Monday, April 29, 2024

ಸತ್ಯ | ನ್ಯಾಯ |ಧರ್ಮ

ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು|ಮಂಜಿನ ಸುಳಿಗಾಳಿಯ ರುದ್ರ ನರ್ತನ

ಕುದಿಯುವ ನೀರನ್ನು ಹೊರಕ್ಕೆ ಚೆಲ್ಲಿದರೆ ಅದು ನೆಲಕ್ಕೆ ಬೀಳುವ ಮೊದಲೇ ಮಂಜುಗಡ್ಡೆಗಳಾಗಿ ಬಿಟ್ಟವು! ಕಾಲು ಮಡಚಲಾಗದಂತೆ ಜೀನ್ಸ್ ಪ್ಯಾಂಟುಗಳು ಪೆಡಸಾಗಿ ಕೊಳವೆಗಳಂತಾದವು! ಹಿಂದೆಂದೂ ಕಾಣದಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅಮೆರಿಕಾ ಎದುರಿಸ ಬೇಕಾಯಿತು…. 2022ರ ಡಿಸೆಂಬರ್ 22ರಿಂದ 26ರವರೆಗೆ ಅಮೆರಿಕಾದ ಮೇಲೆ ಎರಗಿದ ಮಂಜಿನ ಬಿರುಗಾಳಿಯ ಕುರಿತು ವಿಜ್ಞಾನ ಲೇಖಕ ರವಿಕುಮಾರ್‌ ಕೆ ಎಸ್‌ ಬರೆದ ಕುತೂಹಲಕಾರಿಯಾದ ಈ ಲೇಖನ ಓದಿ ಪ್ರತಿಕ್ರಿಯಿಸಿ. (ಮೂರು ಭಾಗಗಳಲ್ಲಿ ಲೇಖನ ಪ್ರಕಟವಾಗಲಿದೆ)

ಒಂದು ಮಂಜಿನ ಸುಳಿಗಾಳಿ ಏನೆಲ್ಲ ಅಚ್ಚರಿ, ಅಂಜಿಕೆಗಳನ್ನು ತರಬಲ್ಲುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ. ‘ಎಲಿಯಟ್’ ಹೆಸರಿನ ಈ ಸುಳಿಗಾಳಿ (Hurricane) ಎಂತಹ ಥಂಡಿಯನ್ನು ಆರ್ಕಟಿಕ್ ಕಡೆಯಿಂದ ತಂದಿತೆಂದರೆ ಹಲವು ಕಡೆ 30 ನಿಮಿಷಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪ ಕುಸಿಯಿತು. ಇನ್ನು ಹಲವು ಕಡೆ ಒಂದು ಗಂಟೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪ ಸರಸರನೆ ಕುಸಿದು ಹೋಯಿತು. ನೋಡುನೋಡುತ್ತಿದ್ದಂತೆಯೆ ಕಾರಂಜಿಗಳು ಚಿಮ್ಮಿದ ಹಾಗೆಯೆ ಮಂಜಿನ ಕೋಲುಗಳಾಗಿ ನಿಂತುಬಿಟ್ಟವು. ಕಾಲು ಮಡಚಲಾಗದಂತೆ ಜೀನ್ಸ್ ಪ್ಯಾಂಟುಗಳು ಪೆಡಸಾಗಿ ಕೊಳವೆಗಳಂತಾದವು. ಸತತ ಮುಸುಕಿದ ಮಂಜಿನಡಿ ಮನೆಗಳು ಬಿಳಿಯ ದೊಡ್ಡ ‘ಬರ್ತಡೆ’ ಕೇಕುಗಳಂತೆ ಕಂಡುಬಂದವು. 100 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಕುದಿಯುವ ನೀರನ್ನು ಗಾಳಿಗೆರಚಿದರೆ ಅದು ಕೂಡಲೆ ಮಂಜಿನ ಹಳುಕುಗಳಾಗಿ ನೆಲಕ್ಕೆ ಬೀಳುವ ನೋಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ಹಂಚಿಕೊಂಡರು. ಈ ನೋಟ ಒಮ್ಮೆಲೆ ಬೆರಗು ಮತ್ತು ದಿಗಿಲನ್ನು ಮೂಡಿಸಿತು. ಕುದಿಯುವ ನೀರೇ ಇಷ್ಟು ಬೇಗ ಮಂಜುಗಟ್ಟಿದರೆ ಇನ್ನು 37 ಡಿಗ್ರಿ ಸೆಲ್ಸಿಯಸ್ ಸರಾಸರಿ ಸಾಮಾನ್ಯ ತಾಪ ಹೊಂದಿರುವ ನಮ್ಮ ದೇಹದಲ್ಲಿರುವ ದ್ರವದ ಅಂಶ ಇನ್ನೂ ವೇಗದಲ್ಲಿ ಮಂಜುಗಟ್ಟಬಹುದಲ್ಲವೆ (ಸದ್ಯ ನಮ್ಮ ಮಾಂಸಖಂಡಗಳು ಮತ್ತು ಚರ್ಮ ಅಷ್ಟು ಬೇಗ ಹಾಗಾಗದಂತೆ ತಡೆದು ನಾವಿರುವ ಸನ್ನಿವೇಶವನ್ನು ಅನುಸರಿಸಿ ರಕ್ಷಣೆಗೆ ತಕ್ಕ ಕ್ರಮಗಳನ್ನು ಕೈಗೊಳ್ಳಲು ಕೊಂಚವಾದರೂ ಸಮಯ ಕೊಡುತ್ತವೆ)! ಬಹಳಷ್ಟು ಕಡೆ ತಾಪ ಸೊನ್ನೆಯ ಕೆಳಗೆ 40 ರಿಂದ 48ರ ತನಕವೂ ಕುಸಿದ ವರದಿಗಳು ಬಂದವು.

