ಬೆಂಗಳೂರು: ಸುಪ್ರೀಂ ಕೋರ್ಟ್ ಇಂದು (ಸೆಪ್ಟೆಂಬರ್ 15) ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಕೆಲವು ಪ್ರಮುಖ ನಿಬಂಧನೆಗಳಿಗೆ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಈ ನಿರ್ಧಾರ ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ.
ಇಸ್ಲಾಂ ಅನುಯಾಯಿಯಾಗಿರುವ ಷರತ್ತು (ಸೆಕ್ಷನ್ 3(1)(r)): ವಕ್ಫ್ ಮಾಡುವ ವ್ಯಕ್ತಿಯು ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮದ ಅನುಯಾಯಿಯಾಗಿರಬೇಕು ಎಂಬ ನಿಬಂಧನೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಈ ಷರತ್ತನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೆ ಈ ತಡೆ ಮುಂದುವರಿಯಲಿದೆ.
ಜಿಲ್ಲಾಧಿಕಾರಿ ಅಧಿಕಾರಕ್ಕೆ ತಡೆ: ವಕ್ಫ್ ಆಸ್ತಿಯು ಸರ್ಕಾರಿ ಆಸ್ತಿಯನ್ನು ಅತಿಕ್ರಮಿಸಿದೆ ಎಂಬ ವಿವಾದವನ್ನು ನಿರ್ಧರಿಸಲು ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗೆ ನೀಡಲಾಗಿದ್ದ ಅಧಿಕಾರಕ್ಕೆ ತಡೆ ನೀಡಲಾಗಿದೆ.
ಈ ನಿಬಂಧನೆಯು ಕಾರ್ಯನಿರ್ವಾಹಕ ಅಧಿಕಾರಿಯು ನಾಗರಿಕರ ಹಕ್ಕುಗಳನ್ನು ನಿರ್ಧರಿಸಲು ಅವಕಾಶ ನೀಡುತ್ತದೆ, ಇದು ಅಧಿಕಾರಗಳ ಪ್ರತ್ಯೇಕತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನ: ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ನಿಬಂಧನೆಗೆ ನ್ಯಾಯಾಲಯವು ತಡೆ ನೀಡಿಲ್ಲ. ಆದಾಗ್ಯೂ, ಮಂಡಳಿಯ ಪದನಿಮಿತ್ತ ಸದಸ್ಯರು ಸಾಧ್ಯವಾದಷ್ಟು ಮುಸ್ಲಿಂ ವ್ಯಕ್ತಿಯಾಗಿರಬೇಕು ಎಂದು ಅದು ಹೇಳಿದೆ.
ಕೇಂದ್ರ ವಕ್ಫ್ ಮಂಡಳಿ: ಇದರಲ್ಲಿ 4ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು.
ರಾಜ್ಯ ವಕ್ಫ್ ಮಂಡಳಿ: ಇದರಲ್ಲಿ 3ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು.
ನೋಂದಣಿ ಕಡ್ಡಾಯ: ಆಸ್ತಿಗಳನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸುವ ನಿಬಂಧನೆಯಲ್ಲಿ ನ್ಯಾಯಾಲಯವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಇದು ಹೊಸ ನಿಯಮವಲ್ಲ, ಬದಲಿಗೆ 1995 ಮತ್ತು 2013ರ ಹಿಂದಿನ ಕಾಯಿದೆಗಳಲ್ಲಿಯೂ ಇತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೂ, ನೋಂದಣಿಗೆ ನಿಗದಿಪಡಿಸಿದ್ದ ಸಮಯ ಮಿತಿಯನ್ನು ವಿಸ್ತರಿಸಿದೆ.
2025ರಲ್ಲಿ ಸಂಸತ್ತು ಅಂಗೀಕರಿಸಿದ ವಕ್ಫ್ ಕಾಯ್ದೆಗೆ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಮೂರು ದಿನಗಳ ಕಾಲ ಕಕ್ಷಿದಾರರ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಮೇ 22, 2025 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ದೆಹಲಿ ಶಾಸಕ ಅಮಾನತುಲ್ಲಾ ಖಾನ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್ ಜೆಡಿ ಸಂಸದ ಮನೋಜ್ ಕುಮಾರ್ ಝಾ, ಮತ್ತು ಡಿಎಂಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹಾಗೂ ಮುಸ್ಲಿಂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು.