Home ರಾಜ್ಯ ಬೆಳಗಾವಿ ಬಿಜೆಪಿ ದ್ವೇಷ ಭಾಷಣದ ಪಿತಾಮಹ: ಬ್ಯಾಲೆಟ್ ಪೇಪರ್ ಕಾಲದಲ್ಲಿ ಮತಗಳ್ಳತನ ಅಸಾಧ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿಜೆಪಿ ದ್ವೇಷ ಭಾಷಣದ ಪಿತಾಮಹ: ಬ್ಯಾಲೆಟ್ ಪೇಪರ್ ಕಾಲದಲ್ಲಿ ಮತಗಳ್ಳತನ ಅಸಾಧ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಳಗಾವಿ: ಜಾತಿ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ ಹಾಗೂ ವೈಯಕ್ತಿಕ ನಿಂದನೆ ಮಾಡುವಲ್ಲಿ ಬಿಜೆಪಿ ನಾಯಕರು ‘ಪಿತಾಮಹರು’ ಆಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಟೀಕಿಸಿದರು. ಸಂವಿಧಾನದ ಆಶಯಗಳ ಪ್ರಕಾರ ನಡೆದುಕೊಂಡು, ಸಂವಿಧಾನಕ್ಕೆ ಗೌರವ ಕೊಡುವ ಇಚ್ಛೆ ಅವರಿಗಿದ್ದರೆ ಅದನ್ನು ಪಾಲಿಸಲಿ ಎಂದು ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತು ಸರ್ಕಿಟ್ ಹೌಸ್ ಬಳಿ ಬುಧವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ದ್ವೇಷದ ಭಾಷಣ ಮಾಡದಿದ್ದರೆ ಯಾವುದೇ ಸಮಸ್ಯೆಯೇ ಇರುವುದಿಲ್ಲ. ಸಂವಿಧಾನದ ರಕ್ಷಣೆಗಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯು, ಈ ಮಸೂದೆಯನ್ನು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಪರಿಚಯಿಸಲಾಗುತ್ತಿದೆ ಎಂದು ಮಾಡಿದ ಆರೋಪವನ್ನು ಡಿಕೆಶಿ ನಿರಾಕರಿಸಿದರು. ಈ ಮಸೂದೆಯು ಸಾಂವಿಧಾನಿಕ ತತ್ವಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. “ಬಿಜೆಪಿ ಸಂವಿಧಾನಾತ್ಮಕ ಮೌಲ್ಯಗಳ ಪ್ರಕಾರ ನಡೆದುಕೊಳ್ಳಲಿ. ಈ ಶಾಸನವು ಸಂವಿಧಾನವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ” ಎಂದು ಅವರು ಹೇಳಿದರು.

ನೆಹರು ಮತ್ತು ಇಂದಿರಾ ಗಾಂಧಿ ಅವರು ಮತ ಕಳ್ಳತನ ಮಾಡಿದ್ದರು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, “ಅಮಿತ್ ಶಾ ಅವರಿಗೆ ಈ ಬಗ್ಗೆ ಕನಿಷ್ಠ ಜ್ಞಾನ ಇರಬೇಕು. ಅವರ ಕಾಲದಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿತ್ತು. ಹೀಗಿರುವಾಗ ಮತ ಕಳ್ಳತನ ಮಾಡಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ಕೆಎಸ್‌ಸಿಎ (KSCA) ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ಸಲ್ಲಿಸಿರುವ ಮನವಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಕೆಎಸ್‌ಸಿಎ ನೂತನ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಅವರು ಮನವಿ ನೀಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರ್ಘಟನೆ ನಡೆಯಬಾರದಿತ್ತು, ಆದರೆ ನಡೆದಿದೆ. ಅನೇಕ ತಪ್ಪುಗಳು ನಡೆದಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರತ್ಯೇಕ ಮಾರ್ಗಸೂಚಿಯ ಅನುಸಾರ ಜನಸಂದಣಿ ನಿಯಂತ್ರಣ ಮಾಡಬೇಕಾಗುತ್ತದೆ ಎಂದರು.

ಕ್ರಿಕೆಟ್ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಮುಕ್ತ ಮನಸ್ಸಿನಿಂದ ಇದ್ದೇನೆ. ನಮ್ಮ ರಾಜ್ಯದ ಗೌರವ ಹಾಳು ಮಾಡಿಕೊಳ್ಳುವುದು ಬೇಡ. ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

You cannot copy content of this page

Exit mobile version