 ಕಣ್ಣೆದುರು ನಾಲ್ಕಾರು ಮೀಟರ್ ದೂರದಾಚೆಗೆ ಏನೂ ಗೋಚರಿಸದಷ್ಟು ಬಿಳಿಮಂಜು ಹುಚ್ಚು ವೇಗದ ಗಾಳಿಯ ಜೊತೆ ಬೀಳುತ್ತಲೆ ಇತ್ತು. ಕೆಲವೇ ಅಡಿಗಳಷ್ಟು ನೇರ ನಡೆದು ಅಥವಾ ಕೆಲವೇ ಮೀಟರುಗಳಷ್ಟು ವಾಹನಗಳಲ್ಲಿ ಚಲಿಸಿ, ಸುಳಿಗಾಳಿಯ ಹೊಡೆತಕ್ಕೆ ಸಿಕ್ಕಿ ಕೆಲವೇ ಇಂಚು ಆಚೀಚೆ ಸರಿದರೂ ದಾರಿತಪ್ಪಿ ಮಂಜಿನ ಮಳೆಯಲ್ಲಿ ಕಳೆದು ಹೋಗುವ ಅಪಾಯ ಇದ್ದೇ ಇತ್ತು. ಮನೆಯ ಹಿಂದಿನ ಕೈತೋಟಕ್ಕೆ ಸಿಹಿಗುಂಬಳಕಾಯಿ ಕಿತ್ತುಕೊಳ್ಳಲೆಂದು ಹೋದವರಿಗೆ ಮನೆ ಕಾಣಿಸದೆ ಹೋಗಿ ತೋಟದಾಚೆ ಇರುವ ಬಯಲಿನ ಕಡೆ ಮುಖಮಾಡಿ ದಿಕ್ಕೆಟ್ಟು ನಡೆದು ನಡೆದು ಮಂಜುಗಟ್ಟಿ ಹೋಗುವ ಸಂದರ್ಭವನ್ನು ಸುಮ್ಮನೆ ಕಲ್ಪಿಸಿಕೊಳ್ಳಿ! ‘ಈ ಸುಳಿಗಾಳಿಯಲ್ಲಿ ಹೊರಹೋಗಬೇಡಿ, ಹೋದವರು ತರಾತುರಿಯಲ್ಲಿ ಬೆಚ್ಚಗಿನ ಸುರಕ್ಷಿತ ಜಾಗ ತಲುಪಿಬಿಡಿ. ಭೀಕರ ಥಂಡಿ ಐದಾರು ನಿಮಿಷಗಳಲ್ಲೆ ನಿಮ್ಮ ದೇಹಕ್ಕೆ (ಹೆಚ್ಚಾಗಿ ಬೆರಳಿನಂತಹ ಭಾಗಗಳಿಗೆ) ಮಂಜುಹುಣ್ಣು (Frostbite) ತರಬಹುದು’ ಎಂದು ಮೇಲಿಂದ ಮೇಲೆ ಮಾಧ್ಯಮಗಳು ಎಚ್ಚರಿಕೆಯನ್ನು ಬಿತ್ತರಿಸಿದವು. ಎಚ್ಚರಿಕೆಯನ್ನು ಕಡೆಗಣಿಸಿದವರು ಹೆಪ್ಪುಗಟ್ಟಿ ಹೋಗುವ ಸಾಧ್ಯತೆ ಬಹಳವೇ ಇತ್ತು. ಸಾಲದ್ದಕ್ಕೆ ಈ ಮಂಜಿನ ಸುಳಿಗಾಳಿ ಅಪ್ಪಳಿಸಿದ ಸಮಯ ಕ್ರಿಸ್ಮಸ್ ಹಬ್ಬದ ಮುಂಚಿನ ಕೆಲವೇ ದಿನಗಳಾಗಿದ್ದವು. ಎಲ್ಲೋ ನೌಕರಿ ಮಾಡಿಕೊಂಡು ಮತ್ತೆಲ್ಲೋ ಇರುವ ಹೆತ್ತವರ ಜೊತೆ ಹಬ್ಬ ಆಚರಿಸಲು ಹೊರಟವರು, ನಂಟರು ಮತ್ತು ಗೆಳೆಯ ಗೆಳತಿಯರ ಮನೆಗೆ ಹಬ್ಬಕ್ಕೆಂದು ತೆರಳುವವರು… ಹೀಗೆ ಕೊಟ್ಯಂತರ ಮಂದಿ ತಾವಿದ್ದ ಜಾಗಗಳಿಂದ ಮಂಜಿನ ಸುಳಿಗಾಳಿಯ ದಾಳಿಗೆ ಮುನ್ನವೆ ಕದಲಿಬಿಟ್ಟಿದ್ದರು.

