ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ವಿರುದ್ಧ ಉತ್ತರ ಪ್ರದೇಶದಾದ್ಯಂತ ಸಾರ್ವಜನಿಕರು ನಡೆಸಿದ ತೀವ್ರ ಪ್ರತಿಭಟನೆಗೆ ಮಣಿದಿರುವ ಅಲ್ಲಿನ ಬಿಜೆಪಿ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಪ್ರತಿಯೊಬ್ಬ ಗ್ರಾಹಕರು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಬಳಸುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ಯೋಗಿ ಆದಿತ್ಯನಾಥ್ ಸರ್ಕಾರವು, ಹಳೆಯ ಪೋಸ್ಟ್-ಪೇಯ್ಡ್ ಬಿಲ್ಲಿಂಗ್ ವಿಧಾನವನ್ನೇ ಮರುಸ್ಥಾಪಿಸುವುದಾಗಿ ಘೋಷಿಸಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ವಿದ್ಯುತ್ ಗ್ರಾಹಕರಿಗೆ ಅತಿಯಾದ ಬಿಲ್ ಪಾವತಿಯ ಆತಂಕದಿಂದ ಸದ್ಯಕ್ಕೆ ಮುಕ್ತಿ ಸಿಕ್ಕಂತಾಗಿದೆ.
ಸರ್ಕಾರದ ಈ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಎಲ್ಲಾ ವಿದ್ಯುತ್ ಸಂಪರ್ಕಗಳು ಪೋಸ್ಟ್-ಪೇಯ್ಡ್ ಮಾದರಿಯಲ್ಲೇ ಕಾರ್ಯನಿರ್ವಹಿಸಲಿವೆ. ಗ್ರಾಹಕರು ಒಂದು ತಿಂಗಳು ವಿದ್ಯುತ್ ಬಳಸಿದ ನಂತರ ಮೊದಲಿನಂತೆಯೇ 15 ದಿನಗಳ ಕಾಲಾವಧಿಯಲ್ಲಿ ಬಿಲ್ ಪಾವತಿಸಲು ಅವಕಾಶ ನೀಡಲಾಗಿದೆ. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವವರಿಗೂ ಸ್ಮಾರ್ಟ್ ಮೀಟರ್‌ಗಳನ್ನೇ ಅಳವಡಿಸಲಾಗುತ್ತದೆ, ಆದರೆ ಅವರಿಗೂ ಪೋಸ್ಟ್-ಪೇಯ್ಡ್ ಪದ್ಧತಿಯಲ್ಲೇ ಬಿಲ್ ಪಾವತಿಸುವ ಸೌಲಭ್ಯ ಕಲ್ಪಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಪ್ರೀಪೇಯ್ಡ್ ವಿಧಾನಕ್ಕೆ ಬದಲಾಯಿಸಲಾಗಿದ್ದ ಸುಮಾರು 75 ಲಕ್ಷ ಸಂಪರ್ಕಗಳನ್ನು ಪುನಃ ಪೋಸ್ಟ್-ಪೇಯ್ಡ್ ವಿಧಾನಕ್ಕೆ ಪರಿವರ್ತಿಸಲಾಗುತ್ತದೆ ಮತ್ತು ಹಳೆಯ ಮೀಟರ್‌ಗಳ ಬದಲಿಗೆ ಹೊಸ ಪ್ರೀಪೇಯ್ಡ್ ಮೀಟರ್ ಅಳವಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಸ್ಮಾರ್ಟ್ ಮೀಟರ್ ಮತ್ತು ಪ್ರೀಪೇಯ್ಡ್ ವ್ಯವಸ್ಥೆಯಿಂದ ಅತಿಯಾದ ಬಿಲ್ ಬರುತ್ತಿದೆ ಹಾಗೂ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ರಾಜ್ಯಾದ್ಯಂತ ಜನರು ಪ್ರತಿಭಟನೆ ನಡೆಸಿದ್ದರು. ಕೆಲವು ಕಡೆಗಳಲ್ಲಿ ಜನರು ಸ್ಮಾರ್ಟ್ ಮೀಟರ್‌ಗಳನ್ನು ರಾಶಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ಶಿಫಾರಸಿನ ಬೆನ್ನಲ್ಲೇ ರಾಜ್ಯ ವಿದ್ಯುತ್ ಸಚಿವ ಎ.ಕೆ. ಶರ್ಮಾ ಅವರು ಪ್ರೀಪೇಯ್ಡ್ ವ್ಯವಸ್ಥೆಯನ್ನು ರದ್ದುಗೊಳಿಸಿ ಪೋಸ್ಟ್-ಪೇಯ್ಡ್ ವಿಧಾನ ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ.
ಆದರೂ, ಬಿಲ್ಲಿಂಗ್ ವಿಧಾನ ಬದಲಾಗಿದ್ದರೂ ಸ್ಮಾರ್ಟ್ ಮೀಟರ್‌ಗಳ ತಾಂತ್ರಿಕ ದೋಷಗಳಿಂದಾಗಿ ಬರುತ್ತಿರುವ ಹೆಚ್ಚಿನ ಬಿಲ್‌ಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದೇ ಎಂಬ ಆತಂಕ ಗ್ರಾಹಕರಲ್ಲಿ ಹಾಗೆಯೇ ಉಳಿದಿದೆ. ಈಗಾಗಲೇ ಅಳವಡಿಸಲಾಗಿರುವ ಸ್ಮಾರ್ಟ್ ಮೀಟರ್‌ಗಳನ್ನು ತೆಗೆದು ಹಳೆಯ ಮೀಟರ್‌ಗಳನ್ನೇ ಮರುಸ್ಥಾಪಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ.
ಇತ್ತೀಚೆಗೆ ನೋಯ್ಡಾದಂತಹ ನಗರಗಳಲ್ಲಿ ಗ್ರಾಹಕರ ಅನುಮತಿಯಿಲ್ಲದೆಯೇ ಪೋಸ್ಟ್-ಪೇಯ್ಡ್ ಮೀಟರ್‌ಗಳನ್ನು ಪ್ರೀಪೇಯ್ಡ್‌ಗೆ ಬದಲಾಯಿಸಿ, ಬ್ಯಾಲೆನ್ಸ್ ಮುಗಿದ ತಕ್ಷಣ ವಿದ್ಯುತ್ ಕಡಿತಗೊಳಿಸಿದ ಘಟನೆಗಳು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಂತಹ ಗೊಂದಲಗಳನ್ನು ತಡೆಯಲು ಈಗ ಸರ್ಕಾರವು ಸ್ಮಾರ್ಟ್ ಮೀಟರ್‌ಗಳನ್ನು ಕೇವಲ ಪೋಸ್ಟ್-ಪೇಯ್ಡ್ ವಿಧಾನದಲ್ಲಿ ನಿರ್ವಹಿಸಲು ನಿರ್ಧರಿಸಿದೆ.
