಸ್ ಐ’ (ಕಣ್ಣಿನ ಸೋಂಕು) ಈಗ ಮತ್ತೆ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ರಾಜ್ಯದ ನಾನಾ ಕಡೆಗಳಲ್ಲಿ, ನಾನಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ಈ ಸೋಂಕು ತಗುಲುತ್ತಿದ್ದು, ಸುಲಭವಾಗಿ ಹರಡಲು ದಾರಿಯಾದಂತಾಗಿದೆ.
ಇದು ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇದಕ್ಕೆ ಇಲ್ಲದಾಗಿದೆ. ಹೀಗಾಗಿ ಈ ಬಗ್ಗೆ ಮುಂಜಾಗ್ರತೆಯೇ ಇದಕ್ಕೆ ನಾವು ವಹಿಸುವ ಮೊದಲ ಸುರಕ್ಷತಾ ಕ್ರಮ ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಜೊತೆಗೆ ಇದೊಂದು ಅಂಟು ಕಾಯಿಲೆ ಆಗಿರುವ ಹಿನ್ನೆಲೆಯಲ್ಲಿ ‘ಮದ್ರಾಸ್ ಐ’ ಸೋಂಕು ತಗುಲಿರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದೇ ಸೂಕ್ತ ಎಂದು ವೈದ್ಯರು ಹೇಳುತ್ತಾರೆ.
ಇದೊಂದು ವೈರಾಣು ಆಗಿರುವ ಕಾರಣ ಒಬ್ಬರಿಂದ ಒಬ್ಬರಿಗೆ ಸೋಂಕಿರುವ ವ್ಯಕ್ತಿಯ ಕೈಗಳಿಂದ ಮತ್ತು ಅವರು ಬಳಸಿರುವ ಬಟ್ಟೆ ಹಾಗೂ ವಸ್ತುಗಳು ಸಂಪರ್ಕಕ್ಕೆ ಬಂದಾಗ ಈ ರೋಗಾಣು ಹರಡುತ್ತದೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪಿಚ್ಚುಗಟ್ಟುವುದು, ಕಣ್ಣಿನಲ್ಲಿ ಏನಾದರು ಬಿದ್ದಿರುವಂತಹ ಅನುಭವ ಇದರ ಲಕ್ಷಣವಾಗಿದೆ.
ರಾಜ್ಯದ ನಾನಾ ಕಡೆಗಳಲ್ಲಿ ಈ ಸೋಂಕು ಕಾಣುತ್ತಿದ್ದು, ಕೆಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಕೂಡಾ ಘೋಷಿಸಲಾಗಿದೆ. ಅಂತಹ ಮಾರಣಾಂತಿಕ ಸೋಂಕು ಇದಲ್ಲದೇ ಇದ್ದರು, ಚಿಕ್ಕ ಮಕ್ಕಳಿಗೆ ಇದು ತಗುಲಿ ಸಣ್ಣಪುಟ್ಟ ಅನಾಹುತ ಆಗುವುದನ್ನು ತಪ್ಪಿಸಲು ಶಾಲಾ ಆಡಳಿತ ಮಂಡಳಿ, ಆರೋಗ್ಯ ಇಲಾಖೆಯ ಸಲಹೆಯಂತೆ ನಡೆದುಕೊಳ್ಳುತ್ತಿವೆ. ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಿ ಇತರೆ ಬೇರೆ ಮಕ್ಕಳೊಂದಿಗೆ ಬೇರೆಯದೇ ಇರುವ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳು ಅಥವಾ ಅವರ ಪಾಲಕರಿಗೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಬೇಕು.
ವೈದ್ಯರ ಸಲಹೆ ಅಥವಾ ಚೀಟಿಯನ್ನು ಪಡೆಯದೇ ಔಷಧಿ ಅಂಗಡಿಗಳಿಂದ ನೇರವಾಗಿ ಕಣ್ಣಿನ ಔಷಧಿಗಳನ್ನು ಪಡೆದು ಬಳಸಬಾರದು. ಎಲ್ಲಾ ವಿದ್ಯಾರ್ಥಿಗಳಿಗೆ ಆಗಾಗ್ಗೆ ಸೋಪ್ ನಿಂದ ಕೈತೊಳೆಯಲು ಅಥವಾ ಸಾನಿಟೈಜರ್ ಬಳಸಲು ತಿಳಿಸಬೇಕು. ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇತರರಿಂದ ದೂರವಿರಬೇಕು. ಹಾಗೂ ಕನ್ನಡಕಗಳನ್ನು ಧರಿಸಿ, ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ, ಮೊಬೈಲ್, ಕಂಪ್ಯೂಟರ್ ನೋಡುವುದು ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಹತ್ತಿರ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ನುರಿತ ವೈದ್ಯರು ಸಲಹೆ ನೀಡಿದ್ದಾರೆ.