ಕ್ರಿಸ್ಮಸ್‍ಗೆ ಎರಡು ದಿನ ಮುಂಚೆಯೇ ಅಂದಾಜು 10 ಕೋಟಿಗೂ ಹೆಚ್ಚು ಮಂದಿ ಬಹುತೇಕ ಕಾರಿನಲ್ಲೇ ಪಯಣ ಹೊರಟಿದ್ದರು. ರಸ್ತೆಯ ಗೋಚರತೆ ತೀರಾ ಕಳಪೆಯಾಗ ತೊಡಗಿದ್ದರಿಂದ ಹಲವಾರು ಅಪಘಾತಗಳು ಜರುಗಿದವು. ಮುಂಗಾಣದೆ ಮಂಜಿನಡಿ ಸಿಕ್ಕಿಕೊಂಡ ಕಾರುಗಳ ಒಳಗೆ ಕುಳಿತಲ್ಲೆ ಜನ ಸೆಟೆದು ಹೋಗಿ ಕೊನೆಯುಸಿರೆಳೆದಿದ್ದರು. ಮುಖ್ಯ ಹೆದ್ದಾರಿಗಳನ್ನು ಮುಚ್ಚಲಾಯಿತು. ರೈಲುಗಳ ಸಂಚಾರ ಬಂದ್ ಆಯಿತು. ಮಂಜು ದಪ್ಪನಾಗಿ ಬಿದ್ದು ಹಳಿಗಳು ಕಾಣುತ್ತಿರಲಿಲ್ಲ. ಹಗಲಿನ ವೇಳೆಯೆ ಮಬ್ಬುಗತ್ತಲು ಕವಿದು ಮಂಜು ಮುಚ್ಚಿದ ಊರು ಯಾವುದು ಎಂದು ಪತ್ತೆ ಮಾಡುವುದು ಕಷ್ಟವಾಗುತ್ತಿತ್ತು.

