ಸಕಲೇಶಪುರ: ಗೋಮಾಂಸ ಸೇವನೆಯ ವಿಷಯದಲ್ಲಿ ಸ್ಥಳೀಯ ದಲಿತ ಯುವಕರನ್ನು ಭಜರಂಗ ದಳದ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿರುವ ಘಟನೆ ವರದಿಯಾಗಿದೆ.
ತಾಲೂಕಿನ ಹಾಲೇಬೇಲೂರು ಕೊಪ್ಪಲು ಕಣಗಲ್ ಮನೆ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಅನೈತಿಕ ಪೊಲೀಸ್ ಗಿರಿ ನಡೆಸಿರುವ ಭಜರಂಗದಳದ ಕಾರ್ಯಕರ್ತರ ಮೇಲೆ ಪರಿಶಿಷ್ಟ ಜಾತಿ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 324, 504,506 ಸೆಕ್ಷನ್ ನಡಿ ಪ್ರಕರಣ ದಾಖಲಾಗಿದ್ದು, ಶಿವು ಜಿಪ್ಪಿ, ರವಿ, ರವಿ ಮಳಲಿ ಮತ್ತು ಶ್ರೀಜಿತ್ ಗೌಡ ಮೇಲೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಗ್ರಾಮಾಂತರ ಪೊಲೀಸರು ಗೋ ಮಾಂಸ ಮಾರಾಟ ಆರೋಪದ ಮೇರೆಗೆ ಚಂದ್ರು ಮತ್ತು ಲೋಕೇಶ್ ಎಂಬ ದಲಿತ ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸುಮಾರು 100 ಕೆ. ಜಿಗೂ ಹೆಚ್ಚು ಗೋಮಾಂಸ ವಶ ಪಡೆಯಲಾಗಿದೆ ಎಂದು ಪಿ.ಎಸ್.ಐ ಬಸವರಾಜ್ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದಷ್ಟೆ, ಸಾಕಲು ಕರುವೊಂದನ್ನು ಕೊಂಡೊಯ್ಯುತ್ತಿದ್ದ ದಲಿತ ಯುವಕನ ಮೇಲೆ ಭಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಪ್ರಕರಣ ಸಂಬಂಧ ಸಾವಿರಾರು ದಲಿತ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.