ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡೆರಡು ಕಡೆ ಸೋತು ಸುಣ್ಣವಾಗಿದ್ದ ಮಾಜಿ ಸಚಿವ ವಿ ಸೋಮಣ್ಣನವರಿಗೆ ಕಡೆಗೂ ಅದೃಷ್ಟ ಖುಲಾಯಿಸಿದಂತಿದೆ. ಕಡೆಗೂ ಅವರು ರಾಜ್ಯ ಸಭೆಗೆ ಹೋಗುವುದು ಬಹುತೇಕ ಖಾತರಿಯಾಗಿದೆ.
ನಡ್ಡಾ ಭೇಟಿಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ವಿಜಯೇಂದ್ರ, ‘ಪಕ್ಷದ ಹಿರಿಯ ಮುಖಂಡರಾದ ವಿ.ಸೋಮಣ್ಣ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಎಲ್ಲ ವಿಚಾರಗಳು ಚರ್ಚೆ ಆಗಿವೆ. ಅಭ್ಯರ್ಥಿಗಳ ಆಯ್ಕೆ ಕುರಿತು ವರಿಷ್ಠರು ಅಂತಿಮ ತೀರ್ಮಾನ ಮಾಡಲಿದ್ದಾರೆ’ ಎಂದರು. ಸೋಮಣ್ಣ, ರಾಜೀವ್ ಚಂದ್ರಶೇಖರ್ ಅವರ ಹೆಸರುಗಳ ಜೊತೆಗೆ ಇನ್ನೂ ಇಬ್ಬರ ಹೆಸರು ಅಂತಿಮಗೊಂಡಿದೆ ಎಂದೂ ತಿಳಿದುಬಂದಿದೆ.
ರಾಜ್ಯಸಭೆಗೆ ಇದೇ ತಿಂಗಳ 27ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.
ಸುಮಲತಾ ಅವರ ಟಿಕೆಟ್ ವಿಷಯವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯೇಂದ್ರ “ನಾಡಿದ್ದು ಅಮಿತ್ ಶಾ ಮೈಸೂರಿಗೆ ಬರಲಿದ್ದು ಈ ಕುರಿತು ಚರ್ಚಿಸಲಿದ್ದಾರೆ” ಎಂದು ಹೇಳಿದರು.
ಈ ಮೊದಲು ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಅವರೊಂದಿಗೆ ಬಿಜೆಪಿ ಮಾಜಿ ಸಚಿವ ಜಿಸಿ ಮಾಧುಸ್ವಾಮಿ ಕೂಡಾ ತುಮಕೂರು ಕ್ಷೇತ್ರದ ಟಿಕೆಟ್ ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೋಮಣ್ಣನವರಿಗೆ ರಾಜ್ಯಸಭಾ ಸದಸ್ಯತ್ವ ನೀಡಿ ಮಾಧುಸ್ವಾಮಿಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಳಗೊಂಡಿದೆ.
245 ಸ್ಥಾನಗಳಲ್ಲಿ ಆರು ಖಾಲಿ ಸ್ಥಾನಗಳೊಂದಿಗೆ (ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು ಮತ್ತು ಎರಡು ನಾಮನಿರ್ದೇಶಿತ), ರಾಜ್ಯಸಭೆಯ ಪ್ರಸ್ತುತ ಸಂಖ್ಯಾಬಲ 239. ಬಿಜೆಪಿ 94 ಸಂಸದರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ. ನಂತರ ಕಾಂಗ್ರೆಸ್ (30 ಸಂಸದರು), ತೃಣಮೂಲ ಕಾಂಗ್ರೆಸ್ (13 ಸಂಸದರು) ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಡಿಎಂಕೆ (ತಲಾ 10); ಬಿಜು ಜನತಾ ದಳ (ಬಿಜೆಡಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷ (ತಲಾ ಒಂಬತ್ತು); ಬಿಆರ್‌ಎಸ್ (7 ಸಂಸದರು), ರಾಷ್ಟ್ರೀಯ ಜನತಾ ದಳ (6 ಸಂಸದರು) ಮತ್ತು ಜನತಾ ದಳ (ಯುನೈಟೆಡ್) ಮತ್ತು ಸಿಪಿಎಂ (ತಲಾ ಐದು).