ವಿಮಾನಗಳದ್ದು ಮತ್ತೊಂದು ತೆರನ ಕತೆ. ರನ್‍ವೇಗಳು ಮಂಜಿನಡಿ ಹೂತು ಹೋದವು. ರೆಕ್ಕೆಗಳ ಮೇಲೆ ಗಟ್ಟಿಸಿ ಕೂತ ಮಂಜು ವಿಮಾನ ಹಾರಾಟದ aerodynamics ನಿಯಮಗಳನ್ನೇ ತರಗಬರಗಗೊಳಿಸಿಬಿಡುತ್ತದೆ. ಸುಳಿಗಾಳಿಯ ಜೊತೆ ಪೈಪೋಟಿ ನಡೆಸುತ್ತ ಟೇಕ್‍ಆಫ್ ಆಗುವುದಾಗಲಿ, ಲ್ಯಾಂಡಿಂಗ್ ಆಗುವುದಾಗಲಿ ಎರಡೂ ವಿಮಾನಗಳಿಗೆ ಅಪಾಯಕಾರಿ ಸಂದರ್ಭವೇ. ಹೀಗಾಗಿ ನಾಲ್ಕೈದು ದಿನಗಳಲ್ಲೆ 5.5 ಸಾವಿರದಷ್ಟು ವಿಮಾನಗಳ ಹಾರಾಟ ರದ್ದುಗೊಂಡಿತು. ಇದರಲ್ಲಿ ಒಂದೇ ದಿನ 4,000ದಷ್ಟು ಹಾರಾಟಗಳು ರದ್ದಾದದ್ದು ಈವರೆಗಿನ ದಾಖಲೆಯಾಗಿತ್ತು. ಮಂಜಿನ ಬಿರುಗಾಳಿಯ ವ್ಯಾಪ್ತಿ ಪ್ರದೇಶದಲ್ಲಿ 2.5 ಲಕ್ಷದಷ್ಟು ಕೆಫೆ-ಹೋಟೆಲುಗಳು, ಅಂಗಡಿ ಮಾಲುಗಳು, ಡಿಪಾರ್ಟ್‍ಮೆಂಟ್ ಸ್ಟೋರುಗಳು ಒಮ್ಮೆಲೆ ಮುಚ್ಚಿಹೋದವು. ಹೊಟ್ಟೆಗೆ ಸಿಕ್ಕದವರಿಗೆ ಚಾರಿಟಿಗಳು ಆಹಾರ ಒದಗಿಸಿದವು. ಗಂಟೆಗೆ 100-105 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಸುಳಿಗಾಳಿ ತನಗೆ ಪ್ರತಿರೋಧ ಒಡ್ಡಲು ಸಾಧ್ಯವಿಲ್ಲದ ಗಿಡಮರಗಳನ್ನು, ವಿದ್ಯುತ್ ಕಂಬಗಳನ್ನು, ಟ್ರಾನ್ಸ್‌ಫಾರ್ಮರ್‌ಗಳನ್ನು, ((rcc  ಹೊರತುಪಡಿಸಿ) ಮನೆಯ ಮಾಡುಗಳನ್ನು, ಸಣ್ಣಪುಟ್ಟ ತಾತ್ಕಾಲಿಕ ಕಟ್ಟಿಕೆಗಳನ್ನೆಲ್ಲ ಕಿತ್ತು, ಗಿರಗಟ್ಟೆ ಆಡಿಸಿ, ನೆಲಸಮ ಮಾಡಿ ಕೇಕೆ ಹಾಕಿತು. ವಿದ್ಯುತ್ ತಯಾರಿಸುವ ಸ್ಥಾವರಗಳೂ ಮಂಜಿನಡಿ ನಡುಗಿ ಹೋದವು. 17 ಲಕ್ಷ ಮಂದಿ ಸತತ ವಿದ್ಯುತ್ ಪೂರೈಕೆ ಇಲ್ಲದೆ ಕತ್ತಲಲ್ಲಿ, ಮೂಳೆ ಕೊರೆಯುವ ಚಳಿಯಲ್ಲಿ ‘ಮನೆಸೆರೆ’ಯ ಒತ್ತೆಯಾಳುಗಳಾಗ ಬೇಕಾಯಿತು.

