ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್ ಅವರ ಭಾವಚಿತ್ರವನ್ನು ಅನಾವರಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, “ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಚಳವಳಿಯ ದಿಗ್ಗಜ ಪೆರಿಯಾರ್ ಭಾವಚಿತ್ರ ಅನಾವರಣಗೊಳಿಸಿರುವುದು ನನ್ನ ಜೀವಮಾನದ ಶ್ರೇಷ್ಠ ಗೌರವ” ಎಂದು ಹೇಳಿದರು.
ಲಂಡನ್ ಸ್ವಾಭಿಮಾನ ಚಳುವಳಿ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಎಂಕೆ ಸ್ಟಾಲಿನ್, “ಆಕ್ಸ್‌ಫರ್ಡ್ ವಿವಿಯಲ್ಲಿ ಪೆರಿಯಾರ್ ಭಾವಚಿತ್ರ ದ್ರಾವಿಡ ನಾಯಕನ ಸಿದ್ಧಾಂತದ ಜಾಗತಿಕ ಪ್ರಸ್ತುತತೆಯನ್ನು ಗುರುತಿಸುತ್ತದೆ” ಎಂದು ಸಂತಸ ವ್ಯಕ್ತಪಡಿಸಿದರು.
“ದ್ರಾವಿಡ ಚಳುವಳಿಯ ನೇತಾರ ಮತ್ತು ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ವೈಚಾರಿಕ ಹಣತೆ, ಇಂದು ಜಗತ್ತಿಗೆ ದಾರಿದೀಪವಾಗಿ ಬೆಳಗುತ್ತಿದೆ” ಎಂದು ಹೇಳಿದ್ದಾರೆ.
ಪೆರಿಯಾರ್ ಅವರ ಮೊಮ್ಮಗ ನಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪೆರಿಯಾರ್ ಇಡೀ ಜನಾಂಗಕ್ಕೆ ಸ್ವಾಭಿಮಾನವನ್ನು ತುಂಬಿದ ಧೀಮಂತ ನಾಯಕ. ಅವರ ತತ್ವಶಾಸ್ತ್ರ ತಮಿಳುನಾಡನ್ನು ಮೀರಿ ವಿಶ್ವಾದ್ಯಂತ ಮಾನವೀಯತೆಯನ್ನು ಪ್ರೇರೇಪಿಸಿದೆ” ಎಂದು ಎಂಕೆ ಸ್ಟಾಲಿನ್ ಹೇಳಿದರು.
ಇದೇ ವೇಳೆ ಸಮ್ಮೇಳನದಲ್ಲಿ ವಿದ್ವಾಂಸರಾದ ಎ.ಆರ್. ವೆಂಕಟಾಚಲಪತಿ ಮತ್ತು ಕಾರ್ತಿಕ್ ರಾಮ್ ಮನೋಹರನ್ ಅವರು ಸಂಕಲಿಸಿದ “ದಿ ಕೇಂಬ್ರಿಡ್ಜ್ ಕಂಪ್ಯಾನಿಯನ್ ಟು ಪೆರಿಯಾರ್” ಎಂಬ ಇಂಗ್ಲಿಷ್ ಸಂಶೋಧನಾ ಸಂಪುಟವನ್ನು ಬಿಡುಗಡೆ ಮಾಡಲಾಯಿತು.