ದೆಹಲಿ ಹೈಕೋರ್ಟ್ ಎಂಟು ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಜೆಪಿ ಉಚ್ಛಾಟಿತ ನಾಯಕ ಹಾಗೂ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ನ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಆತನಿಗೆ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ. ಸೆಂಗಾರ್ 15 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಮೂವರು ಶ್ಯೂರಿಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದು, ಸೆಂಗಾರ್ ಸಂತ್ರಸ್ತೆಯ ಮನೆಯ ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯ ವಿಧಿಸಿರುವ ಈ ಷರತ್ತುಗಳಲ್ಲಿ ಯಾವುದನ್ನಾದರೂ ಉಲ್ಲಂಘಿಸಿದರೆ ತಕ್ಷಣವೇ ಜಾಮೀನು ರದ್ದಾಗಲಿದೆ ಎಂದು ಪೀಠವು ಎಚ್ಚರಿಸಿದೆ. ಅಲ್ಲದೆ ಸೆಂಗಾರ್ ತನ್ನ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ಪ್ರತಿ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ.
2017ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 2019ರ ಡಿಸೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯವು ಸೆಂಗಾರ್‌ನನ್ನು ದೋಷಿಯೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿದ್ದ ಮೇಲ್ಮನವಿಯು ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ಅದರ ಇತ್ಯರ್ಥವಾಗುವವರೆಗೆ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲಾಗಿದೆ. ಇದಲ್ಲದೆ ಸಂತ್ರಸ್ತೆಯ ತಂದೆಯ ಕಸ್ಟಡಿ ಕೊಲೆ ಪ್ರಕರಣದಲ್ಲಿಯೂ ಆತನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಈಗಾಗಲೇ ಜೈಲಿನಲ್ಲಿ ಸುದೀರ್ಘ ಕಾಲ ಕಳೆದಿದ್ದೇನೆ ಎಂಬ ಆಧಾರದ ಮೇಲೆ ಶಿಕ್ಷೆ ರದ್ದುಪಡಿಸುವಂತೆ ಆತ ಸಲ್ಲಿಸಿರುವ ಮತ್ತೊಂದು ಮೇಲ್ಮನವಿಯೂ ನ್ಯಾಯಾಲಯದ ಪರಿಗಣನೆಯಲ್ಲಿದೆ.