ರಸ್ತೆಗಳ ಮೇಲೆ ಪದರಪದರವಾಗಿ ಮಂಜು ದಪ್ಪನಾಗಿ ಬಿದ್ದು ತನ್ನದೇ ತೂಕಕ್ಕೆ ಕಲ್ಲಿನಂತೆ ಗಟ್ಟಿಗೊಂಡರೆ ಅದನ್ನು ತೆಗೆಯುವುದು ಸುಲಭವಲ್ಲ. ಮಂಜು ಗಟ್ಟಿಯಾಗುವುದನ್ನು ತಪ್ಪಿಸಲು ಅದರ ಮೇಲೆ ಉಪ್ಪನ್ನು ಚೆಲ್ಲಲಾಗುತ್ತದೆ. ಹೀಗೆ ಸಾವಿರಾರು ಟನ್ನುಗಳಷ್ಟು ಉಪ್ಪನ್ನು ಕೆಲವು ದೊಡ್ಡ ಊರುಗಳಲ್ಲಿ ರಸ್ತೆಗಳ ಮೇಲೆ ಚೆಲ್ಲಬೇಕಾಯಿತು. ಕೆಲವು ಕಡೆ ಮಂಜು ದಕ್ಷಿಣದ ಬೆಚ್ಚನೆಯ ಗಾಳಿಯ ಜೊತೆ ಸಂಪರ್ಕ ಹೊಂದಿ ಮಳೆಗೆ ತಿರುಗುತ್ತಿದ್ದಂತೆ ಮಳೆಯನೀರು ಉಪ್ಪನ್ನು ತನ್ನೊಂದಿಗೆ ಸೆಳೆದೊಯ್ಯಿತು. ಮತ್ತೆ ಮತ್ತೆ ಮಂಜು ತೆಗೆಯುತ್ತ ವಾಹನ ಸಂಚಾರಕ್ಕೆ ಹಾದಿ ಸುಗಮ ಗೊಳಿಸಲು ಹಲವು ಕಡೆ ಥಂಡಿಯೊಂದಿಗೆ ಸೆಣಸಾಡುತ್ತಿದ್ದ ರಸ್ತೆ ಸಿಬ್ಬಂದಿ ಕಡೆಗೆ ಕೈಚೆಲ್ಲಿ ಕೂರಬೇಕಾಯಿತು. ದೇಶದ ಅಧ್ಯಕ್ಷರು ತುರ್ತು ಭಾಷಣದಲ್ಲಿ ‘ಸ್ಥಳೀಯ ಆಡಳಿತಗಳು ನೀಡುವ ಎಚ್ಚರಿಕೆಗಳನ್ನು ಅನುಸರಿಸಿ, ಈ ಮಂಜಿನ ಸುಳಿಗಾಳಿ ನಿಮ್ಮ ಬಾಲ್ಯದಲ್ಲೂ ಕಂಡಿರದಂತಹುದು’ ಎಂದು ಕರೆ ಕೊಟ್ಟರು. ಅಬ್ಬಾ, ನಾಲ್ಕಾರು ದಿನಗಳಲ್ಲೆ ಏನೆಲ್ಲ ಅನುಭವಗಳನ್ನು ಮಂಜಿನ ಸುಳಿಗಾಳಿ ತಂದು ಸುರಿಯಿತು. ಕ್ರಿಸ್ಮಸ್ ಇಷ್ಟೊಂದು ಥಂಡಿ ಹಬ್ಬವಾಗುವುದೆಂದು ಯಾರು ನಿರುಕಿಸಿದ್ದರು? ಬಹುತೇಕ ಎಲ್ಲರೂ 2022ರ ಕ್ರಿಸ್ಮಸ್ ತಮ್ಮ ಬದುಕಿನ ಅತಿಶೀತಲ ಕ್ರಿಸ್ಮಸ್ (the Coldest Christmas) ಎಂಬ ತೀರ್ಮಾನಕ್ಕೆ ಬಂದಾಗಿತ್ತು. ನಾವು ಮನುಷ್ಯರು, ನಮಗಾಗುವ ಅಡಚಣೆಗಳ ಬಗ್ಗೆ ಅಷ್ಟೆ ಯೋಚಿಸುತ್ತೇವೆ. ಈ ಕ್ರೂರ ಥಂಡಿಯ ಸುಳಿಗಾಳಿಯನ್ನು ಬಡಪಾಯಿ ಸಾಕುಪ್ರಾಣಿಗಳು ಮತ್ತು ಕಾಡಿನ ಪ್ರಾಣಿಗಳು ಹೇಗೆ ಎದುರಿಸಿದವೊ ಗೊತ್ತಿಲ್ಲ. ಕಾಡುಪ್ರಾಣಿಗಳಂತೂ ಸರಿಹೊತ್ತಿಗೆ ಆಹಾರ ಸಿಕ್ಕದೆ ಮತ್ತು ಸುರಕ್ಷಿತ ಜಾಗವನ್ನು ತಲುಪದೆ ಹೋದರೆ ಅವು ಖಚಿತವಾಗಿ ಮಂಜುಗಟ್ಟಿ ಹೋಗಿರಬೇಕು. ಮನುಷ್ಯರಾದರೋ ಕಡೆಯಪಕ್ಷ ವಾಹನಗಳಲ್ಲಿ ಚಲಿಸಿ ಬದುಕಿಯಾರು, ಅವು ಹಾಗಲ್ಲವಲ್ಲ.

ಈ ನಿಡಿದಾದ ಮುನ್ನುಡಿ ಓದಿ ನಿಮ್ಮ ಬೆನ್ನುಹುರಿಯ ಮೂಲಕ ಕಾಲಿನ ಹೆಬ್ಬೆರಳ ತುದಿಯ ತನಕ ಥಂಡಿ ಕೊರೆಯುವ ಒಂದು ಅಲೆ ಸರಕ್ಕನೆ ಸರಿದು ಹೋಗಿರಬೇಕು. 2022ರಲ್ಲಿ, ಹೌದು ಕಳೆದ ಡಿಸೆಂಬರ್ 22ರಿಂದ 26ರವರೆಗೆ ಅಮೆರಿಕಾದ ಮೇಲೆ ಎರಗಿದ ಮಂಜಿನ ಬಿರುಗಾಳಿ ‘ಎಲಿಯಟ್’ ಜನಸಾಮಾನ್ಯರನ್ನಷ್ಟೆ ಅಲ್ಲ ಜಗತ್ತಿನ ಹವಾಮಾನ ಪರಿಣಿತರನ್ನೂ ಆತಂಕದ ಸುಳಿಗೆ ಕೆಡವಿತು. ಎಲಿಯಟ್ ಎಂಬುದು ಹೀಬ್ರೂ ಮೂಲದ ಒಂದು ಲಿಂಗ ತಟಸ್ಥ (gender-neutral) ಹೆಸರು. ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಈ ಹೆಸರಿನ್ನಿಡುವ ವಾಡಿಕೆ ಇದೆ, ಕ್ರೈಸ್ತರ ದೇಶಗಳಲ್ಲಿ. ಇದರ ಹುರುಳು ‘The Lord is my God’ ಎಂದು. ಸೈತಾನನೂ ಬೆಚ್ಚಿಬಿದ್ದು ಮರಗಟ್ಟುವಂತೆ ಬೀಸಿದ ಮಂಜಿನ ಸುಳಿಗಾಳಿಯನ್ನು ‘ದೇವರು’ ಎಂದು ಏಕೆ ಕರೆದಿರುವರೊ ಗೊತ್ತಿಲ್ಲ. ಒಟ್ಟಾರೆ ಎಲಿಯಟ್, ಅಮೆರಿಕನ್ನರು ಒಂದು ವೇಳೆ ಬೆಂಕಿಯ ಕೆನ್ನಾಲಿಗೆಯ ನಡುವೆ ನಿಂತಿದ್ದರೂ ಅವರು ನಡುಗಿ ಹೋಗಬೇಕು, ಹಾಗೆ ಮಾಡಿತು.

ರವಿಕುಮಾರ್ ಕೆ.ಎಸ್, ಹಾಸನ

ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊಬೈಲ್:‌ 9964604297

Related Articles

ಇತ್ತೀಚಿನ ಸುದ್ದಿಗಳು